ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕುಲಪತಿ ವಿರುದ್ಧ ಜಾತಿ ನಿಂದನೆ ದೂರು

Vishwanath S
Updated On : 1 Aug 2013, 12:36 pm

ಕ.ಪ್ರ.ವಾರ್ತೆ, ಬಳ್ಳಾರಿ, ಜು. 31-
ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಸಚಿವರ ನಡುವೆ ಅಧಿಕಾರಕ್ಕಾಗಿ ಇದುವರೆಗೆ ಇದ್ದ ಪತ್ರ ಸಮರವೀಗ ಜಾತಿ ನಿಂದನೆ ಪ್ರಕರಣದೊಂದಿಗೆ ಠಾಣೆ ಮೆಟ್ಟಿಲೇರಿದೆ.
ದಿನದಿಂದ ದಿನಕ್ಕೆ ವಿವಿಯ ಒಳಜಗಳ ಗಂಭೀರ ಪರಿಸ್ಥಿತಿ ಪಡೆದುಕೊಳ್ಳುತ್ತಿದ್ದು, ಶೈಕ್ಷಣಿಕ ಸಂಸ್ಥೆಗಳಲ್ಲಿ ಇಂಥ ಗೊಂದಲವೇರ್ಪಟ್ಟರೂ ಶಾಶ್ವತ ಪರಿಹಾರಕ್ಕೆ ಉನ್ನತ ಶಿಕ್ಷಣ ಇಲಾಖೆ ಮುಂದಾಗುತ್ತಿಲ್ಲ.
ಕುಲಪತಿ ಮಂಜಪ್ಪ ಡಿ. ಹೊಸಮನಿ ಅವರು ಜಾತಿ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಕುಲಸಚಿವ ವಿಜಯಕುಮಾರ್ ಅವರು ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಆ ಮೂಲಕ ಕುಲಪತಿ ಮತ್ತು ಕುಲಸಚಿವರ ನಡುವಿನ ಆಂತರಿಕ ಕಚ್ಚಾಟ ಹೊಸ ತಿರವು ಪಡೆದುಕೊಂಡಿದೆ.

ಏನಿದು ಪ್ರಕರಣ?: ಸೋಮವಾರ ಬೆಳಗ್ಗೆ ತಮ್ಮ ಚೇಂಬರ್‌ಗೆ ಬಂದ ವಿಸಿ 'ಎಸ್‌ಸಿಗಳ ರೆಕ್ಕೆಪುಕ್ಕ ಹೇಗೆ ಕಟ್ ಮಾಡಬೇಕೆಂದು ನನಗೆ ಗೊತ್ತಿದೆ' ಎಂದು ಇಂಗ್ಲಿಷ್‌ನಲ್ಲಿ ಜಾತಿ ನಿಂದನೆ ಮಾಡಿದ್ದಾರೆ ಎಂದು ವಿಜಯ್‌ಕುಮಾರ್ ದೂರಿನಲ್ಲಿ ಆರೋಪಿಸಿದ್ದಾರೆ. ಇನ್ನು ತಾವು ಅಧಿಕಾರ ವಹಿಸಿಕೊಂಡಾಗಿನಿಂದಲೂ ಸರಿಯಾಗಿ ಕರ್ತವ್ಯ ನಿರ್ವಹಿಸುವುದಕ್ಕೆ ಬಿಡುತ್ತಿಲ್ಲ. ವಿವಿಗೆ ಸಂಬಂಧಿಸಿದ ನಿರ್ಧಾರಗಳನ್ನು ತಮ್ಮ ಗಮನಕ್ಕೆ ತಾರದೇ ತೆಗೆದುಕೊಳ್ಳುತ್ತಿದ್ದಾರೆ ಎಂದು ಕುಲಸಚಿವರು ಆರೋಪಿಸಿದ್ದಾರೆ.

ಕನಸಿನ ಕೂಸಿಗೆ ಕಳಂಕದ ಭೀತಿ: ದೂರದ ಗುಲ್ಬರ್ಗ ವಿವಿಗೆ ಹೋಗಿ ಬರಲು ಕಷ್ಟವೆಂದು ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಆರಂಭಿಸಲಾಗಿದೆ. ಈ ಭಾಗದ ಶೈಕ್ಷಣಿಕ ಗುರಿಗಳ ಈಡೇರಿಸುವಿಕೆಯ ಕನಸಿನ ಕೂಸಾದ ವಿವಿಗೆ ಆರಂಭದಿಂದಲೂ ಒಂದಲ್ಲ ಒಂದು ಕಳಂಕ ಮೆತ್ತಿಕೊಳ್ಳುತ್ತಲೇ ಇದೆ. ಇದೀಗ ವಿವಿಯ ಕುಲಪತಿ ಮತ್ತು ಕುಲಸಚಿವರ ಮಧ್ಯದ ಬೀದಿ ರಂಪಾಟ ನಿತ್ಯವೂ ಪತ್ರಿಕೆಗಳಲ್ಲಿ ರಾರಾಜಿಸುತ್ತಿರುವುದು ಸಾರ್ವಜನಿಕರ ಬೇಸರಕ್ಕೆ ಕಾರಣವಾಗಿದೆ.

ಎಚ್ಚೆತ್ತುಕೊಳ್ಳದ ಉನ್ನತ ಶಿಕ್ಷಣ ಇಲಾಖೆ:
ಡಾ. ವಿಜಯಕುಮಾರ್ ಉನ್ನತ ಶಿಕ್ಷಣ ಸಚಿವರ ಅಧೀನ ಕಾರ್ಯದರ್ಶಿಗೆ ಪತ್ರ ಬರೆದು, ವಿವಿಯಲ್ಲಿ ಕುಲಪತಿ ಸರ್ವಾಧಿಕಾರಿ ಆಡಳಿತ ನಡೆಸುತ್ತಿದ್ದು, ಹಣಕಾಸು ಪತ್ರ ವ್ಯವಹಾರವನ್ನು ನೇರವಾಗಿ ನಿಭಾಯಿಸುತ್ತಿದ್ದಾರೆ ಎಂದೂ ಆರೋಪಿಸಿದ್ದರು. ಇದಕ್ಕೆ ವಿರುದ್ಧವಾಗಿ ಕುಲಸಚಿವರು ತಮ್ಮ ಅನುಮೋದನೆ ಇಲ್ಲದೆ ಪತ್ರ ವ್ಯವಹಾರ ಮಾಡಿ, ಕರ್ನಾಟಕ ವಿಶ್ವವಿದ್ಯಾಲಯ ಕಾಯ್ದೆ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ವಿವಿಯ ಎಲ್ಲಾ ಕಚೇರಿಯ ಕಡತಗಳನ್ನು ಕುಲಸಚಿವ ವಿಜಯಕುಮಾರ್‌ಗೆ ಸಲ್ಲಿಸುವುದನ್ನು ವಿಸಿ ಸ್ಥಗಿತಗೊಳಿಸಿದ್ದರು. ಮೌಲ್ಯಮಾಪನ ಕುಲಸಚಿವ ರಂಗರಾಜ ವನದುರ್ಗ ಅವರನ್ನು ಹಂಗಾಮಿ ಕುಲಸಚಿವರನ್ನಾಗಿಸಿ ನೇಮಿಸಿಯೂ ಅಧಿಸೂಚನೆ ಹೊರಡಿಸಿದ್ದರು.
ಇದಕ್ಕೆ ಪ್ರತಿಯಾಗಿ ವಿಜಯಕುಮಾರ್ ರಾಜ್ಯ ಸರ್ಕಾರ ವಿಜಯನಗರ ಶ್ರೀ ಕೃಷ್ಣದೇವರಾಯ ವಿವಿ ಕುಲಸಚಿವನನ್ನಾಗಿ 3 ವರ್ಷ ಅಥವಾ ಮುಂದಿನ ಆದೇಶದವರೆಗೆ ನೇಮಿಸಿದೆ. ಇದರಿಂದ ತಮಗೆ ನೀಡಿರುವ ಎಲ್ಲ ಅಧಿಕಾರವನ್ನು ವರ್ಗಾಯಿಸುವ ಅಧಿಕಾರ ಸರ್ಕಾರ ಮಾಡಬೇಕು. ಈ ಅಧಿಕಾರ ವಿಸಿಗಿಲ್ಲ. ಇನ್ನು ಮುಂದೆ ಎಲ್ಲ ಕಡತಗಳನ್ನು ತಮ್ಮ ಮೂಲಕವೇ ಸಲ್ಲಿಸಲು ತಿಳಿಸಿ, ವಿಸಿ ಕಾರ್ಯವನ್ನು ಮುಂದಿನ ಸೂಕ್ತ ಕ್ರಮಕ್ಕಾಗಿ ರವಾನಿಸಲಾಗಿದೆ ಎಂದು ಸುತ್ತೋಲೆ ಕಳುಹಿಸಿದ್ದಾರೆ.
ಈ ವಿಷಯಗಳು ಉನ್ನತ ಶಿಕ್ಷಣ ಸಚಿವರ ಅಧೀನ ಕಾರ್ಯದರ್ಶಿಯನ್ನೂ ತಲುಪಿವೆ. ಇದೀಗ ಜಾತಿ ನಿಂದನೆ ಮೂಲಕ ಇಬ್ಬರ ಜಗಳ ಠಾಣೆ ಮೆಟ್ಟಿಲೇರಿದೆ.

ನಾನು ಕುಲಪತಿಯಾಗಿ ಬೇರೆಯವರ ಚೇಂಬರ್‌ಗೆ ಹೋಗುವ ಪ್ರಸಂಗವೇ ಇಲ್ಲ. ನನ್ನ ಮೇಲೆ ಮಾಡಿದ ಆರೋಪ ಸುಳ್ಳು. ನನ್ನನ್ನು ಸಿಕ್ಕಿ ಹಾಕಿಸಲು ನಡೆಸಿದ ಎಲ್ಲ ಪ್ರಯತ್ನಗಳೂ ವಿಫಲವಾದ ಹಿನ್ನೆಲೆಯಲ್ಲಿ ಇದೀಗ ತಮ್ಮ ಮೇಲೆ ಜಾತಿ ನಿಂದನೆಯ ದೂರನ್ನು ದಾಖಲಿಸಿ, ಬಂಧಿಸುವ ಪ್ರಯತ್ನ ಮಾಡುತ್ತಿದ್ದಾರೆ.
- ಮಂಜಪ್ಪ ಡಿ. ಹೊಸಮನಿ, ವಿಎಸ್‌ಕೆ ವಿವಿ ಕುಲಪತಿ

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement