ಅತಿವೃಷ್ಟಿ ಭೀತಿ
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು ಅಪಾರ ಪ್ರಮಾಣದ...
ಕನ್ನಡಪ್ರಭ ವಾರ್ತೆ ಬೆಂಗಳೂರು ಜು.19
ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸುರಿಯುತ್ತಿರುವ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು ಅಪಾರ ಪ್ರಮಾಣದ ಹಾನಿಯಾಗಿದೆ. 'ಮಹಾ' ಮಳೆ ಮುಂದುವರಿದಿದ್ದರಿಂದ ಕೃಷ್ಣಾ ನದಿ ರಭಸಕ್ಕೆ ಚಿಕ್ಕೋಡಿ ತಾಲೂಕಿನಲ್ಲಿ ಮೂರು ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.
ಕೊಡಗು ಜಿಲ್ಲೆಯಾದ್ಯಂತ ವರುಣನ ಆರ್ಭಟ ನಿಲ್ಲದ ಕಾರಣ ಶನಿವಾರವೂ ಶಾಲಾ- ಕಾಲೇಜಿಗೆ ರಜೆ ಘೋಷಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿ ಎದುರಾಗಿದ್ದು, ಮಂಗಳೂರಿನಲ್ಲಿ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿರುವುದರಿಂದ ಪ್ರವಾಹ ಭೀತಿ ಎದುರಾಗಿದೆ.
ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಶುಕ್ರವಾರವೂ ಮಳೆ ಮುಂದುವರಿದಿದ್ದರಿಂದ ಕೃಷ್ಣಾ ನದಿ ನೀರಿನ ಹರಿವು ಹೆಚ್ಚಳವಾಗಿದ್ದು ಚಿಕ್ಕೋಡಿ ತಾಲೂಕಿನ ಸದಲಗಾ- ಬೋರಗಾಂವ್, ಕಲ್ಲೋಳ- ಯಡೂರ ಹಾಗೂ ಜತ್ರಾಟ್- ಭೀಮಶಿ ಸೇತುವೆ ಮುಳುಗಡೆಯಾಗಿದ್ದು ಸಂಪರ್ಕ ಕಡಿತಗೊಂಡಿದೆ. ಪರ್ಯಾಯ ರಸ್ತೆ ವ್ಯವಸ್ಥೆ ಇದ್ದಿದ್ದರಿಂದ ಸಂಚಾರಕ್ಕೆ ಸಮಸ್ಯೆಯಾಗಿಲ್ಲ. ಖಾನಾಪುರ ತಾಲೂಕಿನಲ್ಲಿ ಮಳೆ ಅಬ್ಬರ ಕೊಂಚ ತಣ್ಣಗಾಗಿದ್ದು ಮಲಪ್ರಭಾ ನದಿ ರಭಸಕ್ಕೆ ಉಕ್ಕಿ ಹರಿಯುತ್ತಿದ್ದ ಗವಾಳಿ- ಕೊಂಗಳ ಸೇತುವೆ ಮೇಲಿನ ನೀರು ಇಳಿಮುಖವಾಗಿದ್ದು ಸಂಚಾರಕ್ಕೆ ಮುಕ್ತವಾಗಿದೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಜಯರಾಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಹಾರಾಷ್ಟ್ರದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ 56,108 ಕ್ಯುಸೆಕ್ ನೀರು ಹರಿದು ಬರುತ್ತಿದ್ದು ಜಲಾಶಯ ಭರ್ತಿಗೆ ಒಂದೂವರೆ ಮೀಟರ್ ಮಾತ್ರ ಬಾಕಿ ಇದೆ. 42,000 ಕ್ಯುಸೆಕ್ ನೀರನ್ನು ಜಲಾಶಯದ ಬಲಭಾಗದ ವಿದ್ಯುತ್ ಘಟಕಗಳ ಮೂಲಕ ಹರಿಯ ಬಿಡಲಾಗುತ್ತಿದೆ. ಬಿಜಾಪುರ, ಬಾಗಲಕೋಟೆ, ಧಾರವಾಡ, ಉತ್ತರ ಕನ್ನಡ, ಬಳ್ಳಾರಿ, ಕೊಪ್ಪಳ ಹಾಗೂ ಹಾವೇರಿ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ ಸುರಿಯುತ್ತಿದೆ.
ಅತಿವೃಷ್ಟಿ ಆತಂಕ: ಕಳೆದೊಂದು ವಾರದಿಂದ ಬೀದರ್ ಜಿಲ್ಲೆಯಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಅತಿವೃಷ್ಟಿ ಆತಂಕ ಎದುರಾಗಿದೆ. ವಾಡಿಕೆಯಂತೆ ಜುಲೈ ಮಾಸಾಂತ್ಯಕ್ಕೆ 191 ಮಿ.ಮೀ. ಮಳೆಯಾಗಬೇಕಿತ್ತು. 10 ದಿನಗಳು ಬಾಕಿ ಇರುವಾಗಲೇ 241.3 ಮಿ.ಮೀ. ಮಳೆಯಾಗಿದ್ದರಿಂದ ಬಿತ್ತನೆ ಮಾಡಿದ ಬೆಳೆಗಳು ಕೊಳೆಯುವ ಹಂತ ತಲುಪಿವೆ. ಔರಾದ್ ತಾಲೂಕಿನ ಗುಡಪಳ್ಳಿ ಗ್ರಾಮದಲ್ಲಿ ಮನೆ, ಜೋಜನಾ ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಕುಸಿದು ಬಿದ್ದಿದ್ದು, ಕೆಇಬಿ ಸಮೀಪದ ಮಾರುಕಟ್ಟೆಗೆ ನೀರು ನುಗ್ಗಿದ್ದರಿಂದ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಯಾದಗಿರಿ, ಗುಲ್ಬರ್ಗ, ರಾಯಚೂರು ಜಿಲ್ಲಾದ್ಯಂತವೂ ಭಾರಿ ಮಳೆಯಾಗುತ್ತಿದೆ.
ಶಾಲಾ ಕಾಲೇಜಿಗೆ ರಜೆ: ಮೈಸೂರು ಜಿಲ್ಲಾದ್ಯಂತ ಭಾರಿ ಮಳೆಯಾಗುತ್ತಿದ್ದು ಎಚ್.ಡಿ. ಕೋಟೆ ತಾಲೂಕಿನಲ್ಲಿ ಶುಕ್ರವಾರ ಶಾಲಾ- ಕಾಲೇಜಿಗೆ ರಜೆ ನೀಡಲಾಗಿತ್ತು. ಮೈಸೂರು- ಮಾನಂದವಾಡಿ ರಸ್ತೆಯ ಉಬ್ಬೂರು ಬಳಿಯ ಕಬಿನಿ ಹಿನ್ನೀರಿನ ಸೇತುವೆ ಮುಳುಗಡೆಯಾಗಿದೆ. ಹಾಸನ ಜಿಲ್ಲೆಯ ವಿವಿಧೆಡೆ ವಿದ್ಯುತ್ ಕಂಬಗಳು ಧರೆಗುರುಳಿ ವಿದ್ಯುತ್ ವ್ಯತ್ಯಯ ಉಂಟಾಗಿದೆ. ಹೇಮಾವತಿ ಜಲಾಶಯ ಬಹುತೇಕ ಭರ್ತಿಯಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಜನಜೀವನ ತತ್ತರಗೊಂಡಿದೆ.
ಕೊಡಗು ಜಿಲ್ಲಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದ್ದು ಶನಿವಾರವೂ ಶಾಲಾ, ಕಾಲೇಜುಗಳಿಗೆ ರಜೆ ನೀಡಲಾಗಿದೆ. ಮಡಿಕೇರಿ, ಸಂಪಾಜೆ, ಶಾಂತಳ್ಳಿ, ಭಾಗಮಂಡಲ, ಸೋಮವಾರಪೇಟೆ, ನಾಪೋಕ್ಲು, ವಿರಾಜಪೇಟೆ ಮತ್ತಿತರ ಕಡೆಗಳಲ್ಲಿ ಬಿರುಸಿನ ಮಳೆ ಜತೆಗೆ ಬಿರುಗಾಳಿಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಐಗೂರಿನ ಸಮೀಪ ಹರಿಯುವ ಚೋರನ ಹೊಳೆ (ಕಬ್ಬಿಣ ಸೇತುವೆ ಹೊಳೆ) ಉಕ್ಕಿ ಹರಿಯುತ್ತಿದ್ದು ಸಂಪರ್ಕ ಕಡಿತಗೊಂಡಿದೆ. ಮಂಗಳೂರಿನಲ್ಲಿ ಭಾರಿ ಮಳೆಯಾಗುತ್ತಿದ್ದು ನೇತ್ರಾವತಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ಜಪ್ಪಿನಮೊಗರು, ಪಟ್ಲ, ಕಲ್ಲಾಪು, ಆಡಂಕುದ್ರು ಪ್ರದೇಶದಲ್ಲಿ ನೆರೆ ಭೀತಿ ಉಂಟಾಗಿದೆ. ಮುಕ್ಕಚ್ಚೇರಿ, ಉಚ್ಚಿಲ, ಸೋಮೇಶ್ವರದಲ್ಲಿ ಸಮುದ್ರದ ಅಬ್ಬರ ಹೆಚ್ಚಾಗಿದೆ. ಕದ್ರಿಯಲ್ಲಿ ಮನೆಯ ಗೋಡೆ ಕುಸಿದಿದೆ. ಸುಳ್ಯದಲ್ಲೂ ಭಾರಿ ಮಳೆಯಾಗುತ್ತಿದೆ.