ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನೀಟ್ ಡಿಲೀಟ್!

ವೈದ್ಯ, ದಂತ ವೈದ್ಯ ಹಾಗೂ ಸ್ನಾತಕೋತ್ತರ ವೈದ್ಯ ಕೋರ್ಸ್‌ಗಳಿಗೆ ರಾಷ್ಟ್ರೀಯ ಸಾಮಾನ್ಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸಲು ಭಾರತೀಯ...

Mainashree
Updated On : 18 Jul 2013, 10:13 am

- ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ವೈದ್ಯ, ದಂತ ವೈದ್ಯ ಹಾಗೂ ಸ್ನಾತಕೋತ್ತರ ವೈದ್ಯ ಕೋರ್ಸ್‌ಗಳಿಗೆ ರಾಷ್ಟ್ರೀಯ ಸಾಮಾನ್ಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸಲು ಭಾರತೀಯ ವೈದ್ಯ ಮಂಡಳಿ (ಎಂಸಿಐ) ಹೊರಡಿಸಿದ್ದ ಅಧಿಸೂಚನೆಯನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದೆ. ಗುರುವಾರದ ಆದೇಶವು ಈಗಾಗಲೇ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳಿಗೆ ಅನ್ವಯಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದೆ.
ಖಾಸಗಿ ವೈದ್ಯ ಶಿಕ್ಷಣ ಸಂಸ್ಥೆಗಳು ತಮ್ಮ ಸಂಘಗಳ ಮೂಲಕ ಪ್ರವೇಶ ಪರೀಕ್ಷೆ ನಡೆಸಬಹುದು, ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಪ್ರತ್ಯೇಕ ಪ್ರವೇಶ ಪರೀಕ್ಷೆ ನಡೆಸಬಹುದು ಎಂದು ತಿಳಿಸಿದೆ. ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ನೇತೃತ್ವದ ತ್ರಿಸದಸ್ಯ ಪೀಠವು ಬಹುಮತದೊಂದಿಗೆ ಈ ಆದೇಶ ನೀಡಿದೆ.
ಸಾಮಾನ್ಯ ಅರ್ಹತಾ ಪ್ರವೇಶ ಪರೀಕ್ಷೆ ನಡೆಸುವ ಭಾರತೀಯ ವೈದ್ಯ ಮಂಡಳಿಯ ಅಧಿಸೂಚನೆಯು ಸಂವಿಧಾನದ 19, 25, 26 ಮತ್ತು 30ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಭಾರತೀಯ ವೈದ್ಯ ಮಂಡಳಿಗೆ ಅಖಿಲ ಭಾರತ ವೈದ್ಯ ಪ್ರವೇಶ ಪರೀಕ್ಷೆ ನಡೆಸುವಂತೆ ಆದೇಶಿಸುವ ಅಧಿಕಾರ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಅಲ್ತಮಸ್ ಕಬೀರ್ ಹಾಗೂ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹೇಳಿದ್ದಾರೆ.
ಎಂಸಿಐ ವೈದ್ಯ ಶಿಕ್ಷಣ ಗುಣಮಟ್ಟ ಸುಧಾರಿಸಲು ನೀತಿ ನಿಯಮಗಳನ್ನು ರೂಪಿಸಬಹುದೇ ಹೊರತು ಪರೀಕ್ಷೆ ನಡೆಸುವಂತಿಲ್ಲ. ಭಾರತೀಯ ವೈದ್ಯ ಮಂಡಳಿ ಕಾಯ್ದೆಯು ಮಂಡಳಿ ಪ್ರವೇಶ ಪರೀಕ್ಷೆ ನಡೆಸಲು ಅವಕಾಶ ನೀಡಿಲ್ಲ. ಮಾರ್ಗಸೂಚಿಗಳನ್ನು ರೂಪಿಸುವ ಅಧಿಕಾರವನ್ನಷ್ಟೆ ನೀಡಿದೆ ಎಂದು ತಿಳಿಸಿದ್ದಾರೆ. ಆದರೆ, ಈ ಇಬ್ಬರು ನ್ಯಾಯಮೂರ್ತಿಗಳ ಅಭಿಪ್ರಾಯವನ್ನು ತ್ರಿಸದಸ್ಯ ಪೀಠದ ಮತ್ತೊಬ್ಬ ಸದಸ್ಯ ನ್ಯಾ. ಎ.ಆರ್. ದವೆ ಒಪ್ಪಿಲ್ಲ.    

ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ ನಡೆಸುವುದು ಕಾನೂನು ಬದ್ಧ ಮತ್ತು ಕಾರ್ಯ ಸಾಧ್ಯ. ಸಮಾಜಕ್ಕೆ ಅದರ ಅಗತ್ಯ ಇದೆ. ಆದ್ದರಿಂದ ಪೀಠದ ಅಭಿಪ್ರಾಯಕ್ಕೆ ನನ್ನ ಅಸಮ್ಮತಿ ಇದೆ ಎಂದು ಹೇಳಿದರು.
ಸಾಮಾನ್ಯ ರಾಷ್ಟ್ರೀಯ ಅರ್ಹತಾ ಪರೀಕ್ಷೆ ನಡೆಸುವ ಎಂಸಿಐನ ಪ್ರಸ್ತಾಪಕ್ಕೆ ಖಾಸಗಿ ವೈದ್ಯ ಕಾಲೇಜುಗಳ ಆಡಳಿತ ಮಂಡಳಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಆದರೆ, ವಿರೋಧದ ನಡುವೆಯೂ ಎಂಸಿಐ ಅರ್ಹತಾ ಪರೀಕ್ಷೆ ನಡೆಸಲು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ಪ್ರಶ್ನಿಸಿ ರಾಷ್ಟ್ರದ ವಿವಿಧೆಡೆಯಿಂದ 115 ಅರ್ಜಿಗಳು ದಾಖಲಾಗಿದ್ದವು. ವಿವಿಧ ನ್ಯಾಯಾಲಯಗಳಲ್ಲಿ ದಾಖಲಾಗಿದ್ದ ಎಲ್ಲ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸಲಾಗಿತ್ತು. 2012 ಡಿಸೆಂಬರ್ 13ರಂದು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ಎಂಸಿಐ, ಭಾರತೀಯ ದಂತ ವೈದ್ಯ ಮಂಡಳಿ (ಡಿಸಿಐ) ರಾಜ್ಯ ಸರ್ಕಾರಗಳು ಮತ್ತು ವಿಶ್ವವಿದ್ಯಾಲಯಗಳು ಮತ್ತಿತರ ಸಂಸ್ಥೆಗಳು ಪರೀಕ್ಷೆ ನಡೆಸಬಹುದು. ಆದರೆ, ಮುಂದಿನ ಆದೇಶ ಬರುವವರೆಗೆ ಫಲಿತಾಂಶ ಪ್ರಕಟಿಸಬಾರದು ಎಂದು ಸೂಚಿಸಿತ್ತು. ಆದರೆ, ಮೇ 13ರಂದು ತನ್ನ ಆದೇಶ ಮಾರ್ಪಡಿಸಿದ್ದ ಸುಪ್ರೀಂ ಕೋರ್ಟ್ ಈಗಾಗಲೇ ನಡೆಸಿದ್ದ ಅರ್ಹತಾ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಲು ಇದ್ದ ನಿಷೇಧವನ್ನು ತೆರವುಗೊಳಿಸಿತ್ತು.  

ದೇಶದಲ್ಲಿನ 45,600 ವೈದ್ಯ ಸೀಟುಗಳಿಗೆ ಒಂದೇ ರಾಷ್ಟ್ರೀಯ ಅರ್ಹತಾ ಪರೀಕ್ಷೆ ನಡೆಸುವುದು ನೀಟ್‌ನ ಉದ್ದೇಶವಾಗಿತ್ತು. ಆದರೆ ಅದು ನಿಯಮವಾಗುವಾಗ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಾಗಿ ಹೋಗಿದೆ. ಒಬ್ಬ ಬಡ ವಿದ್ಯಾರ್ಥಿ ದೇಶದ ಯಾವುದೋ ವೈದ್ಯಕೀಯ ಸಂಸ್ಥೆಯಲ್ಲಿ ಸೀಟು ಪಡೆಯಲು ಹತ್ತಾರು ಪರೀಕ್ಷೆ ಬರೆಯುವ ಅಗತ್ಯವಿಲ್ಲ ಎಂದು 4 ವರ್ಷಗಳ ಹಿಂದೆ ಇದು ರೂಪಗೊಂಡಿತ್ತು. ಗ್ರಾಮೀಣ ಭಾಗದ ಒಬ್ಬ ಪ್ರತಿಭಾನ್ವಿತ ಬಡ ವಿದ್ಯಾರ್ಥಿ ದೇಶದಲ್ಲಿರುವ 25ಕ್ಕೂ ಅಧಿಕ ಪರೀಕ್ಷೆಗಳನ್ನು ಬರೆಯಲು ಶುಲ್ಕ ಹೊಂದಿಸಲು ಸಾಧ್ಯವಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕು.
- ಡಾ.ದೇವಿಪ್ರಸಾದ್ ಶೆಟ್ಟಿ, ಎಂಸಿಐ ಮಾಜಿ ಸದಸ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement