ಗೆದ್ದ ಶ್ರೀನಿ ಹಠ
ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ತಮ್ಮ ಹಠ ಸಾಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಅಧ್ಯಕ್ಷ ಪದವಿಯಿಂದ ಹಿಂದೆ ...
ನವದೆಹಲಿ/ಚೆನ್ನೈ: ಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ತಮ್ಮ ಹಠ ಸಾಧಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ. ಸದ್ಯಕ್ಕೆ ಅಧ್ಯಕ್ಷ ಪದವಿಯಿಂದ ಹಿಂದೆ ಸರಿಯುವ ಮೂಲಕ ತಮ್ಮ ಟೀಕಾಕಾರರ ಬಾಯಿಗೆ ಬೀಗ ಜಡಿದಿದ್ದಾರೆ.
ಚೆನ್ನೈನಲ್ಲಿ ಭಾನುವಾರ ನಡೆದ ಬಿಸಿಸಿಐ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿರುವ ಶ್ರೀನಿವಾಸನ್, ತಮ್ಮ ಅಳಿಯ ಗುರುನಾಥ್ ಮೇಯಪ್ಪನ್ ಅವರ ವಿರುದ್ಧ ಸ್ಪಾಟ್ ಫಿಕ್ಸಿಂಗ್ ಆರೋಪದ ಬಗ್ಗೆ ಬಿಸಿಸಿಐನ ಸಮಿತಿ ನಡೆಸುತ್ತಿರುವ ತನಿಖೆ ಮುಗಿಯುವವರೆಗೂ ತಾವು ಅಧ್ಯಕ್ಷ ಸ್ಥಾನದಿಂದ ದೂರ ಸರಿಯುವುದಾಗಿ ತಿಳಿಸಿದ್ದಾರೆ.
ಜಗದಾಳೆ ಸ್ಥಾನಕ್ಕೆ ಮತ್ತೊಬ್ಬರು?: ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀನಿವಾಸನ್ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರ ಮೇಲಿನ ಆರೋಪಗಳ ಬಗ್ಗೆ ತನಿಖೆ ನಡೆಸಲು ರಚಿಸಲಾಗಿದ್ದ ತ್ರಿ ಸದಸ್ಯ ತನಿಖಾ ಆಯೋಗದಿಂದ ಸಂಜಯ್ ಜಗದಾಳೆ ಹೊರನಡೆದ ಹಿನ್ನೆಲೆಯಲ್ಲಿ, ಅವರ ಜಾಗಕ್ಕೆ ಮತ್ತೊಬ್ಬರನ್ನು ಆರಿಸಲು ಹೊಸ ಅಧ್ಯಕ್ಷ ದಾಲ್ಮಿಯಾ ನಿರ್ಧರಿಸಿದ್ದಾರೆ.
ವೈರುಧ್ಯದ ಹೇಳಿಕೆ: ಬಿಸಿಸಿಐ ಕಾರ್ಯಕಾರಿಣಿ ಸಭೆಯಲ್ಲಿ 24 ಜನ ಸದಸ್ಯರು ಭಾಗವಹಿಸಿದ್ದರು. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀನಿವಾಸನ್, ತಮ್ಮ ರಾಜಿನಾಮೆಗೆ ಕಾರ್ಯಕಾರಿಣಿ ಸಭೆಯಲ್ಲಿ ಯಾರೂ ಒತ್ತಾಯಿಸಲಿಲ್ಲ ಎಂದರು.ಆದರೆ, ಸಭೆಯ ನಂತರ ಮಾತನಾಡಿದ ಪಂಜಾಬ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಐ.ಎಸ್. ಸಿಂಗ್, ತಾವು ಸಭೆಯಲ್ಲಿ ಶ್ರೀನಿವಾಸನ್ ಅವರ ರಾಜಿನಾಮೆ ಕೇಳಿದ್ದಾಗಿ ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಕಾರ್ಯಕಾರಿಣಿ ಮಂಡಳಿಯ ಹಿರಿಯ ಸದಸ್ಯರು, ಸಭೆಯಲ್ಲಿ ರಾಜಿನಾಮೆ ಎಂಬ ಪದ ಬಳಸಲಿಲ್ಲ ಎಂದು
ಜಗದಾಳೆ, ಶಿರ್ಕೆ ಪರ ಒಲವು: ಕಳೆದೆರಡು ದಿನಗಳ ಹಿಂದೆ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದ ಜಗದಾಳೆ ಹಾಗೂ ಖಚಾಂಚಿ ಅಜಯ್ ಶಿರ್ಕೆಗೆ ತಮ್ಮ ನಿರ್ಧಾರ ಪುನರ್ ಪರಿಶೀಲಿಸಿ, 24 ಗಂಟೆಯೊಳಗೆ ತಮ್ಮ ರಾಜಿನಾಮೆ ವಾಪಸ್ ಪಡೆಯುವಂತೆ ಸೂಚಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಆದರೆ, ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಗದಾಳೆ ಹಾಗೂ ಶಿರ್ಕೆ, ತಾವು ರಾಜಿನಾಮೆ ಹಿಂದೆ ಪಡೆಯುವ ಪ್ರಶ್ನೆಯೇ ಇಲ್ಲವೆಂದು ಹೇಳಿದ್ದಾರೆ.
ಬಿಸಿಸಿಐ ಅಧಿಕೃತ ಪ್ರಕಟಣೆ: ಕಾರ್ಯಕಾರಿಣಿ ಸಭೆಯ ನಂತರ, ಅಧಿಕೃತ ಪ್ರಕಟಣೆಯನ್ನು ಹೊರಡಿಸಿರುವ ಬಿಸಿಸಿಐ, ಅದರಲ್ಲಿ, 'ಶ್ರೀನಿವಾಸನ್ ಅವರು ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿದ್ದು, ಆ ಹಿನ್ನೆಲೆಯಲ್ಲಿ, ಜಗಮೋಹನ್ ದಾಲ್ಮಿಯಾ ಅವರು ಅಧ್ಯಕ್ಷರ ಕರ್ತವ್ಯಗಳನ್ನು ನಿರ್ವಹಿಸಲಿದ್ದಾರೆ. ಶ್ರೀನಿವಾಸನ್ ಅವರು, ಗುರುನಾಥ್ ಮೇಯಪ್ಪನ್ ವಿರುದ್ಧದ ಸ್ಪಾಟ್ ಫಿಕ್ಸಿಂಗ್ ಹಗರಣದ ತನಿಖೆ ಮುಗಿದ ಮೇಲೆ ಅಧ್ಯಕ್ಷಗಾದಿಗೆ ಹಿಂದಿರುಗಲಿದ್ದಾರೆ' ಎಂದು ಪ್ರಕಟಣೆಯಲ್ಲಿ ಹೇಳಿದೆ.
ಸಂಜಯ್ ಜಗದಾಳೆ ಹಾಗೂ ಶಿರ್ಕೆ ಬಗ್ಗೆಯೂ ಪ್ರಕಟಣೆಯಲ್ಲಿ ಉಲ್ಲೇಖ ಮಾಡಿರುವ ಬಿಸಿಸಿಐ, ತಮ್ಮ ರಾಜಿನಾಮೆ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಇಬ್ಬರಲ್ಲೂ ಮನವಿ ಮಾಡಿದೆ.
ಶಿರ್ಕೆ ಅಸಮಾಧಾನ: ಭಾನುವಾರ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಎಲ್ಲವೂ ಶ್ರೀನಿವಾಸನ್ ಅವರ ಆಣತಿಯಂತೇ ನಡೆದಿರುವುದರ ಬಗ್ಗೆ ಅಜಯ್ ಶಿರ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರೀನಿವಾಸನ್ ಅವರ ವಿರುದ್ಧವಾಗಿ ದೊಡ್ಡ ಅಲೆಯೆದ್ದಿದ್ದರೂ, ಸಭೆಯಲ್ಲಿ ಅದರ ಜೋರು ಕಳೆದುಕೊಂಡಿದ್ದರ ಬಗ್ಗೆಯೂ ಅವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಸಭೆಯ ಸಾರಾಂಶದ ಬಗ್ಗೆ ಮಾಧ್ಯಮಗಳೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, 'ಹೊಸದಾಗಿ ರಚಿಸಲ್ಪಡುವ 'ಹಂಗಾಮಿ' ಏರ್ಪಾಟು ಯಾವ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕು. ಆದರೆ, ಈಗ ಸಲ್ಲಿಸಲಾಗಿರುವ ರಾಜಿನಾಮೆಯನ್ನು ಹಿಂಪಡೆಯಲಾರೆ' ಎಂದು ಅವರು ತಿಳಿಸಿದರು.
ಹರಿಹಾಯ್ದ ಬಿಂದ್ರಾ: ಕಾರ್ಯಕಾರಣಿ ಸಭೆಯಿಂದ ಹೊರಬಂದ ನಂತರ, ಮಾಧ್ಯಮಗಳ ಮುಂದೆ ಕಿಡಿಕಾರಿದ ಪಂಜಾಬ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ನೇರವಾಗಿ ಜೇಟ್ಲಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ದಿನಗಳ ಹಿಂದೆ, ಶ್ರೀನಿವಾಸನ್ ಅವರ ರಾಜಿನಾಮೆ ಕೇಳಿದ್ದ ಜೇಟ್ಲಿ, ಸಭೆಯಲ್ಲಿ ಶ್ರೀನಿವಾಸನ್ ಅವರ ಬೆಂಬಲಿಗರಾದ ದಾಲ್ಮಿಯಾ ಅವರನ್ನೇ ಅಧ್ಯಕ್ಷಗಾದಿಗೆ ತಂದು ಕೂರಿಸಲು ಶ್ರೀಕಾರ ಹಾಕಿದರು ಎಂದು ಬೇಸರ ವ್ಯಕ್ತಪಡಿಸಿದರು. ಅಲ್ಲದೇ, 'ಶ್ರೀನಿವಾಸನ್ ಅವರು ನಿಜಕ್ಕೂ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲಿಲ್ಲ.
ಕೇವಲ ಒಂದು ತಿಂಗಳ ಅವಧಿಗೆ ಮಾತ್ರ ಅವರು ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿದಿದ್ದಾರೆ. ಇದನ್ನು ಒಪ್ಪಲಾಗದು. ನಾವು ಶ್ರೀನಿವಾಸನ್ ಅವರ ಪದಚ್ಯುತಿ ಸೇರಿದಂತೆ ಹಲವಾರು ವಿಷಯಗಳನ್ನು ನಿರೀಕ್ಷಿಸಿದ್ದೆವು. ಆದರೆ, ಆ ರೀತಿ ಆಗಲಿಲ್ಲ.
ನಾನು ಸಭೆಯಲ್ಲಿ, ಶ್ರೀನಿವಾಸನ್ ಅವರು, ಸೆಪ್ಟಂಬರ್ ತಿಂಗಳವರೆಗಾದರೂ, ಅಧ್ಯಕ್ಷಗಿರಿಯಿಂದ ಕೆಳಗಿಳಿಯಬೇಕು ಎಂದು ವಾದಿಸಿದ್ದೆ. ನನ್ನ ವಾದವೂ ಫಲಿಸಲಿಲ್ಲ' ಎಂದು ಅವರು ತಿಳಿಸಿದರು.
ಪವಾರ್‌ಗೆ ಮುಖಭಂಗ
ಕಾರ್ಯಕಾರಿಣಿ ಸಭೆಯಲ್ಲಿ, ಶ್ರೀನಿವಾಸನ್ ಅವರ ಮೇಲೆ ಒತ್ತಡ ಹೇರಿ ಅವರನ್ನು ಅಧ್ಯಕ್ಷಗಿರಿಯಿಂದ ಕೆಳಗಿಳಿಸಿ, ಆ ಜಾಗಕ್ಕೆ ತಮಗೆ ಬೇಕಾದ ವ್ಯಕ್ತಿ (ಶಶಾಂಕ್ ಮನೋಹರ್) ಯನ್ನು ತಂದು ಕೂರಿಸಲು ಶರದ್ ಪವಾರ್ ಅವರ ಬಣ ಸಿದ್ಧತೆ ನಡೆಸಿತ್ತು. ಆದರೆ, ಸಭೆಯಲ್ಲಿ ಆಗಿದ್ದೇ ಬೇರೆ. ಅಧ್ಯಕ್ಷ ಸ್ಥಾನದಿಂದ ಶ್ರೀನಿವಾಸನ್ ಅವರು ಹಿಂದೆ ಸರಿಯಲು ನಿರ್ಧರಿಸಿದ ಬೆನ್ನಲ್ಲೇ ಆ ಜಾಗಕ್ಕೆ ಸೂಕ್ತ ವ್ಯಕ್ತಿಯನ್ನು ಸೂಚಿಸಲು ಸಭೆಯ ಸದಸ್ಯರಿಗೆ ಸೂಚಿಸಲಾಯಿತು. ಬಿಸಿಸಿಐ ಉಪಾಧ್ಯಕ್ಷ ಅರುಣ್ ಜೇಟ್ಲಿ ಅಧ್ಯಕ್ಷ ಗಾದಿಗೆ ಜಗಮೋಹನ್ ದಾಲ್ಮಿಯಾ ಅವರ ಹೆಸರನ್ನು ಸೂಚಿಸಿದರು. ತಕ್ಷಣವೇ ಪ್ರಮುಖ ಸದಸ್ಯರಾದ ರಾಜೀವ್ ಶುಕ್ಲಾ, ಅನುರಾಗ್ ಠಾಕೂರ್ ಹಾಗೂ ಇನ್ನಿತರ ಸದಸ್ಯರು ಜೇಟ್ಲಿ ಅವರ ಆಯ್ಕೆಗೆ ಬೆಂಬಲ ಸೂಚಿಸಿದರು. ಇದಕ್ಕೆ ಪವಾರ್ ಬಣ ತೀವ್ರವಾದ ವಿರೋಧ ವ್ಯಕ್ತಪಡಿಸಿತಾದರೂ, ಅವರಿಗೆ ಸೂಕ್ತ ಬೆಂಬಲ ಸಿಗದಿದ್ದರಿಂದ ದಾಲ್ಮಿಯಾರನ್ನೇ ಹಂಗಾಮಿ ಅಧ್ಯಕ್ಷ ಸ್ಥಾನಕ್ಕೆ ಆರಿಸಲಾಗಿದೆ.
ರಾಜಿನಾಮೆ ಕೇಳಿಲ್ಲ
ನನ್ನ ರಾಜಿನಾಮೆಯನ್ನು ಯಾರೂ ಕೇಳಿಲ್ಲ. ನನ್ನ ಅಳಿಯನ ನೇತೃತ್ವದಲ್ಲಿರುವ ಫ್ರಾಂಚೈಸಿ
ವಿರುದ್ಧ ಕೇಳಿ ಬಂದಿರುವ ಆರೋಪಗಳ ಬಗ್ಗೆ ನಡೆಯುತ್ತಿರುವ ಸ್ವತಂತ್ರ ತನಿಖೆ ಮುಕ್ತಾಯವಾಗುವ ವರೆಗೆ ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ದೂರ ಇರುವೆ.
- ಎನ್.ಶ್ರೀನಿವಾಸನ್
ದಾಲ್ಮಿಯಾಗೆ ಅಧಿಕಾರ
ಜಗಮೋಹನ್ ದಾಲ್ಮಿಯಾ ಅವರು ಬಿಸಿಸಿಐನ ಮಧ್ಯಂತರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಶ್ರೀನಿವಾಸನ್ ಅವರ ಅನುಪಸ್ಥಿತಿಯಲ್ಲಿ ಅಧ್ಯಕ್ಷರ ಕಾರ್ಯಭಾರ ನಿರ್ವಹಿಸಲಿದ್ದಾರೆ. ಅಧ್ಯಕ್ಷಗಿರಿಗೆ ರಾಜಿನಾಮೆ ನೀಡಬೇಕೆಂದು ಬರುತ್ತಿದ್ದ ಒತ್ತಡವನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಜಯಗಳಿಸಿರುವ ಶ್ರೀನಿವಾಸನ್ ಆಶಯದಂತೇ ಕಾರ್ಯಕಾರಣಿ ಮಂಡಳಿ ಸಭೆ ನಡೆದಿದೆ. ಸಭೆಗೂ ಮುನ್ನ ಶ್ರೀನಿವಾಸನ್ ಹಾಗೂ ಪವಾರ್ ಬೆಂಬಲಿಗರ ಮಧ್ಯೆ ನಡೆದಿರುವ 'ಒಪ್ಪಂದ'ದನ್ವಯ ದಾಲ್ಮಿಯಾ ನಾಲ್ವರು ಪದಾಧಿಕಾರಿಗಳೊಂದಿಗೆ ಬಿಸಿಸಿಐನ ನೊಗ ಹೊತ್ತಿದ್ದಾರೆ. ತನಿಖೆ ಬಳಿಕ ಅಧ್ಯಕ್ಷಗಿರಿಗೆ ಮರಳುವ ಶ್ರೀನಿ ಇಂಗಿತಕ್ಕೆ ಮೊದಲ ಜಯ ಸಿಕ್ಕಂತಾಗಿದೆ.