ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಣು ವಿದ್ಯುತ್ ಸ್ಥಾವರ ಬೇರೆ ರಾಜ್ಯದ ಪಾಲು!

Vishwanath S
Updated On : 30 Jul 2013, 12:20 pm

ಕನ್ನಡಪ್ರಭ ವಾರ್ತೆ, ಕಾರವಾರ, ಜು. 29-
ಕೈಗಾದಲ್ಲಿ ಉದ್ದೇಶಿತ ತಲಾ 700 ಮೆ.ವ್ಯಾ. ಉತ್ಪಾದನಾ ಸಾಮಾರ್ಥ್ಯದ ಎರಡು ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಕೇಂದ್ರ ಕ್ಯಾಬಿನೆಟ್ ಸಮ್ಮತಿಸಿದ್ದರೂ ರಾಜ್ಯ ಸರ್ಕಾರದ ನಿರ್ಲಕ್ಷ್ಯದಿಂದ ಬೇರೆ ರಾಜ್ಯದ ಪಾಲಾಗುವ ಹಂತಕ್ಕೆ ಬಂದಿದೆ. ಹೀಗಾದಲ್ಲಿ ರಾಜ್ಯಕ್ಕೆ ಲಭಿಸಬೇಕಿದ್ದ 700 ಮೆ.ವ್ಯಾ. ವಿದ್ಯುತ್ ಕೈತಪ್ಪಲಿದ್ದು, ಕರ್ನಾಟಕಕ್ಕೆ ಕತ್ತಲೆಯೇ ಗತಿಯಾಗಲಿದೆ.
ಈ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ 2011ರಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದಕ್ಕೆ ಕೇಂದ್ರ ಕ್ಯಾಬಿನೆಟ್ ಜನವರಿ 2011ರಲ್ಲಿಯೇ ಒಪ್ಪಿಗೆ ಸೂಚಿಸಿದೆ. ಇದಾದ ಮೇಲೆ ರಾಜ್ಯ ಸರ್ಕಾರ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಸಹಕರಿಸಲು ಸಿದ್ಧವಿರುವುದಾಗಿ ಹಾಗೂ ಅಣು ವಿದ್ಯುತ್ ಸ್ಥಾವರ ಸ್ಥಾಪಿಸುವಂತೆ ವಿನಂತಿ ಪತ್ರವನ್ನು ಕೇಂದ್ರಕ್ಕೆ ಕಳುಹಿಸಬೇಕಾಗಿತ್ತು. ಆದರೆ ರಾಜ್ಯ ಸರ್ಕಾರದ ನಿರಾಸಕ್ತಿ ಹಾಗೂ ನಿರ್ಲಕ್ಷ್ಯದ ಪರಿಣಾಮವಾಗಿ ಈ ಎರಡೂ ಘಟಕಗಳ ನಿರ್ಮಾಣ ಪ್ರಕ್ರಿಯೆ ನೆನೆಗುದಿಗೆ ಬಿದ್ದಿದೆ.

ಬೇರೆ ರಾಜ್ಯಗಳ ಒತ್ತಡ: ಕರ್ನಾಟಕದ ನಿರಾಸಕ್ತಿಯನ್ನೇ ಬಂಡವಾಳವನ್ನಾಗಿಸಿಕೊಂಡ ಗುಜರಾತ್, ಮಧ್ಯಪ್ರದೇಶ, ಹರ್ಯಾಣಾ ಮತ್ತಿತರ ರಾಜ್ಯಗಳು ತಮ್ಮ ತಮ್ಮ ರಾಜ್ಯಗಳಲ್ಲಿ ಅಣು ವಿದ್ಯುತ್ ಸ್ಥಾವರ ಸ್ಥಾಪಿಸಲು ಕೇಂದ್ರದ ಮೇಲೆ ಸತತ ಒತ್ತಡ ಹೇರುತ್ತಿವೆ. ಹೀಗಾಗಿ ಕರ್ನಾಟಕ ಸುಲಭವಾಗಿ ಸಿಗಲಿದ್ದ ವಿದ್ಯುತ್‌ನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ.
ರಾಜ್ಯಕ್ಕೆ ವಿದ್ಯುತ್ ಖೋತಾ ಹೇಗೆ?: ಈ ಹಿಂದಿನ ನಿಯಮಾವಳಿ ಪ್ರಕಾರ ಯಾವ ರಾಜ್ಯದಲ್ಲಿ ಅಣು ವಿದ್ಯುತ್ ಉತ್ಪಾದಿಸಲಾಗುವುದೋ ಆ ರಾಜ್ಯಕ್ಕೆ ಶೇ.27ರಷ್ಟು ವಿದ್ಯುತ್ ಮಾತ್ರ ಲಭಿಸುತ್ತಿತ್ತು. ಕಳೆದ ವರ್ಷ ನಿಯಮದಲ್ಲಿ ಮಾರ್ಪಾಡಾಗಿದ್ದು, ಆ ಪ್ರಕಾರ ವಿದ್ಯುತ್ ಉತ್ಪಾದನೆಯಾಗುವ ರಾಜ್ಯಕ್ಕೆ ಶೇ.50ರಷ್ಟು ವಿದ್ಯುತ್ ನೀಡಬೇಕಿದೆ. ಕೈಗಾದಲ್ಲಿ 2 ಘಟಕಗಳು ನಿರ್ಮಾಣವಾದಲ್ಲಿ ಒಟ್ಟು 1400 ಮೆ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ಇದರಲ್ಲಿ ಶೇ.50ರಷ್ಟು ಅಂದರೆ 700 ಮೆ.ವ್ಯಾ. ವಿದ್ಯುತ್ ರಾಜ್ಯಕ್ಕೆ ಲಭಿಸಿ ರಾಜ್ಯದ ಕತ್ತಲೆ ನೀಗುತ್ತಿತ್ತು. ಶೇ.50ರಷ್ಟು ವಿದ್ಯುತ್ ಉತ್ಪಾದನೆಯಾಗುವ ರಾಜ್ಯಕ್ಕೇ ಲಭಿಸಲಿರುವ ಹಿನ್ನೆಲೆಯಲ್ಲಿ ಬೇರೆ ರಾಜ್ಯಗಳು ತಮ್ಮಲ್ಲಿಯೇ ಘಟಕ ಸ್ಥಾಪಿಸುವಂತೆ ಒತ್ತಡ ಹೇರುತ್ತಿವೆ. ಬೇರೆ ರಾಜ್ಯಗಳಿಂದ ವಿದ್ಯುತ್ ಖರೀದಿಸಲು ಮುಗಿ ಬೀಳುವ ರಾಜ್ಯ, ಇಲ್ಲಿಯೇ ವಿದ್ಯುತ್ ಉತ್ಪಾದಿಸಲು ಇರುವ ಅವಕಾಶ ಕಳೆದುಕೊಳ್ಳುತ್ತಿರುವುದು ಅಚ್ಚರಿಗೆ ಕಾರಣವಾಗಿದೆ.
ಕೈಗಾದಲ್ಲಿ ಇರುವ ಅನುಕೂಲ: ಕೈಗಾ ಅಣು ವಿದ್ಯುತ್ ಯೋಜನೆಯಲ್ಲಿ ಈಗಾಗಲೇ ತಲಾ 220 ಮೆ.ವ್ಯಾ.ಗಳ ನಾಲ್ಕು ವಿದ್ಯುತ್ ಘಟಕಗಳಿವೆ. 2000ನೇ ಇಸವಿಯಲ್ಲಿ ಮೊದಲ ಎರಡು ಘಟಕಗಳು, 2007ರಲ್ಲಿ ಮೂರನೇ ಘಟಕ ಹಾಗೂ 2011ರಲ್ಲಿ ನಾಲ್ಕನೇ ಘಟಕ ವಿದ್ಯುತ್ ಉತ್ಪಾದನೆ ಆರಂಭಿಸಿವೆ. ಇನ್ನೂ ಎರಡು ವಿದ್ಯುತ್ ಘಟಕಗಳ ನಿರ್ಮಾಣಕ್ಕೆ ಅಗತ್ಯ ಭೂಮಿಯೂ ಇದೆ. ನಾಲ್ಕೂ ಘಟಕಗಳು ಸುರಕ್ಷಿತವಾಗಿ ವಿದ್ಯುತ್ ಉತ್ಪಾದಿಸುತ್ತಿವೆ. ಉದ್ದೇಶಿತ ಎರಡು ಘಟಕಗಳ ಸ್ಥಾಪನೆಗೆ ಪರಿಸರ ಪರವಾನಗಿ ಪಡೆಯುವುದೂ ಕಷ್ಟವೇನಲ್ಲ. ಹೀಗಿದ್ದರೂ ರಾಜ್ಯ ಸರ್ಕಾರ ಸಿಕ್ಕಿರುವ ಅವಕಾಶವನ್ನು ಸುದುಪಯೋಗಪಡಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ.

ಕೈಗಾದಲ್ಲಿ ವಿದ್ಯುತ್ ಘಟಕ ನಿರ್ಮಾಣವಾದಲ್ಲಿ ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಲಭ್ಯವಾಗುತ್ತಿತ್ತು. ಇಲ್ಲಿ ಎರಡು ಘಟಕಗಳ ನಿರ್ಮಾಣಕ್ಕೆ ಎಲ್ಲ ಸಂಪನ್ಮೂಲಗಳೂ ಇವೆ.
- ಎಚ್.ಎನ್. ಭಟ್,  ಕೈಗಾ ಸ್ಥಳ ನಿರ್ದೇಶಕ

ಉತ್ತರ ಕನ್ನಡ ಜಿಲ್ಲೆಯ ಧಾರಣಾ ಸಾಮರ್ಥ್ಯದ ಅಧ್ಯಯನದ ಪ್ರಕಾರ ಇನ್ನೂ ಹೆಚ್ಚಿನ ಯೋಜನೆಗಳನ್ನು ಈ ಜಿಲ್ಲೆಯಲ್ಲಿ ಸ್ಥಾಪಿಸಬಾರದು. ಜತೆಗೆ ಕೈಗಾ ಅಣು ವಿದ್ಯುತ್ ಸ್ಥಾವರದ ದುಷ್ಪರಿಣಾಮಗಳ ಬಗ್ಗೆ ಜನತೆ ಇನ್ನೂ ಆತಂಕದಲ್ಲಿದ್ದಾರೆ. ಸಾರ್ವಜನಿಕ ಸುರಕ್ಷಾ ಸಮಿತಿ ಸ್ಥಾಪಿಸಲಾಗಿಲ್ಲ. ಹೀಗಾಗಿ 5 ಮತ್ತು 6ನೇ ಘಟಕ ಸ್ಥಾಪಿಸಲು ಮುಂದಾಗಬಾರದು. ಇದಕ್ಕೆ ನನ್ನ ವಿರೋಧವಿದೆ.
- ಅನಂತ ಹೆಗಡೆ ಅಶೀಸರ
ಪಶ್ಚಿಮ ಘಟ್ಟ ಕಾರ್ಯಪಡೆ ಮಾಜಿ ಅಧ್ಯಕ್ಷ

ಕೈಗಾದಲ್ಲಿ ಈ ಹಿಂದೆ ಸ್ಥಾಪಿಸಲಾದ ಘಟಕಗಳ ಬಗ್ಗೆ ಜನತೆಯಲ್ಲಿ ಇನ್ನೂ ಆತಂಕವಿದೆ. ಹೀಗಿರುವಾಗ ಈಗ ಮತ್ತೆ ಘಟಕ ಸ್ಥಾಪನೆಗೆ ಅವಕಾಶ ಮಾಡಿಕೊಡಬಾರದು. ಜನತೆಯಿಂದ ಇದಕ್ಕೆ ಪ್ರತಿರೋಧ ವ್ಯಕ್ತವಾಗುವ ಸಾಧ್ಯತೆ ಹೆಚ್ಚಿದೆ.
- ಶಿವಾನಂದ ಕಳವೆ, ಪರಿಸರ ಬರಹಗಾರ

- ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement