ಮೋದಿ ಟೀಂ ಸಿದ್ಧ
2014ರ ಮಹಾಚುನಾವಣೆಗೆ ಬಿಜೆಪಿ ಅಧಿಕೃತವಾಗಿ ತಯಾರಾಗಿದೆ. ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 20 ಸಮಿತಿ...
ನವದೆಹಲಿ: 2014ರ ಮಹಾಚುನಾವಣೆಗೆ ಬಿಜೆಪಿ ಅಧಿಕೃತವಾಗಿ ತಯಾರಾಗಿದೆ.
ನರೇಂದ್ರ ಮೋದಿ ಅವರ ನೇತೃತ್ವದಲ್ಲಿ 20 ಸಮಿತಿಗಳು ಕಾರ್ಯರೂಪಕ್ಕೆ ಬಂದಿದ್ದು, ಇವುಗಳ ನಾಯಕತ್ವ ಮತ್ತು ಸದಸ್ಯರ ಪಟ್ಟಿಯನ್ನು ಬಿಜೆಪಿ ಶುಕ್ರವಾರ ಸಂಜೆ ಬಿಡುಗಡೆ ಮಾಡಿದೆ.
ಹಿರಿಯರು ಮತ್ತು ಕಿರಿಯರ ನಡುವೆ ಸಮನ್ವಯ ತರುವ ದೃಷ್ಟಿಯಿಂದ ಹಿರಿ-ಕಿರಿಯ ತಲೆಗಳಿಗೆ ಸಮನಾಗಿ ಸಮಿತಿಗಳ ಉಸ್ತುವಾರಿ ವಹಿಸಲಾಗಿದೆ. ವಿಶೇಷವೆಂದರೆ ಸುಷ್ಮಾ, ಜೇಟ್ಲಿ, ವೆಂಕಯ್ಯ ನಾಯ್ಡು ಅವರು ಕೂಡ ನರೇಂದ್ರ ಮೋದಿ ಅವರ ಅಡಿಯಲ್ಲೇ ಕೆಲಸ ಮಾಡಬೇಕು.
ಆಗಸ್ಟ್‌ನಿಂದಲೇ ದೇಶಾದ್ಯಂತ ಭಾರಿ ರ್ಯಾಲಿಗಳನ್ನು ಆಯೋಜಿಸಲಿರುವ ಬಿಜೆಪಿ, ಇವುಗಳ ಉಸ್ತುವಾರಿಯನ್ನು ಪಕ್ಷದ ರಾಷ್ಟ್ರೀಯ ಹಿರಿಯ ನಾಯಕ ವೆಂಕಯ್ಯ ನಾಯ್ಡು ಮತ್ತು ಪ್ರಧಾನ ಕಾರ್ಯದರ್ಶಿ ವರುಣ್‌ಗಾಂಧಿ ಅವರಿಗೆ ವಹಿಸಿದೆ.
ಕೇಂದ್ರೀಯ ಚುನಾವಣಾ ಸಮಿತಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಪಕ್ಷದ ಹಿರಿಯ ನಾಯಕರಾದ ಎಲ್.ಕೆ. ಆಡ್ವಾಣಿ, ಅಟಲ್ ಬಿಹಾರಿ ವಾಜಪೇಯಿ, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ನಿತಿನ್ ಗಡ್ಕರಿ, ವೆಂಕಯ್ಯ ನಾಯ್ದು ಹಾಗೂ ಎಲ್ಲಾ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿ 15 ನಾಯಕರು ಇರಲಿದ್ದಾರೆ. ಈ ಸಮಿತಿ ಚುನಾವಣೆಯ ಸಂಪೂರ್ಣ ಉಸ್ತುವಾರಿ ವಹಿಸಲಿದೆ. ಅಲ್ಲದೆ 20 ವಿವಿಧ ಸಮಿತಿಗಳನ್ನು ರಚಿಸಲಾಗಿದ್ದು, ಈ ಸಮಿತಿಗಳ ಹೊಣೆಯನ್ನೂ ನರೇಂದ್ರ ಮೋದಿ ಅವರು ವಹಿಸಿಕೊಳ್ಳಲಿದ್ದಾರೆ.
ಪಕ್ಷದ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್.ಕೆ. ಆಡ್ವಾಣಿ ಅವರ ಮಾರ್ಗದರ್ಶನದಲ್ಲಿ ಈ ಚುನಾವಣೆ ಎದುರಿಸಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ತಿಳಿಸಿದ್ದಾರೆ.
ಮುರಳಿ ಮನೋಹರ ಜೋಷಿ ಅವರು ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾಗಿರಲಿದ್ದಾರೆ. ಸುಷ್ಮಾ ಸ್ವರಾಜ್ ಮತ್ತು ಅರುಣ್ ಜೇಟ್ಲಿ ಅವರು ಪ್ರಚಾರ ಸಮಿತಿಯ ಹೊಣೆ ಹೊರಲಿದ್ದಾರೆ. ಮೋದಿ ಆಪ್ತರಾದ ಪಿ.ಕೆ. ಧುಮಾಲ್ ಪ್ರಣಾಳಿಕೆ ತಂಡದಲ್ಲಿದ್ದರೆ, ಅಮಿತ್ ಶಾ ಪ್ರಚಾರ ತಂಡದಲ್ಲಿ ಇರಲಿದ್ದಾರೆ. ಹೊಸ ಮತದಾರರ ಮೇಲೆ ನವಜೋತ್ ಸಿಂಗ್ ಸಿಧು ಮತ್ತು ಅಮಿತ್ ಶಾ ಕಣ್ಣು ಹಾಕಲಿದ್ದಾರೆ. ಪಿಯೂಶ್ ಗೋಯಲ್ ಆನ್‌ಲೈನ್ ಮತ್ತು ಸಾಮಾಜಿಕ ಜಾಲ ತಾಣಗಳ ಹೊಣೆ ಹೊರಲಿದ್ದಾರೆ.
ವೆಂಕಯ್ಯ ನಾಯ್ಡು ಮತ್ತು ವರುಣ್ ಗಾಂಧಿ ಅವರು ಆಗಸ್ಟ್‌ನಿಂದ ಆಯೋಜಿಸಲಾಗುವ 100ಕ್ಕೂ ಹೆಚ್ಚು ಭಾರಿ ಪ್ರಮಾಣದ ರ್ಯಾಲಿಗಳ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ.
ಗಡ್ಕರಿಗೆ ದೆಹಲಿ ಉಸ್ತುವಾರಿ: ನಿತಿನ್ ಗಡ್ಕರಿ ಅವರು 2014ರ ದಿಕ್ಸೂಚಿ ಪತ್ರದ ಉಸ್ತುವಾರಿ ಹೊತ್ತಿದ್ದಾರೆ. ಇವರ ನೇತೃತ್ವದಲ್ಲೇ ಯುಪಿಎ ಸರ್ಕಾರದ ವಿರುದ್ಧದ ಚಾರ್ಜ್‌ಶೀಟ್ ಸಿದ್ಧಪಡಿಸಲಾಗುತ್ತದೆ. ಇದರಲ್ಲಿ ಯುಪಿಎ ಸರ್ಕಾರದ ವೈಫಲ್ಯಗಳನ್ನು ಜನರ ಮುಂದಿಡಲಾಗುತ್ತದೆ. ಇದಲ್ಲದೇ ದೆಹಲಿ ವಿಧಾನಸಭೆ ಚುನಾವಣೆಯ ಉಸ್ತುವಾರಿಯನ್ನೂ ಇವರಿಗೇ ವಹಿಸಲಾಗಿದೆ. ಗಡ್ಕರಿ ಅವರಿಗೆ ನವಜೋತ್ ಸಿಂಗ್ ಸಿಧು ಅವರು ಸಹಾಯ ಮಾಡಲಿದ್ದಾರೆ. ಇದಲ್ಲದೇ ವಿಶೇಷ ಸಂಪರ್ಕ ಕಲ್ಯಾಣ ಸಮಿತಿಯ ಉಸ್ತುವಾರಿಯನ್ನೂ ಗಡ್ಕರಿಗೆ ಹೆಗಲಿಗೆ ಕಟ್ಟಲಾಗಿದೆ.
ಸಮಿತಿ ವಿವರ
- ಪ್ರಣಾಳಿಕೆ ಸಮಿತಿ - ಮುರಳಿ ಮನೋಹರ ಜೋಷಿ
- ಪ್ರಚಾರ ಸಮಿತಿ - ಸುಷ್ಮಾ ಮತ್ತು ಜೇಟ್ಲಿ
- ದಿಕ್ಸೂಚಿ ಪತ್ರ ಸಮಿತಿ - ನಿತಿನ್ ಗಡ್ಕರಿ
- ರ್ಯಾಲಿ ಉಸ್ತುವಾರಿ ಸಮಿತಿ - ವೆಂಕಯ್ಯ ನಾಯ್ಡು, ವರುಣ್ ಗಾಂಧಿ
- ವಿಶೇಷ ಸಂಪರ್ಕ ಕಲ್ಯಾಣ ಸಮಿತಿ - ನಿತಿನ್ ಗಡ್ಕರಿ
- ಕಾನೂನು ಸಮಿತಿ - ಸತ್ಪಾಲ್ ಜೈನ್
- ಸಾಮಾಜಿಕ ಜಾಲ ತಾಣ ಸಮಿತಿ - ಪಿಯೂಶ್ ಗೋಯಲ್
- ಭಿತ್ತಿಪತ್ರ, ಹೊತ್ತಗೆ ಸಮಿತಿ - ಬಲ್ಬೀರ್ ಪುಂಜ್
- ಸಾರಿಗೆ ಸಮನ್ವಯ - ಮುಖ್ತಾರ್ ಅಬ್ಬಾಸ್ ನಖ್ವಿ