ಪಾರ್ಟಿ, ಚಿಯರ್ ಗರ್ಲ್ಸ್‌ಗೆ ನಿಷೇಧ ?
'ಐಪಿಎಲ್ ಪಂದ್ಯಗಳ ನಂತರ ನಡೆಯುವ ಲೇಟ್‌ನೈಟ್ ಪಾರ್ಟಿಗಳು ಹಾಗೂ ಚಿಯರ್ ಗರ್ಲ್ಸ್‌ಗಳನ್ನು ನಿಷೇಧಿಸಿದರೆ...
ನವದೆಹಲಿ: 'ಐಪಿಎಲ್ ಪಂದ್ಯಗಳ ನಂತರ ನಡೆಯುವ ಲೇಟ್‌ನೈಟ್ ಪಾರ್ಟಿಗಳು ಹಾಗೂ ಚಿಯರ್ ಗರ್ಲ್ಸ್‌ಗಳನ್ನು ನಿಷೇಧಿಸಿದರೆ, ದೇಶದ ದೊಡ್ಡ ಕ್ರಿಕೆಟ್ ಪಂದ್ಯಾವಳಿಗೆ ಅಂಟಿಕೊಂಡಿರುವ ಕಳಂಕವನ್ನು ತೊಡೆದುಹಾಕಬಹುದು' ಎಂದು ಬಿಸಿಸಿಐನ ಮಧ್ಯಂತರ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಅಭಿಪ್ರಾಯಪಟ್ಟಿದ್ದಾರೆ.
ಬಿಸಿಸಿಐಗೆ ಮಧ್ಯಂತರ ಅಧ್ಯಕ್ಷರಾಗಿ ಆಯ್ಕೆಯಾದ ನಂತರ, ಇದೇ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿದ ಅವರು, ಭಾರತೀಯ ಕ್ರಿಕೆಟ್ ಕಳೆದುಕೊಂಡಿರುವ ಹೆಸರನ್ನು ಮತ್ತೆ ಸ್ಥಾಪಿಸುವುದಾಗಿ ತಿಳಿಸಿದರು.
ಈ ನಿಟ್ಟಿನಲ್ಲಿ, ಹಲವಾರು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದ ಅವರು, ಈ ನಿಟ್ಟಿನಲ್ಲಿ ಮೊದಲು ಐಪಿಎಲ್‌ನ ತಡರಾತ್ರಿ ಪಾರ್ಟಿಗಳನ್ನು ಹಾಗೂ ಚಿಯರ್ ಗರ್ಲ್‌ಗಳನ್ನು ನಿಷೇಧಿಸಲು ಚಿಂತನೆ ನಡೆಸಿರುವುದಾಗಿ ತಿಳಿಸಿದರು. 'ಯಾವುದೋ ಒಂದು ಮ್ಯಾಜಿಕ್ ಮೂಲಕ ನಾವು ಕ್ರಿಕೆಟ್‌ಗೆ ಅಂಟಿಕೊಂಡಿರುವ ಕಳಂಕವನ್ನು ತೊಡೆದು ಹಾಕಲು ಸಾಧ್ಯವಿಲ್ಲ. ಸೂಕ್ತ ಕ್ರಮಗಳನ್ನು ಕೈಗೊಳ್ಳುವುದರಿಂದ ಇದನ್ನು ಸಾಧಿಸಬಹುದು. ಈ ನಿಟ್ಟಿನಲ್ಲಿ ನಾವು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇನೆ' ಎಂದು ತಿಳಿಸಿದರು.
ಶಿರ್ಕೆ, ಜಗದಾಳೆಗೆ ಮತ್ತಷ್ಟು ಸಮಯ: ಏತನ್ಮಧ್ಯೆ, ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದ ಸಂಜಯ್ ಜಗದಾಳೆ ಹಾಗೂ ಖಜಾಂಚಿ ಹುದ್ದೆಗೆ ರಾಜಿನಾಮೆ ಸಲ್ಲಿಸಿದ್ದ ಅಜಯ್ ಶಿರ್ಕೆ ಅವರ ಮನವೊಲಿಕೆಗೆ ಪ್ರಯತ್ನಿಸಲಾಗಿದೆ ಎಂದು ಹೇಳಿದ ದಾಲ್ಮಿಯಾ, ಬಿಸಿಸಿಐನ ಈ ಪ್ರಮುಖ ಹುದ್ದೆಗಳಿಗೆ ವಾಪಸ್ಸಾಗುವಂತೆ ಅವರನ್ನು ಕೇಳಿಕೊಳ್ಳಲಾಗಿದೆ. ಭಾನುವಾರ ನಡೆದ ಕಾರ್ಯಕಾರಣಿ ಸಭೆಯಲ್ಲಿ ಅವರು ಸಲ್ಲಿಸಿರುವ ರಾಜಿನಾಮೆ ಹಿಂಪಡೆಯುಂತೆ ಸೂಚಿಸಲಾಗಿತ್ತು. ಅದಕ್ಕಾಗಿ 24 ಗಂಟೆಗಳ ಗಡುವನ್ನೂ ನೀಡಲಾಗಿತ್ತು.
ಆದರೆ, ಅವರಿಂದ ಯಾವ ಉತ್ತರವೂ ಸಿಕ್ಕಿಲ್ಲ. ಸಂಧಾನ ಪ್ರಕ್ರಿಯೆಗಳು ಮುಂದುವರೆದಿದ್ದು, ಅವರಿಗೆ ತಮ್ಮ ರಾಜಿನಾಮೆಯನ್ನು ಹಿಂಪಡೆಯಲು ಇನ್ನೂ 24 ಗಂಟೆಗಳನ್ನು ನೀಡಲಾಗಿದೆ ಎಂದರು.