ರೈತರ ಜಮೀನಿಗೆ ಮಾರುಕಟ್ಟೆ ದರ
ನವದೆಹಲಿ: ಹಲವು ಯೋಜನೆಗಳಿಂದ ಭೂಮಿ ಕಳೆದುಕೊಳ್ಳಲಿರುವ ರೈತರಿಗೆ ಕೇಂದ್ರ ಸಂಪುಟ ಸಭೆ ಮಂಗಳವಾರ ಸಿಹಿ ಸುದ್ದಿ ನೀಡಿದೆ. ಇದುವರೆಗೆ ಕೇವಲ ನೆಪ ಮಾತ್ರಕ್ಕೆ ಪರಿಹಾರ ದೊರೆಯುತ್ತಿದ್ದ ರೈತರಿಗೆ ಇನ್ನು ಮುಂದೆ ಅವರ ಜಮೀನಿಗೆ 'ಮಾರುಕಟ್ಟೆ ದರ' ಲಭ್ಯವಾಗಲಿದೆ. ಅದಕ್ಕೆ ಪೂರಕವಾಗುವಂತೆ ಡಾ.ಮನಮೋಹನ್ ಸಿಂಗ್ ನೇತೃತ್ವದ ಸಂಪುಟ ಸಭೆ 1908ರ ನೋಂದಣಿ ಕಾಯ್ದೆ ತಿದ್ದುಪಡಿಗೆ ಒಪ್ಪಿಗೆ ನೀಡಿದೆ.
ಈ ಮೂಲಕ ಗ್ರಾಮೀಣಾಭಿವೃದ್ಧಿ ಸಚಿವಾಲಯ ಮುಂದಿಟ್ಟಿದ್ದ ಪ್ರಸ್ತಾಪಕ್ಕೆ ಹಸಿರು ನಿಶಾನೆ ದೊರಕಿದೆ. ಕೇಂದ್ರ ಸರ್ಕಾರದ ಮುಂದಿರುವ ಭೂಸ್ವಾಧೀನ ಮಸೂದೆಯ ಅನ್ವಯವೇ ಕೆಲ ಪ್ರಸ್ತಾಪಗಳು ಇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವೃತ್ತಿಪರತೆ: ಸದ್ಯ ಇರುವ ವ್ಯವಸ್ಥೆಯಲ್ಲಿ ಭೂದಾಖಲೆಗಳ ನೋಂದಣಿಯನ್ನು ಸಮರ್ಪಕವಾಗಿ ನಿರ್ವಹಿಸದ್ದರಿಂದ ಜಮೀನಿನ ಮಾಲೀಕತ್ವದ ಬಗ್ಗೆ ವಾದ ವಿವಾದ ಉಂಟಾಗುತ್ತಿದೆ. ಕಾನೂನು ತಿದ್ದುಪಡಿಯಿಂದಾಗಿ ಜಮೀನಿನ ನೋಂದಣಿ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ ಕಂಡುಬರಲಿದ್ದು, ನಿಜವಾದ ಮಾಲೀಕರನ್ನು ಕಂಡುಹಿಡಿಯಲು ನೆರವಾಗಲಿದೆ.
ಪವರ್ ಆಫ್ ಆಟಾರ್ನಿ ನೋಂದಣಿ ಕಡ್ಡಾಯ: ತಿದ್ದುಪಡಿಯಾಗಿರುವ ಕಾನೂನಿನ ಅಡಿಯಲ್ಲಿ ಪವರ್ ಆಫ್ ಅಟಾರ್ನಿ ನೋಂದಣಿಯನ್ನು ಕಡ್ಡಾಯಗೊಳಿಸಲಾಗಿದೆ. ಸದ್ಯ ಇರುವ ಕಾನೂನಿನಲ್ಲಿ ಪವರ್ ಆಫ್ ಅಟಾರ್ನಿಯನ್ನು ನೋಂದಣಿ ಮಾಡುವ ಬಗ್ಗೆ ಕಡ್ಡಾಯಗೊಳಿಸಲಾಗಿಲ್ಲ.
ಚರ್ಚೆಯಾಗದ ಮಸೂದೆ: ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ ಯುಪಿಎ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಆಹಾರ ಭದ್ರತಾ ಮಸೂದೆ ಸಂಪುಟ ಸಭೆಯಲ್ಲಿ ಚರ್ಚೆಗೇ ಬಂದಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಮಹತ್ವಾಕಾಂಕ್ಷಿ ಯೋಜನೆಯಾಗಿರುವ ಆಹಾರ ಭದ್ರತಾ ಮಸೂದೆ ಬಗ್ಗೆ ಈಗಾಗಲೇ ಪ್ರತಿಪಕ್ಷಗಳು ಟೀಕಾ ಪ್ರಹಾರ ನಡೆಸಿವೆ. ಹಲವು ಹಗರಣಗಳಿಂದ ಇಮೇಜ್ ಕೆಡಿಸಿಕೊಂಡಿರುವ ಯುಪಿಎ ಸರ್ಕಾರ ಮುಂದಿನ ಚುನಾವಣೆಯಲ್ಲಿ ಮತಗಳನ್ನು ಪಡೆಯಲು ಈ ಯೋಜನೆ ಜಾರಿಗೊಳಿಸಲು ಮುಂದಾಗಿದೆ ಎಂಬ ಟೀಕೆಗಳು ಕೇಳಿಬಂದಿವೆ. ಈ ಹಿನ್ನೆಲೆಯಲ್ಲಿ ಸಂಪುಟ ಸಭೆ ಈ ವಿಚಾರ ಚರ್ಚಿಸಲಿಲ್ಲ ಎನ್ನಲಾಗಿದೆ.
ತಪ್ಪು ಮಾಹಿತಿ ಕೊಟ್ರೆ ಜೈಲು: ದೇಶಾದ್ಯಂತ ಮನಬಂದಂತೆ ಬೆಳೆಯುತ್ತಿರುವ ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಸೂದೆಯನ್ನು ಅಂಗೀಕರಿಸಲಾಗಿದೆ. ಇದರ ಪ್ರಕಾರ ಬಡಾವಣೆ ಅಭಿವೃದ್ಧಿಗೊಳಿಸುವವರು ತಪ್ಪಾಗಿ ಮಾಹಿತಿ ಮತ್ತು ಜಾಹೀರಾತು ನೀಡುವವರಿಗೆ ಜೈಲು ವಾಸ ನೀಡುವ ಬಗ್ಗೆ ಹೊಸ ಮಸೂದೆಯಲ್ಲಿ ಪ್ರಸ್ತಾಪವಿದೆ. ಇದೇ ವೇಳೆ ಸಂಬಂಧಪಟ್ಟ ಎಲ್ಲ ಇಲಾಖೆಗಳಿಂದ ಅನುಮತಿಯನ್ನು ಪಡೆದ ನಂತರವೇ ಯೋಜನೆಯನ್ನು ಆರಂಭಿಸಲು ಸಾಧ್ಯ ಎಂಬ ನಿಯಮವನ್ನೂ ರಿಯಲ್ ಎಸ್ಟೇಟ್ ಕಂಪನಿಗಳಿಗೆ ವಿಧಿಸಲಾಗಿದೆ.
ಮತ್ತೊಂದು ಮಹತ್ವದ ನಿರ್ಣಯದಲ್ಲಿ ನಕ್ಸಲ್ ಪೀಡಿತ 9 ರಾಜ್ಯಗಳಲ್ಲಿ 3,046 ಕೋಟಿ ವೆಚ್ಚದಲ್ಲಿ 2,199 ಮೊಬೈಲ್ ಟವರ್ಗಳನ್ನು ನಿರ್ಮಿಸುವ ಯೋಜನೆಗೆ ಅನುಮೋದನೆ ನೀಡಿದೆ.
ಯೋಜನೆ ವಿಸ್ತರಣೆ: ಕೇಂದ್ರ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿರುವ ಮತ್ತೊಂದು ತೀರ್ಮಾನವೆಂದರೆ ರಾಷ್ಟ್ರೀಯ ಆರೋಗ್ಯ ವಿಮಾ ಯೋಜನೆ (ಆರ್ಎಸ್ಬಿವೈ) ಯೋಜನೆಯನ್ನು ಟ್ಯಾಕ್ಸಿ ಚಾಲಕರು, ರಿಕ್ಷಾ ಎಳೆಯುವವರು, ಚಿಂದಿ ಆಯುವವರಿಗೂ ವಿಸ್ತರಿಸಲಾಗಿದೆ. 2013-14 ನೇ ಸಾಲಿಗೆ 210 ಕೋಟಿ ಮತ್ತು 2014-15 ಸಾಲಿಗೆ ರು. 419.89 ಕೋಟಿ ಮೊತ್ತವನ್ನು ಈ ಯೋಜನೆಗೆ ನಿಗದಿಪಡಿಸಲು ಕೇಂದ್ರ ಸಂಪುಟ ನಿರ್ಧರಿಸಿದೆ.
ಎಷ್ಟು ಮಂದಿಗೆ ಅನುಕೂಲ?: 13.68 ಲಕ್ಷ ರಿಕ್ಷಾ ಚಾಲಕರಿಗೆ, 11.63 ಲಕ್ಷ ಚಿಂದಿ ಆಯುವವರಿಗೆ, 17.79 ಲಕ್ಷ ಗಣಿ ಕಾರ್ಮಿಕರಿಗೆ, ನೈರ್ಮಲ್ಯ ವಿಭಾಗದಲ್ಲಿ ಕೆಲಸ ಮಾಡುವ 10.08 ಲಕ್ಷ ಮಂದಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.
ಅಲ್ಪಸಂಖ್ಯಾತರ ಅಭಿವೃದ್ಧಿ: ದೇಶದ 26 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ವ್ಯಾಪ್ತಿಯಲ್ಲಿರುವ 196 ಜಿಲ್ಲೆಗಳ ಪಟ್ಟಣಗಳು/ನಗರಗಳಲ್ಲಿ ಅಲ್ಪಸಂಖ್ಯಾತರೇ ಹೆಚ್ಚಾಗಿರುವ ವಿಭಾಗ (ಬ್ಲಾಕ್) ಮತ್ತು ಗ್ರಾಮೀಣ ಪ್ರದೇಶದಲ್ಲಿ ಬಹುಸ್ತರ ಅಭಿವೃದ್ಧಿ ಯೋಜನೆ (ಎಂಎಸ್ಡಿಪಿ) ವಿಸ್ತರಣೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಆಂಧ್ರಪ್ರದೇಶ, ಛತ್ತೀಸ್ಗಡ, ಗುಜರಾತ್, ಪಂಜಾಬ್, ರಾಜಸ್ಥಾನ ಮತ್ತು ತ್ರಿಪುರ ಹೊಸತಾಗಿ ಸೇರ್ಪಡೆಗೊಂಡ ರಾಜ್ಯಗಳು. ಈ ಪೈಕಿ ಆಂಧ್ರಪ್ರದೇಶ, ಛತ್ತೀಸ್ಗಡ, ಮತ್ತು ರಾಜಸ್ಥಾನ ವಿಧಾನಸಭೆಗೆ ಕ್ರಮವಾಗಿ ಪ್ರಸಕ್ತ ವರ್ಷ ಮತ್ತು ಮುಂದಿನ ವರ್ಷ ಚುನಾವಣೆಗಳು ನಡೆಯಲಿವೆ.
165 ಬ್ಲಾಕ್ಗಳು, 66 ಪಟ್ಟಣ ಮತ್ತು ನಗರಗಳು ಇದೇ ಮೊದಲ ಬಾರಿಗೆ ಯೋಜನೆ ವ್ಯಾಪ್ತಿಗೆ ಬರಲಿವೆ.