ಸೀಮಾಂಧ್ರದೀ ರೋಷ
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒಪ್ಪಿರುವ ವಿಚಾರ ರಾಯಲಸೀಮಾ ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ ಭಾರಿ ಆಕ್ರೋಶ ತಂದಿಟ್ಟಿದೆ.
ಪಿಟಿಐ, ಹೈದರಾಬಾದ್, ಜು.31-
ಪ್ರತ್ಯೇಕ ತೆಲಂಗಾಣ ರಾಜ್ಯ ರಚನೆಗೆ ಒಪ್ಪಿರುವ ವಿಚಾರ ರಾಯಲಸೀಮಾ ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ ಭಾರಿ ಆಕ್ರೋಶ ತಂದಿಟ್ಟಿದೆ. ಮುಖ್ಯಮಂತ್ರಿ ಕಿರಣ್‌ಕುಮಾರ್ ರೆಡ್ಡಿ ಸರ್ಕಾರದಲ್ಲಿನ ನಾಲ್ವರು ರಾಜಿನಾಮೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತದೆ. ಜತೆಗೆ ಸೀಮಾಂಧ್ರ ಪ್ರದೇಶದ ರಾಜಧಾನಿ ಬಗ್ಗೆಯೂ ಮೇಲಾಟ ಆರಂಭವಾಗಿದೆ.
ಬಂದ್, ಪ್ರತಿಭಟನೆ: ಯುಪಿಎ ಸಮನ್ವಯ ಸಮಿತಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ನಿರ್ಧಾರ ಖಂಡಿಸಿ ರಾಯಲಸೀಮಾ ಮತ್ತು ಕರಾವಳಿ ಆಂಧ್ರಪ್ರದೇಶದಲ್ಲಿ ಕರೆ ನೀಡಲಾಗಿದ್ದ ಬಂದ್‌ನಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಶೈಕ್ಷಣಿಕ ಸಂಸ್ಥೆಗಳು, ವಾಣಿಜ್ಯ ಮಳಿಗೆಗಳು ಬಂದ್ ಕರೆ ಹಿನ್ನೆಲೆಯಲ್ಲಿ ಮುಚ್ಚಿದ್ದವು. ಸಾರಿಗೆ ಸಂಸ್ಥೆ ಬಸ್‌ಗಳು ಸಂಚರಿಸಲಿಲ್ಲ. ಕಡಾಪಾ, ಚಿತ್ತೂರು, ವಿಶಾಖಪಟ್ಟಣಂ ಮತ್ತು ಕೃಷ್ಣಾ ಜಿಲ್ಲೆಗಳಲ್ಲಿ ಸಾರಿಗೆ ಬಸ್‌ಗಳ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಹೆಚ್ಚನ ಸ್ಥಳಗಳಲ್ಲಿ ಕೇಂದ್ರ ಸರ್ಕಾರದ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು. ಅಖಂಡ ಆಂಧ್ರಪ್ರದೇಶದ ಪರವಾಗಿ ಎಲ್ಲಾ ಜಿಲ್ಲೆಗಳಲ್ಲೂ ರ್ಯಾಲಿ ಮತ್ತು ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲಾಯಿತು.
ವಿಜಯವಾಡ, ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆ ಸೇರಿದಂತೆ ಕರಾವಳಿ ಮತ್ತು ರಾಯಲಸೀಮಾ ಪ್ರದೇಶಗಳಲ್ಲಿ ಬಂದ್ ಮತ್ತು ಪ್ರತಿಭಟನೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು.
ಸಚಿವರ ರಾಜಿನಾಮೆ: ಆಂಧ್ರಪ್ರದೇಶ ವಿಭಜನೆ ನಿರ್ಧಾರ ಮುಖ್ಯಮಂತ್ರಿ ನಲ್ಲಾರಿ ಕಿರಣ್‌ಕುಮಾರ್ ರೆಡ್ಡಿ ಸರ್ಕಾರದಲ್ಲಿ ಬಿರುಗಾಳಿ ಎಬ್ಬಿಸಿದೆ. ರೆಡ್ಡಿ ಸಂಪುಟದಲ್ಲಿ ಪ್ರಮುಖ ಸಚಿವರಾಗಿರುವ ಟಿ.ಜಿ.ವೆಂಕಟೇಶ್, ಎರಸು ಪ್ರತಾಪ್ ರೆಡ್ಡಿ, ಗಂಟ ಶ್ರೀನಿವಾಸ್ ರಾಜಿನಾಮೆ ನೀಡಿದ್ದಾರೆ. ಆದರೆ ಈ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 'ಅಂಥಾದ್ದೇನೂ ನಡೆದಿಲ್ಲ' ಎಂದಷ್ಟೇ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. 'ಗುರುವಾರ ಸಭೆ ಸೇರಲಿದ್ದೇವೆ. ಅದರಲ್ಲಿ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದೇವೆ' ಎಂದು ಸಚಿವರು ತಿಳಿಸಿದ್ದಾರೆ. ರಾಜಿನಾಮೆ ನೀಡಿದ ಸಚಿವರು ರಾಯಲಸೀಮಾ ಪ್ರದೇಶಕ್ಕೆ ಸೇರಿದವರು. ಗುರುವಾರ ಆರು ಶಾಸಕರು ರಾಜಿನಾಮೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
ಮತ್ತೊಂದೆಡೆ ಗುಂಟೂರಿನಿಂದ ಕಾಂಗ್ರೆಸ್ ಸಂಸದರಾಗಿರುವ ರಾಯಪತಿ ಸಾಂಬಶಿವ ರಾವ್ ಲೋಕಸಭಾ ಸದಸ್ಯತ್ವಕ್ಕೆ ಮತ್ತು ಕಾಂಗ್ರೆಸ್‌ಗೆ ರಾಜಿನಾಮೆ ನೀಡಲು ನಿರ್ಧರಿಸಿದ್ದಾರೆ.
ಕರ್ನೂಲ್ ರಾಜಧಾನಿ ಆಗಲಿ: ಸೀಮಾಂಧ್ರಕ್ಕೆ ಯಾವ ಸ್ಥಳ ರಾಜಧಾನಿ ಆಗಬೇಕು ಎಂಬ ಬಗ್ಗೆ ಈಗಾಗಲೇ ಪೈಪೋಟಿ ಆರಂಭವಾಗಿದೆ. ರಾಯಲಸೀಮಾ ಪ್ರದೇಶದ ಪ್ರಮುಖ ಸ್ಥಳವಾಗಿರುವ ಕರ್ನೂಲು ರಾಜಧಾನಿ ಆಗಬೇಕೆಂದು ಆ ಪ್ರದೇಶದ ಶಾಸಕರು ಒತ್ತಾಯಿಸಲಾರಂಭಿಸಿದ್ದಾರೆ. ಹಿಂದಿನ ಆಂಧ್ರ ರಾಜ್ಯಕ್ಕೆ ಕರ್ನೂಲು ರಾಜಧಾನಿಯಾಗಿತ್ತು. ಆಂಧ್ರಪ್ರದೇಶವಾದಾಗ ಹೈದರಾಬಾದ್‌ಗಾಗಿ ಕರ್ನೂಲನ್ನು ತ್ಯಾಗ ಮಾಡಿದ್ದೆವು ಎಂದು ಶಾಸಕರು ಪ್ರತಿಪಾದಿಸಿದ್ದಾರೆ.
ಸಂಪುಟದಲ್ಲಿ ಚರ್ಚೆ ಇಲ್ಲ?: ಹೊಸ ರಾಜ್ಯ ರಚನೆ ಸಂಬಂಧ ಬುಧವಾರ ಕೇಂದ್ರ ಸಂಪುಟದ ವಿಶೇಷ ಸಭೆ ನಡೆಯಲಿದೆ ಎಂದು ಪ್ರಕಟಿಸಲಾಗಿತ್ತು. ಆದರೆ ಸಭೆ ನಡೆಯಲಿಲ್ಲ. ಜತೆಗೆ ಗುರುವಾರದ ಸಭೆಯಲ್ಲೂ ಆ ಬಗ್ಗೆ ಚರ್ಚೆಯಾಗುವ ಸಾಧ್ಯತೆಗಳು ಕಡಿಮೆ. ಹೊಸ ರಾಜ್ಯ ರಚನೆ ಬಗ್ಗೆ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿದ ನಂತರವೇ ಅದನ್ನು ಚರ್ಚಿಸಲು ತೀರ್ಮಾನಿಸಲಾಗಿದೆ.
ಸುದ್ದಿ ಕೇಳಿ ರೈತ ಸಾವು
ಆಂಧ್ರಪ್ರದೇಶವನ್ನು ವಿಭಜಿಸಿ ತೆಲಂಗಾಣ ರಾಜ್ಯ ರಚನೆ ಮಾಡಲು ನಿರ್ಧರಿಸಲಾಗಿದೆ ಎಂಬ ಸುದ್ದಿ ಕೇಳಿ ರೈತನೊಬ್ಬ ಹೃದಯಾಘಾತದಿಂದ ಅಸುನೀಗಿದ್ದಾನೆ. ಕಡಪಾ ಜಿಲ್ಲೆಯ ಗ್ರಾಮವೊಂದರ ಮೆಹಬೂಬ್ ಪಾಷಾ (48) ಎಂಬಾತ ಮಂಗಳವಾರ ಟಿವಿ ಚಾನೆಲ್ ಒಂದರಲ್ಲಿ ಬೆಳವಣಿಗೆಯನ್ನು ವೀಕ್ಷಿಸುತ್ತಿದ್ದ. ಈ ಸಂದರ್ಭದಲ್ಲಿ ಚಾನೆಲ್‌ನಲ್ಲಿ ನಿರ್ಧಾರ ಬಗೆಗಿನ ಸುದ್ದಿ ಪ್ರಸಾರವಾಗುತ್ತಿತ್ತು. ಆತ ಹೊಲದಿಂದ ಕೆಲಸ ಮುಗಿಸಿ ಬಂದಿದ್ದ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.