ಇನ್ನು ಮಳೆ ಅಬ್ಬರ, ಇರಲಿ ನಿಮ್ಮ ಎಚ್ಚರ
ಮೊದಲ ಮಳೆಯ ಕಂಪು. ಆಕಾಶದಿಂದ ಧರೆಗಿಳಿವ ತಂಪು.
ಕನ್ನಡಪ್ರಭ ವಾರ್ತೆ, ಬೆಂಗಳೂರು, ಜೂ.2-
ಮೊದಲ ಮಳೆಯ ಕಂಪು. ಆಕಾಶದಿಂದ ಧರೆಗಿಳಿವ ತಂಪು. ಮಳೆಗಾಲವೆಂದರೆ ಮಕ್ಕಳಿಗೆ ಮಳೆಯಲ್ಲಿ ನೆನೆವ ಸಂಭ್ರಮ. ರೈತರ ಪಾಲಿಗಿದು ಉತ್ತು, ಬಿತ್ತುವ, ಭವಿಷ್ಯದ ಬೆಳೆ ಮೊಳಕೆಯೊಡೆಯುವ ಸಂಭ್ರಮ. ಜನರ ಪಾಲಿಗೆ ರಜೆಯ ಜಾಡ್ಯ ಬಿಟ್ಟು ಮಳೆಗೆ ಉತ್ಸಾಹದ ಕೊಡೆ ಹಿಡಿಯುವ ಕಾಲ.
ಬಿಸಿಲಿಗೆ ಬಾಡಿದ್ದ ಗಿಡ- ಮರಗಳಿಗೆ ಮತ್ತೆ ಜೀವತಳೆವ ಕಾಲ. ಬಿಸಿಲಿಗೆ ಬಾಯಾರಿದ ಭೂಮಿಯ ದಾಹ ಇಂಗುವ ಕಾಲ.
ಸಂತೋಷ ಸಂಭ್ರಮ, ಸಂತೋಷಗಳ ಜತೆ ಅಪಾಯವೂ ತೇಲಿಕೊಂಡು ಬರುತ್ತದೆ. ಜಡಿ ಮಳೆ. ತುಂಬಿ ಹರಿವ ಹಳ್ಳ- ಕೊಳ್ಳಗಳು. ಬೀಸುವ ಗಾಳಿ. ಅದಕ್ಕೆ ನೆಲಕ್ಕೊರಗುವ ಮರಗಳು. ಬಂದೆರಗುವ ಬರಸಿಡಿಲು.
ದಿಢೀರನೆ ಕುಸಿಯುವ ಧರೆ. ಮಳೆಯೊಂದಿಗೇ ಆಗಮಿಸುವ ರೋಗಗಳು.
ಇಂತಹ ಕಾಲ ಈ ವರ್ಷ ನಾಲ್ಕು ದಿನ ಮುಂಚಿತವಾಗಿಯೇ ನೈಋತ್ಯ ಮಾರುತದ ಮೂಲಕ ರಾಜ್ಯ ಪ್ರವೇಶಿಸಿದೆ. ಈ ಬಾರಿ ನಿರೀಕ್ಷಿತ ಮಳೆಯ ಪೈಕಿ ಶೇ.98ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖಾ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.
ಮಹಾನಗರ ಬೆಂಗಳೂರಿನಲ್ಲಿ ಶುಕ್ರವಾರ ಒಂದೇ ದಿನ ಸುರಿದ ಮಹಾಮಳೆ ನಗರದ ಬಹುತೇಕ ಭಾಗಗಳನ್ನು ಜಲಾವೃತಗೊಳಿಸಿದ್ದಲ್ಲದೇ, ಸಾರ್ವಜನಿಕರನ್ನು ಕಂಗೆಡಿಸಿದೆ. ಮಳೆ ಅವಾಂತರಗಳಿಂದಾಗಿ ಸಾರ್ವಜನಿಕರು ಸಂಕಷ್ಟಕ್ಕೀಡಾಗುವುದು ತಪ್ಪಬೇಕಿದ್ದರೆ ರಾಜ್ಯದ ಜನತೆ ಖುದ್ದು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವುದು ಅತ್ಯಗತ್ಯ. ಆ ನಿಟ್ಟಿನಲ್ಲಿ ಕಾಳಜಿ ವ್ಯಕ್ತಪಡಿಸುತ್ತಿರುವ 'ಕನ್ನಡಪ್ರಭ' ನೀಡುತ್ತಿರುವ ಒಂದಷ್ಟು ಸಲಹೆಗಳು ಇಂತಿವೆ.
ಆರೋಗ್ಯ ಸುರಕ್ಷೆಗೆ ಸಲಹೆ
- ಕುಡಿಯುವ ನೀರು ಯಾವುದೇ ಆಗಿರಲಿ, ಅದನ್ನು ಕುದಿಸಿ ಆರಿಸಿ ಬಳಸಿ.
- ಪ್ರಿಡ್ಜ್‌ನಲ್ಲಿಟ್ಟ ತಣ್ಣನೆಯ ಆಹಾರದ ಬದಲು ಬಿಸಿ ಬಿಸಿ ಆಹಾರ ಸೇವಿಸಿ, ಬೆಚ್ಚಗಿರಿ.
- ದ್ವಿಚಕ್ರವಾಹನಗಳಲ್ಲಿ ತೆರಳುವವರು ಕಲುಷಿತ ನೀರು ಮುಖಕ್ಕೆ ರಾಚದಂತೆ ಹಾಗೂ ತಂಗಾಳಿ ಕಿವಿಗೆ ಹೋಗದಂತೆ ಮುಖ ಹಾಗೂ ತಲೆ ಪೂರ್ಣ ಮುಚ್ಚುವಂತಹ ಹೆಲ್ಮೆಟ್ ಧರಿಸಿ.
- ಚಿಕ್ಕ ಮಕ್ಕಳು ಹಾಗೂ ವಯೋವೃದ್ಧರು ಮನೆಯಲ್ಲಿದ್ದರೆ ಹೆಚ್ಚಿನ ಕಾಳಜಿ ವಹಿಸಿ. ಈ ಸಂದರ್ಭದಲ್ಲಿ ಅವರನ್ನು ಶೀತ ಜ್ವರ ಕಾಡುವ ಸಾಧ್ಯತೆ ಹೆಚ್ಚು. ಆಸ್ಪತ್ರೆ- ವೈದ್ಯರು ಹತ್ತಿರದಲ್ಲಿ ಇಲ್ಲದಿದ್ದರೆ ತುರ್ತು ನೆರವಿಗೆ ಒಂದೆರಡು ಶೀತ- ಜ್ವರದ ಮಾತ್ರೆ ಮನೆಯಲ್ಲಿಟ್ಟಿರಿ.
- ರಾಜ್ಯಾದ್ಯಂತ ಡೆಂಘೀ, ಚಿಕೂನ್‌ಗುನ್ಯಾ, ಕಾಲರಾಗಳ ಪ್ರಕರಣಗಳನ್ನು ಕಾಣಸಿದ್ದು ಮನೆ ಸುತ್ತಮುತ್ತ ನೀರು ನಿಲ್ಲದಂತೆ, ಸೊಳ್ಳೆ ಸುಳಿಯದಂತೆ ನೋಡಿಕೊಳ್ಳಿ. ವಿಶೇಷವಾಗಿ ಸೊಳ್ಳೆ ಸಂತಾನಾಭಿವೃದ್ಧಿಗೆ ನಿಮ್ಮ ಮನೆಯಲ್ಲೇ ಅವಕಾಶ ಸಿಗದಂತೆ ಎಚ್ಚರವಹಿಸಿ.
- ಮಳೆಯಲ್ಲಿ ನೆನೆದರೆ ಮನೆಗೆ ತೆರಳಿದ ಕೂಡಲೇ ತಲೆ ಹಾಗೂ ಮೈಯನ್ನು ಪೂರ್ಣ ಒರೆಸಿಕೊಂಡು ಬೆಚ್ಚನೆ ಉಡುಪು ಧರಿಸಿ. ಸಾಧ್ಯವಾದಲ್ಲಿ ಹದವಾದ ಬಿಸಿನೀರಿನಲ್ಲಿ ಒಂದು ಸ್ನಾನ ಮಾಡಿ.
ಈ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿ
- ಮಳೆ ಇರಲಿ ಇಲ್ಲದಿರಲಿ ಕೊಡೆ ಅಥವಾ ರೈನ್ಕೋಟ್ ಸದಾ ನಿಮ್ಮ ಜತೆಗಿರಲಿ.
- ಇವುಗಳನ್ನು ಮರೆತು ಹೋಗಿ ಮಳೆಗೆ ಶಾಪ ಹಾಕಬೇಡಿ. ಮಳೆ ನಮ್ಮ ಜೀವಾಳ
- ಶಾಲೆಗೆ ಹೋಗುವ ಮಕ್ಕಳಿಗೆ ಕೊಡೆಯ ಬದಲು ಮಳೆ ಕೋಟು ಕೊಡಿಸಿ. ಗಾಳಿ ಮಳೆಯಲ್ಲಿ ಸುರಕ್ಷಿತವಾಗಿ ಒದ್ದೆಯಾಗದೇ ಹೋಗಬಹುದು.
- ನೆನೆದ ಬಳಿಕ ಆಗಬಹುದಾದ ಆರೋಗ್ಯದ ಏರುಪೇರುಗಳ ಬಗ್ಗೆ ಕಾಳಜಿವಹಿಸಿ.
- ಮರದ ಕೆಳಗೆ, ವಿದ್ಯುತ್ ಕಂಬದ ಬಳಿ ನಿಲ್ಲಬೇಡಿ. ಅಂಗಡಿ- ಮುಂಗಟ್ಟು ಅಥವಾ ಬಸ್ಸು ನಿಲ್ದಾಣ ಉತ್ತಮ. ಶಾಲಾ ಮಕ್ಕಳಿಗೂ ಇದನ್ನು ತಿಳಿಸಿ.
- ಮನೆ ಆಸುಪಾಸಿನಲ್ಲಿ ತೆರೆದ ಬಾವಿ, ಕಲ್ಲಿನ ಕ್ವಾರಿ ಇದ್ದರೆ, ತಕ್ಷಣ ಅದಕ್ಕೊಂದು ತಾತ್ಕಾಲಿಕ ಆವರಣ ಹಾಕಿಸಿ.
- ಮನೆ ಸುತ್ತಮುತ್ತ ಮರದ ಕೊಂಬೆಗಳೇನಾದರೂ ವಿದ್ಯುತ್ ತಂತಿ ಸ್ಪರ್ಶಿಸುವಂತಿದ್ದರೆ, ವಿದ್ಯುತ್ ಇಲಾಖೆಗೆ ತಿಳಿಸಿ. ಅವರು ತೆರವುಗೊಳಿಸದೇ ಇದ್ದಲ್ಲಿ ಆ ಗಿಡದ ಸಮೀಪ ಬೇರೆಯವರು ಹೋಗದಂತೆ ನೋಡಿಕೊಳ್ಳಿ.
- ಮನೆ ಸುತ್ತಮುತ್ತ, ನೀವು ಸಂಚರಿಸುವ ರಸ್ತೆಗಳಲ್ಲಿ ಶಿಥಿಲಗೊಂಡ ಮರದ ಕೊಂಬೆಗಳು ಕಾಣಿಸಿದಲ್ಲಿ ಸಂಬಂಧಿತ ಕಚೇರಿಗೆ ಕರೆ ಮಾಡಿ ತಿಳಿಸಿ.
- ಸ್ಥಳೀಯ ಪಾಲಿಕೆ, ವಿದ್ಯುತ್ ಸರಬರಾಜು ಕಚೇರಿ, ಜಲಮಂಡಳಿ ಮುಂತಾದವುಗಳ ಸಹಾಯವಾಣಿ ನಂಬರ್ ಮನೆಯಲ್ಲಿ ಬರೆದಿಡಿ.
- ನಗರದಲ್ಲಿರುವವರು ಮನೆಯ ಚಾವಣಿಯಿಂದ ನೀರು ಹರಿದು ವ್ಯರ್ಥವಾಗುವ ಬದಲು ಅವು ಮನೆ ಅಂಗಳದಲ್ಲೇ ಇಂಗುವಂತಹ ವ್ಯವಸ್ಥೆ ಮಾಡಿ. ಇದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆ. ಈಗಲೇ ಮಳೆ ಕೊಯ್ಲು ಪದ್ಧತಿ ಅಳವಡಿಸಿಕೊಂಡು ಮುಂದಿನ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವುದನ್ನು ತಪ್ಪಿಸಿಕೊಳ್ಳಿ.
- ರಾಜ್ಯಾದ್ಯಂತ ರಸ್ತೆಗಳಲ್ಲಿ ಹೊಂಡಗಳು ಸರ್ವೇಸಾಮಾನ್ಯ. ನೀರಿನಿಂದಾಗಿ ಅವು ಅರಿವಿಗೆ ಬರುವುದಿಲ್ಲ. ಈ ಬಗ್ಗೆ ಎಚ್ಚರಇರಲಿ. ಬೇಸಿಗೆಯಲ್ಲಿ ಕಂಡ ಹೊಂಡಕ್ಕೆ ಮಳೆಗಾಲದಲ್ಲಿ ಬೀಳುವಂತಾಗದಿರಲಿ.
- ರವಿಕಾಂತ ಕುಂದಾಪುರ