ಮಳೆ ನಿಂತರೂ ತಗ್ಗದ ಕೃಷ್ಣಾ ಪ್ರವಾಹ
ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ತಗ್ಗಿದ್ದರೂ ಕೃಷ್ಣಾ ನದಿ ಪ್ರವಾಹ ಮಾತ್ರ ಇಳಿಮುಖವಾಗಿಲ್ಲ. ಮಂತ್ರಾಲಯಕ್ಕೆ ಪ್ರವಾಹ ಭೀತಿ ಮುಂದುವರಿದಿದ್ದು ಬೆಳಗಾವಿ ಜಿಲ್ಲೆಯ 22 ಸೇತುವೆಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ದೇವದುರ್ಗ- ಶಹಾಪುರ ಮಧ್ಯೆ ಸಂಪರ್ಕ ಕಡಿತಗೊಂಡಿದ್ದರೆ, ಯಾದಗಿರಿ ಜಿಲ್ಲೆಯ ಕೊಳ್ಳೂರು ಸೇತುವೆ ಮುಳುಗಡೆಯಾಗಿದೆ.
ತುಂಗಭದ್ರಾ ಜಲಾಶಯದಿಂದ 33 ಗೇಟ್ಗಳ ಮೂಲಕ 1,47,330 ಕ್ಯುಸೆಕ್ ನೀರು ನದಿಗೆ ಬಿಡುತ್ತಿರುವುದರಿಂದ ಸತತ 3ನೇ ದಿನವೂ ಗಂಗಾವತಿ-ಕಂಪ್ಲಿ ಸೇತುವೆ ಜಲಾವೃತಗೊಂಡಿದೆ. ಹೊಸಪೇಟೆ ಮತ್ತು ರಾಯಚೂರು ನಡುವಿನ ರಸ್ತೆ ಸಂಪರ್ಕ ಕಡಿತವಾಗಿದೆ. ಹಂಪಿಯ ಕೆಲವು ಸ್ಮಾರಕಗಳಲ್ಲಿ ನೀರಿನ ಪ್ರಮಾಣ ತಗ್ಗಿಲ್ಲ.
ಮಹಾರಾಷ್ಟ್ರದ ಕೋಯ್ನಾ, ರಾಜಾಪುರ ಜಲಾಶಯ ಹಾಗೂ ದೂಧಗಂಗಾ ಬ್ಯಾರೇಜ್ನಿಂದ ಹೆಚ್ಚುವರಿ ನೀರನ್ನು ಹರಿ ಬಿಡುತ್ತಿರುವುದರಿಂದ ಕೃಷ್ಣಾ ನದಿಗೆ 2.11 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಆಲಮಟ್ಟಿ ಅಣೆಕಟ್ಟೆಗೆ 2.37 ಲಕ್ಷ ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ 2.59 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 22 ಸೇತುವೆಗಳು ಇನ್ನೂ ಸಂಚಾರಕ್ಕೆ ಮುಕ್ತವಾಗಿಲ್ಲ. ಚಿಕ್ಕೋಡಿ, ರಾಯಬಾಗ, ಅಥಣಿ ತಾಲೂಕಿನ ಕೃಷ್ಣಾ ನದಿ ತೀರದ 39 ಗ್ರಾಮಗಳ 824 ಹೆಕ್ಟೇರ್ ಪ್ರದೇಶದ ಕಬ್ಬು, ಸೋಯಾಬಿನ್, ಗೋವಿನಜೋಳ ಹಾಗೂ ಇನ್ನಿತರ ಬೆಳೆ ಹಾನಿಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 111 ಮನೆಗಳು ಕುಸಿದಿವೆ.
ರಾಯಚೂರಿನಲ್ಲಿ ಆಂತಕ: ನಾರಾಯಣಪುರ ಜಲಾಶಯದಿಂದ 2.69 ಲಕ್ಷ ಕ್ಯುಸೆಕ್ ನೀರು ಕೃಷ್ಣಾ ನದಿಗೆ ಬಿಡುತ್ತಿರುವುದರಿಂದ ಯಾದಗಿರಿ, ಲಿಂಗಸ್ಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನ ನದಿ ತೀರದಲ್ಲಿ ಆತಂಕ ಸೃಷ್ಟಿಯಾಗಿದೆ. ಲಿಂಗಸ್ಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದ್ದು ಕಡದರಗಡ್ಡೆ, ಯರಗೋಡಿ, ಯಳಗುಂದಿ ಮತ್ತಿತರೆ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದೆ. ನಡುಗಡ್ಡೆ ಗ್ರಾಮಗಳಾದ ಮ್ಯಾದರಗಡ್ಡೆ ಮತ್ತು ಕರಕಲಗಡ್ಡೆ ಜನತೆ ಆಂತಕದಲ್ಲಿ ಕಾಲ ಕಳೆಯುತ್ತಿದ್ದಾರೆ. ದೇವದುರ್ಗ ತಾಲೂಕಿನ ಮ್ಯಾದರಗೋಳ, ಕರ್ಕಿಹಳ್ಳಿ ಮತ್ತಿತರೆಡೆ ಪ್ರವಾಹ ರೈತರ ಗದ್ದೆಗಳಿಗೆ ನುಗ್ಗಿದ್ದರಿಂದ ಅಪಾರ ಪ್ರಮಾಣದ ಹಾನಿಯಾಗಿದೆ. ಹೂವಿನಹೆಡಗಿ ಸೇತುವೆ ಸಂಚಾರಕ್ಕೆ ಮುಕ್ತವಾಗಿಲ್ಲ. ಕೊಪ್ಪರದ ಶ್ರೀಲಕ್ಷಿನರಸಿಂಹ ದೇವಸ್ಥಾನ ಜಲಾವೃತವಾಗಿದೆ.ಮಂತ್ರಾಲಯದಲ್ಲಿ ನೀರಿನ ಮಟ್ಟ ಸ್ಥಿರವಾಗಿದ್ದು ಪ್ರವಾಹ ಭೀತಿ ಎದುರಾಗಿದೆ.
ಯಾದಗಿರಿ ಜಿಲ್ಲೆಯ ಕೊಳ್ಳೂರು ಸೇತುವೆ ಮುಳುಗಡೆಯಾಗಿದೆ. ತುಂಗಭದ್ರಾ ನದಿ ಅಬ್ಬರ ಕಡಿಮೆಯಾಗಿದೆ. ಕೊಡಗು ಜಿಲ್ಲೆಯಲ್ಲಿ ಮಳೆ ಕಡಿಮೆಯಾಗಿದ್ದು ಕೆಆರ್ಎಸ್ ಒಳ ಹರಿವು ತಗ್ಗಿದೆ. ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರಿನಲ್ಲಿ ಭೂ ಕುಸಿತ ಉಂಟಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ದ.ಕ.ದಲ್ಲೂ ಮಳೆ ಕಡಿಮೆಯಾಗಿದೆ.
ಉತ್ತಮ ಮಳೆಗೆ ಕಾರಣವೇನು?
ವಿಧಾನಸಭೆ: ರಾಜ್ಯದಲ್ಲಿ ಈ ವರ್ಷ ಹೆಚ್ಚು ಮಳೆ ಬಂದು ಜಲಾಶಯಗಳು ಭರ್ತಿಯಾಗಲು ಕಾರಣವೇನು? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಕಾರ ರಾಜ್ಯದ ಜನರ ಅದೃಷ್ಟ ಚೆನ್ನಾಗಿದೆ. ಹೀಗಾಗಿ ಮಳೆ ಬಂದು ಎಲ್ಲರೂ ಸಮಾಧಾನಪಟ್ಟುಕೊಳ್ಳುವಂತಾಗಿದೆ. ಆದರೆ, ಜೆಡಿಎಸ್ ಹಿರಿಯ ಸದಸ್ಯ ರೇವಣ್ಣ ಅವರ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಪೂಜೆ, ಮುಹೂರ್ತ ನೋಡುವುದು ಅರಂಭವಾಗಿದ್ದರಿಂದ ಮಳೆ ಉತ್ತಮವಾಗಿ ಆಗುತ್ತಿದೆ. ಇನ್ನು ರೈತರ ಸಂಘದ ಮುಖಂಡ ಕೆ.ಎಸ್. ಪುಟ್ಟಣ್ಣಯ್ಯ ಅವರು ಹೇಳುವುದು ಹೀಗೆ. 14 ವರ್ಷದಿಂದ ರೈತ ಸಂಘದವರು ಸದನದ ಒಳಗೆ ಪ್ರವೇಶಿಸಿಲ್ಲ. ಇದೀಗ ನಾನು ಅವರ ಪ್ರತಿನಿಧಿಯಾಗಿ ಬಂದಿದ್ದೇನೆ. ಹೀಗಾಗಿ ಒಳ್ಳೇ ಮಳೆ ಬಂದು ಜನರಿಗೆ ಮತ್ತು ಸರ್ಕಾರಕ್ಕೆ ಒಳ್ಳೆಯದಾಗಿದೆ.