ಉಕ್ಕೇರಿದ ಕೃಷ್ಣೆ, ಮಲಪ್ರಭೆ: 3 ಸೇತುವೆಗಳು ಜಲಾವೃತ
ಕ.ಪ್ರ.ವಾರ್ತೆ ಬೆಂಗಳೂರು ಜು.18
ಮಹಾರಾಷ್ಟ್ರದ ಕೊಂಕಣ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಚಿಕ್ಕೋಡಿ ಬಳಿಯ ಕೃಷ್ಣಾ ನದಿ ಮತ್ತು ಖಾನಾಪುರ ಬಳಿ ಮಲಪ್ರಭಾ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದ್ದು ಮೂರು ಸೇತುವೆಗಳು ಜಲಾವೃತವಾಗಿ ಸಂಪರ್ಕ ಕಡಿತಗೊಂಡಿದೆ.
ರಾಜಾಪುರ ಜಲಾಶಯದಿಂದ 66465 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಖಾನಾಪುರ ತಾಲೂಕಿನಲ್ಲೂ ಭಾರಿ ಮಳೆಯಾಗುತ್ತಿದೆ. ಹೀಗಾಗಿ ಗವಾಳಿ-ಕೊಂಗಳ ಸೇತುವೆ ಜಲಾವೃತವಾಗಿ ಸಂಪರ್ಕ ಕಡಿತವಾಗಿದೆ. ಗುರುವಾರ ಚಿಕ್ಕೋಡಿ ತಾಲೂಕಿನ ಮತ್ತೆರಡು ಸೇತುವೆ ಮುಳುಗಿದ್ದರಿಂದ ಜತ್ರಾಟ-ಭೀವಶಿ, ಕಲ್ಲೋಳ-ಯಡೂರ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಹಾರಾಷ್ಟ್ರ ಜಲಾಶಯಗಳ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದ್ದು, ಕೃಷ್ಣಾ ನದಿಗೆ ಕೋಯ್ನಾ ಜಲಾಶಯದಿಂದ 10 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಖಾನಾಪುರ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 272.1 ಮಿ.ಮೀ ಮಳೆಯಾಗಿದೆ. ರಾಂುಬಾಗ, ಚಿಕ್ಕೋಡಿ, ಅಥಣಿ, ಗೋಕಾಕ, ಹುಕ್ಕೇರಿ ಮತ್ತು ಖಾನಾಪುರ ತಾಲೂಕಿನ ಅಧಿಕಾರಿಗಳಿಗೆ ಮಳೆಂು ಹಾನಿ ಮತ್ತು ಪ್ರವಾಹ ಪರಿಸ್ಥಿತಿ ಕುರಿತು ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಜಯರಾಂ ತಿಳಿಸಿದ್ದಾರೆ.
ನಾಲ್ಕು ಮನೆ ಕುಸಿತ: ಸಕಲೇಶಪುರ ತಾಲೂಕಿನಾದ್ಯಂತ ಭಾರಿ ಮಳೆಯಾಗುತ್ತಿದ್ದು ಕುಶಾಲನಗರ ಪ್ರದೇಶದಲ್ಲಿ ಭೂ ಕುಸಿತ ಉಂಟಾಗಿ ನಾಲ್ಕು ಮನೆಗಳು ಜಖಂಗೊಂಡಿವೆ.
ಪುರಸಭೆ ನಿರ್ಮಿಸಿದ್ದ ಕಾಂಕ್ರಿಟ್ ತಡೆಗೋಡೆ ಕೂಡ ಕುಸಿದು ಬಿದ್ದಿದೆ. ಕೊಡಗು, ದಕ್ಷಿಣ ಕನ್ನಡ ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಜೋಯಿಡಾ ತಾಲೂಕಿನ ಸೂಪಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದ್ದು 564 ಮೀ. ಪೈಕಿ 519.65 ಮೀ. ನೀರು ಸಂಗ್ರಹವಾಗಿದ್ದು ಜಲಾಶಯ ಭರ್ತಿಗೆ 25 ಮೀ. ಮಾತ್ರ ಬಾಕಿ ಇದೆ. ಯಾದಗಿರಿ ಜಿಲ್ಲೆ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಗೆ ಅರ್ಧ ಮೀಟರ್ ಬಾಕಿ ಇದೆ. 492.25 ಮೀ. ಎತ್ತರದ ಅಣೆಕಟ್ಟೆಯಲ್ಲಿ ಗುರುವಾರ 491.76 ಮೀ. ನೀರು ಸಂಗ್ರಹವಾಗಿತ್ತು. ರಾಜಧಾನಿ ಬೆಂಗಳೂರಿನಲ್ಲೂ ಧಾರಾಕಾರ ಮಳೆಯಾಗಿದೆ.