ಕನ್ನಡಪ್ರಭ ವಾರ್ತೆ , ಬೆಂಗಳೂರು , ಜೂ.3
ಭ್ರಷ್ಟ ಹಾಗೂ ಕಳಂಕ ಅಧಿಕಾರಿಗಳಿಂದ ದೂರ ಇರಿ. ಇಂತಹ ಯಾವುದೇ ಅಧಿಕಾರಿಯನ್ನು ತಮ್ಮ ಹತ್ತಿರ ಬಿಟ್ಟುಕೊಳ್ಳಬೇಡಿ...
ರಾಜ್ಯ ಕಾಂಗ್ರೆಸ್ ಸರ್ಕಾರದ ಸಚಿವರಿಗೆ ಪಕ್ಷದ ಹೈಕಮಾಂಡ್ ರವಾನಿಸಿರುವ ಸ್ಪಷ್ಟ ಸಂದೇಶ ಇದು.
ವಿಧಾನಸಭೆ ಅಧಿವೇಶನ ಮುಗಿದ ಕೂಡಲೇ ಸಚಿವರ ಆಪ್ತ ಕಾರ್ಯದರ್ಶಿ, ಸಲಹೆಗಾರರು ಸೇರಿದಂತೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಇತರ ಪ್ರಮುಖ ಖಾತೆಗಳಿಗೆ ಅಧಿಕಾರಿಗಳ ನಿಯೋಜನೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಯಾವುದೇ ಕಳಂಕ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಬಾರದು ಎಂದು ಹೈಕಮಾಂಡ್ ಕಟ್ಟಪ್ಪಣೆ ಮಾಡಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿನ ಭ್ರಷ್ಟಾಚಾರಕ್ಕೆ ಅಧಿಕಾರಿಗಳು ಕಾರಣ. ಪ್ರಧಾನ ಕಾರ್ಯದರ್ಶಿಗಳ ಮಟ್ಟದಿಂದ ಹಿಡಿದು ಆಪ್ತ ಕಾರ್ಯದರ್ಶಿವರೆಗೆ ಇಂತಹ ಅಧಿಕಾರಿಗಳಿದ್ದರು. ಇಂತಹ ಭ್ರಷ್ಟ ಅಧಿಕಾರಿಗಳು ಮತ್ತೆ ಸಚಿವರ ಕಚೇರಿ ಹಾಗೂ ಇಲಾಖೆಯಲ್ಲಿ ಸೇರಿಕೊಳ್ಳುವ ಹಂತದಲ್ಲಿದ್ದಾರೆ. ಹೀಗಾಗಿ ಇಂತಹ ಪ್ರಕ್ರಿಯೆಗೆ ಅವಕಾಶ ನೀಡಬಾರದು ಎಂದು 29 ಸಚಿವರಿಗೂ ಹೈಕಮಾಂಡ್ ಸಂದೇಶ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ 27 ಸಚಿವರು ಜೂನ್ 18ರಂದು ಪ್ರತಿಜ್ಞೆ ಸ್ವೀಕರಿಸಿದರು. ಎಸ್.ಆರ್. ಪಾಟೀಲ್ ಮೇ 25ರಂದು ಅಧಿಕಾರ ಸ್ವೀಕರಿಸಿದರು. ಇದಾದ ನಂತರ ಖಾತೆಗಳು ಹಂಚಿಕೆಯಾದವು. ಆದರೆ, ಮೇ 29ರಿಂದಲೇ ವಿಧಾನಸಭೆ ಅಧಿವೇಶನ ಆರಂಭವಾದ್ದರಿಂದ ಅವರ ಆಪ್ತ ಕಾರ್ಯದರ್ಶಿ ಅಥವಾ ಇಲಾಖೆಗೆ ಸಂಬಂಧಿಸಿದ ಅಧಿಕಾರಿಗಳ ವರ್ಗಾವಣೆ ಅಥವಾ ನಿಯೋಜನೆ ಕಾರ್ಯ ಆಗಿರಲಿಲ್ಲ. ಕೆಲವು ನೇಮಕಗಳಾಗಿದ್ದವು, ಕೆಲವರು ಹಿಂದೆ ಇದ್ದವರೇ ಇದ್ದಾರೆ. ಸಚಿವರು ಕೂಡ ತಮ್ಮ ಖಾತೆ ವ್ಯಾಪ್ತಿಯ ಇಲಾಖೆಗಳನ್ನು ಅರಿತುಕೊಳ್ಳುವ ಹಂತದಲ್ಲಿದ್ದರಿಂದ ವರ್ಗಾವಣೆ ಅಥವಾ ಆಯ್ಕೆ ಹೆಚ್ಚಿನ ಗಮನಹರಿಸಿರಲಿಲ್ಲ. ನೇಮಿಸಿಕೊಳ್ಳಲು ಹಾಗೂ ವರ್ಗಾವಣೆ ಮಾಡಿಸಿಕೊಳ್ಳುವ ಒತ್ತಡಗಳು ಎಲ್ಲ ಮೂಲೆಯಿಂದಲೂ ಸಚಿವರ ಮೇಲೆ ಆಗುತ್ತಲೇ ಇದೆ.
ರಾಜ್ಯ ವಿಧಾನಸಭೆ ಅಧಿವೇಶನ ಜೂನ್ 7ರಂದು ಮುಕ್ತಾಯಗೊಳ್ಳುವುದರಿಂದ ನಂತರ ಪ್ರಧಾನ ಕಾರ್ಯದರ್ಶಿಗಳ ಮಟ್ಟದಿಂದ ವರ್ಗಾವಣೆ ಕಾರ್ಯ ಆರಂಭವಾಗುತ್ತದೆ. ಇದಕ್ಕೂ ಮುನ್ನವೇ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಂಡು ಈ ಆದೇಶ ನೀಡಿದೆ ಎನ್ನಲಾಗಿದೆ.