ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಖಾತ್ರಿ ದುಡ್ಡು ಬೇನಾಮಿ ಜಾತ್ರೆ

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ...

Vishwanath S
Updated On : 31 Jul 2013, 12:40 pm

ಕನ್ನಡಪ್ರಭ ವಾರ್ತೆ,  ಬೆಂಗಳೂರು,  ಜು.30-
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ಕಳೆದ 5 ವರ್ಷಗಳ ಅವಧಿಯಲ್ಲಿ ರು. 4227.43 ಕೋಟಿ ಮೊತ್ತದ ಅವ್ಯವಹಾರ ಆಗಿರುವ ಸಾಧ್ಯತೆ ಇದೆ ಎಂದು ಮಹಾಲೇಖಪಾಲರು (ಸಿಎಜಿ) ಅನುಮಾನ ವ್ಯಕ್ತಪಡಿಸಿದ್ದಾರೆ.
2007-08 ರಿಂದ 2011-12ರ ನಡುವಿನ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಹಾಲೇಖಪಾಲ ಡಿ.ಜೆ.ಭದ್ರ ಅವರು ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾಹಿತಿ ನೀಡಿದರು.
2007ರ ಏಪ್ರಿಲ್‌ನಿಂದ 2012ರ ಮಾರ್ಚ್‌ವರೆಗಿನ ಕಾಮಗಾರಿಗಳ ಬಗ್ಗೆ ರಾಜ್ಯದ 8 ಜಿಲ್ಲೆಗಳ 157 ಗ್ರಾಮ ಪಂಚಾಯತಿಗಳಲ್ಲಿ ಪರಿಶೀಲನೆ ನಡೆದಿದೆ. ಉದ್ಯೋಗ ಖಾತ್ರಿ ಯೋಜನೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟು ರು. 9097.48 ಸಾವಿರ ಕೋಟಿ ಹಣ ನೀಡಿದ್ದವು. ಈ ಪೈಕಿ ರು. 6328.51 ಕೋಟಿ ವೆಚ್ಚ ಮಾಡಲಾಗಿದೆ. ರು. 2768.97 ಕೋಟಿ ಬಳಕೆಯಾಗದೆ ಉಳಿದಿದೆ.
ಉದ್ಯೋಗ ಚೀಟಿಗಳಲ್ಲಿ ಹೆಸರುಗಳನ್ನು ಬಿಡುವುದು, ಕುಟುಂಬದ ಸ್ಥಳಾಂತರ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಟುಂಬವು ಇಲ್ಲದಿರುವುದು, ಕುಟುಂಬ ಹಾಗೂ ಇತರರು ಉದ್ಯೋಗ ಚೀಟಿಯನ್ನು ವಾಪಸ್ ಮಾಡುವುದು ನಡೆದಿವೆ. ಆದರೆ, ವ್ಯಕ್ತಿ, ಕುಟುಂಬಗಳು ಕೆಲಸ ನಿರ್ವಹಿಸದಿದ್ದರೂ ಹಣ ಬಿಡುಗಡೆ ಮಾಡಿ ಅವ್ಯವಹಾರ ನಡೆಸಲಾಗಿದೆ. ಈ ರೀತಿ ರು. 617.74 ಕೋಟಿಯನ್ನು ಪಾವತಿಸಲಾಗಿದೆ. ಇದು ಒಂದು ರೀತಿಯಲ್ಲಿ ಬೇನಾಮಿ ಪಾವತಿಯಾಗಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
ಯೋಜನೆ ಸಂಬಂಧ ಕಳೆದ ಎರಡು ವರ್ಷಗಳಲ್ಲಿ ಉದ್ಯೋಗಕ್ಕಾಗಿ ಬೇಡಿಕೆ ಇಟ್ಟ ಕುಟುಂಬಗಳ ಸಂಖ್ಯೆ ಹಾಗೂ ಕೆಲಸ ನೀಡಿದ ಮಾನವ ದಿನಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆಯಾಗಿದೆ. ಉದ್ಯೋಗಕ್ಕಾಗಿ 2009-10ರಲ್ಲಿ 36.26 ಲಕ್ಷ ಇದ್ದದ್ದು 2011-12ರಲ್ಲಿ 16.64 ಲಕ್ಷಕ್ಕೆ ಇಳಿಕೆಯಾಗಿದೆ. ಈ ಅವಧಿಯಲ್ಲಿ 20.04 ಕೋಟಿ ದಿನಗಳು ಇದ್ದದ್ದು 7 ಕೋಟಿಗೆ ಇಳಿಮುಖಗೊಂಡಿದೆ. 5 ವರ್ಷಗಳಲ್ಲಿ ಪರಿಶಿಷ್ಟ ಪಂಗಡಗಳ ಪಾಲು ಶೇ.79 ರಿಂದ 8 ಕ್ಕೆ ಹಾಗೂ ಪರಿಶಿಷ್ಟ ಜಾತಿಗಳ ಪಾಲು ಶೇ.30 ರಿಂದ 16ಕ್ಕೆ ಇಳಿಕೆಯಾಗಿದೆ.  ವರ್ಷದಿಂದ ವರ್ಷಕ್ಕೆ ಕಾಮಗಾರಿಗಳ ಸಂಖ್ಯೆ ಹೆಚ್ಚುತ್ತಾ ಹೋಗಿವೆ.              
ಆದರೆ ಪೂರ್ಣಗೊಂಡ ಕಾಮಗಾರಿಗಳು ವರ್ಷದಿಂದ ವರ್ಷಕ್ಕೆ ಇಳಿಮುಖವಾಗುತ್ತ ಬಂದಿವೆ. ಹಿಂದಿನ ಎರಡು ವರ್ಷಗಳ ವಿಶ್ಲೇಷಣೆಗೆ ಒಳಪಡಿಸಿದಾಗ ಶೇ.63 ರಷ್ಟು ಕಾಮಗಾರಿಯನ್ನು ಇಳಿಮುಖವಾಗಿದೆ ಎನ್ನುವ ಅಂಶ ಬೆಳಕಿಗೆ ಬಂದಿದೆ.
2008 ರಿಂದ 2012 ಅವಧಿಯಲ್ಲಿ 3.49 ಲಕ್ಷ ಉದ್ಯೋಗ ಚೀಟಿಗಳನ್ನು ಹಾಗೂ 8.23 ಲಕ್ಷ ವೈಯಕ್ತಿಕ ಚೀಟಿಗಳನ್ನು ಶಾಶ್ವತವಾಗಿ ತೆಗೆದು ಹಾಕಲಾಗಿದೆ ಎಂಬುದು 30 ಜಿಲ್ಲೆಗಳ ವ್ಯವಸ್ಥಾಪಕ ಮಾಹಿತಿ ವ್ಯವಸ್ಥೆ ಯಿಂದ (ಎಂಐಎಸ್) ತಿಳಿದು ಬಂದಿದೆ.
ಆಶ್ಚರ್ಯಕರ ಸಂಗತಿಯೆಂದರೆ ಶಾಶ್ವತವಾಗಿ ತೆಗೆದುಹಾಕಲಾಗಿರುವ ಚೀಟಿಗಳಿಗೆ ಸಂಬಂಧಿಸಿದಂತೆ ರು. 22.48 ಕೋಟಿ ಮೊತ್ತದ ದಿನಗೂಲಿ ಹಾಗೂ ವೈಯಕ್ತಿಕ ಹೆಸರುಗಳಿಗೆ ಸಂಬಂಧಿಸಿದಂತೆ ರು. 2.90 ಕೋಟಿ ದಿನಗೂಲಿ ಪಾವತಿಸಲಾಗಿದೆ. ಈ ಮೂಲಕ ಪಾವತಿಗಳಲ್ಲಿ ಅಕ್ರಮವಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಆದರೆ ಒಟ್ಟಾರೆ ಯೋಜನೆಯಲ್ಲಿ ಇದೊಂದು ಉದಾಹರಣೆಯಷ್ಟೇ. ಏಕೆಂದರೆ ಇದೇ ರೀತಿಯ ಹಲವು ವಾಮಮಾರ್ಗಗಳ ಮೂಲಕ ಹಣ ಪಾವತಿಯಾಗಿವೆ.
ಲೆಕ್ಕಪರಿಶೋಧನೆಯಲ್ಲಿ ರು. 30.22 ಲಕ್ಷವನ್ನು ಹೇಗೆ ಪಾವತಿ ಮಾಡಲಾಗಿದೆ ಎಂಬುದಕ್ಕೆ ದಾಖಲೆಗಳಿಲ್ಲ. ಆಡಳಿತಾತ್ಮಕ ವೆಚ್ಚವೆಂದು ರು. 30.45 ಲಕ್ಷ ಖರ್ಚು ಮಾಡಲಾಗಿದ್ದು ಅನಧಿಕೃತವಾಗಿದೆ. ಉಳಿದಂತೆ ರು. 6.90 ಕೋಟಿ ವೆಚ್ಚ ಮಾಡಿದ್ದಕ್ಕೆ ಪೂರಕ ದಾಖಲೆಗಳೇ ಲಭ್ಯವಾಗಿಲ್ಲ. ಈ ಮೂಲಕ ಹಣಕಾಸಿನ ನಿರ್ವಹಣೆ ಲೋಪದೋಷಗಳಿಂದ ಕೂಡಿದೆ ಎನ್ನುವುದು ತಿಳಿದು ಬಂದಿದೆ.
ದಿನಗೂಲಿ ತಡವಾಗಿ ಪಾವತಿ ಮಾಡಿದ್ದಕ್ಕೆ ಪರಿಹಾರ ನೀಡಿಲ್ಲ. ಉದ್ಯೋಗ ಕೋರಿ 15 ದಿನಗಳ ಒಳಗೆ ಕೆಲಸ ನೀಡದೆ ಇದ್ದ ಪ್ರಕರಣಗಳಲ್ಲಿ ನಿರುದ್ಯೋಗ ಭತ್ಯೆ ನೀಡಿಲ್ಲ.
ಜಿಲ್ಲಾ ಮಟ್ಟದಲ್ಲಿ ಯೋಜನೆಗಳನ್ನು ತಯಾರಿಸದೇ ಇರುವುದು, ಕಾಮಗಾರಿಗಳಿಗೆ ಒಂದು ಗುರಿ ಇರಲಿಲ್ಲ. ಜಿಲ್ಲೆ, ತಾಲೂಕು ಗ್ರಾಮಗಳ ಅಗತ್ಯತೆಗೆ ತಕ್ಕಂತೆ ಕಾಮಗಾರಿಗಳನ್ನು ಕೈಗೊಂಡಿಲ್ಲ. ದಿನಗೂಲಿ ಬೇಡಿಕೆ ಆಧಾರದ ಮೇಲೆ ಕಾಮಗಾರಿ ಸೇರಿಸದೆ ನಾಮಕವಾಸ್ತೆ ನಡೆಸಲಾಗಿದೆ.
ರಾಜ್ಯ ಸರ್ಕಾರ ಯೋಜನೆಯ ಮಾಹಿತಿ, ಶಿಕ್ಷಣ ಮತ್ತು ಸಂಪರ್ಕ ಯೋಜನೆ ಮಾಡಿಲ್ಲ. ಇಂತಹ ಒಂದು ಯೋಜನೆ ಇರುವುದು ಗ್ರಾಮಗಳ ಶೇ.20ಕ್ಕಿಂತ ಕಡಿಮೆ ಜನರಿಗೆ ಮಾತ್ರ ಗೊತ್ತಿದೆ.
ಯೋಜನೆ ಅನುಷ್ಠಾನದ ಮೇಲ್ವಿಚಾರಣೆ ಮಾಡಲು ರಚಿಲಾಗಿದ್ದ ರಾಜ್ಯ ಉದ್ಯೋಗ ಖಾತರಿ ಮಂಡಳಿ, ಆಡಳಿತ ಮಂಡಳಿ, ಕಾರ್ಯ ನಿರ್ವಾಹಕ ಮಂಡಳಿ ನಿಯತಕಾಲಿಕ ಸಭೆಗಳನ್ನು ನಡೆಸಿಲ್ಲ.
ಯೋಜನೆಯ ಅನುಷ್ಠಾನಕ್ಕೆ ಸಹಾಯ ಮಾಡುವ ತಾಂತ್ರಿಕ ಸಂಪನ್ಮೂಲ ಬೆಂಬಲ ಇಲ್ಲದಿರುವುದು. ಈ ಹಿನ್ನೆಲೆಯಲ್ಲಿ ಯೋಜನೆಗಳ ಪ್ರಗತಿ ಕುಂಠಿತಗೊಂಡಿವೆ. ಮೇಲ್ವಿಚಾರಣೆ ಇಲ್ಲದೇ ಕಾಮಗಾರಿಯ ಸ್ಥಿತಿಗತಿ ನಿರೀಕ್ಷಿತ ಮಟ್ಟದಲ್ಲಿ ಇಲ್ಲ ಎನ್ನುವುದು ತಿಳಿದು ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ಶಿಫಾರಸು ಮಾಡಲಾಗಿದೆ.
ಸಂತಸದ ವಿಷಯ
ಕೋಟ್ಯಂತರ ಅವ್ಯವಹಾರದ ನಡುವೆಯೂ ಯೋಜನೆಯಿಂದ ಸಂತಸದ ವಿಷಯಗಳು ಕಂಡು ಬಂದಿವೆ. ಯೋಜನೆ ಸಮರ್ಪಕ ಅನುಷ್ಠಾನವಾಗಿರುವ ಪ್ರದೇಶಗಳಲ್ಲಿ ಕುಟುಂಬಗಳ ಆದಾಯ ಉತ್ತಮವಾಗಿದೆ. ಹಸಿವಿನಿಂದ ಮುಕ್ತಿ, ಮಕ್ಕಳನ್ನು ಶಾಲೆಗೆ ಕಳುಹಿಸುವುದಕ್ಕಾಗಿ ಅವಕಾಶಗಳು ಹೆಚ್ಚಾಗಿವೆ. ಜೀವನಶೈಲಿ, ಸಾಮಾಜಿಕ ಸ್ಥಿತಿ, ಆರೋಗ್ಯ ಸ್ಥಿತಿ ಹಾಗೂ ಸಾಲ ಮರುಪಾವತಿ ಸಾಮರ್ಥ್ಯ ಉತ್ತಮಗೊಂಡಿದೆ ಎನ್ನುವ ಅಂಶ ಯೋಜನೆಯ ಬಗೆಗಿನ ಮೌಲ್ಯಮಾಪನದ ವೇಳೆ ತಿಳಿದು ಬಂದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement