ಶಾಸಕರ ಚುನಾವಣಾ ವೆಚ್ಚ ಮೊದಲ ವರ್ಷವೇ ಜಮಾ!
ಶಾಸಕರಾಗಲು ಮಾಡಿದ ವೆಚ್ಚ ಸರ್ಕಾರದಿಂದ ಒಂದೇ ವರ್ಷದಲ್ಲಿ ವಾಪಸ್...ಅಚ್ಚರಿ ಎನಿಸಿದರೂ ಸತ್ಯ. ಶಾಸಕರಾಗಲು...
ಕನ್ನಡಪ್ರಭ ವಾರ್ತೆ , ಬೆಂಗಳೂರು , ಜೂ.3
ಶಾಸಕರಾಗಲು ಮಾಡಿದ ವೆಚ್ಚ ಸರ್ಕಾರದಿಂದ ಒಂದೇ ವರ್ಷದಲ್ಲಿ ವಾಪಸ್...
ಅಚ್ಚರಿ ಎನಿಸಿದರೂ ಸತ್ಯ. ಶಾಸಕರಾಗಲು ಕೋಟ್ಯಂತರ ರುಪಾಯಿ ವೆಚ್ಚ ಮಾಡಿದ್ದಾರಲ್ಲ, ಅದೆಲ್ಲ ಮರುಪಾವತಿ ಆಗಲಿದೆಯೇ? ಈ ಪ್ರಶ್ನೆಗೆಲ್ಲ ಅವಕಾಶವಿಲ್ಲ. ಆದರೆ ಶಾಸಕರಾಗಲು ಮಾಡಿದ 'ಅಧಿಕೃತ ವೆಚ್ಚ' ಮಾತ್ರ ಮರುಪಾವತಿಯಾಗಲಿದೆ. ಚುನಾವಣೆ ಆಯೋಗ ನಿಗದಿಪಡಿಸಿರುವ ಪ್ರತಿ ಅಭ್ಯರ್ಥಿಯ ಚುನಾವಣೆ ವೆಚ್ಚ 16 ಲಕ್ಷ ರುಪಾಯಿ. ಇದು ಒಂದೇ ವರ್ಷದಲ್ಲಿ ಶಾಸಕರ ಖಾತೆಗೆ ಸಂದಾಯವಾಗುತ್ತದೆ.
ಇದೇನು? ಚುನಾವಣೆ ವೆಚ್ಚವನ್ನೂ ಮರುಪಾವತಿ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತರಾತುರಿಯಲ್ಲಿ ನಿರ್ಧರಿಸಿಬಿಟ್ಟರಾ? ಎಂದು ಭಾವಿಸುವ ಅಗತ್ಯವಿಲ್ಲ. ಶಾಸಕರಾದವರಿಗೆ ಸಿಗುವ ವೇತನ ಹಾಗೂ ಸೌಲಭ್ಯಗಳನ್ನು ಒಟ್ಟುಗೂಡಿಸಿದರೆ 'ಅಧಿಕೃತ ಚುನಾವಣೆ ವೆಚ್ಚ' ಮೀರುತ್ತದೆ. ಇದಷ್ಟೇ ಅಲ್ಲ, ಇನ್ನಷ್ಟು ಸೌಲಭ್ಯಗಳು ಐದು ವರ್ಷವೂ ಸಿಗುತ್ತವೆ.
ಜೀವನಪೂರ್ತಿ ಸೌಲಭ್ಯ: ಐದು ವರ್ಷಕ್ಕೇ ಈ ಎಲ್ಲ ಹಣ ಸಂದಾಯ ಅಥವಾ ಸೌಲಭ್ಯಗಳು ಮುಗಿಯುವುದಿಲ್ಲ. ಶಾಸಕನಾಗಿ 5 ವರ್ಷದ ಅವಧಿ ಪೂರ್ಣಗೊಳಿಸಿದರೆ ಸಾಕು. ಜೀವನಪೂರ್ತಿ ಸೌಲಭ್ಯಗಳು ಲಭ್ಯ. ಶಾಸಕರಾಗಿ ಆಯ್ಕೆಯಾದ ದಿನದಿಂದ ವೇತನ ಹಾಗೂ ಭತ್ಯೆಗಳು ಆರಂಭವಾಗುತ್ತವೆ. ಪ್ರತಿ ತಿಂಗಳು ವೇತನ, ದೂರವಾಣಿ, ಅಂಚೆ ವೆಚ್ಚ, ದೂರವಾಣಿ, ಕ್ಷೇತ್ರ ಭತ್ಯೆ ಎಂದು ಒಟ್ಟು 90 ಸಾವಿರ ರುಪಾಯಿ ಶಾಸಕರ ಖಾತೆಗೆ ಸಂದಾಯವಾಗುತ್ತದೆ. ಇದಲ್ಲದೆ, ಯಾವುದೇ ಸಭೆಗೆ ಶಾಸಕರು ಹಾಜರಾದರೆ ದಿನಭತ್ಯೆಯೂ ಲಭಿಸುತ್ತದೆ. ರಾಜ್ಯದಲ್ಲಿ ಸಭೆ ನಡೆದರೆ 1000, ಹೊರ ರಾಜ್ಯವಾದರೆ 1500. ಇಷ್ಟಲ್ಲದೆ, ಸಭೆಗಾಗಿ ಶಾಸಕರು ಪ್ರಯಾಣ ಬೆಳೆಸಿದರೆ ಪ್ರತಿ ಕಿ.ಮೀ.ಗೆ 20 ನೀಡಲಾಗುತ್ತದೆ.
ಪ್ರತಿ ವರ್ಷ ಶಾಸಕರು ತಮ್ಮ ಒಬ್ಬರು ಜತೆಗಾರರೊಂದಿಗೆ ವಿಮಾನ ಅಥವಾ ರೈಲಿನಲ್ಲಿ ಪ್ರಯಾಣ ಮಾಡಲು 2 ಲಕ್ಷ ಭತ್ಯೆ ನೀಡಲಾಗುತ್ತದೆ. ಏಪ್ರಿಲ್ ಹಾಗೂ ಅಕ್ಟೋಬರ್ನಲ್ಲಿ 2 ಕಂತುಗಳಾಗಿ ಶಾಸಕರ ಖಾತೆಗೆ ಸಂದಾಯವಾಗುತ್ತದೆ.
ಕೆಎಸ್ಆರ್ಟಿಸಿಯಲ್ಲಿ ಸಂಪೂರ್ಣ ಉಚಿತವಾಗಿ ಎಷ್ಟು ಬಾರಿಯಾದರೂ ಪ್ರಯಾಣ ಮಾಡಬಹುದು.
ಶಾಸಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಆರೋಗ್ಯ ಸೌಲಭ್ಯ ಸಂಪೂರ್ಣ ಉಚಿತ. ಸರ್ಕಾರಿ ಆಸ್ಪತ್ರೆ ಸೇರಿದಂತೆ ರಾಜ್ಯದಲ್ಲಿರುವ ಪ್ರಮುಖ ಆಸ್ಪತ್ರೆಗಳಲ್ಲಿ ಆರೋಗ್ಯ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ರಾಜ್ಯ ಸಚಿವಾಲಯದ ಪಟ್ಟಿಯಲ್ಲಿಲ್ಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಅದನ್ನು ಮರುಪಾವತಿಸಲಾಗುತ್ತದೆ. ಇದು ಎಲ್ಲ ವಿಧದ ಆರೋಗ್ಯ ಚಿಕಿತ್ಸೆಗೂ ಅನ್ವಯ.
ಕಂಪ್ಯೂಟರ್ಗೂ ಕಾಸು: ಶಾಸಕರು ಕಂಪ್ಯೂಟರ್ ಖರೀದಿಸಲು 50 ಸಾವಿರ ರುಪಾಯಿಗಳನ್ನು ನೀಡಲಾಗುತ್ತದೆ. ಈ ಕಂಪ್ಯೂಟರ್ ಅನ್ನು ವಾಪಸ್ ನೀಡಬೇಕಾದ ಅಗತ್ಯ ಇಲ್ಲ. ಶಾಸಕರದ್ದೇ ಕಂಪ್ಯೂಟರ್ ಆಗಿ ಶಾಶ್ವತವಾಗಿ ಅವರಲ್ಲಿ ಉಳಿಯುತ್ತದೆ. ಇದಲ್ಲದೆ, ಮನವಿ ಆಧಾರದಲ್ಲಿ ಮಿಲಿಟರಿ ಅಥವಾ ರಕ್ಷಣಾ ಇಲಾಖೆಯಿಂದ ಜೀಪ್ ಅಥವಾ ಮೋಟಾರ್ ಸೈಕಲ್ ಖರೀದಿಸಬಹುದು. ಅಡುಗೆ ಅನಿಲ ಸಂಪರ್ಕ (ಎಲ್ಪಿಜಿ)ವನ್ನು ಆದ್ಯತೆ ಮೇರೆಗೆ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ನೀಡುತ್ತದೆ.
ಶಾಸಕರಿಗೆ ಮೋಟಾರು ವಾಹನ ತೆಗೆದುಕೊಳ್ಳಲು ಸರಳಬಡ್ಡಿ ಶೇ.7ರಂತೆ 10 ಲಕ್ಷ ಮುಂಗಡ ಸಾಲ ನೀಡಲಾಗುತ್ತದೆ. ಮೋಟಾರು ಸೈಕಲ್ ಖರೀದಿಸಲು 8000 ನೀಡಲಾಗುತ್ತದೆ. ಬೆಂಗಳೂರಿನಲ್ಲಿರುವ ಶಾಸಕರ ಭವನದಲ್ಲಿನ ಏಕ ಕೋಣೆಯ ಕೊಠಡಿಗೆ ಪ್ರತಿ ತಿಂಗಳಿಗೆ 100ರ ಬಾಡಿಗೆಯಲ್ಲಿ ಒದಗಿಸಲಾಗುತ್ತದೆ. ಎರಡು ಕೋಣೆಗೆ 200, ಕುಟುಂಬದ ಫ್ಲ್ಯಾಟ್ಗೆ 300 ದರದಲ್ಲಿ ಒದಗಿಸಲಾಗುತ್ತದೆ. ಈ ಕೊಠಡಿಯಲ್ಲಿ ಒಂದು ದೂರವಾಣಿ ಸೌಲಭ್ಯವೂ ಇರುತ್ತದೆ. ಇದೇ ಶಾಸಕರ ಭವನದಲ್ಲಿ ಅತ್ಯಾಧುನಿಕ 'ಹೆಲ್ತ್ಕ್ಲಬ್' ಬಳಕೆಯೂ ಉಚಿತ. ಅಧಿವೇಶನದ ಸಮಯದಲ್ಲಿ ವಾರ್ತಾ ಪತ್ರಿಕೆಗಳೂ ಉಚಿತ.
ಶಾಸಕರೊಬ್ಬರಿಗೆ ಇಷ್ಟೆಲ್ಲ ಪ್ರಯೋಜನಗಳು, ಸೌಲಭ್ಯಗಳಿವೆ. ಎಲ್ಲವನ್ನೂ ಕೂಡಿ, ಗುಣಿಸಲು ಸಾಧ್ಯವಿಲ್ಲ. ಏಕೆಂದರೆ ಕೆಲವು ಹಣದ ರೂಪದಲ್ಲಿದ್ದರೆ, ಇನ್ನು ಹಲವು ಸೌಲಭ್ಯಗಳಾಗಿವೆ. ಹೀಗಾಗಿ, ಒಂದು ಬಾರಿ ಶಾಸಕನಾದರೆ ವರ್ಷಕ್ಕೆ 25 ಲಕ್ಷಕ್ಕೂ ಹೆಚ್ಚು ಮೊತ್ತದ ಸೌಲಭ್ಯಕ್ಕೆ ಪಾತ್ರರಾಗುತ್ತಾರೆ. ಅಂದರೆ, ವರ್ಷವೊಂದಕ್ಕೆ ನಮ್ಮ 224 ಶಾಸಕರಿಗೆ 56 ಕೋಟಿಗೂ ಹೆಚ್ಚು ವೆಚ್ಚವಾಗಲಿದೆ. ಇದೆಲ್ಲವನ್ನು ಕರ್ನಾಟಕ ಸಚಿವಾಲಯದಿಂದ ಭರಿಸಲಾಗುತ್ತದೆ.
ತಿಂಗಳಿಗೆ ಸಿಗುವ ಮೊತ್ತ
ವೇತನ 20,000
ದೂರವಾಣಿ ಶುಲ್ಕ 15,000
ಕ್ಷೇತ್ರ ಭತ್ಯೆ 15,000
ಅಂಚೆ ವೆಚ್ಚ 5,000
ಕೊಠಡಿ ಸಹಾಯಕನ ವೇತನ 10,000
ಕ್ಷೇತ್ರ ಪ್ರಯಾಣ ಭತ್ಯೆ 25,000
ಒಟ್ಟು 90,000
ತಪ್ಪದ ಭತ್ಯೆ
ಒಂದು ಬಾರಿ ಶಾಸಕರಾಗಿ ಐದು ವರ್ಷದ ಅವಧಿ ಪೂರೈಸಿದರೆ ಸಾಕು. ಅವರು ಶಾಸಕರಾಗಿದ್ದಾಗ ಲಭ್ಯವಿದ್ದ ಬಹುತೇಕ ಸೌಲಭ್ಯಗಳು ಅವರ ಜೀವನಪೂರ್ತಿ ಮುಂದುವರಿಯುತ್ತವೆ. ಮಾಜಿ ಶಾಸಕರಿಗೆ ಪ್ರತಿ ತಿಂಗಳು 15 ಸಾವಿರ ಪಿಂಚಣಿ ನೀಡಲಾಗುತ್ತದೆ. ಪ್ರತಿ ವರ್ಷ ಇದು ಹೆಚ್ಚಾಗುತ್ತಾ ಹೋಗುತ್ತದೆ. ಗರಿಷ್ಠ 25 ಸಾವಿರ ಪಿಂಚಣಿ ಲಭ್ಯ. ಶಾಸಕರ ನಂತರ ಅವರ ಕುಟುಂಬಕ್ಕೂ ಶೇ. 50ರಷ್ಟು ಪಿಂಚಣಿ ನೀಡಲಾಗುತ್ತದೆ. ಮಾಜಿಯಾದರೂ ಗುರುತಿನ ಚೀಟಿಯೂ ಆಗಿರುವ ಬಸ್ ಪಾಸ್ ನೀಡಲಾಗುವುದರಿಂದ ರಾಜ್ಯಾದ್ಯಂತ ಉಚಿತವಾಗಿ ಸಂಚರಿಸಬಹುದು. ರೈಲಿನಲ್ಲಿ ತನ್ನ ಒಬ್ಬರು ಸಹಾಯಕರೊಂದಿಗೆ ಪ್ರಯಾಣಿಸಲು ಪ್ರತಿ ವರ್ಷ 35 ಸಾವಿರ ನೀಡಲಾಗುತ್ತದೆ. ಮಾಜಿ ಶಾಸಕರು ಹಾಗೂ ಅವರ ಕುಟುಂಬ ಸದಸ್ಯರಿಗೆ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ.
-ಕೆರೆ ಮಂಜುನಾಥ್