ಭೂ ಒತ್ತುವರಿ ಮೇಲ್ಮನೆಯಲ್ಲಿ ಹಕ್ಕುಚ್ಯುತಿ
ಸರ್ಕಾರಿ ಭೂ ಒತ್ತುವರಿ ತೆರವು ಹಾಗೂ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್...
ಬೆಂಗಳೂರು: ಸರ್ಕಾರಿ ಭೂ ಒತ್ತುವರಿ ತೆರವು ಹಾಗೂ ಸಂರಕ್ಷಣೆ ಕಾರ್ಯಪಡೆ ಅಧ್ಯಕ್ಷರಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣಿಯನ್ ವಿರುದ್ಧದ ಹಕ್ಕುಚ್ಯುತಿ ನಿರ್ಣಯ ಪ್ರಸ್ತಾವನೆಯನ್ನು ವಿಧಾನಪರಿಷತ್ತಿನಲ್ಲೂ ಹಕ್ಕು ಬಾಧ್ಯತಾ ಸಮಿತಿಯ ಪರಿಶೀಲನೆಗೆ ವಹಿಸಲಾಗಿದೆ.
ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷ ನಾಯಕ ಡಿ.ವಿ. ಸದಾನಂದಗೌಡ ಅವರು ಹಕ್ಕುಚ್ಯುತಿ ನಿರ್ಣಯದ ಪ್ರಸ್ತಾವನೆ ಮಂಡಿಸಿದಾಗ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅವರು ಅದನ್ನು ಹಕ್ಕು ಬಾಧ್ಯತಾ ಸಮಿತಿಗೆ ವರ್ಗಾಯಿಸಿದರು. ಇದರೊಂದಿಗೆ ಸರ್ಕಾರಿ ಭೂಮಿ ಒತ್ತುವರಿ ಕುರಿತಂತೆ 'ಕನ್ನಡಪ್ರಭ' ಸಂದರ್ಶನದಲ್ಲಿ ಬಾಲಸುಬ್ರಮಣಿಯನ್ ಅವರು ವ್ಯಕ್ತಪಡಿಸಿದ್ದ ಮಾತುಗಳು ವಿಧಾನಮಂಡಲದ ಎರಡೂ ಸದನಗಳಿಂದ ಹಕ್ಕುಚ್ಯುತಿ ನಿರ್ಣಯಕ್ಕೆ ಒಳಗಾಗಿದೆ.
ಬಾಲಸುಬ್ರಮಣಿಯನ್ ಮಾತುಗಳಿಂದ ತೇಜೋವಧೆಯಾಗಿದೆ ಎಂದು ಸದಸ್ಯರು ಅಳಲು ತೋಡಿಕೊಂಡಿದ್ದಾರೆ. ಹೀಗಾಗಿ ಈ ವಿಚಾರವನ್ನು ನಾನು ಹಕ್ಕು ಬಾಧ್ಯತಾ ಸಮಿತಿಗೆ ವಹಿಸುತ್ತಿದ್ದೇನೆ ಎಂದು ಶಂಕರಮೂರ್ತಿ ತಿಳಿಸಿದ್ದಾರೆ.
ತೇಜೋವಧೆಯಾಗಿದೆ: ಒಂದು ಎಕರೆ, ಅರ್ಧ ಎಕರೆ ಕಾಫಿ ಬೆಳೆಗಾರರ ಹಿತ ರಕ್ಷಣೆಗಾಗಿ ನಾನು ಅಂದಿನ ಸಿಎಂ ಯಡಿಯೂರಪ್ಪರನ್ನು ಭೇಟಿ ಮಾಡಿದ್ದೆ. ಆದರೆ ಇತರ ಕಾಫಿ ಬೆಳೆಗಾರರ ಭೂಮಿ ರಕ್ಷಿಸಲು ಈ ಸೋಗಿನಲ್ಲಿ ಬಂದಿದ್ದೇನೆ ಎಂಬ ಆರೋಪ ಮಾಡಲಾಗಿದೆ. ಇದು ನನ್ನ ತೇಜೋವಧೆಗೆ ಮಾಡಿರುವ ಆಪಾದನೆ. ಭೂಗಳ್ಳರು ಹಾಗೂ ರಿಯಲ್ ಎಸ್ಟೇಟ್ ಪರವಾಗಿ ನಾನು ವಕಾಲತ್ತು ವಹಿಸಿರುವುದನ್ನು ಅವರು ಸಾಬೀತುಮಾಡಲಿ ಎಂದು ಸದಾನಂದಗೌಡ ಸವಾಲು ಹಾಕಿದರು.
ಹೇಳಿ ಸ್ವಾಮಿ... ಹಕ್ಕುಚ್ಯುತಿ ಯಾರದ್ದು?
ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣಿಯನ್ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕೆಂದು ವಿಧಾನಮಂಡಲದಲ್ಲಿ ಕೆಲ ಶಾಸಕರು ಪ್ರಸ್ತಾಪ ಸಲ್ಲಿಸಿದ್ದರು. ಶಾಸಕರ ಅಭಿಪ್ರಾಯ ಸರಿಯೋ, ತಪ್ಪೋ ಎಂದು 'ಕನ್ನಡಪ್ರಭ' ಓದುಗರ ಅಭಿಪ್ರಾಯ ಆಹ್ವಾನಿಸಿತ್ತು. ಅದಕ್ಕೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದ ಮೂಲೆಮೂಲೆಗಳಿಂದ ಸಹಸ್ರಾರು ಮಂದಿ ಪ್ರಸ್ತಾಪವನ್ನು ಖಂಡಿಸಿದ್ದಾರೆ. ತಪ್ಪಿತಸ್ಥರು ಯಾರು ಎಂದು ಹೇಳಿದ್ದೇ ಅಪರಾಧವಾಯಿತೇ ಎಂದು ಸಹಸ್ರಾರು ಓದುಗರು ಪತ್ರದ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂದಿನಿಂದ ಓದುಗರ ಪತ್ರಗಳನ್ನು ಪ್ರಕಟಿಸಲಾಗುತ್ತದೆ.
ತಲೆತಗ್ಗಿಸುವ ಕೆಲಸ
ಒಬ್ಬ ಪ್ರಾಮಾಣಿಕ ಅಧಿಕಾರಿ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಹೊರಟಿರುವುದು ರಾಜ್ಯವೇ ತಲೆತಗ್ಗಿಸುವಂತೆ ಮಾಡಿದೆ. ಭೂ ಒತ್ತುವರಿ ಮಾಫಿಯಾ ವಿರುದ್ಧ ಚರ್ಚೆ ಆಗಬೇಕಾದ ಎರಡೂ ಸದನಗಳಲ್ಲಿ ಅಂಥ ದುಷ್ಟ ಕೂಟವನ್ನು ಬಯಲಿಗೆಳೆದ ಅಧಿಕಾರಿ ವಿರುದ್ಧ ದನಿ ಎತ್ತಿರುವುದು ಗೌರವ ಸೂಚಕ ಅಲ್ಲವೇ ಅಲ್ಲ. ವರದಿಯಲ್ಲಿನ ತಪ್ಪು-ಒಪ್ಪುಗಳ ಬಗ್ಗೆ ಸರ್ಕಾರ ಪರಿಶೀಲಿಸಿ ಒತ್ತುವರಿದಾರರ ವಿರುದ್ಧ ಕ್ರಮಕ್ಕೆ ಮುಂದಾಗಲಿ.
-ಡಿ.ಎ.ಸಂದೇಶ್, ನರಸಿಂಹರಾಜಪುರ
ಅಧಿಕಾರ ದುರುಪಯೋಗ
ಶಾಸಕರ ಅಭಿಪ್ರಾಯ ಸರಿಯಲ್ಲ. ಇಂಥ ಕ್ರಮ ಕೈಗೊಂಡರೆ ಜನರಿಗೆ ತಪ್ಪು ಸಂದೇಶ ಕೊಟ್ಟಂತಾಗುತ್ತದೆ. ರಾಮಾಯಣವನ್ನು ನೋಡಿ ಕಲಿಯಬೇಕು. ಶ್ರೀರಾಮ ತನ್ನ ಹೆಂಡತಿ ಸೀತೆ ಮೇಲೆ ಒಂದೇ ಒಂದು ಆರೋಪ ಕೇಳಿ ಬಂದ ತಕ್ಷಣ ಆಕೆಯನ್ನು ಕಾಡಿಗೆ ಕಳುಹಿಸಲಿಲ್ಲವೇ? 'ಕನ್ನಡಪ್ರಭ' ಒಳ್ಳೆಯ ಕೆಲಸ ಮಾಡಿದೆ. ನಿಮ್ಮ ಪ್ರಯತ್ನಕ್ಕೆ ನಮ್ಮ ಹಾರೈಕೆಗಳು.
- ಜಿ.ವಿ.ರಾಮಕೃಷ್ಣ, ಶಿವಮೊಗ್ಗ
ಅರಗಿಸಲು ಕಷ್ಟವಾಗಿದೆ
ಬಾಲಸುಬ್ರಮಣಿಯನ್ ಅಭಿಪ್ರಾಯ ವಸ್ತುನಿಷ್ಠವಾಗಿದೆ. ಅದೇ ಕಾರಣಕ್ಕೆ ವರದಿ ಒಪ್ಪಲು ರಾಜಕಾರಣಿಗಳಿಗೆ ಕಷ್ಟವಾಗಿದೆ. ಹಕ್ಕುಚ್ಯುತಿ ಎಂದರೆ ಏನು ಎನ್ನುವುದೇ ಶಾಸಕರಿಗೇ ಅರ್ಥವಾಗಿಲ್ಲ. ಅವರ ಯಾವ ಕೆಲಸ, ಕಾರ್ಯಗಳಿಗೆ ಅವರು ಚ್ಯುತಿ ತಂದಿದ್ದಾರೆ? ಈಗ ಕೇವಲ ದುಡ್ಡು ಮಾಡಿಕೊಳ್ಳಲು, ಅಧಿಕಾರದಿಂದ ಮದದಿಂದ ಮೆರೆದಾಡಲು ಮಾತ್ರ 'ಶಾಸಕ' ಸ್ಥಾನ ದುರುಪಯೋಗವಾಗುತ್ತದೆ.
- ವೀರಣ್ಣ ಇಂದರಗಿ, ಓಜಿನಹಳ್ಳಿ
ವರದಿ ಬಗ್ಗೆ ಚರ್ಚೆ ಮಾಡಿ
ಸರ್ಕಾರಿ ಭೂಮಿಯನ್ನೇ ಒತ್ತುವರಿ ಮಾಡಿಕೊಂಡಿರುವವರ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿರುವ ಬಾಲಸುಬ್ರಮಣಿಯನ್ ವಿರುದ್ಧ ಹಕ್ಕುಚ್ಯುತಿ ಮಂಡಿಸಲು ಮುಂದಾಗಿರುವ ಕೆಲ ಜನಪ್ರತಿನಿಧಿಗಳ ಪ್ರಾಮಾಣಿಕತೆ ಬಗ್ಗೆಯೇ ಅನುಮಾನ ಮೂಡುತ್ತದೆ. ಅವರು ಹೊಂದಿರುವ ಅಭಿಪ್ರಾಯವೇ ತಪ್ಪು. ಜನಪ್ರತಿನಿಧಿಗಳು ತಮ್ಮ ಹಕ್ಕುಗಳ ಬಗ್ಗೆ ಮಾತನಾಡುವ ಬದಲು ವರದಿಯಲ್ಲಿರುವ ಅಂಶಗಳ ಬಗ್ಗೆ ಸದನದಲ್ಲಿ ಚರ್ಚೆ ನಡೆಸಲಿ.
- ರಾಮಮೋಹನ್
ಅಚ್ಚರಿ ಏನೂ ಇಲ್ಲ ಸ್ವಾಮಿ!
ಈ ಬೆಳವಣಿಗೆಯಲ್ಲಿ ಅಚ್ಚರಿ ಏನೂ ಇಲ್ಲ. ಏಕೆಂದರೆ ಎಲ್ಲ ರಾಜಕೀಯ ಪಕ್ಷಗಳಲ್ಲಿ ಭೂಗಳ್ಳರಿದ್ದಾರೆ. ಎಲ್ಲ ಪಕ್ಷಗಳೂ ಭೂಗಳ್ಳರು ನೀಡುವ ದೇಣಿಗೆಗಳ ಫಲಾನುಭವಿಗಳೇ. ತಮ್ಮ ಆದಾಯದ ಮೂಲಕ್ಕೆ ಕೈಹಾಕಿರುವವರನ್ನು ಹತ್ತಿಕ್ಕುವುದೇ ರಾಜಕಾರಣಿಗಳ ಉದ್ದೇಶ.
- ಎಚ್.ಎಸ್.ನವೀನ್ಕುಮಾರ್, ಹೊಸದುರ್ಗ
ಸೇಡಿನ ಕ್ರಮ ಬೇಡ
ಕೆಲವು ಶಾಸಕರ ಹೆಸರನ್ನು ಬಹಿರಂಗವಾಗಿ ಹೇಳಿದ್ದಕ್ಕೆ ಪ್ರತಿಯಾಗಿ ವಿಧಾನಸಭೆ ಸ್ಪೀಕರ್ ಬಾಲಸುಬ್ರಮಣಿಯನ್ ವಿರುದ್ಧ ಹಕ್ಕುಚ್ಯುತಿ ಎಂಬ ಸೇಡಿನ ಕ್ರಮಕ್ಕೆ ಮುಂದಾಗಿದ್ದು ಸರಿಯಲ್ಲ. ಅದಕ್ಕಿಂತ ಮೊದಲು ಶಾಸಕರು ವರದಿಯಲ್ಲಿ ದಾಖಲೆ ಸಮೇತ ಪ್ರಸ್ತಾಪವಾಗಿರುವ ಅಂಶಗಳ ಬಗ್ಗೆ ಉತ್ತರಿಸಲಿ. ಭೂಮಾಫಿಯಾದ ಬಗ್ಗೆ ರಾಜಕಾರಣಿಗಳು ಹೊಂದಿರುವ ಪಾತ್ರದ ಬಗೆಗಿನ 'ಬಹಿರಂಗ ರಹಸ್ಯ'ವನ್ನಷ್ಟೇ ಗುರುತಿಸಿದ್ದಾರೆ.
- ಹರೀಶ್ ಎಸ್.
ಮೊದಲು ಕರ್ತವ್ಯ ನಿರ್ವಹಿಸಿ
ಸರ್ಕಾರಿ ಜಾಗ ಒತ್ತುವರಿ ಮಾಡುವ ವೇಳೆ ಹಕ್ಕಿನ ಬಗ್ಗೆ ಗಮನ ಇರಲಿಲ್ಲವೇ? ನಾವು ಆರಿಸಿ ಕಳುಹಿಸಿದ ಶಾಸಕರು ಸರ್ಕಾರಿ ಜಮೀನು ಕಬಳಿಸಿದ್ದು ಬಹಿರಂಗವಾಗುತ್ತಿದ್ದಂತೆ ಮರ್ಯಾದೆ ಬೀದಿಪಾಲಗುತ್ತದೆ ಎಂಬ ಭಯದಿಂದ ತಮ್ಮ ಹಕ್ಕಿನ ಬಗ್ಗೆ ಮಾತನಾಡುತ್ತಿದ್ದಾರೆ. ಶಾಸಕರೂ ಜನಸಾಮಾನ್ಯರು. ದೇವಮಾನವರಲ್ಲ. ಹಕ್ಕಿನ ಬಗ್ಗೆ ಮಾತನಾಡುವ ಮೊದಲು ಕರ್ತವ್ಯ ನಿರ್ವಹಿಸಲಿ.
- ಸುರೇಶ್, ಕಾಣಿಯೂರು
ಅಕ್ರಮ ಒಪ್ಪಿಕೊಂಡಂತೆ ಆಯಿತು
ಭೂಮಿ ಒತ್ತುವರಿ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲೇಬೇಕು. ಅದನ್ನು ಬಿಟ್ಟು ಅಕ್ರಮ ಪತ್ತೆ ಹಚ್ಚಿದ ವಿರುದ್ಧ ಪ್ರಾಮಾಣಿಕ ಅಧಿಕಾರಿ ವಿರುದ್ಧವೇ ಹಕ್ಕುಚ್ಯುತಿ ಮಂಡಿಸಲು ಪಟ್ಟುಹಿಡಿಯುತ್ತಿರುವುದು ಎಷ್ಟು ಸರಿ? ಹಕ್ಕುಚ್ಯುತಿ ಮಂಡಿಸಲು ಮುಂದಾಗುವ ಮೂಲಕ ಶಾಸಕರು ತಮ್ಮ ಅಕ್ರಮವನ್ನೇ ಒಪ್ಪಿಕೊಂಡಂತಾಗಿದೆ.
- ದಯಾಳು ಕಂಚು, ದಾವಣಗೆರೆ
ಹಕ್ಕು ಕಿತ್ತುಕೊಳ್ಳುವುದೂ ಅಪರಾಧವೇ
ಬಾಲಸುಬ್ರಮಣಿಯನ್ ಅವರ ವರದಿಯಿಂದ ಶಾಸಕರಲ್ಲಿ ಭಯ ಆರಂಭವಾಗಿದೆ. ಹೀಗಾಗಿಯೇ ಅವರು ಹಕ್ಕುಚ್ಯುತಿ ಎಂಬ ನಾಟಕವಾಡಲು ಶುರು ಮಾಡಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ತನಿಖೆ ಮಾಡುವ ಹಕ್ಕನ್ನು ಯಾಕೆ ಕಿತ್ತುಕೊಳ್ಳಬೇಕು? ಇದುಕೂಡ ಹಕ್ಕುಚ್ಯುತಿ ಮಾಡಿದಂತೆ ಅಲ್ಲವೇ?
- ಲತಾಮಹೇಶ್, ಆನಗಳ್ಳಿ
ಅತಿಕ್ರಮಿಗಳಿಗೇ ಶಿಕ್ಷೆಯಾಗಲಿ
ಜನಪ್ರತಿನಿಧಿಗಳು ಎನಿಸಿಕೊಂಡು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅವರಿಗೇ ಶಿಕ್ಷೆಯಾಗಲಿ. ಅದರ ಬದಲಾಗಿ, ತಪ್ಪು ಕಂಡುಹಿಡಿದ ಪ್ರಾಮಾಣಿಕ ಅಧಿಕಾರಿ ಬಾಲಸುಬ್ರಮಣಿಯನ್ ಅವರಿಗೆ ಯಾಕೆ ಶಿಕ್ಷೆಯಾಗಬೇಕು?
- ಎಂ.ಸಿ.ಸಿದ್ದಲಿಂಗಪ್ಪ
ಅಸಹ್ಯ ತಂದಿದೆ
ಪ್ರಮಾಣಿಕ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿರುವುದು ಸರಿಯಲ್ಲ. ಸಭಾಧ್ಯಕ್ಷರು, ಶಾಸಕರು ಮತ್ತು ಇತರ ಮುಖಂಡರು ವರದಿ ಬಗ್ಗೆ ಆಕ್ಷೇಪವಿದ್ದಲ್ಲಿ ಅಥವಾ ನಂಬಿಕೆ ಇಲ್ಲದೇ ಇದ್ದಲ್ಲಿ ಕಾನೂನಿನ ರೀತಿಯಲ್ಲಿ ಮುಂದಿನ ಹೆಜ್ಜೆ ಇಡುವುದು ಸೂಕ್ತವಾಗುತ್ತಿತ್ತು. ಸದನದಲ್ಲಿ ಚರ್ಚಿಸಬೇಕಾದ ವಿಚಾರಗಳಿದ್ದರೂ ಅದರ ಬಗ್ಗೆ ಮಾತನಾಡದೆ, ಸಮಯ ವ್ಯರ್ಥ ಮಾಡುವ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ.
- ಕಿರಣ್ಕುಮಾರ್ ಕೆ.ಎಸ್, ಬೆಂಗಳೂರು
ಕಳ್ಳನ ಬದಲು ಪೊಲೀಸ್ ಅಧಿಕಾರಿಗೆ ಶಿಕ್ಷೆ ಕೊಟ್ಟಂತೆ
ಇದು ಹೇಗಾಗಿದೆ ಎಂದರೆ ಕಳ್ಳನಿಗೆ ಶಿಕ್ಷೆ ಕೊಡುವ ಬದಲು ಆತನನ್ನು ಹಿಡಿದ ಪೊಲೀಸರಿಗೇ ಶಿಕ್ಷೆ ಕೊಡುವಂತಿದೆ. ಅದೇ ನೀತಿಯನ್ನು ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣಿಯನ್ ಅವರಿಗೂ ಅನುಸರಿಸಿದಂತಿದೆ.
- ಎಸ್.ಮಹೇಶ್, ಮೈಸೂರು
ಮತದಾರರದ್ದೇ ಹಕ್ಕುಚ್ಯುತಿಯಾಗಿದೆ
ನಮ್ಮ ಹಕ್ಕುಚ್ಯುತಿಯಾಗಿದೆ ಎಂದು ಕೆಲ ಶಾಸಕರು ಬಾಲಸುಬ್ರಮಣಿಯನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ನಿಜವಾದ ಹಕ್ಕುಚ್ಯುತಿ ಆದದ್ದು ಮತದಾರರದ್ದು. ಏಕೆಂದರೆ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡವರ ವಿವರ ಸಿಕ್ಕಿದ್ದರೂ ಅದರ ಬಗ್ಗೆ ಚರ್ಚೆ ನಡೆಸದೆ ಕಾಲಹರಣ ಮಾಡುತ್ತಿದ್ದಾರೆ. ವಿಧಾನಸಭೆ ಮತ್ತು ವಿಧಾನಪರಿಷತ್ಗೆ ಆಯ್ಕೆಯಾದವರು ಜನರ ಹಿತರಕ್ಷಣೆಗೆ ಹೋರಾಟ ಮಾಡಬೇಕೇ ಹೊರತು ಸ್ವಹಿತಕ್ಕೆ ಅಲ್ಲ ಎನ್ನುವ ಮಾಜಿ ಸಚಿವ ಎಂ.ಸಿ.ನಾಣಯ್ಯರ ವಾದ ಸರಿ.
- ನಾರಾಯಣ ಪಾಗಾ, ಧಾರವಾಡ
ಅಭಿಪ್ರಾಯಕ್ಕೆ ಸ್ವಾಗತ
ಸರ್ಕಾರಿ ಭೂಮಿ ಒತ್ತುವರಿ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಿದ ಸರ್ಕಾರಿ ಭೂಮಿ ಒತ್ತುವರಿ ತೆರವು ಹಾಗೂ ಸಂರಕ್ಷಣೆ ಕಾರ್ಯಪಡೆಯ ಅಧ್ಯಕ್ಷರೂ ಆಗಿದ್ದ ಬಾಲಸುಬ್ರಮಣಿಯನ್ ವಿರುದ್ಧ ಹಕ್ಕುಚ್ಯುತಿ ಮಂಡಿಸಬೇಕು ಎಂದು ವಿಧಾನ ಮಂಡಲದ ಉಭಯ ಸದನದಲ್ಲಿ ಕೆಲ ಶಾಸಕರು ಒತ್ತಾಯಿಸಿದ್ದಾರೆ. ಶಾಸಕರ ಈ ಅಭಿಪ್ರಾಯ ಸರಿಯೋ ಅಥವಾ ತಪ್ಪೋ ಎಂಬ ಬಗ್ಗೆ ಓದುಗರು ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಪತ್ರಿಕೆಗೆ ಅಂಚೆ ಅಥವಾ ಇ-ಮೇಲ್ ಮೂಲಕ ಕಳುಹಿಸಿ.
ನಮ್ಮ ವಿಳಾಸ
ಕನ್ನಡಪ್ರಭ, ನಂ1, ಕ್ವೀನ್ಸ್ ರಸ್ತೆ, ಬೆಂಗಳೂರು-560001
ಇ-ಮೇಲ್: anisikeprabha@gmail.com