ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಾವಿನಲ್ಲಿ 'ಹೃದಯ'ವಂತರೇ ನಂ.1

ರಾಜ್ಯದಲ್ಲಿ ಪ್ರತಿ ನಿತ್ಯ ಸಾಯುವ ಜನರ ಪೈಕಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಪ್ರಥಮ ಸ್ಥಾನ ಪಡೆದರೆ, ಗಾಯ...

Rashmi Kasaragodu
Updated On : 21 Jul 2013, 11:26 am

 ದೇವರಾಜ್ ಎಲ್.
ಕ.ಪ್ರ.ವಾರ್ತೆ   ಬೆಂಗಳೂರು   ಜು.21
ರಾಜ್ಯದಲ್ಲಿ ಪ್ರತಿ ನಿತ್ಯ ಸಾಯುವ ಜನರ ಪೈಕಿ ಹೃದಯ ಸಂಬಂಧಿ ಕಾಯಿಲೆಗಳಿಗೆ ಬಲಿಯಾಗುತ್ತಿರುವವರ ಸಂಖ್ಯೆ ಪ್ರಥಮ ಸ್ಥಾನ ಪಡೆದರೆ, ಗಾಯ, ವಿಷ ಸೇವನೆ ಮತ್ತು ಇತರೆ ಬಾಹ್ಯ ಕಾರಣಗಳಿಂದ ಮೃತಪಡುವವರ ಸಂಖ್ಯೆ ದ್ವಿತೀಯ ಸ್ಥಾನದಲ್ಲಿದೆ...!
ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ 2011ರ ಪ್ರಕಟಿಸುವ ಜನನ ಮರಣ ನೋಂದಣಿ ಅಧಿನಿಯಮ 1969ರ ವಾರ್ಷಿಕ ವರದಿ 2011ರ ಪ್ರಕಾರ ರಾಜ್ಯದಲ್ಲಿ 3,84,745 ಮರಣದ ನೋಂದಣಿಯಾಗಿದೆ. ನಿರ್ದೇಶನಾಲಯ ರಾಜ್ಯದ 1308 ಆಸ್ಪತ್ರೆಗಳಿಂದ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರಗಳನ್ನು ಕಲೆಹಾಕಿ ವಾರ್ಷಿಕ ವರದಿ ಪ್ರಕಟಿಸುತ್ತದೆ. 2011ರ ಸಾಲಿನಲ್ಲಿ ವೈದ್ಯರಿಂದ ಪ್ರಮಾಣೀಕರಿಸಿದ ಮರಣ ಕಾರಣ 1,23,221. ಈ ವರದಿ ಅಧಾರದ ಮೇಲೆ ರಕ್ತ ಪರಿಚಲನಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾದವರು 36,933(ಶೇ.29.97), ವಿಷ ಮತ್ತು ಇತರೆ ಅಪಘಾತಗಳಿಗೆ ಒಳಗಾಗಿ ಸಾವಿಗೆ ತುತ್ತಾಗುತ್ತಿರುವವರ ಸಂಖ್ಯೆ 13,801(ಶೇ.11.20). ತೃತೀಯ ಸ್ಥಾನದಲ್ಲಿ ಸಾಂಕ್ರಾಮಿಕ ಕಾಯಿಲೆಗಳಿಗೆ ತುತ್ತಾಗಿರುವರ ಸಂಖ್ಯೆ 13,166(ಶೇ.10.68) ಇದೆ.
ನಗರದಲ್ಲೇ ಹೆಚ್ಚು: ಬೆಂಗಳೂರಿಗೆ ಉದ್ಯಾನಗರಿ, ಸಿಲಿಕಾನ್ ಸಿಟಿ, ಐಟಿ- ಬಿಟಿ ಸಿಟಿ ಎಂಬ ಹೆಸರಿನಿಂದ ಹೆಚ್ಚು ಜನಪ್ರಿಯಗೊಂಡಿರುವುದು ಪ್ರತಿಯೊಬ್ಬರಿಗೂ ತಿಳಿದ ವಿಷಯ. ಆದರೆ, ಇದೇ ನಗರದಲ್ಲಿ 1308 ಆಸ್ಪತ್ರೆಗಳಲ್ಲಿ ಮೃತಪಟ್ಟವರ ಜನರ ಪ್ರಮಾಣ 36,335. ಮೈಸೂರಿನಲ್ಲಿ 9646, ದಕ್ಷಿಣ ಕನ್ನಡ- 9023 ಸಾವಪ್ಪಿದ್ದಾರೆ. ಅತೀ ಕಡಿಮೆ ಸಾವನಪ್ಪಿರುವುದು ರಾಮನಗರದಲ್ಲಿ 405 ಜನರು.
ಪುರುಷರೇ ಜಾಸ್ತಿ: ವೈದ್ಯರಿಂದ ಪ್ರಮಾಣೀಕರಿಸಿರುವ ಪ್ರಕಾರ 1,23,221 ಜನರು ವಿವಿಧ ಕಾರಣಗಳಿಂದ ಮೃತಪಟ್ಟರೆ, ಈ ಪೈಕಿ 78,517 ಪುರುಷರು ಮತ್ತು 44,704 ಮಹಿಳೆಯರಾಗಿದ್ದಾರೆ. ಹೀಗಾಗಿ ಮೃತಪಟ್ಟವರ ಸಾಲಿನಲ್ಲಿ ಪುರುಷರೇ ಹೆಚ್ಚಾಗಿದ್ದಾರೆ. 70 ವರ್ಷ ಮೇಲ್ಪಟ್ಟವರು ಶೇ.22.32 ಆಗಿದ್ದು, ಒಂದು ವರ್ಷ ಪೂರೈಸದವರು 13,099(ಶೇ.10.63) ರಷ್ಟಿದೆ.
ತಿಳಿದುಕೊಳ್ಳಿ: ರಾಷ್ಟ್ರದಲ್ಲಿ ನೀಡುವ ಮರಣ ಕಾರಣ ವೈದ್ಯಕೀಯ ಪ್ರಮಾಣ ಪತ್ರ ಮರಣ ಕಾರಣಗಳ ಬಗ್ಗೆ ವೈಜ್ಞಾನಿಕವಾಗಿ ಸಂಗ್ರಹಿಸುವಂತಹ ಮಾಹಿತಿಯಾಗಿರುತ್ತದೆ. ಇದನ್ನು ರಾಜ್ಯದಲ್ಲಿ 1967ರಿಂದ ಪ್ರಾರಂಭಿಸಲಾಗಿದೆ. 1969ರ ಜನನ ಮತ್ತು ಮರಣ ನೋಂದಣಿ ಅಧಿನಿಯಮದಡಿ ಬರುವ ಸೆಕ್ಷನ್ 10(2) ಮತ್ತು 10(3) ಪ್ರಕಾರ ರೋಗಿಗಳಿಗೆ ಶುಶ್ರೂಷೆ ನೀಡಿದ ವೈದ್ಯರು ಮರಣ ಪ್ರಮಾಣ ಪತ್ರ ನೀಡುವುದು ಕಡ್ಡಾಯ ಮಾಡಿದೆ.
1967 ರಲ್ಲಿ 44 ಆಸ್ಪತ್ರೆಗಳಲ್ಲಿ ಮರಣೋತ್ತರ ಕಾರಣ ವೈದ್ಯರ ಪ್ರಮಾಣ ಪತ್ರದಿಂದ ದೃಢೀಕರಿಸಲು ಪ್ರಾರಂಭಿಸಲಾಗಿದ್ದು, 1990 ವೇಳೆಗೆ 168 ಆಸ್ಪತ್ರೆಗಳಿಗೆ ಇದನ್ನು ವಿಸ್ತರಿಸಿದೆ. 1991ರ ಜನಗಣತಿಯ ಪ್ರಕಾರ 1ಲಕ್ಷ ಹಾಗೂ ಅದಕ್ಕೂ ಮೇಲ್ಪಟ್ಟ ಜನಸಂಖ್ಯೆ ಇರುವ ಪಟ್ಟಣ  ಮತ್ತು ನಗರ ಪ್ರದೇಶಗಳಲ್ಲಿ, 20 ಹಾಗೂ  ಅದಕ್ಕೂ ಮೇಲ್ಪಟ್ಟ ಹಾಸಿಗೆಗಳ ಜನಸಂಖ್ಯೆಯುಳ್ಳ ಆಸ್ಪತ್ರೆಗಳಿಗೂ ವಿಸ್ತರಿಸಿದೆ. ಪ್ರಸ್ತುತ ಸಾಲಿನಲ್ಲಿ 1308 ಆಸ್ಪತ್ರೆಗಳಿಂದ ಮರಣ ಕಾರಣ ವೈದ್ಯರ ಪ್ರಮಾಣ ಪತ್ರಗಳಿಂದ ಈ ಮರದಿ ತಯಾರಿಸಲಾಗಿದೆ.


ವರ್ಷ         ಸತ್ತವರು(ನೋಂದಣಿ)        ಪ್ರಮಾಣೀಕೃತ ಸಾವು
2007        3,81,890              97,300
2008        3,64,316              1,12,869
2009        3,73,290              1,15,433
2010       3,81,743              1,21,347
2011        3,84,745              1,23,221

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement