ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಣ್ಣ, ಮಧ್ಯಮ ಕೈಗಾರಿಕೆಗಳ ಸೌಕರ್ಯಕ್ಕೆ ವಿದೇಶಾಂಗ ನೀತಿ ಬದಲು: ಖುರ್ಷಿದ್

Vishwanath S
Updated On : 31 Jul 2013, 1:17 am

ಬೆಂಗಳೂರು: ಭಾರತದ ಕೈಗಾರಿಕಾ ಅಭಿವೃದ್ಧಿಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕೊಡುಗೆ ಹೆಚ್ಚಿದ್ದು, ಇವುಗಳಿಗೆ ಮತ್ತಷ್ಟು ಮೂಲಸೌಕರ್ಯ ಕಲ್ಪಿಸಿಕೊಡಲು ವಿದೇಶಾಂಗ ನೀತಿಯಲ್ಲಿ ಕೆಲವು ಬದಲಾವಣೆ ತರಲು ಪ್ರಯತ್ನಿಸುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದರು.
ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮಂಗಳವಾರ ಖಾಸಗಿ ಹೊಟೇಲ್ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ 'ಅನಿವಾಸಿ ಭಾರತೀಯರ ಶಾಖೆ' ಉದ್ಘಾಟನೆ ಮಾಡಿ ಕೈಗಾರಿಕೋದ್ಯಮಿಗಳೊಂದಿಗೆ ಸಂವಾದ ನಡೆಸಿದರು.
ಭಾರತದ ಕೈಗಾರಿಕಾ ಅಭಿವೃದ್ಧಿಗೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹೆಚ್ಚಿನ ಶ್ರವಹಿಸುತ್ತಿವೆ. ಆದರೆ, ಕೆಲವೊಂದು ನೀತಿ- ನಿರೂಪಣೆಗಳು ಅಡ್ಡ ಬರುತ್ತಿರುವ ಪರಿಣಾಮ ವಿದೇಶಾಂಗ ನೀತಿಯಲ್ಲಿ ಕೆಲವು ಮಾರ್ಪಾಡು ಮಾಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಜರ್ಮನಿ, ಫ್ರಾನ್ಸ್, ಇಸ್ರೇಲ್ಗಳಲ್ಲಿನ ಉದ್ಯಮಿಗಳು ಭಾರತದಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತ ಸೈಬರ್ ಸುರಕ್ಷೆ ಮತ್ತು ಪೈಪೊಟಿಯಲ್ಲಿ ಕೆಲವು ಸುಧಾರಣೆ ತಂದು ತಾಂತ್ರಿಕತೆಯನ್ನು ಹೆಚ್ಚು ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.
ಬಂಡವಾಳ ಹೂಡಿಕೆ ಮಾಡುವ ಉದ್ದೇಶದಿಂದ ಭಾರತಕ್ಕೆ ಆಗಮಿಸುವ ವಿದೇಶಿಗರಿಗೆ ಪಾಸ್ಪೋರ್ಟ್ ಪಡೆಯುವುದು ಕಷ್ಟವಾಗಿದೆ ಎಂದು ಎಫ್ಕೆಸಿಸಿಐ ತಿಳಿಸಿರುವುದರಿಂದ ಇದಕ್ಕಾಗಿ ಪಾಸ್ಪೋರ್ಟ್ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಅಲ್ಲದೆ, ಸಂಚಾರಿ ಕೇಂದ್ರ ಮತ್ತು ಮಿನಿ ಪಾಸ್ಪೋರ್ಟ್ ಕೇಂದ್ರಗಳನ್ನೂ ತೆರೆದಿರುವುದರಿಂದ ಹೆಚ್ಚಿನ ಸಮಸ್ಯೆ ಆಗಲಾರದು. ಶೀಘ್ರದಲ್ಲಿ ಪಾಸ್ಪೋರ್ಟ್ ನೀಡಲು ಸುರಕ್ಷಾ ಕ್ರಮಗಳು ಅಡ್ಡಿ ಬರುತ್ತವೆ ಎಂಬುವುದು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.
ಬಂಡವಾಳ ಹೂಡಿಕೆ ಮಾಡಲು ಕರ್ನಾಟಕ, ಆಂಧ್ರಪ್ರದೇಶ ಮತ್ತು ಕೇರಳ ಉತ್ತಮ ರಾಜ್ಯವಾಗಿದೆ. ನಮ್ಮದು  ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅಭಿವೃದ್ಧಿ ಹೊಂದಿರುವ ರಾಷ್ಟ್ರವಾದ ಅಮೆರಿಕಾದಲ್ಲಿ ನಿರುದ್ಯೋಗಿ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ ಮುಂದೆ ಬರಲು ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಅನುಸರಿಸಬೇಕಾದ ಮಾರ್ಗಗಳನ್ನೇ ನಾವು ಅನುಸರಿಸಬೇಕು ಎಂದಿಲ್ಲ. ಒಟ್ಟಾರೆ ನಮ್ಮಲ್ಲಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡರೆ ಅಷ್ಟೇ ಸಾಕು ಎಂದರು.
ಎಫ್ಕೆಸಿಸಿಐ ಅಧ್ಯಕ್ಷ ಆರ್. ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಹಳದಿ ಜ್ವರದ ಲಸಿಕೆ ಸಮರ್ಪಕವಾಗಿ ಲಭ್ಯವಿಲ್ಲದ ಕಾರಣ ವಿದೇಶಕ್ಕೆ ತೆರಳುವವರಿಗೆ ಹೆಚ್ಚಿನ ತೊಂದರೆ ಉಂಟಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರದ ಗಮನ ಸಳೆಯುವಂತೆ ಮನವಿ ಮಾಡಿದರು.
ಬಂಡವಾಳ ಹೂಡಿಕೆ ಮಾಡಲು ಹಾಲಿ ಇರುವ ಏಕಗವಾಕ್ಷಿ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು. ಅಲ್ಲದೆ, ಮೈಸೂರಿನಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ತೆರೆದರೆ ಹೆಚ್ಚಿನ ಅನುಕೂಲವಾಗಲಿದೆ. ಸ್ವತಂತ್ರವಾಗಿ 'ಭಾರತೀಯ ವ್ಯವಹಾರ ಸಂಪರ್ಕ ಕಚೇರಿ' ಪ್ರಾರಂಭಿಸಬೇಕು ಎಂದು ಬೇಡಿಕೆ ಮುಂದಿಟ್ಟರು. ಈ ಸಮಾರಂಭದಲ್ಲಿ ಎಫ್ಕೆಸಿಸಿಐ ಅಂತಾರಾಷ್ಟ್ರೀಯ ಟ್ರೆಡ್ ಸಮಿತಿ ಅಧ್ಯಕ್ಷ ಆರ್.ಕೃಷ್ಣನ್, ಉಪಾಧ್ಯಕ್ಷ ಎಸ್. ಸಂಪತರಾಮನ್, ವಿಧಾನ ಪರಿಷತ್ತಿನ ಸದಸ್ಯ ಗಣೇಶ್ ಕಾರ್ಣಿಕ್, ಬಿ.ಆರ್. ಶೆಟ್ಟಿ ಭಾಗವಹಿಸಿದ್ದರು.
ಪಾಕಿಸ್ತಾನದಲ್ಲಿ ಪಟ್ಟಭದ್ರ ಹಿತಾಸಕ್ತಿಗಳು
ಈ ಹಿಂದೆ ಪಾಕಿಸ್ತಾನ ಮತ್ತು ಭಾರತ ನಡುವೆ ನಡೆದ ವಿಚಾರ ಬಿಟ್ಟು ಬಿಡಿ. ಎರಡು ದೇಶಗಳು ಪ್ರಜಾಪ್ರಭುತ್ವ ರಾಷ್ಟ್ರವಾಗಿರುವುದರಿಂದ ಶಾಂತ ರೀತಿಯಲ್ಲಿ ವರ್ತಿಸೋಣ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಹೇಳಿದರು. ಎಫ್ಕೆಸಿಸಿಐ ಸದಸ್ಯರೊಂದಿಗೆ ನಡೆಸಿ ಸಂವಾದಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪಾಕಿಸ್ತಾನ ನ್ಯಾಯ ಸಮ್ಮತ ಕಾಳಜಿ ವಹಿಸಬೇಕು. ಅಲ್ಲದೆ ಶಾಂತಿ ಮತ್ತು ಭದ್ರತೆ ಕಾಯ್ದುಕೊಳ್ಳಬೇಕು. ಅಲ್ಲಿ ಪ್ರಜಾಪ್ರಭುತ್ವ ಜಾರಿಯಲ್ಲಿದ್ದರೂ ಪಟ್ಟಭದ್ರ ಹಿತಾಸಕ್ತಿಗಳು ಹೆಚ್ಚಿನ ಕಾರ್ಯನಿರ್ವಹಿಸುತ್ತಿವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement