ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ದಸಂಸ ರಾಜಕೀಯ ಪಕ್ಷ

Vishwanath S
Updated On : 30 Jul 2013, 12:18 pm

ಕ.ಪ್ರ.ವಾರ್ತೆ, ತುಮಕೂರು, ಜು. 29-
ಸುಮಾರು ನಾಲ್ಕು  ದಶಕಗಳ ಹಿಂದೆ ದಲಿತರ ಏಳ್ಗೆ ಹಾಗೂ ಹಕ್ಕು ಪ್ರತಿಪಾದನೆಗಾಗಿ ಹುಟ್ಟಿಕೊಂಡಿದ್ದ ಪ್ರೊ.ಬಿ. ಕೃಷ್ಣಪ್ಪ ಸ್ಥಾಪಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿಎಸ್‌ಎಸ್) ರಾಜಕೀಯ ಪಕ್ಷವಾಗಿ ಹೊರಹೊಮ್ಮಲು ಸಕಲ ಸಿದ್ಧತೆ ನಡೆಸಿದೆ.
1974ರಲ್ಲಿ ಸ್ಥಾಪಿತವಾದ ಸಮಿತಿ ದಲಿತರಲ್ಲಿ ಜಾಗೃತಿ ಮೂಡಿಸುತ್ತಿದ್ದು, ದಲಿತರ ಉದ್ಧಾರವಾಗಬೇಕಾದರೆ ದಲಿತರಿಗೆ ಅಧಿಕಾರ ಸಿಗಬೇಕೆಂಬ ಉದ್ದೇಶದಿಂದ ರಾಜಕೀಯ ಪಕ್ಷವಾಗಲು ಸಜ್ಜಾಗಿದೆ. ದಲಿತರನ್ನು ಮುಖ್ಯಮಂತ್ರಿ ಮಾಡುವುದು ಹಾಗೂ ಸಂವಿಧಾನದ ಯಥಾವತ್ತು ಜಾರಿ ಮಾಡುವುದು ಪಕ್ಷ ಸ್ಥಾಪನೆಯ ಉದ್ದೇಶ.
ದೊಡ್ಡಬಳ್ಳಾಪುರದಲ್ಲಿ ನಡೆದ ಸಮಿತಿಯ ಪದಾಧಿಕಾರಿಗಳ ಸಭೆಯಲ್ಲಿ ಈ ಸಂಬಂಧವಾಗಿ ಈಗಾಗಲೇ ನಿರ್ಧರಿಸಲಾಗಿದೆ. ಇದೇ ತಿಂಗಳ 31ರಂದು ಬೆಂಗಳೂರಿನಲ್ಲಿ ನಡೆಯುವ ಸಭೆಯಲ್ಲಿ ಪಕ್ಷ ಸ್ಥಾಪನೆಯ ಅಧಿಕೃತ ಘೋಷಣೆಯಾಗಲಿದೆ.
ಕರ್ನಾಟಕ ಸಮತಾ ಪಕ್ಷ ಅಥವಾ ಸಮತಾ ಸಮಾಜ ಪಾರ್ಟಿ ಎಂಬ ಎರಡು ಹೆಸರು ಪದಾಧಿಕಾರಿಗಳ ಮುಂದಿದ್ದು, ಇವೆರಡಲ್ಲಿ ಒಂದನ್ನು ಅಂತಿಮವಾಗಿ ಅಖೈರುಗೊಳಿಸಲಾಗುವುದು.

ಲೋಕಸಭೆಗೆ ಸ್ಪರ್ಧೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ, ಬೆಂಗಳೂರು ಸೆಂಟ್ರಲ್, ಧಾರವಾಡ, ಶಿವಮೊಗ್ಗ ಸೇರಿದಂತೆ 10 ಕಡೆ ಅಭ್ಯರ್ಥಿಗಳನ್ನು ನಿಲ್ಲಿಸುವ ಇರಾದೆ ಸಮಿತಿಗಿದೆ. ಬಹುಜನ ಸಮಾಜ ಪಕ್ಷದಲ್ಲಿ ಕೆಲಸ ಮಾಡಿ ತಟಸ್ಥರಾಗಿರುವವರು ಮತ್ತು ಬೇರೆ ಬೇರೆ ಪಕ್ಷಗಳಿಂದ ರೋಸಿ ನಿರ್ಲಿಪ್ತರಾದವರನ್ನು ಈ ಪಕ್ಷಕ್ಕೆ ಸೇರಿಸಿಕೊಳ್ಳುವ ಉದ್ದೇಶವನ್ನು ರಾಜ್ಯ ಡಿಎಸ್‌ಎಸ್ ಅಧ್ಯಕ್ಷ ಗಂಗಾಧರ್, ಉಪಾಧ್ಯಕ್ಷ ಹೆಣ್ಣೂರು ಶ್ರೀನಿವಾಸ್, ಪ್ರಧಾನ ಕಾರ್ಯದರ್ಶಿ ಎಸ್. ಮಲ್ಲಪ್ಪ ನೇತೃತ್ವದ ಪದಾಧಿಕಾರಿಗಳ ತಂಡ ಹೊಂದಿದೆ.

ಸ್ಥಳೀಯ ಸಂಸ್ಥೆಗೂ ಸ್ಪರ್ಧೆ: ಅಲ್ಲದೇ ವಿಧಾನಸಭೆ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಇತರೆ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಸಮಿತಿ ನಿಲ್ಲಿಸಲು ನಿರ್ಧರಿಸಿದೆ.
ಪ್ರಗತಿಪರ ಚಿಂತಕರು, ಸಾಹಿತಿಗಳು, ಕಲಾವಿದರ ಮಾರ್ಗದರ್ಶನದಲ್ಲಿ ಹೊಸ ಪಕ್ಷ ಉದಯವಾಗಲಿದೆ. ಈಗಾಗಲೇ ಸಮಿತಿಯು ತನ್ನ ಶಾಖೆಗಳನ್ನು ಎಲ್ಲೆಡೆ ಹೊಂದಿದ್ದು, ಪಕ್ಷ ಸಂಘಟನೆ ಸುಲಭವಾಗಲಿದೆ ಎಂಬುದು ನಾಯಕರ ಆಶಯ.

ಶೇ.13ರಷ್ಟು ದಲಿತರು: ರಾಜ್ಯದ ಜನಸಂಖ್ಯೆಯಲ್ಲಿ ಶೇ.13 ರಷ್ಟಿರುವ ದಲಿತರನ್ನು ಎಲ್ಲರೂ ಕಡೆಗಣಿಸುತ್ತಿದ್ದಾರೆ.  ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ ದಲಿತರನ್ನು ಯಾವುದೇ ಸರ್ಕಾರ ಮುಖ್ಯಮಂತ್ರಿಯನ್ನಾಗಿ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ದಲಿತರನ್ನು ಸಂಘಟಿಸುವ ಉದ್ದೇಶದಿಂದ ರಾಜಕೀಯ ಪಕ್ಷವನ್ನು ಹುಟ್ಟು ಹಾಕಲಾಗುತ್ತಿದೆ.
1983ರಲ್ಲಿ ಸಮಿತಿಯನ್ನು ರಾಜಕೀಯ ಪಕ್ಷವಾಗಿ ಮಾಡುವ ಉದ್ದೇಶವಿತ್ತು. ಆದರೆ ಕಾರಣಾಂತರಗಳಿಂದ ಅದು ನೆರವೇರಿರಲಿಲ್ಲ. ಈಗ ಅಧಿಕೃತವಾಗಿ ರಾಜಕೀಯ ಪಕ್ಷವಾಗಿ ಹೊರಹೊಮ್ಮುತ್ತಿದೆ. ಎಲ್ಲ ವರ್ಗಗಳ ಅವಕಾಶ ವಂಚಿತ ಜಾತಿಗಳು ಹಾಗೂ ಅಂಬೇಡ್ಕರ್ ಅವರ ವೈಚಾರಿಕ ನೆಲೆಗಟ್ಟನ್ನು ಹೊಂದಿರುವವರು ಹಾಗೂ ಆಚರಣೆಗೆ ತಂದಿರುವವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲು ಉದ್ದೇಶಿಸಲಾಗಿದೆ.

- ಉಗಮ ಶ್ರೀನಿವಾಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement