ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಂಗಾಯಣದ 'ಬೆಳ್ಳಿ'ಗೆರೆಯಲ್ಲಿ ಕಪ್ಪುಚುಕ್ಕಿ

ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ರಂಗಾಯಣ ಕಲಾವಿದರು ಅಕ್ಷರಶಃ ಅನಾಥರಾಗಿದ್ದಾರೆ. ಶಿವಮೊಗ್ಗ ಹಾಗೂ ಧಾರವಾಡದಲ್ಲಂತೂ ಅವರ ಕತೆ ಕೇಳುವವರಿಲ್ಲವಾಗಿದೆ...

Rashmi Kasaragodu
Updated On : 21 Jul 2013, 11:25 am

ಮೈಸೂರು ರಂಗಾಯಣದಿಂದ ವರ್ಗವಾಗಿ ಶಿವಮೊಗ್ಗ ಹಾಗೂ ಧಾರವಾಡಕ್ಕೆ ಬಂದಿರುವ ಕಲಾವಿದರು ಏನು ಮಾಡುತ್ತಿದ್ದಾರೆ? ಅವರೇಕೆ ರಂಗಚಟುವಟಿಕೆಯಲ್ಲಿ ಭಾಗವಹಿಸುತ್ತಿಲ್ಲ? ಅವರು ಇಲ್ಲೇ ಉಳಿಯುತ್ತಾರಾ? ವಾಪಸು ಹೋಗುತ್ತಾರಾ ಎಂದು ರಂಗಕಲಾವಿದ ಕಿರಣ್ಕುಮಾರ್ ಶೆಟ್ಟಿಹಳ್ಳಿ ಕೇಳಿದ್ದಾರೆ. ಅವರ ಪ್ರಶ್ನೆಗೆ ಉತ್ತರ ಹೀಗಿದೆ.


- ಹೊನ್ನಾಳಿ ಚಂದ್ರಶೇಖರ್
ಕ.ಪ್ರ.ವಾರ್ತೆ   ಶಿವಮೊಗ್ಗ   ಜು.21
ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ರಂಗಾಯಣ ಕಲಾವಿದರು ಅಕ್ಷರಶಃ ಅನಾಥರಾಗಿದ್ದಾರೆ. ಶಿವಮೊಗ್ಗ ಹಾಗೂ ಧಾರವಾಡದಲ್ಲಂತೂ ಅವರ ಕತೆ ಕೇಳುವವರಿಲ್ಲವಾಗಿದೆ.
ಇದೇ ವರ್ಷ ಮಾರ್ಚ್ ಕೊನೆಯ ವಾರ ಮೈಸೂರಿನಲ್ಲಿದ್ದ 18 ಕಲಾವಿದರನ್ನು ಒಡೆದು ತಲಾ 6 ಕಲಾವಿದರನ್ನು ಮೈಸೂರು, ಶಿವಮೊಗ್ಗ ಹಾಗೂ ಧಾರವಾಡ ರಂಗಾಯಣಗಳಿಗೆ ಹಂಚಲಾಯಿತು. ಇದು ಹಿಂದಿನ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯ ರಂಗಸಮಾಜದ ತೀರ್ಮಾನವಾಗಿತ್ತು. ಇದನ್ನು ತಡೆಯಲು ರಾಜ್ಯಾದ್ಯಂತ ಹಲವೆಡೆ ಹೋರಾಟಗಳು ನಡೆದರು, ಕಲಾವಿದರನ್ನು ವರ್ಗಾಯಿಸಲಾಯಿತು.
ಮೈಸೂರಿನಲ್ಲಿಯೇ ಉಳಿದ 6 ಕಲಾವಿದರು ಮಾತ್ರ ಒಂದಿಷ್ಟು ರಂಗ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಕೊಂಡಿದ್ದಾರೆ. ಆದರೆ ಶಿವಮೊಗ್ಗ ಹಾಗೂ ಧಾರವಾಡ ರಂಗಾಯಣಕ್ಕೆ ವರ್ಗವಾದ ಕಲಾವಿದರು ಮಾತ್ರ ಕಳೆದ ನಾಲ್ಕು ತಿಂಗಳಿಂದ ಸುಮ್ಮನೆ ಕುಳಿತಿದ್ದಾರೆ.
ಸುಮ್ಮನೆ ಕಚೇರಿಗೆ ಭೇಟಿ: ಬೆಳಿಗ್ಗೆ 10 ಗಂಟೆಗೆ ರಂಗಾಯಣದ ಕಚೇರಿ ಬಂದು, ಸಂಜೆಯವರೆಗೂ ಅಲ್ಲಿಯೇ ಕುಳಿತಿರುವುದು, ಯಾರಾದರೂ ಪರಿಚಯದವರಿದ್ದರೆ ಅವರನ್ನು ಮಾತನಾಡಿಸುವುದು, ಪೇಪರ್ ಓದುವುದು, ಅದೇ ಕಟ್ಟಡದಲ್ಲಿರುವ ಖಾಲಿ ವೇದಿಕೆಯನ್ನು ನೋಡುವುದನ್ನು ಬಿಟ್ಟರೆ ಇವರಿಗೆ ಬೇರೆ ಕೆಲಸವೇ ಇಲ್ಲವಾಗಿದೆ.
ಇವರ ವರ್ಗಾವಣೆಯನ್ನು ರದ್ದು ಮಾಡಿ ಮತ್ತೆ ಮೈಸೂರಿಗೆ ಕರೆಸಿಕೊಳ್ಳಲು ರಂಗಸಮಾಜ ಪುನರ್ರಚನೆಯಾಗಬೇಕು ಎಂದು ಈಗಿನ ಸರ್ಕಾರ ಹೇಳುತ್ತಿದೆ. ಆದರೆ ರಂಗಾಯಣ ನಿರ್ದೇಶಕರನ್ನು ಬದಲಾಯಿಸುವ, ರಾಜಿನಾಮೆ ಕೇಳುವ ಕೆಲಸವನ್ನು ಮಾತ್ರ ರಂಗಸಮಾಜದ ಪುನರ್ರಚನೆಗೆ ಕಾಯದೇ ಮಾಡುತ್ತಿದೆ. ಏಕೆ ಹೀಗೆ?
ಆಗಿದ್ದೇನು?: ಮೈಸೂರು ರಂಗಾಯಣವನ್ನು ವಿಭಜಿಸಿ, ಸರ್ಕಾರ ಸಾಧಿಸಿದ್ದೇನು? ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಮೈಸೂರಿನ ರೆಪರ್ಟರಿ ಸೊರಗಿ ಹೋಯಿತು. ಅಲ್ಲಿ ಜನರ ಮೆಚ್ಚುಗೆಗೆ ಮಾತ್ರವಾಗಿದ್ದ ಹತ್ತಾರು ನಾಟಕಗಳ ಪ್ರದರ್ಶನ ನಿಂತುಹೋಯಿತು. ವರ್ಗಾವಣೆಯಾಗಿ ಹೋದ ಜಾಗದಲ್ಲಾದರೂ ಕಲಾವಿದರು ಕ್ರಿಯಾಶೀಲರಾಗಿದ್ದಾರೆಯೇ ಎಂದು ನೋಡಿದಾಗ ಅಲ್ಲಿಯೂ ನಿರಾಸೆಯೇ. ಏಕೆಂದರೆ ಯಾವ ಜವಾಬ್ದಾರಿಯನ್ನೂ ಸಹ ಅಲ್ಲಿನ ರಂಗಾಯಣ ನಿರ್ದೇಶಕರು ನೀಡಲಿಲ್ಲ. ಅವರು ಉಳಿಯುತ್ತಾರೋ, ಮತ್ತೆ ವಾಪಸು ಹೋಗುತ್ತಾರೋ ಎಂಬ ಗೊಂದಲವೇ ಈ ನಿರ್ದೇಶಕರನ್ನು ಕಾಡುತ್ತಿತ್ತು.
ಮತ್ತಷ್ಟು ಅತಂತ್ರ: ಶಿವಮೊಗ್ಗ ರಂಗಾಯಣ ನಿರ್ದೇಶಕ ಹೊ.ನ. ಸತ್ಯ ಈಗ ರಾಜಿನಾಮೆ ನೀಡಿದ್ದಾರೆ. ಹಾಗಾಗಿ ಈ ಹೊಣೆಯನ್ನು ಆಡಳಿತಾಧಿಕಾರಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಎನ್. ಹರಿಕುಮಾರ್ ಅವರಿಗೆ ವಹಿಸಲಾಗಿತ್ತು. ಇದಾದ ಮೂರ್ನಾಲ್ಕು ದಿನಗಳಲ್ಲಿಯೇ ಹರಿಕುಮಾರ್ ಅವರನ್ನು ಬೆಂಗಳೂರಿಗೆ ವರ್ಗಾಯಿಸಲಾಗಿದ್ದು, ಇದೀಗ ದಾವಣಗೆರೆಯ ಸಹಾಯಕ ನಿರ್ದೇಶಕರಿಗೆ ಶಿವಮೊಗ್ಗದ ಹೆಚ್ಚುವರಿ ಹೊಣೆ ಹೊರಿಸಲಾಗಿದೆ. ಹಾಗಾಗಿ ಶಿವಮೊಗ್ಗಕ್ಕೆ ಬಂದಿರುವ ರಂಗಾಯಣ ಕಲಾವಿದರು ಮತ್ತಷ್ಟು ಅತಂತ್ರರಾಗಿದ್ದಾರೆ.
ಒಂದು ಕಾಲದಲ್ಲಿ ದಿನವಿಡೀ ಚಟುವಟಿಕೆಯಿಂದ ಇದ್ದ ಕಲಾವಿದರು ಈಗ ಸುಮ್ಮನೆ ಕುಳಿತು ಒಂದೊಂದು ಕ್ಷಣವನ್ನೂ ಒಂದೊಂದು ದಿನದಂತೆ ಕಳೆಯುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ರಂಗಾಯಣ ರಗಳೆಯನ್ನು ಸದ್ಯವೇ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ. ಅದು ಯಾವತ್ತು ಅನುಷ್ಠಾನಕ್ಕೆ ಬರುವುದೋ ಕಾದು ನೋಡಬೇಕು.



ಸಿಲುಕಿಕೊಂಡ ಕಲಾವಿದರು

ಶಿವಮೊಗ್ಗದಲ್ಲಿ- ಮಂಜುನಾಥ್ ಬಳಕೆರೆ, ಹುಲಗಪ್ಪ ಕಟ್ಟಿಮನಿ, ಪ್ರಮೀಳಾ ಬೇಂಗ್ರೆ, ಮಹದೇವ, ಶಶಿಕಲಾ ಬಿ.ಎನ್., ಎಂ.ಸಿ. ಕೃಷ್ಣಪ್ರಸಾದ್
ಧಾರವಾಡದಲ್ಲಿ- ಪ್ರಶಾಂತ್ ಹಿರೇಮಠ, ಕೃಷ್ಣಕುಮಾರ್ ನರ್ಣಕಜೆ, ನಂದಿನಿ ಕೆ.ಆರ್., ಮೈಮ್ ರಮೇಶ್, ಜಗದೀಶ ಮನೆವಾರ್ತೆ, ನೂರ್ ಅಹ್ಮದ್ ಶೇಟ್.
ಮೈಸೂರಲ್ಲಿ- ಗೀತಾ ಮಂಟಡ್ಕ, ವಿನಾಯಕ ಭಟ್, ರಾಮನಾಥ, ಸಂತೋಷ್ ಕುಮಾರ್, ಕುಸನೂರು, ಸರೋಜ ಹೆಗ್ಡೆ, ಎಸ್. ರಾಮು.


ಮೈಸೂರು ರಂಗಾಯಣದ ಕಲಾವಿದರನ್ನು ಯಾವುದೇ ಉದ್ದೇಶವಿಲ್ಲದೇ, ಯೋಜನೆ ಇಲ್ಲದೇ ವರ್ಗಾಯಿಸುತ್ತಾರೆಂದರೆ ಅದೆಂತ ವಿಚಿತ್ರ? ಈ ನಡುವೆ ರಾಜ್ಯ ಸರ್ಕಾರ ಸಾಂಸ್ಕೃತಿಕ ನೀತಿಯನ್ನು ತರುವುದಾಗಿ ಬಜೆಟ್ ಮೂಲಕ ಹೇಳುತ್ತಿದೆ. ಸರ್ಕಾರ ಮೊದಲು ಈ ಕೂಡಲೇ ಆಗಿರುವ ತಪ್ಪುಗಳನ್ನು ಸರಿಪಡಿಸಬೇಕು.
- ಪ್ರಕಾಶ್ ಬೆಳವಾಡಿ, ರಂಗಕರ್ಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement