ತಾಳ ತಪ್ಪಿದ ಇನ್ಫಿಗೆ ಮೂರ್ತಿ ಹೊಸ ಮೇಳ
ಐಟಿ ದಿಗ್ಗಜ ಇನ್ಫೋಸಿಸ್‌ಗೆ ಮತ್ತೆ ಎನ್.ಆರ್.ನಾರಾಯಣ ಮೂರ್ತಿ ಅವರ ಪ್ರವೇಶವಾಗಿದೆ. ನಿರಾಶಾದಾಯಕ ಆರ್ಥಿಕ ಫಲಿತಾಂಶ, ಮಾರುಕಟ್ಟೆ ...
ಪಿಟಿಐ ಬೆಂಗಳೂರು ಜೂ.1
ಐಟಿ ದಿಗ್ಗಜ ಇನ್ಫೋಸಿಸ್‌ಗೆ ಮತ್ತೆ ಎನ್.ಆರ್.ನಾರಾಯಣ ಮೂರ್ತಿ ಅವರ ಪ್ರವೇಶವಾಗಿದೆ. ನಿರಾಶಾದಾಯಕ ಆರ್ಥಿಕ ಫಲಿತಾಂಶ, ಮಾರುಕಟ್ಟೆ ಪಾಲು ನಷ್ಟ ಮತ್ತಿತರ ಬಿಕ್ಕಟ್ಟುಗಳಿಂದ ತಾಳ ತಪ್ಪಿರುವ ಇನ್ಫೋಸಿಸ್ ಕಂಪನಿಗೆ ಹೊಸ ಮೇಳ ಒದಗಿಸಲು ಸಜ್ಜಾಗಿದ್ದಾರೆ ಮೂರ್ತಿ. ಸಂಕಷ್ಟದಲ್ಲಿ ನಲುಗಿರುವ ತನ್ನ ಕೂಸನ್ನು ಮತ್ತೊಮ್ಮೆ ಪ್ರಗತಿಯ ಹಾದಿಗೆ ತರುವ ಉದ್ದೇಶದಿಂದ ಮೂರ್ತಿ ಅವರು ಕಂಪನಿಗೆ ಮರುಪ್ರವೇಶ ಮಾಡಿದ್ದಾರೆ. ಇನ್ಫೋಸಿಸ್ ಬೋರ್ಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಹಾಗೂ ಹೆಚ್ಚುವರಿ ನಿರ್ದೇಶಕರಾಗಿ ಮೂರ್ತಿ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಇವರ ಕರ್ತವ್ಯದ ಅವಧಿ ಶನಿವಾರದಿಂದಲೇ ಆರಂಭವಾಗಿದ್ದು 5 ವರ್ಷಗಳ ಕಾಲ ಇರಲಿದೆ.
ಸೆಕೆಂಡ್ ಇನಿಂಗ್ಸ್: ಶನಿವಾರ ಬೆಂಗಳೂರಿನಲ್ಲಿ ಕೆ.ವಿ.ಕಾಮತ್ ಹಾಗೂ ಶಿಬುಲಾಲ್ ಅವರ ಜತೆಗೆ ನಾರಾಯಣಮೂರ್ತಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, 'ನಾನು ನನ್ನ ಕಂಪನಿಗೆ ವಾಪಸಾಗುತ್ತೇನೆ ಎಂದು ಕನಸು ಮನಸಿನಲ್ಲೂ ಭಾವಿಸಿರಲಿಲ್ಲ. ಅಧ್ಯಕ್ಷರಾದ ಕೆ.ವಿ.ಕಾಮತ್ ಅವರು ನನಗೆ ಆಹ್ವಾನ ನೀಡಿದಾಗಲೂ ನಾನು ಗೊಂದಲದಲ್ಲಿ ಸಿಲುಕಿದ್ದೆ. ಬಳಿಕ ಕುಟುಂಬ ಸದಸ್ಯರೊಂದಿಗೆ ಚರ್ಚಿಸಿ ಇನ್ಫೋಸಿಸ್ ಅನ್ನು ಮತ್ತೆ ಮೇಲೆತ್ತಬೇಕೆಂಬ ಹಂಬಲದಿಂದ ಒಪ್ಪಿಕೊಂಡೆ. ಇದು ನನ್ನ ಸೆಕೆಂಡ್ ಇನಿಂಗ್ಸ್' ಎಂದು ಮೂರ್ತಿ ಹೇಳಿದರು.
ಜೂನಿಯರ್ ಮೂರ್ತಿಗೆ ಸ್ಥಾನ: ಕಂಪನಿಯ ಆಡಳಿತ ಮಂಡಳಿಯಲ್ಲಿ ಅನೇಕ ಬದಲಾವಣೆಗಳನ್ನು ಮಾಡಲಾಗಿದೆ. ನಾರಾಯಣ ಮೂರ್ತಿ ಅವರ ಪುತ್ರ ರೋಹನ್ ಮೂರ್ತಿ(ಹಾರ್ವರ್ಡ್‌ನಲ್ಲಿ ಪದವಿ ಪಡೆದವರು) ಅವರನ್ನು ಕಂಪನಿಯ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಆಗಿ ನೇಮಕ ಮಾಡಲಾಗಿದೆ. ಈ ಹಿಂದೆ ತನ್ನ ಮಕ್ಕಳಿಗೆ ಕಂಪನಿಯಲ್ಲಿ ಅಧಿಕಾರ ನೀಡುವುದಿಲ್ಲ ಎಂದಿದ್ದ ಮೂರ್ತಿ, ರೋಹನ್ ನೇಮಕಕ್ಕೆ ಸಂಬಂಧಿಸಿ ಸ್ಪಷ್ಟನೆ ನೀಡಿದ್ದಾರೆ. ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಮಾತ್ರವೇ ರೋಹನ್ ಕರ್ತವ್ಯ. ಅವರಿಗೆ ಕಂಪನಿಯ ನಾಯಕತ್ವದಲ್ಲಿ ಯಾವುದೇ ಪಾತ್ರ ಇರುವುದಿಲ್ಲ ಎಂದಿದ್ದಾರೆ. ಕಂಪನಿ ಅಧ್ಯಕ್ಷರಾಗಿದ್ದ ಕೆ.ವಿ.ಕಾಮತ್ ತಮ್ಮ ಹುದ್ದೆಯಿಂದ ಕೆಳಗಿಳಿದಿದ್ದು ಮುಖ್ಯ ಸ್ವತಂತ್ರ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಹಾಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಡಿ. ಶಿಬುಲಾಲ್ ಅವರು ತಮ್ಮ ಸ್ಥಾನದಲ್ಲೇ ಮುಂದುವರಿಯಲಿದ್ದಾರೆ.
ಮೂರ್ತಿ ವಾಪಸ್ಸಾಗಿದ್ದೇಕೆ?
-3ನೇ ಸ್ಥಾನಕ್ಕೆ ಕುಸಿದ ಕಂಪನಿ: ಭಾರತದ 5,635 ಶತಕೋಟಿಯ ಐಟಿ ಇಂಡಸ್ಟ್ರಿಯ ದಿಗ್ಗಜನೆಂದೇ ಖ್ಯಾತಿ ಪಡೆದಿದ್ದ ಇನ್ಫೋಸಿಸ್ ಇತ್ತೀಚಿನ ದಿನಗಳಲ್ಲಿ ತೀವ್ರ ಕುಸಿತ ಅನುಭವಿಸಿದೆ. ಮೊದಲ ಸ್ಥಾನದಲ್ಲಿದ್ದ ಇನ್ಫಿ 3ನೇ ಸ್ಥಾನಕ್ಕೆ ಕುಸಿದಿದೆ. ಟಿಸಿಎಸ್, ಎಚ್‌ಸಿಎಲ್ ಟೆಕ್ನಾಲಜೀಸ್ ಇನ್ಫಿಯನ್ನು ಹಿಂದಿಕ್ಕಿವೆ.
- ಸಂಕಷ್ಟಕ್ಕೆ ಸಿಲುಕಿದ ಇನ್ಫೋಸಿಸ್: ಕಳೆದ ಕೆಲ ತ್ರೈಮಾಸಿಕ ಅವಧಿಯಿಂದೀಚೆಗೆ ಕಂಪನಿಯ ಪ್ರಗತಿಯ ದರವೂ ಕುಸಿದಿದೆ. ಕಂಪನಿಯ ಲಾಭದಾಯಕತ್ವ 760 ಮೂಲ ಅಂಕ(ಶೇ.7.6)ಗಳಷ್ಟು ಕುಸಿತ ಕಂಡಿದೆ. 2011ರ ಡಿಸೆಂಬರಲ್ಲಿ ಶೇ.31.2 ಇದ್ದ ಲಾಭದಾಯಕತ್ವ 2013ರ ಮಾರ್ಚ್ ವೇಳೆಗೆ ಶೇ.23.6ಕ್ಕಿಳಿದಿದೆ.
- ವಿಶ್ವಾಸ ಕಳೆದುಕೊಂಡ ಹೂಡಿಕೆದಾರರು: ಕುಸಿಯುತ್ತಿರುವ ಇನ್ಫೋಸಿಸ್ ಷೇರುಗಳು ಹೂಡಿಕೆದಾರರಿಗೆ ಆಘಾತ ನೀಡಿದೆ. ಕಂಪನಿ ಆದಾಯ ಘೋಷಣೆಯಾದ ದಿನವೇ ಷೇರುಗಳು ಶೇ.21ರಷ್ಟು ಕುಸಿದಿದ್ದವು.
- ಸ್ಥೈರ್ಯಗುಂದಿದ ನೌಕರರು: ಪ್ರತಿಭಾವಂತರನ್ನು ಕಂಪನಿಯಲ್ಲೇ ಉಳಿಸಿಕೊಳ್ಳುವ ತಂತ್ರವನ್ನು ಮೊದಲ ಬಾರಿಗೆ ಬಳಸಿದ ಕಂಪನಿ ಈಗ ಹೊಸ ನೌಕರರ ಸೇರ್ಪಡೆ ವಿಚಾರದಲ್ಲಿ ವಿಳಂಬದಿಂದ ಹಿಡಿದು ಅನುತ್ಪಾದಕರನ್ನು ಕೆಲಸದಿಂದ ತೆಗೆಯುವವರೆಗೂ ಹಲವು ತಪ್ಪು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ.
- ಸಂರಕ್ಷಣಾತ್ಮಕ ಆರ್ಥಿಕ ನಿರ್ವಹಣೆ: ಸಾಕಷ್ಟು ಹಣವಿದ್ದರೂ ಇತರೆ ಸಂಸ್ಥೆಯ ಸ್ವಾಧೀನಕ್ಕಾಗಲೀ, ಷೇರುದಾರರಿಗೆ ಸ್ವಲ್ಪ ಮೊತ್ತ ನೀಡುವುದಕ್ಕಾಗಲೀ ಮುಂದಾಗದಿರುವುದೂ ಹೂಡಿಕೆದಾರರ ಅಸಮಾಧಾನಕ್ಕೆ ಕಾರಣ.
ವರ್ಷಕ್ಕೆ ರು.1 ಆದಾಯ
ನಾರಾಯಣಮೂರ್ತಿ ಹಾಗೂ ರೋಹನ್ ಮೂರ್ತಿ ಅವರು ವರ್ಷಕ್ಕೆ ರು. 1ರಂತೆ ಸಾಂಕೇತಿಕ ಆದಾಯ ಪಡೆಯಲಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಜೂ.15ರಂದು ನಡೆಯುವ ಸಭೆಯಲ್ಲಿ ಷೇರುದಾರರೊಂದಿಗೆ ಚರ್ಚಿಸಲಾಗುವುದು ಎಂದು ಕಂಪನಿ ತಿಳಿಸಿದೆ. ನಾರಾಯಣಮೂರ್ತಿ ಅವರು 1981ರಿಂದ 2002ರವರೆಗೆ ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ 2002ರಿಂದ 2011ರವರೆಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 2011ರ ಆಗಸ್ಟ್‌ನಲ್ಲಿ ನಿವೃತ್ತಿ ಹೊಂದಿದ ಅವರು ಬಳಿಕ ಗೌರವಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.