ಸರ್ಕಾರಿ ಜಮೀನು ಮಾರಿದ 'ಭೂ'ಪರು!
ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿ ಮಾರಬಹುದೇ? ಸರ್ಕಾರದಿಂದ ಗುತ್ತಿಗೆ ಆಧಾರದಲ್ಲಿ ಪಡೆದಿದ್ದರೂ ಮಾರಾಟ ಮಾಡಬಹುದೇ? ಕೈಗಾರಿಕೆಗಾಗಿ ಪಡೆದ ಜಮೀನು ವಸತಿ ...
ಕೆರೆ ಮಂಜುನಾಥ್
ಕ.ಪ್ರ.ವಾರ್ತೆ ಬೆಂಗಳೂರು ಜು.20
ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿ ಮಾರಬಹುದೇ? ಸರ್ಕಾರದಿಂದ ಗುತ್ತಿಗೆ ಆಧಾರದಲ್ಲಿ ಪಡೆದಿದ್ದರೂ ಮಾರಾಟ ಮಾಡಬಹುದೇ? ಕೈಗಾರಿಕೆಗಾಗಿ ಪಡೆದ ಜಮೀನು ವಸತಿ ಸಂಕೀರ್ಣವಾಗಲು ಸಾಧ್ಯವೇ?
ಭೂಕಬಳಿಕೆದಾರರು ಮನಸ್ಸು ಮಾಡಿದರೆ, ಕಂದಾಯ ಇಲಾಖೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಸಹಕರಿಸಿದರೆ ಇದೆಲ್ಲವೂ ಸಾಧ್ಯ. ಸರ್ಕಾರಿ ಜಮೀನು ಪಡೆದ ಉದ್ದೇಶ ಬೇರೆಯಾದರೂ ಅದರಿಂದ ಲಾಭ ಪಡೆಯಲು ಭೂಕಬಳಿಕೆದಾರರು ಹಾಗೂ ಉದ್ಯಮಿಗಳು ಯಾವ ಮಟ್ಟಕ್ಕಾದರೂ ಹೋಗುತ್ತಾರೆ. ಇರುವ ದಾಖಲೆಯನ್ನೇ ಮರೆಮಾಚುತ್ತಾರೆ. ಷರತ್ತುಗಳು ಕಣ್ಣಿಗೇ ಕಾಣುವುದಿಲ್ಲ. ಇಂತಹ ಹತ್ತಾರು ಪ್ರಕರಣಗಳನ್ನು ವಿ. ಬಾಲಸುಬ್ರಮಣಿಯನ್ ಕಾರ್ಯಪಡೆ ವರದಿಯಲ್ಲಿ ವಿವರಿಸಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣ ಅಸ್ತಿತ್ವದಿಂದ ದೇವನಹಳ್ಳಿ ತಾಲೂಕಿನ ಸುತ್ತಮುತ್ತ ಜಮೀನಿಗೆ ಚಿನ್ನಕ್ಕಿಂತ ಅಧಿಕ ಬೆಲೆ. ಅದಕ್ಕೇ ಸುಮಾರು 830 ಎಕರೆ ಜಮೀನನ್ನು ಸಕ್ರಮಗೊಳಿಸಲು ಯಾವುದೇ ಅರ್ಜಿ ಇಲ್ಲದಿದ್ದರೂ ಅದು ಸಕ್ರಮವಾಗಿದೆ. ಇದರ ಫಲಾನುಭವಿಗಳು ಬಿಲ್ಡರ್ಗಳೇ.
ಭೂಮಿ ಸಕ್ರಮಗೊಳಿಸುವ ಬಗ್ಗೆ ಸಮಿತಿಯ ಶಿಫಾರಸುಗಳ ಬಗ್ಗೆ ಮೂಲ ದಾಖಲೆ ಇಲ್ಲ ಅಥವಾ ತಹಸೀಲ್ದಾರರೇ ಒಪ್ಪಿಕೊಂಡಂತೆ ಸಕ್ರಮಕ್ಕೆ ಅರ್ಜಿಯೇ ಬಂದಿಲ್ಲ. ಭೂಕಬಳಿಕೆಗೆ ದುಷ್ಪ್ರೇರಣೆ ನೀಡುವ ಅಧಿಕಾರಿಗಳು 'ಪತ್ತೆ ಇಲ್ಲದ ದಾಖಲೆಗಳನ್ನು' ಕಾನೂನುಬಾಹಿರವಾಗಿ ಸೃಷ್ಟಿಸಿದ್ದಾರೆ. ಇದು ಕಾರ್ಯಪಡೆ ಗಮನಕ್ಕೆ ಬಂದ ಅಂಶ.
ಭೂ ಮಂಜೂರಿಗೆ ಮೂಲ ಪುರಾವೆ ಎಂದರೆ ದರ್ಖಾಸ್ತು ರಿಜಿಸ್ಟರ್, ಸಾಗುವಳಿ ಚೀಟಿ ರಿಜಿಸ್ಟರ್. ಇದರ ದಾಖಲೆಗಳಿಲ್ಲದಿದ್ದರೂ ಆರ್ಟಿಸಿ (ಪಹಣಿ)ಗಳನ್ನು ನಕಲಿಯಾಗಿ ಸೃಷ್ಟಿಸಿ, ಭೂ ಮಂಜೂರು ದಾಖಲೆಗಳೇ ಇಲ್ಲ ಎಂದು 'ಪತ್ತೆ ಇಲ್ಲದ ದಾಖಲೆಗಳನ್ನು' ನಿರ್ಮಿಸಿ ಸಕ್ರಮ ಮಾಡಲಾಗಿದೆ. ಕೆಲವು ಪ್ರಕರಣಗಳಲ್ಲಿ ನಕಲಿ ಸಾಗುವಳಿ ಚೀಟಿಯನ್ನೂ ಸೃಷ್ಟಿಸಲಾಗಿದೆ. 428 ಪ್ರಕರಣಗಳಲ್ಲಿ ಭೂ ಕಬಳಿಕೆದಾರರ ಪರವಾಗಿ ತೀರ್ಪು ನೀಡಿದ ಅಂದಿನ ವಿಶೇಷ ಉಪ ಆಯುಕ್ತರು ಭ್ರಷ್ಟಾಚಾರ ವಿರೋಧ ಅಧಿನಿಯದಡಿ ಲೋಕಾಯುಕ್ತದಿಂದ 2010ರ ಅಕ್ಟೋಬರ್ನಲ್ಲಿ ದಸ್ತಗಿರಿಯಾಗಿದ್ದರು.
ಬಿಜಾಯ್ಸ್ಗೆ ಭೂಸಂತಸ: ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಗೆ ಮಂಜೂರಾದ ಭೂಮಿ ಬಿಲ್ಡರ್ಗಳ ಪಾಲಾಗಿ, ನೂರಾರು ಫ್ಲ್ಯಾಟ್ಗಳ ಅಪಾರ್ಟ್ಮೆಂಟ್ ಆಗಿದೆ. ಕಂದಾಯ ಇಲಾಖೆ ಅಧಿಕಾರಿ-ನೌಕರ ವರ್ಗ ಕೈಜೋಡಿಸಿದ್ದರಿಂದಲೇ ಬಿಲ್ಡರ್ಗಳಿಗೆ ಈ ಸುಗ್ಗಿ. ಇದರಿಂದ ಜಾಯ್ ಐಸ್ ಕ್ರೀಸ್ ಕಂಪನಿ (ಜೆಐಸಿ) ಬೆಂಗಳೂರು ಪೂರ್ವ ತಾಲೂಕಿನ ಪಟ್ಟಂದೂರು ಅಗ್ರಹಾರ ಸರ್ವೆ ನಂ.42ರಲ್ಲಿ 8 ಎಕರೆ 7 ಗುಂಟೆ ಜಮೀನನ್ನು ಪ್ರೆಸ್ಟೀಜ್ ಎಸ್ಟೇಟ್ ಪ್ರಾಜೆಕ್ಟ್ ಸಂಸ್ಥೆಗೆ ಮಾರಾಟ ಮಾಡಿ ಕೋಟ್ಯಂತರ ರುಪಾಯಿಗಳಿಸಿದೆ.
ಜೆಐಸಿ ಕಂಪನಿ ಕೋರಿಕೆಯಂತೆ ಕೆಐಎಡಿಬಿ ಸರ್ಕಾರದಿಂದ ಪಡೆದ 3 ಎಕರೆ 23 ಗುಂಟೆ ಸರ್ಕಾರಿ ಜಮೀನನ್ನು ಕೈಗಾರಿಕೆ ಉದ್ದೇಶಕ್ಕಾಗಿ ಮಾತ್ರ. ಇಲ್ಲದಿದ್ದರೆ ಭೂಮಿ ವಾಪಸ್ ಪಡೆಯುವ ಷರತ್ತು ವಿಧಿಸಿ 2006ರ ಮಾರ್ಚ್ 31ರಂದು ಮಂಜೂರು ಮಾಡಿತು. ಈ 3 ಎಕರೆ 23 ಗುಂಟೆ ಜಮೀನು ಸೇರಿದಂತೆ 8 ಎಕರೆ 7 ಗುಂಟೆ ಜಮೀನನ್ನು ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಗೆ ಅನುಮೋದಿಸಬೇಕು ಎಂದು ಜೆಐಸಿ ಮತ್ತು ವೈಲ್ಡ್ ಫ್ಲವರ್ ಎಸ್ಟೇಟ್ ಅಂಡ್ ರೆಸಾರ್ಟ್ಸ್ ಅರ್ಜಿ ಸಲ್ಲಿಸಿತು. ಇದನ್ನು ಏಕಗವಾಕ್ಷಿ ಅನುಮೋದಿಸಿತು. ಆದರೆ ಈ ಜಮೀನನ್ನು ಕೈಗಾರಿಕೆಗೆ ಉಪಯೋಗಿಸದೆ ವಾಣಿಜ್ಯ ಸಂಕೀರ್ಣದ ಪ್ರೆಸ್ಟೀಜ್ ಸಂಸ್ಥೆಗೆ ಮಾರಾಟ ಮಾಡಿದೆ.
ಈ ಎಲ್ಲ ಪ್ರಕರಣದ ಬಗ್ಗೆ ಅಡ್ವೋಕೇಟ್ ಜನರಲ್ ಸಲಹೆಯನ್ನೂ ಪಡೆಯಲಾಯಿತು. ಅವರೂ ಈ ಜಮೀನನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಅಭಿಪ್ರಾಯ ನೀಡಿದ್ದರು. ಆದರೂ ವಿಶೇಷ ಜಿಲ್ಲಾಧಿಕಾರಿ ಅವರು ಕಾನೂನು ಕ್ರಮ ಕೈಗೊಳ್ಳಲೇ ಇಲ್ಲ.
ಇದೆಲ್ಲ ಸರಿಯಾಗಬೇಕಾದರೆ ಕರ್ನಾಟಕ ಭೂಕಬಳಿಕೆ ನಿಷೇಧ ವಿಧೇಯಕ 2007 ಕಾನೂನಾಗಬೇಕು. ಇದರ ಪರಿಷ್ಕೃತ ವಿಧೇಯಕಕ್ಕೆ ವಿಧಾನಮಂಡಲದಲ್ಲಿ ಅನುಮೋದನೆಯಾದರೆ ಎಲ್ಲ ಪ್ರಕರಣಗಳು ಇತ್ಯರ್ಥವಾಗಿ ಸರ್ಕಾರ ಭೂಮಿ ಉಳಿಯುತ್ತದೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಥಮ ಹೆಜ್ಜೆ ಇರಿಸುವರೇ?
ಭೂಕಬಳಿಕೆ ನಿಷೇಧ ವಿಧೇಯಕ- ಉಪಯೋಗವೇನು?
ಸರ್ಕಾರಿ ಜಮೀನುಗಳ ಒತ್ತುವರಿ ನಿಯಂತ್ರಿಸಲು ರಾಜ್ಯ ವಿಧಾನಮಂಡಲ 2007ರಲ್ಲಿ 'ಕರ್ನಾಟಕ ಭೂಕಬಳಿಕೆ (ನಿಷೇಧ) ವಿಧೇಯಕ' ಅಂಗೀಕರಿಸಿತು. ಆಂಧ್ರಪ್ರದೇಶದಲ್ಲಿ ಅಧಿನಿಯಮ ಪರಿಶೀಲಿಸಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ವಿಧೇಯಕ ರಚನೆಯಾಗಿತ್ತು. ಈ ವಿಧೇಯಕವನ್ನು ನಾಲ್ಕು ವರ್ಷದ ನಂತರ ಕೇಂದ್ರ ಸರ್ಕಾರ ಹಿಂದಿರುಗಿಸಿದೆ. ವಕ್ಫ್ ಮಂಡಳಿಯ ಜಮೀನನ್ನೂ ಈ ವಿಧೇಯಕದ ವ್ಯಾಪ್ತಿಗೆ ತಂದು ಪರಿಷ್ಕೃತ ವಿಧೇಯಕ ಮಂಡನೆ ವಿಷಯ ವಿಧಾನಮಂಡಲದ ಮುಂದೆಯೇ ಇನ್ನೂ ಇದೆ.ವಿಧೇಯಕದ ಉಪಯೋಗ ಹೀಗಿದೆ-
ಟಿ ಸರ್ಕಾರ, ಸ್ಥಳೀಯ ಪ್ರಾಧಿಕಾರ ಸೇರಿದಂತೆ ಎಲ್ಲ ಕಂಪನಿ, ಟ್ರಸ್ಟ್, ವ್ಯಕ್ತಿಗಳ ಜಮೀನಿಗೂ ಅನ್ವಯ.
ಟಿ ಭೂ ಕಬಳಿಕೆದಾರ ವ್ಯಾಪ್ತಿಗೆ ಕಾನೂನುಬಾಹಿರವಾಗಿ ಜಮೀನು ಸ್ವಾಧೀನಕ್ಕೆ ಪಡೆಯುವ ಹಾಗೂ ನೆರವಾಗುವ ದುಷ್ಪ್ರೇರಕನೂ ಸೇರುತ್ತಾನೆ.
ಟಿ ಭೂ ಕಬಳಿಕೆ ಅಪರಾಧವನ್ನು ವಿಶೇಷ ನ್ಯಾಯಾಲಯದಿಂದ ಕನಿಷ್ಠ 1, ಗರಿಷ್ಠ 3 ವರ್ಷ ಕಾರಾಗೃಹ ವಾಸ ಮತ್ತು 25 ಸಾವಿರ ದಂಡದಿಂದ ಶಿಕ್ಷಿಸಲಾಗುವುದು. 6 ತಿಂಗಳಲ್ಲಿ ಪ್ರಕರಣ ತೀರ್ಮಾನವಾಗುವುದು.
ಟಿ ಎಲ್ಲ ಭೂಕಬಳಿಕೆ ಪ್ರಕರಣಗಳನ್ನು ವಿಶೇಷ ನ್ಯಾಯಾಲಯದಿಂದ ಮಾತ್ರವೇ ವಿಚಾರಣೆ ನಡೆಸಬೇಕು ಮತ್ತು ಇದರ ತೀರ್ಮಾನವೇ ಅಂತಿಮ.
ಟಿ ವಿಶೇಷ ನ್ಯಾಯಾಲಯವು ಸಿವಿಲ್ ನ್ಯಾಯಾಲಯ ಹಾಗೂ ಸೆಷನ್ಸ್ ನ್ಯಾಯಾಲಯದ ಅಧಿಕಾರ ಹೊಂದಿರುತ್ತದೆ.
ಟಿ ವಿಶೇಷ ನ್ಯಾಯಾಲಯ ರಚನೆಯಾಗದ ಪ್ರದೇಶಗಳಲ್ಲಿ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ಗೆ ಸರ್ಕಾರ ಅಧಿಕಾರ ನೀಡಬಹುದು.
ಟಿ ಈ ಅಧಿನಿಯಮವು ಇತರೆ ಎಲ್ಲ ಕಾನೂನುಗಳ ಮೇಲೆ ಅಧ್ಯಾರೋಹಿ ಪರಿಣಾಮ ಹೊಂದಿರುತ್ತದೆ. ಇತರೆ ಯಾವುದೇ ನ್ಯಾಯಾಲಯ ಅಥವಾ ಪ್ರಾಧಿಕಾರದ ಮುಂದಿರುವ ಭೂ ಕಬಳಿಕೆ ಸ್ವರೂಪದ ಎಲ್ಲ ಪ್ರಕರಣಗಳೂ ಈ ಅಧಿನಿಯಮದಲ್ಲಿ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆಯಾಗುತ್ತವೆ.
5,835 ಎಕರೆ ಕಾನೂನುಬಾಹಿರ ಸಕ್ರಮ
ಕಾನೂನು ಪ್ರಕಾರ ಅಕ್ರಮ, ಆದರೆ ಅಧಿಕಾರಿಗಳ ಪ್ರಕಾರ ಸಕ್ರಮ. ಹೀಗಾಗಿಯೇ ಬೆಂಗಳೂರಿನ ಪೂರ್ವ, ಉತ್ತರ, ದಕ್ಷಿಣ ಹಾಗೂ ಆನೇಕಲ್ ತಾಲೂಕಿನಲ್ಲಿ 5,835 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಸಕ್ರಮಗೊಳಿಸಲಾಗಿದೆ. ಬೆಂಗಳೂರು ಸಿಟಿ ಕಾರ್ಪೊರೇಷನ್ನ 18 ಕಿಮೀ ಮಿತಿ ಹೊರಗಿಲ್ಲದ 2,112 ಎಕರೆಯೂ ಈ ಸಕ್ರಮದಲ್ಲಿದೆ. ಆನೇಕಲ್ ತಾಲೂಕಿನಲ್ಲಿ 16 ಗ್ರಾಮ ಹೊರತುಪಡಿಸಿ ಉಳಿದೆಲ್ಲವೂ ಈ 18 ಕಿಮೀ ವ್ಯಾಪ್ತಿಗೆ ಬಂದರೂ ಸುಮಾರು 2000 ಎಕರೆ ಸಕ್ರಮವಾಗಿದೆ. ಈ ಜಮೀನು ಮೌಲ್ಯ ಸುಮಾರು 20,000 ಕೋಟಿಗೇನೂ ಕಡಿಮೆ ಇಲ್ಲ. ಹೀಗಾಗಿ ಈ ಸಕ್ರಮ ಮಂಜೂರುಗಳನ್ನು ರದ್ದುಪಡಿಸಲು ಸಹಾಯಕ ಆಯುಕ್ತರಿಗೆ ಕಾರ್ಯಪಡೆ ಸೂಚಿಸಿದೆ. ಮುಂದೇನಾಯಿತು ಎಂಬ ಮಾಹಿತಿಯೇ ಇಲ್ಲ!