ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ನಕ್ಸಲ್‌ಪೀಡಿತ ರಾಜ್ಯವೆಂದು ಘೋಷಿಸಿ

ನಕ್ಸಲ್ ಚಟುವಟಿಕೆ ನಿಧಾನವಾಗಿ ವಿಸ್ತರಣೆಗೊಳ್ಳುತ್ತಿದ್ದು, ಕರ್ನಾಟಕವನ್ನು ಎಡಪಂಥೀಯ ಭಯೋತ್ಪಾದನೆ ಪೀಡಿತ ರಾಜ್ಯವೆಂದು ಘೋಷಿಸಬೇಕು...

Vishwanath S
Updated On : 5 Jun 2013, 10:57 am

ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
ನಕ್ಸಲ್ ಚಟುವಟಿಕೆ ನಿಧಾನವಾಗಿ ವಿಸ್ತರಣೆಗೊಳ್ಳುತ್ತಿದ್ದು, ಕರ್ನಾಟಕವನ್ನು  ಎಡಪಂಥೀಯ ಭಯೋತ್ಪಾದನೆ ಪೀಡಿತ ರಾಜ್ಯವೆಂದು ಘೋಷಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಆಂತರಿಕ ಭದ್ರತೆ ಕುರಿತ ಮುಖ್ಯಮಂತ್ರಿಗಳ ಸಭೆಯಲ್ಲಿ ಮಾತಾಡಿದ ಅವರು, ಕರ್ನಾಟಕ- ಕೇರಳ- ತಮಿಳುನಾಡು ಗಡಿಭಾಗಕ್ಕೆ ಹೊಂದಿಕೊಂಡಂತಿರುವ ಪಶ್ಚಿಮ ಭಾಗದಲ್ಲಿರುವ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ನಕ್ಸಲರ ಕಾರ್ಯಚಟುವಟಿಕೆ ವಿಸ್ತರಣೆಯಾಗುತ್ತಿದೆ ಎಂದರು. ನಕ್ಸಲ್ ಚಳವಳಿಯು ರಾಜ್ಯವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ. ಕೇಂದ್ರ ಕೂಡಲೇ ರಾಜ್ಯವನ್ನು ನಕ್ಸಲ್‌ಪೀಡಿತ ಪ್ರದೇಶ ಎಂದು ಘೋಷಿಸಬೇಕು. ಕೇಂದ್ರದಿಂದ ಅಗತ್ಯ ನೆರವು ಒದಗಿಸಬೇಕು ಎಂದರು.
ಕರ್ನಾಟಕ ನಕ್ಸಲ್ ಚಟುವಟಿಕೆ ನಿಗ್ರಹಿಸಲು ವ್ಯವಸ್ಥಿತ ಕಾರ್ಯಾಚರಣೆ ನಡೆಸುತ್ತಿದೆ. 12 ನಕ್ಸಲ್ ನಿಗ್ರಹ ತಂಡಗಳನ್ನು ರಚಿಸಲಾಗಿದೆ. ಯುವಕರು ನಕ್ಸಲ್ ಚಳವಳಿಯತ್ತ ಹೊರಳದಂತೆ ತಡೆಯಲು ಅಗತ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ.   
ಜತೆಗೆ ಶರಣಾಗುವ  ನಕ್ಸಲರಿಗೆ ಪುನರ್ ವಸತಿಯನ್ನು ಕಲ್ಪಿಸಲಾಗುತ್ತಿದೆ. ಇದುವರೆಗೆ ಐದು ಮಂದಿ ನಕ್ಸಲರು ಶರಣಾಗಿದ್ದಾರೆ. ರಾಜ್ಯದಲ್ಲಿ ತುಂಗಾ, ಕರಾವಳಿ, ವರಾಹಿ ಮತ್ತು ನೇತ್ರಾವತಿ ತಂಡಗಳಲ್ಲಿರುವ 30 ಮಂದಿ ನಕ್ಸಲರನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ಕಾರ್ಯಚರಣೆ ನಡೆದಿದೆ. ನಕ್ಸಲ್ ಚಟುವಟಿಕೆ ನಿಗ್ರಹಿಸಲು ನೆರೆ ರಾಜ್ಯಗಳ ಪೊಲೀಸರೊಂದಿಗೆ ಸಮಾಲೋಚನೆ ನಡೆಸಿ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಪೊಲೀಸ್ ಠಾಣೆಗಳನ್ನು ಹೆಚ್ಚಸಲಾಗಿದೆ ಎಂದು ವಿವರ ನೀಡಿದರು.
ಉತ್ತಮ ದೋಣಿ ನೀಡಿ: ಕರಾವಳಿ ರಕ್ಷಣಾ ಪಡೆಗೆ ಉತ್ತಮ ದೋಣಿಗಳನ್ನು ಒದಗಿಸುವಂತೆ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ಕೇಂದ್ರ ಗೃಹ ಇಲಾಖೆ ಗೋವಾ ಷಿಪ್ ಯಾರ್ಡ್ ಮೂಲಕ ಒದಗಿಸಿದ ದೋಣಿಗಳು ಕರಾವಳಿ ಕಾವಲಿಗೆ ಯೋಗ್ಯವಾಗಿಲ್ಲ, ಬಳಸಲು ಸಾಧ್ಯವಾಗುತ್ತಿಲ್ಲ. ಜತೆಗೆ ಆರ್ಥಿಕವಾಗಿ ಭಾರಿ ಹೊರೆಯಾಗಿವೆ. ಕಳೆದ ಸಭೆಯಲ್ಲಿ ಈ ಬಗ್ಗೆ ಪ್ರಸ್ತಾಪ ಮಾಡಿದ್ದರೂ ಏನೂ ಕ್ರಮ ಕೈಗೊಂಡಿಲ್ಲ. ಈಗಲಾದರೂ ಕರಾವಳಿ ಕಾವಲಿಗೆ ಸೂಕ್ತ, ಬಳಸಬಲ್ಲ  ಸಮುದ್ರಸ್ನೇಹಿ ಹಾಗೂ ಆರ್ಥಿಕ ಹೊರೆಯಾಗದಂತಹ ದೋಣಿಗಳನ್ನು ಒದಗಿಸುವಂತೆ ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement