ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೃಷ್ಣೆ 'ಮಹಾ' ವ್ಯಗ್ರ!

'ಮಹಾ' ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದರೆ...

Vishwanath S
Updated On : 26 Jul 2013, 1:01 am

ಕ.ಪ್ರ. ವಾರ್ತೆ, ಬೆಂಗಳೂರು, ಜು.25-
'ಮಹಾ' ಮಳೆಯಿಂದಾಗಿ ಉತ್ತರ ಕರ್ನಾಟಕದಲ್ಲಿ ಕೃಷ್ಣಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದರೆ, ಕರಾವಳಿ ಪ್ರದೇಶದಲ್ಲಿ ಸಮುದ್ರದ ಭೋರ್ಗರೆತಕ್ಕೆ ಕಡಲು ಕೊರೆಯುತ್ತಿದೆ. ಹೊನ್ನಾವರ ತಾಲೂಕಿನಲ್ಲಿ ವ್ಯಕ್ಯಿಯೊಬ್ಬ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾನೆ. ಉಡುಪಿ ಜಿಲ್ಲೆಯಲ್ಲಿ ನದಿಗಳು ತುಂಬಿ ಹರಿಯುತ್ತಿದ್ದರೆ, ಕೊಡಗು ಜಿಲ್ಲೆಯ ಲಕ್ಷ್ಮಣತೀರ್ಥ ಹಾಗೂ ರಾಮತೀರ್ಥ ನದಿಗೆ ಪ್ರವಾಹ ಉಂಟಾಗಿದೆ. ತುಂಗಭದ್ರಾ ಜಲಾಶಯದಿಂದ ಭಾರಿ ಪ್ರಮಾಣದಲ್ಲಿ ನೀರನ್ನು ಹೊರ ಬಿಡಲಾಗುತ್ತಿದ್ದು, ಹಂಪಿಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ.
ಬೆಳಗಾವಿಯಲ್ಲಿ ಕೃಷ್ಣಾನದಿ ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ನದಿ ತಟದ ತೋಟಗಳಲ್ಲಿನ 200ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದ್ದರೆ, 1000ಕ್ಕೂ ಹೆಚ್ಚು ಜನರು ಸುರಕ್ಷಿತ ಸ್ಥಳಕ್ಕೆ ತೆರಳಿದ್ದಾರೆ. ಮಹಾರಾಷ್ಟ್ರ ಕೊಂಕಣ, ಪಶ್ಚಿಮಘಟ್ಟ ಪ್ರದೇಶದಲ್ಲಿ ಸತತವಾಗಿ ಮಳೆ ಸುರಿಯುತ್ತಿದ್ದು, ಕೋಯ್ನಾ, ಮಹಾಬಳೇಶ್ವರ, ನೌಜಾ, ವಾರಣಾದಿಂದ 1.85 ಲಕ್ಷ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಬಿಟ್ಟಿದ್ದರಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಜಿಲ್ಲೆಯ ಚಿಕ್ಕೋಡಿ ತಾಲೂಕಿನ 3, ರಾಯಬಾಗ ತಾಲೂಕಿನ 7 ಹಾಗೂ ಅಥಣಿ ತಾಲೂಕಿನ ಮೂರು ಗ್ರಾಮಗಳಿಗೆ ನದಿ ನೀರು ಹೊಕ್ಕಿದೆ. ಇದಲ್ಲದೆ, ಜಿಲ್ಲೆಯ ಒಟ್ಟು 39 ಗ್ರಾಮಗಳಲ್ಲಿ ಪ್ರವಾಹ ಎದುರಾಗುವ ಸಾಧ್ಯತೆ ಇದ್ದು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ.

17 ಸೇತುವೆ ಮುಳುಗಡೆ: ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 17 ಸೇತುವೆಗಳು ಮುಳುಗಡೆಯಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಪ್ರಮುಖ ಸೇತುವೆಯಾಗಿರುವ ಉಗಾರ್-ಕುಡಚಿ ಸೇತುವೆ ಮೇಲೆ 4 ಅಡಿ ನೀರು ಹರಿಯುತ್ತಿದೆ. ಇದಲ್ಲದೇ, ಕಳೆದು ಮೂರು ದಿನಗಳಲ್ಲಿ 32 ಮನೆಗಳು ಕುಸಿದಿವೆ. ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಯಲ್ಲಿ ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನ ಅಪಾಯ ಎದುರಾಗಿದೆ. ಕಳೆದೆರಡು ದಿನಗಳಿಂದ ಆಲಮಟ್ಟಿ ಜಲಾಶಯಕ್ಕೆ ವ್ಯಾಪಕವಾಗಿ ನೀರು ಹರಿದು ಬರುತ್ತಿದೆ. 519.60 ಮೀ. ಸಾಮರ್ಥ್ಯದ ಜಲಾಶಯದಲ್ಲೀಗ 518.30 ಮೀ. ನೀರಿದೆ. ಹೊರ ಹರಿವು ಕೂಡಾ ಹೆಚ್ಚಾಗಿರುವುದರಿಂದ ಬಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿ, ಮುದ್ದೇಬಿಹಾಳ ತಾಲೂಕಿನ ಕೆಲವು ಗ್ರಾಮಗಳಿಗೆ ನೆರೆ ಹಾವಳಿ ಉಂಟಾಗುವ ಸಾಧ್ಯತೆ ಇದೆ. ನಾರಾಯಣಪುರ ಜಲಾಶಯದ ಹಿನ್ನೀರಿನಿಂದ ಅಪಾಯ ಎದುರಾಗುವ ಸಾಧ್ಯತೆ ಇದೆ.

ತೀರ ಪ್ರದೇಶದಲ್ಲಿ ಕಡಲು ಕೊರೆತ: ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕಾಸಕೋಡಿನಲ್ಲಿ ಕಡಲು ಕೊರೆತ ಜೋರಾಗಿದೆ. ದ.ಕ.ಜಿಲ್ಲೆಯ ಉಳ್ಳಾಲದಲ್ಲಿ 50 ಅಡಿಗಳವರೆಗೂ ಕಡಲು ಕೊರೆತ ಉಂಟಾಗಿದೆ. ಹಾಗಾಗಿ, ಕೈಕೊ, ಕೋಟೆಪುರ, ಹಿಲಾರಿ ನಗರ, ಮುಕ್ಕಚೇರಿ, ಸುಭಾಶ್‌ನಗರ, ಸಮ್ಮರ್ ಸ್ಯಾಂಡ್ ಪ್ರದೇಶಗಳಲ್ಲಿ ಅಪಾಯದಂಚಿನಲ್ಲಿವೆ. ಉಡುಪಿ ಜಿಲ್ಲೆಯ ಪಡುಬಿದ್ರಿ, ಉದ್ಯಾವರ, ಮಲ್ಪೆ, ಕೋಟ, ಮಣೂರ, ಕೋಟ, ಮರವಂತೆ, ಗಂಗೊಳ್ಳಿಗಳಲ್ಲಿ ಕಡಲು ಕೊರೆತ ಮುಂದುವರಿದಿದೆ. ಮಣೂರ, ಎರ್ಮಾಳಿ ಎಂಬಲ್ಲಿ 10 ಮನೆಗಳು ಅಪಾಯಕ್ಕೆ ಸಿಲುಕಿವೆ. ಇದೇ ವೇಳೆ, ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ ಸೌರ್ಪಣಿಕಾ, ಸುವರ್ಣ, ಸೀತಾ, ವಾರಾಹಿ, ಚಕ್ರಾ ನದಿಗಳು ತುಂಬಿ ಹರಿಯುತ್ತಿವೆ. ಹೊನ್ನಾವರ ತಾಲೂಕಿನ ಕಾಸರಕೋಡು ಟೊಂಕ ಪ್ರದೇಶದ ಶ್ರೀರಾಮನಗರ ನಿವಾಸಿಗಳು ಕಡಲು ಕೊರೆತದ ದವಡೆಗೆ ಸಿಲುಕಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸಾಗರ, ದಾವಣಗೆರೆಯ ಚನ್ನಗಿರಿ ತಾಲೂಕುಗಳು ಸೇರಿದಂತೆ ರಾಜ್ಯದ ವಿವಿಧೆಡೆ ಗುರುವಾರವೂ ಮಳೆ ಸುರಿದಿದ್ದು, ಕೆಲವಡೆ ಸಂಚಾರಕ್ಕೆ ವ್ಯತ್ಯವಾಗಿದೆ.

ಕೊಚ್ಚಿ ಹೋಗಿ ಮೃತಪಟ್ಟ
ಎಡೆಬಿಡದೆ ಸುರಿಯುತ್ತಿರುವ ಮಳೆಯಬ್ಬರಕ್ಕೆ ಹೊನ್ನಾವರ ತಾಲೂಕಿನ ಹಳದೀಪುರ ಗ್ರಾಮದ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಮೃತಪಟ್ಟ ವ್ಯಕ್ತಿ ಹೆಸರು ತುಳಸು ಮಾಸ್ತಿಗೌಡ(57). ಇವರು ಗುರುವಾರ ದುಗ್ಗೂರು ಹಳ್ಳಕ್ಕೆದೂರವಾಣಿ ಕಂಬದಿಂದ ನಿರ್ಮಿಸಲಾದ ಕಾಲು ಸಂಕದ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಆಯತಪ್ಪಿ ಹಳ್ಳಕ್ಕೆ ಬಿದ್ದಿದ್ದಾರೆ. ಸುಮಾರು ದೂರದವರೆಗೆ ಹಳ್ಳದಲ್ಲಿ ಕೊಚ್ಚಿಕೊಂಡು ಹೋದ ಪರಿಣಾಮ ಅವರು ಮೃತಪಟ್ಟಿದ್ದಾರೆ.

ತುಂಗಭದ್ರಾದಿಂದ ನೀರು ಹೊರಕ್ಕೆ
ಗುರುವಾರ ತುಂಗಭದ್ರಾ ಜಲಾಶಯದಿಂದ 90,458 ಕ್ಯುಸೆಕ್ ನೀರು ಹೊರ ಬಿಡಲಾಗಿದೆ. ಹಾಗಾಗಿ, ನದಿ ಕೆಳಪ್ರದೇಶ ಸೇರಿ ಹಂಪಿಯಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಇನ್ನು 2-3 ದಿನಗಳವರೆಗೂ ಜಲಾಶಯದಿಂದ 90,000 ಕ್ಯುಸೆಕ್‌ಗಿಂತ ಅಧಿಕ ನೀರು ಬಿಡಲಾಗುವುದು ಎಂದು ತುಂಗಭದ್ರಾ ಮಂಡಳಿಯ ಮೂಲಗಳು ತಿಳಿಸಿವೆ. ಕಳೆದ ಮೂರು ದಿನಗಳಿಂದ ಹಂಪಿಯ ಕೆಲವು ಸ್ಮಾರಕಗಳು ಜಲಾವೃತಗೊಂಡಿವೆ.

ತುಂಬಿದಳು ಹೇಮಾವತಿ
ಹಾಸನ ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯ ಫುಲ್ ಭರ್ತಿಯಾಗಿದ್ದು, ಗುರುವಾರ ಅಣೆಕಟ್ಟೆಯ 6 ಗೇಟ್‌ಗಳಿಂದ ನೀರನ್ನು ಹೊರ ಬಿಡಲಾಯಿತು. 2922 ಅಡಿ ಸಾಮರ್ಥ್ಯದ ಜಲಾಶಯದಲ್ಲೀಗ 2920 ಅಡಿ ನೀರಿದ್ದು, ಭದ್ರತೆಯ ದೃಷ್ಟಿಯಿಂದ ನೀರನ್ನು ನದಿಗೆ ಬಿಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚಿಸಲಾಗಿದೆ.

ಲಿಂಗನಮಕ್ಕಿಗೆ ಭಾರಿ ನೀರು
ಶರಾವತಿ ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿದ್ದು, ಜಲಾಶಯದ ನೀರಿನ ಮಟ್ಟದ ದಿನೇದಿನೇ ಏಕಪ್ರಕಾರದಲ್ಲಿ ಏರುತ್ತಿದೆ. ಜಲಾಶಯದ ಗರಿಷ್ಟ ಮಟ್ಟವು 1819ಅಡಿಗಳಾಗಿದ್ದು, ಜುಲೈ 23ರ ಹೊತ್ತಿಗೆ 1,801.05 ಅಡಿಗಳಿಗೆ ಏರಿದೆ. ಅಲ್ಲದೇ ಜಲಾಶಯದ ಒಳಹರಿವು ಸುಮಾರು 52,648.00 ಕ್ಯುಸೆಕ್ಸ್ ಆಗಿರುತ್ತದೆ. ಇದೇ ರೀತಿಯಲ್ಲಿ ಜಲಾಶಯಕ್ಕೆ ನೀರಿನ ಒಳಹರಿವು ಮುಂದುವರೆದ ಪಕ್ಷದಲ್ಲಿ ಜಲಾಶಯವು ಗರಿಷ್ಟಮಟ್ಟವನ್ನು ತಲುಪುವ ಸಾಧ್ಯತೆ ಇದೆ. ಆದ್ದರಿಂದ ಆಣೆಕಟ್ಟು ಸುರಕ್ಷತಾ ದೃಷ್ಟಿಯಿಂದ ಹೆಚ್ಚುವರಿಯಾದ ನೀರನ್ನು ಯಾವುದೇ ಸಮಯದಲ್ಲಿ ಹೊರಬಿಡುವ ಸಾಧ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement