ಗಡುವು ಮುಗಿದರೂ ಬಾರದ ಕಬ್ಬಿನ ಬಾಕಿ ಬಿಲ್
ಬಾಗಲಕೋಟೆ: ಜುಲೈ 23ರೊಳಗಾಗಿ 510 ಕೋಟಿ ಕಬ್ಬಿನ ಬಾಕಿ ಬಿಲ್ ಪಾವತಿಸುವುದಾಗಿ ಜಿಲ್ಲೆಯ 9 ಸಕ್ಕರೆ ಕಾರ್ಖಾನೆಗಳು ರೈತರಿಗೆ ನೀಡಿದ ಗಡುವು ಮುಗಿಯುತ್ತ ಬಂದಿದ್ದರೂ ಇನ್ನೂ 490 ಕೋಟಿ ಬಾಕಿ ಉಳಿದಿರುವುದು ಅನ್ನದಾತರನ್ನು ಮತ್ತೆ ಹೋರಾಟಕ್ಕೆ ಅಣಿಯಾಗುವಂತೆ ಮಾಡಿದೆ. ಜು.3ರಂದು ನಡೆದ ರೈತರ ಭಾರಿ ಪ್ರತಿಭಟನೆಗೆ ಮತ್ತು ಜಿಲ್ಲಾಧಿಕಾರಿಯ ಕಟ್ಟುನಿಟ್ಟಿನ ನಿರ್ದೇಶನದಿಂದಾಗಿ ಮೆತ್ತಗಾಗಿದ್ದ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಗಳು ತಮಗೆ ಎಷ್ಟೇ ಕಷ್ಟವಾದರೂ ಜುಲೈ 23ರ ಒಳಗಾಗಿ ಕಬ್ಬಿನ ಎಲ್ಲ ಬಾಕಿ ಬಿಲ್ ವಿತರಿಸುವುದಾಗಿ ಭರವಸೆ ನೀಡುವ ಮೂಲಕ ಭುಗಿಲೆದ್ದಿದ್ದ ರೈತರ ಆಕ್ರೋಶವನ್ನು ತಣ್ಣಗಾಗಿಸಿದ್ದರು. ಆದರೆ, ಗಡುವು ಮುಗಿಯುತ್ತ ಬಂದರೂ ಇನ್ನೂ ಬಾಕಿ ಬಿಲ್ ಪಾವತಿಸದೇ ಸತಾಯಿಸುತ್ತಿರುವ ಕಾರ್ಖಾನೆಗಳ ವಿರುದ್ಧ ರೈತರು ಮತ್ತೆ ಭುಗಿಲೇಳುವಂತೆ ಮಾಡಿದೆ. ಈ ಕುರಿತು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದ ಕಬ್ಬು ಬೆಳಗಾರರ ಹೋರಾಟ ಸಮೀತಿ ಜಿಲ್ಲಾಧ್ಯಕ್ಷ ನಾಗೇಶ ಸೂರಗಾವಿ, ನೂತನ ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಂದ ನೀಡಬೇಕಿರುವ ಬಾಕಿ ಬಿಲ್ ಜು. 23ರೊಳಗೆ ಪಾವತಿ ಮಾಡದಿದ್ದರೆ ಜು. 24ರಂದು ಮುಧೋಳದಲ್ಲಿ ಕಬ್ಬು ಬೆಳಗಾರರ ಸಭೆ ಕರೆದು ಮುಂದಿನ ಹೋರಾಟದ ಕುರಿತು ಚರ್ಚಿಸಲಾಗುವುದು ಎಂದರು.