ಆದಿ ಮಠಕ್ಕೆ ಐಟಿ ಶಾಕ್
ಆದಿಚುಂಚನಗಿರಿ ಮಠದ ಬಿಜಿಎಸ್ ವೈದ್ಯ ಸಂಸ್ಥೆ ಸೇರಿದಂತೆ ರಾಜ್ಯದ ಹಲವು ಶಿಕ್ಷಣ ಸಂಸ್ಥೆಗಳ ಮೇಲೆ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು (ಐಟಿ)...
ಕನ್ನಡಪ್ರಭ ವಾರ್ತೆ ಬೆಂಗಳೂರು ಜು.18
ಆದಿಚುಂಚನಗಿರಿ ಮಠದ ಬಿಜಿಎಸ್ ವೈದ್ಯ ಸಂಸ್ಥೆ ಸೇರಿದಂತೆ ರಾಜ್ಯದ ಹಲವು ಶಿಕ್ಷಣ ಸಂಸ್ಥೆಗಳ ಮೇಲೆ ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು (ಐಟಿ) ಗುರುವಾರ ದಾಳಿ ನಡೆಸಿದ್ದು, ಈ ಪ್ರಕ್ರಿಯೆ ರಾಜಕಾರಣಿಗಳ ಆಕ್ಷೇಪಕ್ಕೂ ಕಾರಣವಾಗಿದೆ.
ಆದಿಚುಂಚನಗಿರಿ ಮಠ ಈ ವರ್ಷದಿಂದ ಆರಂಭಿಸಿರುವ ಬಿಜಿಎಸ್ ವೈದ್ಯ ಕಾಲೇಜು, ಬೆಂಗಳೂರಿನ ಅಂಬೇಡ್ಕರ್ ಮೆಡಿಕಲ್ ಕಾಲೇಜು, ಹಾಗೂ ಬನ್ನೇರುಘಟ್ಟ ರಸ್ತೆಯಲ್ಲಿರುವ ಸಪ್ತಗಿರಿ ಶಿಕ್ಷಣ ಸಂಸ್ಥೆ ಹಾಗೂ ಗುಲ್ಬರ್ಗದಲ್ಲಿ ಶಶೀಲ್ ನಮೋಶಿ ಅವರ ಮನೆ ಸೇರಿದಂತೆ 14ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿ ನಡೆದಿದೆ.
ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಮಠದ ಆವರಣದಲ್ಲಿರುವ ಬಿಜಿಎಸ್ ವೈದ್ಯ ಕಾಲೇಜು ಕಚೇರಿ ಮೇಲೆ ಬೆಳಗ್ಗೆ 10.30ಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಶೋಧ ಕಾರ್ಯ ಆರಂಭಿಸಿದರು. ವಿಷಯ ಬೆಳಕಿಗೆ ಬರುತ್ತಿದ್ದಂತೆ ಒಕ್ಕಲಿಗ ಸಮಾಜದ ಮುಖಂಡರು ಹಾಗೂ ರಾಜಕೀಯ ನಾಯಕರು ಮಠಕ್ಕೆ ತೆರಳಿ ಆಕ್ಷೇಪ ವ್ಯಕ್ತಪಡಿಸಿದರು.
ಇಷ್ಟು ಮಾತ್ರವಲ್ಲ ಮಠದ ಮೇಲೆ ನಡೆದ ಐಟಿ ದಾಳಿ ವಿಧಾನಸಭಾ ಕಲಾಪದ ಮೇಲೂ ಪರಿಣಾಮ ಬೀರಿತು. ದಾಳಿ ವಿಚಾರ ತಿಳಿಯುತ್ತಿದ್ದಂತೆ ಪ್ರಮುಖ ನಾಯಕರು ಸದನದಿಂದ ಹೊರ ಬಂದು ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ, ಶಾಸಕ ಸಿ.ಟಿ.ರವಿ, ಜೆಡಿಎಸ್ ಮುಖಂಡ ಚಲುವರಾಯ ಸ್ವಾಮಿ ಸೇರಿದಂತೆ ಹಲವು ನಾಯಕರು ವಿಧಾನಸೌಧದ ಮೊಗಸಾಲೆಯಲ್ಲಿ ದಾಳಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಒಕ್ಕಲಿಗ ಜನಾಂಗಕ್ಕೆ ಸೇರಿದ ಪ್ರತಿಷ್ಠಿತ ಮಠ ಅಕ್ಷರ ದಾಸೋಹದಿಂದ ರಾಷ್ಟ್ರ ಮನ್ನಣೆ ಗಳಿಸಿದೆ. ದಾಳಿ ರಾಜಕೀಯ ಪ್ರೇರಿತ ಎಂದು ಅಭಿಪ್ರಾಯಪಟ್ಟರು.
ಪ್ರಧಾನಿಗೆ ಮನವಿ ಮಾಡುವೆ: ಇನ್ನೊಂದೆಡೆ ಕಾಂಗ್ರೆಸ್ನ ಹಿರಿಯ ಮುಖಂಡ ಡಿ.ಕೆ. ಶಿವಕುಮಾರ್ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿ ದಾಳಿ ನಿಲ್ಲಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು.
ಶಿಕ್ಷಣ ಹಾಗೂ ಅನ್ನ ದಾಸೋಹದ ಮೂಲಕ ಹೆಸರು ಗಳಿಸಿರುವ ಆದಿಚುಂಚನಗಿರಿ ಮಠ ರಾಜ್ಯಕ್ಕೆ ನೀಡಿರುವ ಕೊಡುಗೆ ಅಪಾರ. ಆದರೆ ಈ ದಾಳಿಯಿಂದ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ಬಂದಿದೆ.
ಪರಂಪರೆ ಹೊಂದಿರುವ ಮಠದಲ್ಲಿ ಯಾವುದೇ ಅವ್ಯವಹಾರ ನಡೆಯುವುದು ಸಾಧ್ಯವಿಲ್ಲ ಎಂಬುದನ್ನು ಅಧಿಕಾರಿಗಳು ಮನಗಾಣಬೇಕು ಎಂದರು. ಈ ಸಂಬಂಧ ಒಕ್ಕಲಿಗ ಮುಖಂಡರ ಜತೆ ಚರ್ಚೆ ನಡೆಸುತ್ತೇನೆ. ಅಗತ್ಯ ಬಿದ್ದರೆ ಸಮಾಜದ ಮುಖಂಡರ ಜತೆ ದೆಹಲಿಗೆ ತೆರಳಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಸಲ್ಲಿಸುತ್ತೇನೆಂದರು.
ಸಂಪ್ರದಾಯವಲ್ಲ: ವಿಧಾನ ಪರಿಷತ್ನ ಮೊಗಸಾಲೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಈ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಇದು ಒಳ್ಳೆಯ ಸಂಪ್ರದಾಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದಿಚುಂಚನಗಿರಿ ಮಠ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯೇನು ಎಂಬುದು ಇಡೀ ಜಗತ್ತಿಗೆ ಗೊತ್ತು. ದಾಳಿ ಹಿಂದಿನ ಉದ್ದೇಶ ಬಯಲಾಗಬೇಕು ಎಂದು ಆಗ್ರಹಿಸಿದರು.
ಪ್ರತಿಕ್ರಿಯೆ ಇಲ್ಲ: ಆದರೆ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಈ ಬಗ್ಗೆ ನಾನು ಯಾವುದೇ ಹೇಳಿಕೆ ನೀಡಲು ಇಷ್ಟಪಡುವುದಿಲ್ಲ ಎಂದರು.
ದಾಳಿ ಖಂಡಿಸಿ ಪ್ರತಿಭಟನೆ
ಬೆಂಗಳೂರು: ಆದಿಚುಂಚನಗಿರಿ ಶಾಖಾ ಮಠದ ಮೇಲೆ ಐಟಿ ದಾಳಿ ನಡೆಸಿರುವುದಕ್ಕೆ ರಾಜ್ಯಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ವಿವಿಧ ಒಕ್ಕಲಿಗ ಸಂಘಗಳು ಭಾರಿ ಪ್ರತಿಭಟನೆನಡೆಸಿವೆ. ಮಂಡ್ಯದಲ್ಲಿ ಸ್ವಾಭಿಮಾನಿ ಒಕ್ಕಲಿಗರ ಸೇವಾ ಟ್ರಸ್ಟ್ನ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜಯಚಾಮರಾಜ ಒಡೆಯರ್ ವೃತ್ತದಲ್ಲಿ ಧರಣಿ ನಡೆಸಿ ಸಿಎಂ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಒಕ್ಕಲಿಗ ಸಮುದಾಯದ ರಾಜಕಾರಣಿಗಳು ಮತ್ತು ಅಧಿಕಾರಿಗಳ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.
ಹಾಸನದಲ್ಲಿ ಒಕ್ಕಲಿಗ ಹಿತರಕ್ಷಣೆ ಸೇನೆ ಕಾರ್ಯಕರ್ತರು ಎನ್.ಆರ್. ವೃತ್ತದಲ್ಲಿ ಪ್ರತಿಭಟನೆ ನಡೆಸಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಒಕ್ಕಲಿಗ ಜನಾಂಗದ ಮೇಲೆ ಪ್ರತಿನಿತ್ಯ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿದರು. ತುಮಕೂರಿನಲ್ಲಿ ಒಕ್ಕಲಿಗ ಸಮುದಾಯದ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.