ರಾಜ್ ಕುಂದ್ರಾ ಬೆಟ್ಟಿಂಗ್ನಲ್ಲಿ ಬಿದ್ರು
ಐಪಿಎಲ್ ಬೆಟ್ಟಿಂಗ್ ಭೂತ ನಿಧಾನವಾಗಿ ರಾಜಸ್ಥಾನ ರಾಯಲ್ಸ್ ಸಹ ಮಾಲೀಕ ರಾಜ್ ಕುಂದ್ರಾ ಅವರ ಕೊರಳಿಗೂ ಸುತ್ತಿಕೊಳ್ಳುತ್ತಿದೆ...
ನವದೆಹಲಿ: ಐಪಿಎಲ್ ಬೆಟ್ಟಿಂಗ್ ಭೂತ ನಿಧಾನವಾಗಿ ರಾಜಸ್ಥಾನ ರಾಯಲ್ಸ್ ಸಹ ಮಾಲೀಕ ರಾಜ್ ಕುಂದ್ರಾ ಅವರ ಕೊರಳಿಗೂ ಸುತ್ತಿಕೊಳ್ಳುತ್ತಿದೆ. ದೆಹಲಿ ಪೊಲೀಸರ ಮುಂದೆ ಬುಧವಾರ ನಡೆದ ವಿಚಾರಣೆಯಲ್ಲಿ ರಾಜ್ ಕುಂದ್ರಾ ಅವರು ಬೆಟ್ಟಿಂಗ್ ನಡೆಸಿರುವ ಬಗ್ಗೆ ಒಪ್ಪಿಕೊಂಡಿದ್ದು, ಇದೀಗ ರಾಜಸ್ಥಾನ ರಾಯಲ್ಸ್ ತಂಡದ ಭವಿಷ್ಯವೇ ತೂಗುಯ್ಯಾಲೆಯಲ್ಲಿದೆ. ಒಂದು ವೇಳೆ ಇದು ಸಾಬೀತಾದಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನೇ ನಿಷೇಧಿಸುವ ಸಾಧ್ಯತೆ ಇದೆ.
ಕಳೆದ ಮೂರು ವರ್ಷಗಳಿಂದ ಬೆಟ್ಟಿಂಗ್ ನಡೆಸಿರುವ ಬಗ್ಗೆ ರಾಜ್ಕುಂದ್ರಾ ಒಪ್ಪಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ಆಯುಕ್ತ ನೀರಜ್ ಕುಮಾರ್ ಹೇಳಿದ್ದಾರೆ. ಅಲ್ಲದೆ ಶಿಲ್ಪಾ ಶೆಟ್ಟಿ ಕೂಡ ಬೆಟ್ಟಿಂಗ್ನಲ್ಲಿ ಪಾಲ್ಗೊಂಡಿರುವ ಬಗ್ಗೆ ರಾಜ್ಕುಂದ್ರಾ ಸ್ನೇಹಿತ ಮತ್ತು ಉದ್ಯಮ ಪಾಲುದಾರ ಉಮೇಶ್ ಗೋಯೆಂಕಾ ಪೊಲೀಸರಿಗೆ ಹೇಳಿದ್ದಾರೆ.
ದೆಹಲಿ ಪೊಲೀಸರು ಗೋಯೆಂಕಾರನ್ನು ಬುಕ್ಕಿ ಎಂದೇ ಪರಿಗಣಿಸಿದ್ದಾರೆ. ರಾಜ್ಕುಂದ್ರಾ ಗೋಯೆಂಕಾ ಮೂಲಕವೇ ಬೆಟ್ಟಿಂಗ್ ಕಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಪಾಸ್ಪೋರ್ಟ್ ವಶ: ಕುಂದ್ರಾ ಕೂಡ ಬೆಟ್ಟಿಂಗ್ನಲ್ಲಿ ಭಾಗಿಯಾಗಿರುವ ಬಗ್ಗೆ ಒಪ್ಪಿಕೊಂಡಿರುವುದರಿಂದ ದೆಹಲಿ ಪೊಲೀಸರು ಅವರ ಪಾಸ್ಪೋರ್ಟ್ ಅನ್ನು ವಶಪಡಿಸಿಕೊಂಡಿದ್ದಾರೆ. ದೇಶ ಬಿಟ್ಟು ತೆರಳದಂತೆ ಅವರಿಗೆ ಸೂಚನೆ ನೀಡಲಾಗಿದೆ. ಒಂದು ವೇಳೆ ಸ್ಪಾಟ್ ಫಿಕ್ಸಿಂಗ್ನಲ್ಲಿ ಕುಂದ್ರಾ ಭಾಗಿಯಾಗಿರದಿದ್ದರೆ ಅವರನ್ನು ಬಂಧಿಸುವ ಸಾಧ್ಯತೆಗಳಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಮಾಧ್ಯಮಗಳು ಸುಖಾಸುಮ್ಮನೆ ಈ ವಿಷಯವನ್ನು ದೊಡ್ಡದು ಮಾಡುತ್ತಿವೆ. ನನ್ನ ವಿರುದ್ಧ ಯಾವುದೇ ಬಂಧನದ ವಾರಂಟ್ ಇಲ್ಲ. ನಾನೀಗ ಮುಂಬೈ ನಿವಾಸದಲ್ಲಿದ್ದೇನೆ.
- ರಾಜ್ ಕುಂದ್ರಾ,
ರಾಜಸ್ಥಾನ ರಾಯಲ್ಸ್ ಸಹ ಮಾಲೀಕ