ಎನ್‌ಸಿಟಿಸಿ ಇಲ್ಲ?
ಕಾಂಗ್ರೆಸ್ಸೇತರ ರಾಜ್ಯಗಳ ಮುಖ್ಯಮಂತ್ರಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಸ್ತಾವಿತ ರಾಷ್ಟ್ರೀಯ ಉಗ್ರ ನಿಗ್ರಹ ಕೇಂದ್ರ...
ನವದೆಹಲಿ: ಕಾಂಗ್ರೆಸ್ಸೇತರ ರಾಜ್ಯಗಳ ಮುಖ್ಯಮಂತ್ರಿಗಳಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರಸ್ತಾವಿತ ರಾಷ್ಟ್ರೀಯ ಉಗ್ರ ನಿಗ್ರಹ ಕೇಂದ್ರ(ಎನ್‌ಸಿಟಿಸಿ)ದ ವಿಚಾರದಲ್ಲಿ ಮುಂದುವರಿಯದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ನಡೆದ ಮುಖ್ಯಮಂತ್ರಿಗಳ ಸಭೆಯ ಬಳಿಕ ಮಾತನಾಡಿದ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ, ಎಲ್ಲ ರಾಜ್ಯಗಳ ಸಮ್ಮತಿ ಸಿಕ್ಕಿದ ಬಳಿಕವೇ ವಿವಾದಿತ ಎನ್‌ಸಿಟಿಸಿ ಸ್ಥಾಪನೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದ್ದರು. ಸದ್ಯದಲ್ಲಿ ಈ ಪ್ರಸ್ತಾಪಕ್ಕೆ ಎಲ್ಲರ ಒಪ್ಪಿಗೆ ಸಿಗುವುದು ಅಸಾಧ್ಯ. ಹಾಗಾಗಿ ಎನ್‌ಸಿಟಿಸಿ ಸ್ಥಾಪನೆ ಪ್ರಸ್ತಾಪವು ಮೂಲೆಗುಂಪಾಗುವುದು ಖಚಿತ ಎನ್ನುವುದು ಮೂಲಗಳ ಅಭಿಪ್ರಾಯ.
ಅಷ್ಟೇ ಅಲ್ಲದೆ, ಉಗ್ರನಿಗ್ರಹ ಕೇಂದ್ರದ ವಿಚಾರದಲ್ಲಿ ಉನ್ನತ ಮಟ್ಟದ ರಾಜಕೀಯ ನಾಯಕರ ನಡುವೆ ಚರ್ಚೆ ನಡೆಯುತ್ತಿದೆ. 2014ರ ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಾಗಲೇ ಎನ್‌ಸಿಟಿಸಿ ಬಗ್ಗೆ ಅಸಮಾಧಾನ ಹೊಂದಿರುವ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಾಗೂ ನಿತೀಶ್ ಕುಮಾರ್ ಅವರನ್ನು ಎದುರು ಹಾಕಿಕೊಳ್ಳುವುದೂ ಕಾಂಗ್ರೆಸ್‌ಗೆ ಮನಸ್ಸಿಲ್ಲ. ಅದಕ್ಕಾಗಿ ಎನ್‌ಸಿಟಿಸಿ ನಿರ್ಧಾರವನ್ನು ಆದಷ್ಟು ಮುಂದೆ ತಳ್ಳುವ ಎಂಬ ಬಗ್ಗೆ ಚಿಂತನೆ ನಡೆಸುತ್ತಿದೆ ಎಂದೂ ಮೂಲಗಳು ತಿಳಿಸಿವೆ.