ರಾಜ್ಯದಿಂದ ಗವರ್ನರ್ ಭಾರದ್ವಾಜ್ ಎತ್ತಂಗಡಿ?
ಕರ್ನಾಟಕದ ರಾಜ್ಯಪಾಲರಾಗಿರುವ ಹಂಸರಾಜ ಭಾರದ್ವಾಜ್ ಅವರನ್ನು ಎತ್ತಂಗಡಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ...
ನವದೆಹಲಿ: ಕರ್ನಾಟಕದ ರಾಜ್ಯಪಾಲರಾಗಿರುವ ಹಂಸರಾಜ ಭಾರದ್ವಾಜ್ ಅವರನ್ನು ಎತ್ತಂಗಡಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ.
ಛತ್ತೀಸ್‌ಗಡ ರಾಜ್ಯಪಾಲರಾಗಿರುವ ಶೇಖರ್‌ದತ್ ಅವರನ್ನು ಕರ್ನಾಟಕದ ರಾಜ್ಯಪಾಲರನ್ನಾಗಿ ಮಾಡುವ ಬಗ್ಗೆ ಕೇಂದ್ರ ನಿರ್ಧರಿಸಿದೆ ಎಂದು ಮೂಲಗಳು ಹೇಳಿವೆ. ಹಂಸರಾಜ ಭಾರದ್ವಾಜ್ ಅವರನ್ನು ಉತ್ತರ ಪ್ರದೇಶಕ್ಕೆ ವರ್ಗಾಯಿಸುವುದು, ಈ ಸ್ಥಾನಕ್ಕೆ ದತ್ ಅವರನ್ನು ಕರೆ ತರುವ ಬಗ್ಗೆ ನಿರ್ಧಾರಗಳಾಗಿವೆ ಎನ್ನಲಾಗಿದೆ.
ಇತ್ತೀಚೆಗಷ್ಟೇ ಛತ್ತೀಸ್‌ಗಡದಲ್ಲಿ ನಡೆದ ನಕ್ಸಲ್ ದಾಳಿ ಸಂದರ್ಭದಲ್ಲಿ ರಾಜ್ಯಪಾಲರು ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಈ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಅಲ್ಲದೇ ಕಾಂಗ್ರೆಸ್‌ನ ಹಿರಿಯ ನಾಯಕರಾದ ಗಿರಿಜಾ ವ್ಯಾಸ್, ಜನಾರ್ದನ ದ್ವಿವೇದಿ ಮತ್ತು ಜಗದಂಬಿಕಾ ಪಾಲ್ ಅವರನ್ನು ರಾಜ್ಯಪಾಲರನ್ನಾಗಿ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ದೊಡ್ಡ ರಾಜ್ಯಗಳಿಗೆ ವರ್ಗಾಯಿಸಿ ಎಂದು 8ಕ್ಕೂ ಹೆಚ್ಚು ರಾಜ್ಯಪಾಲರು ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ರಿಡೀಫ್.ಕಾಂನಲ್ಲಿ ವರದಿಯಾಗಿದೆ.