ಜೈನ ವಿಗ್ರಹ ಕದ್ದ ಕಳ್ಳ, ಪುರಿ ದೇಗುಲಕ್ಕೂ ಕನ್ನ ಹಾಕಿದ್ದ
ಮೂಡುಬಿದರೆ ಜೈನಬಸದಿಯ ಕೋಟ್ಯಂತರ ಮೌಲ್ಯದ ಪುರಾತನ ವಿಗ್ರಹಗಳನ್ನು ಕಳವು ಮಾಡಿದ ಒಡಿಶಾದ...
ಕನ್ನಡಪ್ರಭ ವಾರ್ತೆ, ಮಂಗಳೂರು, ಜು.22-
ಮೂಡುಬಿದರೆ ಜೈನಬಸದಿಯ ಕೋಟ್ಯಂತರ ಮೌಲ್ಯದ ಪುರಾತನ ವಿಗ್ರಹಗಳನ್ನು ಕಳವು ಮಾಡಿದ ಒಡಿಶಾದ ಸಂತೋಷ್‌ದಾಸ್ 'ಆಧುನಿಕ ಘಜ್ನಿ ಮಹಮ್ಮದ್'! ಈತ ದೇಶದ ಪುಣ್ಯಕ್ಷೇತ್ರಗಳಲ್ಲಿ ಪುರಾತನ ವಿಗ್ರಹ ಕದಿಯುವಲ್ಲಿ ನಿಷ್ಣಾತ. ಪುರಾಣ ಪವಿತ್ರ ಕ್ಷೇತ್ರ ಒಡಿಶಾ ಪುರಿ ಜಗನ್ನಾಥ ದೇಗುಲದ ಕೃಷ್ಣನ 'ಮದನ ಮೋಹನ' ವಿಗ್ರಹವನ್ನು ಕದ್ದಿದ್ದ. ಈತ ವಿಗ್ರಹ ಭಂಜಕನೂ ಹೌದು!
ಚಿನ್ನ ಕರಗಿಸಲು ಪರವಾನಗಿ ಪಡೆದಿರುವವರು ಇಡೀ ವಿಗ್ರಹವನ್ನು ಕರಗಿಸಲು ಒಪ್ಪದ ಕಾರಣ ಈತ ದೇವರ ಚಿನ್ನದ ವಿಗ್ರಹಗಳನ್ನು ತುಂಡರಿಸಿದ ಬಳಿಕ ಕರಗಿಸಲು ನೀಡುತ್ತಿದ್ದ. ಈತನ ವಿರುದ್ಧ ಅಧಿಕೃತವಾಗಿ ದೇಶದಲ್ಲಿ 35 ವಿಗ್ರಹ ಕಳ್ಳತನ ಪ್ರಕರಣ ದಾಖಲಾಗಿವೆ. ಆದರೆ ಈತನ ಕಳವು ಶತಕ ದಾಟುತ್ತದೆ ಎಂದು ವಿಗ್ರಹ ಕಳವು ತನಿಖೆ ನಡೆಸುವ ಪೊಲೀಸ್ ಅಧಿಕಾರಿಗಳು ಅಂದಾಜಿಸಿದ್ದಾರೆ. ಸಂತೋಷ್‌ದಾಸ್ ಯಾನೆ ಘನಶ್ಯಾಂ ದಾಸ್ ಒಡಿಶಾ ನಯಾಗಢ ಜಿಲ್ಲೆಯವ. ಪುರಿ ಜಗನ್ನಾಥ ದೇವಸ್ಥಾನದಿಂದ 40 ಕಿ.ಮೀ. ದೂರದಲ್ಲಿ ಈತನ ಮನೆ ಇದೆ. 1999ರಲ್ಲಿ ತನ್ನ 19ನೇ ವಯಸ್ಸಿಗೆ ಆತ ದೇಶದ ಅತಿ ದೊಡ್ಡ ದೇವಸ್ಥಾನದ ವಿಗ್ರಹವನ್ನು ಕದಿಯುವಲ್ಲಿ ಯಶಸ್ವಿಯಾಗಿದ್ದ. ಆದರೆ ಸೆರೆ ಸಿಕ್ಕಿ ಬಂಧಿತನಾಗಿದ್ದ. ಬಳಿಕ ಆತ ಸಿಕ್ಕಿಬೀಳದಂತೆ ಎಚ್ಚರ ವಹಿಸಿತೊಡಗಿದ್ದ. ಒಡಿಶಾದ ಪುರಾತನ ಮಹಾಲಿಂಗೇಶ್ವರ ದೇಗುಲಕ್ಕೂ ಕನ್ನ ಹಾಕಿದ್ದ.
ದೇಶಾದ್ಯಂತ ವಿಗ್ರಹ ಕಳವು: ನೇಪಾಳ, ಪಶ್ಚಿಮ ಬಂಗಾಳ, ಕರ್ನಾಟಕ, ಗುಜರಾತ್, ಆಂಧ್ರಪ್ರದೇಶದ ಪುಣ್ಯಕ್ಷೇತ್ರಗಳ ಪುರಾತನ ವಿಗ್ರಹಗಳನ್ನು ಕಳವು ಮಾಡಿದ್ದಾನೆ. 8 ತಿಂಗಳ ಹಿಂದೆ ಹೈದರಾಬಾದ್‌ನ ದೇಗುಲದಲ್ಲಿ ವಿಗ್ರಹ ಕಳವು ಪ್ರಕರಣದಲ್ಲಿ ಬಂಧಿತನಾಗಿ 2 ತಿಂಗಳು ಜೈಲಲ್ಲಿದ್ದು, ಜಾಮೀನು ಪಡೆದು ಬಿಡುಗಡೆಯಾಗಿದ್ದ. ಆನಂತರ ಆತ ಮೂಡುಬಿದರೆಯ ಜೈನ ಬಸದಿ ಮೇಲೆ ಕಣ್ಣು ಹಾಕಿದ್ದ.
'ಆರೋಪಿ ಸಂತೋಷ್ ದಾಸ್ ವಿರುದ್ಧ 3 ರಾಜ್ಯಗಳಲ್ಲಿ 35 ಕಡೆ ಕಳ್ಳತನ ಪ್ರಕರಣಗಳ ಪಟ್ಟಿ ನಮಗೆ ಲಭಿಸಿದೆ. ಆತ ಪುರಿ ಜಗನ್ನಾಥ ದೇಗುಲದಲ್ಲಿ ವಿಗ್ರಹ ಕಳವು ಮಾಡಿದ ಸಂದರ್ಭದಲ್ಲಿ ಒಮ್ಮೆ ಸಿಕ್ಕಿದ್ದ. ಬಳಿಕ ಹೈದರಾಬಾದ್ ದೇಗುಲದಲ್ಲಿ ಕಳವು ಪ್ರಕರಣದಲ್ಲಿ ಬಂಧಿತನಾಗಿ 6 ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ.
ಮಂಗಳೂರಲ್ಲಿಯೂ 2005ರಲ್ಲಿ ವೈದ್ಯೆಯ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಪ್ರಕರಣದಲ್ಲಿ ಬಂಧಿತನಾಗಿದ್ದ' ಎಂದು ಎಸಿಪಿ ರವಿಕುಮಾರ್ ಹೇಳುತ್ತಾರೆ.
ಪತ್ನಿ ಕಾನೂನು ಪದವೀಧರೆ!: ತಂದೆ ಕೇಂದ್ರ ಸರ್ಕಾರದ ಉದ್ಯೋಗಿ. ತಂದೆಗೆ ವರ್ಗವಾದಲ್ಲಿ ಈತನೂ ಹೋಗುತ್ತಿದ್ದರಿಂದ ಅಲ್ಲಿನ ಪುರಾತನ ಕ್ಷೇತ್ರಗಳ ವಿಗ್ರಹಗಳಿಗೆ ಕಣ್ಣು ಹಾಕುತ್ತಿದ್ದ. ಕದ್ದ ವಿಗ್ರಹಗಳನ್ನು ಮಾವ ದಿಗಂಬರ ಮೊಹಾಂತಿ ಅವರಿಗೆ ಸೇರಿದ ಶೈಲಶ್ರೀ ವಿಹಾರಧಾಮದಲ್ಲಿ ಇರಿಸುತ್ತಿದ್ದ. ಈತನ ಪತ್ನಿ ದೀಪ್ತಿಮರ್ಯಿ ಮೊಹಾಂತಿ ಕಾನೂನು ಪದವೀಧರೆ. ಈತ ನಯಾಗಢದಲ್ಲಿ 1 ಕೋಟಿಗೂ ಮಿಕ್ಕಿ ಮೌಲ್ಯದ ಮನೆ ನಿರ್ಮಿಸುತ್ತಿದ್ದಾನೆ.
ಜುವೆಲ್ಲರಿಗೂ ಕನ್ನ ಹಾಕುತ್ತಿದ್ದ. ಈತನ ಮಾವನ ಮನೆಯಲ್ಲಿ ನೂರಕ್ಕೂ ಹೆಚ್ಚು ಅಮೂಲ್ಯ ಹರಳುಗಳು ಲಭಿಸಿವೆ. ಹತ್ತಕ್ಕೂ ಹೆಚ್ಚು ಬ್ಯಾಂಕ್‌ಗಳಲ್ಲಿ ಈತ ಹಣ ಇಟ್ಟಿದ್ದಾನೆ. ಬೇರೆ ಬೇರೆ ಹೆಸರಲ್ಲಿ 8ಕ್ಕೂ ಹೆಚ್ಚು ಎಟಿಎಂ ಕಾರ್ಡ್‌ಗಳಿವೆ, ಪಾನ್‌ಕಾರ್ಡ್‌ಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೋಟ್ಯಂತರ ಮೌಲ್ಯ: ಕ್ರಿ.ಶ.2-3 ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಿರ್ಮಾಣಗೊಂಡಿರುವ ಅಮೂಲ್ಯ ವಿಗ್ರಹಗಳನ್ನು ಸತತ 12 ವರ್ಷಗಳ ಕಾಲ ಬರ ಬಂದ ಹಿನ್ನೆಲೆಯಲ್ಲಿ ಮೂಡುಬಿದರೆಗೆ ತಂದು ಜೈನ ಬಸದಿ ಮುಖ್ಯಸ್ಥರಿಗೆ ದಾನವಾಗಿ ನೀಡಿದ್ದರು ಎನ್ನುತ್ತಾರೆ ಮೂಡುಬಿದಿರೆ ಜೈನ ಮಠದ ಶ್ರೀ ಭಟ್ಟಾರಕ ಸ್ವಾಮೀಜಿ.
3 ವಿಗ್ರಹ ರೂಪದಲ್ಲಿ, ಉಳಿದವು ಚಿನ್ನದ ಗಟ್ಟಿ
ಮೂಡುಬಿದರೆಯಲ್ಲಿ ಕಳವಾದ ತೀರ್ಥಂಕರರ ವಜ್ರ, ಪಚ್ಚೆ, ನೀಲ ವಿಗ್ರಹಗಳು ಹಾಗೆಯೇ ಇತ್ತು. ಕರಗಿಸಿದ ಚಿನ್ನದ ವಿಗ್ರಹಗಳನ್ನು ಗಟ್ಟಿ ಮಾಡಿಸಿದ್ದ. ಒಟ್ಟು 8 ವಿಗ್ರಹಗಳು ಲಭಿಸಿದ್ದು, 7 ವಿಗ್ರಹಗಳು ವಶವಾಗಬೇಕಿದೆ.
ಕೇಸು ನಡೆಸದ ಪೊಲೀಸರು
ಸಂತೋಷ್‌ದಾಸ್ ಸ್ನೇಹಿತನ ಜತೆ ಸೇರಿ 2005ರಲ್ಲಿ ಮಂಗಳೂರಿನ ವೈದ್ಯೆಯ ಮನೆಗೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ. ಬಳಿಕ ಬಂಧಿತನಾಗಿದ್ದ. ಚಿಕಿತ್ಸೆ ನೆಪದಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದ. ಅಲ್ಲಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿದ್ದಾಗ ಗೆಳೆಯ ಬಸ್ ಅಡಿ ಬಿದ್ದು ಸತ್ತು ಹೋಗಿದ್ದ. ಇದೆಲ್ಲ ನೋಡಿದ ವೈದ್ಯೆ ದೇವರೇ ಶಿಕ್ಷೆ ಕೊಟ್ಟರು ಎಂದು ಕೇಸ್ ಮುಂದುವರಿಸಲು ಮನ ಮಾಡಲಿಲ್ಲ. ಪೊಲೀಸರೂ ಮತ್ತೆ ಮುತುವರ್ಜಿ ವಹಿಸಲಿಲ್ಲ.
- ಜಿತೇಂದ್ರ ಕುಂದೇಶ್ವರ