ವಿಗ್ರಹ ಚೋರ ದಾಸ್‌ಗೆ ಬೊಂಬಾಟ್ ಬಲೆ
ಮಂಗಳೂರು: ಮೂಡುಬಿದರೆ ಜೈನ ವಿಗ್ರಹ ಕಳವುಗೈದ ಸಂತೋಷ್ ಕುಮಾರ್‌ದಾಸ್ ತಲೆ ಬೋಳಿಸಿ ಗುರುತು ಮರೆಮಾಚಿ ಭುವನೇಶ್ವರದಿಂದ ಹೈದರಬಾದ್‌ಗೆ ಬರುತ್ತಿದ್ದ ಏಸಿ ಬಸ್‌ನೊಳಗೆ ತಣ್ಣಗೆ ಕುಳಿತಿದ್ದ. ಆತನಿಗೆ ಶನಿವಾರ ಮಧ್ಯಾಹ್ನ 12 ಗಂಟೆಗೆ ಬಸ್ ನಿಲ್ಲಿಸಿ ಆಂಧ್ರಪ್ರದೇಶ ಪೊಲೀಸರು ಠಾಣೆಗೆ ಕರೆದುಕೊಂಡು ಹೋದಾಗಲೇ ಮೂಡುಬಿದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನನ್ನು ಬಂಧಿಸಲಾಗಿದೆ ಎಂಬುವುದು ಅರಿವಿಗೆ ಬಂದಿದ್ದು.
ಜೈನವಿಗ್ರಹ ಕಳವು ಪತ್ತೆ ಮಾಡುವ ಬಗ್ಗೆ ರಾಷ್ಟ್ರಪತಿಯೇ ಆಸಕ್ತಿ ವಹಿಸಿದ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕಳ್ಳನ ಪತ್ತೆಗೆ ಶತಾಯಗತಾಯ ಯತ್ನಿಸುತ್ತಿದ್ದರು. ಸಂತೋಷ್‌ಕುಮಾರ್ ದಾಸ್ ಪತ್ನಿ ಮತ್ತು ಮಾವ ಮಂಗಳೂರು ಜೈಲ್‌ನಲ್ಲಿದ್ದಾಗ ಅಲ್ಲಿಗೆ ಬರುತ್ತಿರುವವರ ಮೇಲೆ ಸಿಸಿಬಿ ಇನ್ಸ್‌ಪೆಕ್ಟರ್ ಡಾ.ಎಚ್.ಎನ್. ವೆಂಕಟೇಶ್‌ಪ್ರಸನ್ನ ನೇತೃತ್ವದ ಪೊಲೀಸ್ ತಂಡ ಹದ್ದಿನ ಕಣ್ಣಿಟ್ಟಿತ್ತು.
ಕಾಸರಗೋಡಲ್ಲಿ ಮನೆ ಮಾಡಿಕೊಂಡಿದ್ದ ಈ ಕಳ್ಳರ ತಂಡದ ಸದಸ್ಯನೊಬ್ಬ ಜೈಲ್‌ಗೆ ಭೇಟಿ ನೀಡಿದ್ದು. ಆತನನ್ನು ಹಿಡಿದು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದಾಗ ಸಂತೋಷ್‌ಕುಮಾರ್ ದಾಸ್‌ನ ಮೊಬೈಲ್ ನಂಬರ್ ಲಭ್ಯವಾಗಿತ್ತು. ಆತನ ನೆಟ್‌ವರ್ಕ್ ಪರಿಶೀಲಿಸಿದಾಗ ಆತ ಆಂಧ್ರ ಮತ್ತು ಒಡಿಶಾ ಗಡಿಭಾಗದಲ್ಲಿರುವುದು ಪೊಲೀಸರಿಗೆ ಖಚಿತವಾಯಿತು. ದಾಸ್‌ನ ಬಗ್ಗೆ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರಿಗೆ ಆತ ಹಲವು ಬಾರಿ ಒಡಿಶಾದ ಕೇಸಿನೇನಿ ಬಸ್‌ನಲ್ಲಿ ಭುವನೇಶ್ವರದಿಂದ ಆಂಧ್ರಕ್ಕೆ ತೆರಳದ್ದ ದಾಖಲೆ ಲಭಿಸಿತ್ತು. ಈ ಸಂಬಂಧವಾಗಿ ಬಸ್‌ನ ಮಾಲೀಕರನ್ನು ಸಿಸಿಬಿ ಪೊಲೀಸರು ವಿಚಾರಿಸಿದ್ದರು.
ಮಂಗಳೂರು ಕಮಿಷನರ್ ಮನೀಷ್ ಕರ್ಬಿಕರ್ ಶ್ರೀಕಾಕುಲಂ ಜಿಲ್ಲೆ ಎಸ್‌ಪಿಯೊಂದಿಗೆ ಮುಂಚೆಯೇ ಮಾತುಕತೆ ನಡೆಸಿದ್ದರು. ಶ್ರೀಕಾಕುಲಂ ಎಸ್‌ಪಿ ಬಸ್ ಚಾಲಕನಿಗೆ ನಿಗದಿತ ಸ್ಥಳವೊಂದರಲ್ಲಿ ಬಸ್ ಅನ್ನು ನಿಲ್ಲಿಸಲು ಸೂಚಿಸಿದರು. ಅಷ್ಟರಲ್ಲಿಯೇ ಇ-ಮೇಲ್ ಮೂಲಕ ಆರೋಪಿಯ ಫೋಟೋವನ್ನು ಶ್ರೀಕಾಕುಲಂ ಪೊಲೀಸರಿಗೆ ತಲುಪಿಸಿದ್ದು, ಅವರು ಈ ದೃಢೀಕರಿಸಿದರು.
ಜನರೇ ರೆಡ್ ಹ್ಯಾಂಡ್ ಹಿಡಿದಿದ್ದರು!
ಜೈನಬಸದಿಯ ಕೋಟ್ಯಂತರ ಮೌಲ್ಯದ ವಿಗ್ರಹಗಳನ್ನು ಕದ್ದ ಒಡಿಶಾದ ಸಂತೋಷ್‌ಕುಮಾರ್ ದಾಸ್ ಯಾನೆ ಘನಶ್ಯಾಮ್ ದಾಸ್ 2010ರಲ್ಲಿ ಕಂಕನಾಡಿ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ ಹಾಕುವಾಗ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದ. ದೃಢಕಾಯನಾದ ಆತ ತಪ್ಪಿಸಿಕೊಂಡು ಓಡುತ್ತಿದ್ದಾಗ ಗೋಡೆಯ ಉಬ್ಬಿದ್ದ ಎಸಿ ಯಂತ್ರ ಹಿಂಭಾಗಕ್ಕೆ ತಲೆ ಡಿಕ್ಕಿಯಾಗಿ ಬಿದ್ದಿದ್ದ. ಬಿದ್ದವನ ಬಾಯಿಯಿಂದ ದೇವರ ಚಿನ್ನದ ಮಾಲೆಯೇ ಹೊರ ಬಿದ್ದಿತ್ತು. ಬಿದ್ದವನ ಮೇಲೆ ಜನರೆಲ್ಲ ಒಟ್ಟಾಗಿ ತೀವ್ರ ಹಲ್ಲೆ ನಡೆಸಿದ್ದರು. ಆತನ ಶರ್ಟ್‌ನ ಕೈ ಒಳಗೆ ಕಳ್ಳತನಕ್ಕೆ ಬೇಕಾಗುವ ಎಲ್ಲ ಸಾಮಗ್ರಿಗಳನ್ನು ಅಡಗಿಸಿಟ್ಟಿಕೊಳ್ಳುವ ವ್ಯವಸ್ಥೆ ಮಾಡಿದ್ದ.
ಗಾಯಗೊಂಡಿದ್ದ ದಾಸ್‌ನನ್ನು ಗ್ರಾಮಾಂತರ ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಆತನ ಮೇಲೆ ಗಂಭೀರ ಹಲ್ಲೆ ನಡೆಸಿದ ಬಗ್ಗೆ ಪೊಲೀಸರೇ ಗಸ್ತು ಪಡೆ ಮೇಲೆ ಕಿಡಿಕಾರಿದ್ದರು. ಗಸ್ತು ಪಡೆ ಮೇಲೆಯೇ ಪ್ರಕರಣ ದಾಖಲಾಗುವ ಭೀತಿ ಹಿನ್ನೆಲೆಯಲ್ಲಿ ಜನರು ಠಾಣೆ ಕಡೆ ಸುಳಿದೇ ಇರಲಿಲ್ಲ. ಆತನನ್ನು ಪೊಲೀಸರು ವಿಚಾರಣೆಗಾಗಿ 6 ದಿನಗಳ ಕಾಲ ಇಟ್ಟುಕೊಂಡಿದ್ದರೂ ಪ್ರಕರಣ ದಾಖಲಿಸರಲಿಲ್ಲ. ಅನಧಿಕೃತ ಬಂಧನದಲ್ಲಿ ಇರುವಷ್ಟು ದಿನಗಳ ಕಾಲ ಸಂತೋಷ್‌ದಾಸ್ ಸಣ್ಣಪುಟ್ಟ ಕಳ್ಳತನ ಮಾಡಿರುವುದಾಗಿ ಮಾತ್ರ ಹೇಳಿದ್ದ. 6 ದಿನಗಳ ಕಾಲ ಆತ ಆಹಾರ, ನೀರು ಸೇವಿಸಲೂ ಒಪ್ಪುತ್ತಿರಲಿಲ್ಲ. ಆತ ಕೃಶನಾಗುತ್ತಿರುವುದನ್ನು ನೋಡಿ ಬೆದರಿದ ಪೊಲೀಸರು ಆತನನ್ನು ಬಿಟ್ಟು ಬಿಟ್ಟಿದ್ದರು.
ಕೊಡ್ಯಡ್ಕಕ್ಕೂ ಕನ್ನ
ಒಡಿಶಾ 14, ಆಂಧ್ರಪ್ರದೇಶ 14, ಮಹಾರಾಷ್ಟ್ರ 1, ಕರ್ನಾಟಕದಲ್ಲಿ 9 ಕಳವು ಪ್ರಕರಣ ಬಗ್ಗೆ ಸಂತೋಷ್ ಕುಮಾರ್‌ದಾಸ್ ಬಾಯಿ ಬಿಟ್ಟಿದ್ದಾನೆ. ಅಲಂಗಾರು ಕೊಡ್ಯಡ್ಕ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನದಿಂದ 4 ಕೆ.ಜಿ. ಬೆಳ್ಳಿ, ಕಾರ್ಕಳ ಜುವೆಲ್ಲರಿಯಿಂದ ಬೆಳ್ಳಿ ಕದ್ದಿರುವುದನ್ನು ದಾಸ್ ಒಪ್ಪಿದ್ದಾನೆ.