ಜೀವ ಕೈಯಲ್ಲಿ ಹಿಡಿದು ಒಳಗೆ ಬನ್ನಿ!
ಸರ್ಕಾರಿ ಶಾಲೆಯಿದು. ಜೀವ ಕೈಯಲ್ಲಿ ಹಿಡಿದು ಒಳಗೆ ಬಾ! ಬಹುತೇಕ ಸರ್ಕಾರಿ ಶಾಲೆಗಳಲ್ಲಿ 'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ'
ಕನ್ನಡಪ್ರಭ ವಾರ್ತೆ , ಬಾಗಲಕೋಟೆ , ಜೂ. 7
ಸರ್ಕಾರಿ ಶಾಲೆಯಿದು. ಜೀವ ಕೈಯಲ್ಲಿ ಹಿಡಿದು ಒಳಗೆ ಬಾ!
ಬಹುತೇಕ ಸರ್ಕಾರಿ ಶಾಲೆಗಳಲ್ಲಿ 'ಜ್ಞಾನ ದೇಗುಲವಿದು ಕೈ ಮುಗಿದು ಒಳಗೆ ಬಾ' ಎಂದು ಗೋಡೆಗಳಲ್ಲಿ ಅಂದವಾಗಿ ಬರೆದಿರುತ್ತಾರೆ. ಆದರೆ, ಹುನಗುಂದ ತಾಲೂಕು ಬಿಸನಾಳಕೊಪ್ಪ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಮಾತ್ರ ಇದು ಅನ್ವಯಿಸುವುದಿಲ್ಲ. ಜ್ಞಾನ ದೇಗುಲವೆಂದು ನಂಬಿ ಕೈ ಮುಗಿದು ನಿರಾಳವಾಗಿ ಒಳಗೆ ಹೋದರೆ ಅಪಾಯ ಕಟ್ಟಿಟ್ಟ ಬುತ್ತಿ. ಯಾವ ಹೊತ್ತಿನಲ್ಲಿ ಏನು ಅಪಾಯ ಎದುರಾಗುತ್ತದೆ ಎನ್ನುವುದು ಸ್ವತಃ ಅಲ್ಲಿನ ಶಿಕ್ಷಕರು ಮತ್ತು ಮಕ್ಕಳಿಗೂ ಗೊತ್ತಿಲ್ಲ. ಮಳೆ, ಗಾಳಿಗೆ ಹಾರಿ ಹೋಗುವ ಮತ್ತು ಬಿಸಿಲಿಗೆ ಕಾದು ಕೆಂಡವಾಗುವ ತಗಡುಗಳಿಂದಾಗಿ ಅಲ್ಲಿನ ವಿದ್ಯಾರ್ಥಿಗಳು ಜೀವ ಕೈಯಲ್ಲಿ ಹಿಡಿದುಕೊಂಡೇ ವ್ಯಾಸಂಗ ಮಾಡುತ್ತಿದ್ದಾರೆ.
2009ರಲ್ಲಿ ಮಲಪ್ರಭೆ ಉಕ್ಕೇರಿದಾಗ ಹುನಗುಂದ ತಾಲೂಕಿನ ಬಿಸನಾಳ, ಬಿಸನಾಳಕೊಪ್ಪ, ಬೆಳಗಲಿ, ಚಿಕ್ಕಮಾಗಿ, ಪಾಪಟನಾಳ, ಕೈರವಾಡಗಿ ಗ್ರಾಮಗಳು ಸಂಪೂರ್ಣ ಜಲಾವೃತವಾಗಿ ಜನತೆ ಸಂತ್ರಸ್ತರಾಗಿದ್ದರು. ಅವರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸಲು ನಿರ್ಮಿಸಲಾಗಿರುವ ಈ ತಗಡಿನ ಶೆಡ್‌ನಲ್ಲಿ ಆರಂಭವಾಗಿರುವ ಕಿರಿಯ ಪ್ರಾಥಮಿಕ ಶಾಲೆಗೆ ನಾಲ್ಕು ವರ್ಷಗಳಾದರೂ ಹೊಸ ಸೂರು ಸಿಕ್ಕಿಲ್ಲ.
ಬಿಸಿಲು, ಗಾಳಿಯ ಕಿರಿಕಿರಿ: ಬಿಸನಾಳಕೊಪ್ಪದಲ್ಲಿ ನೆರೆ ಸಂತ್ರಸ್ತರಿಗಾಗಿ ಸುಮಾರು 40 ತಗಡಿನ ಶೆಡ್‌ಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಒಂದನ್ನು ಈ ಶಾಲೆಗೆ ನೀಡಲಾಗಿದೆ. ಇಬ್ಬರು ಶಿಕ್ಷಕರಿದ್ದಾರೆ ಮಕ್ಕಳ ಸಂಖ್ಯೆಯೂ ಉತ್ತಮವಾಗಿದೆ. ಇತ್ತೀಚೆಗೆ ಗುಡುಗು, ಸಿಡಿಲು, ಭೀಕರ ಗಾಳಿಯೊಂದಿಗೆ ಸುರಿದ ರೋಹಿಣಿ ಮಳೆಗೆ ಶಾಲೆಯ ಛಾವಣಿಯ ತಗಡುಗಳು ಹಾರಿ ಹೋಗಿವೆ.
ಶೆಡ್‌ಗೆ ಬಳಸಲಾಗಿರುವ ಕಟ್ಟಿಗೆಗಳು ಗಾಳಿಯ ರಭಸಕ್ಕೆ ಅರ್ಧಕ್ಕೆ ಮುರಿದು ನಿಂತಿವೆ. ಪೀಠೋಪಕರಣಗಳೆಲ್ಲ ಹಾರಿ ಹೋಗಿವೆ. ನೆಲವೆಲ್ಲ ಕೆರೆಯಂಗಳವಾಗಿದೆ. ಅದು ಒಣಗಲು ಹಲವು ದಿನಗಳೇ ಬೇಕು. ಆದಷ್ಟು ಬೇಗ ಅದು ಒಣಗಲಿ ಎಂದು ಮಕ್ಕಳೊಂದಿಗೆ ಶಿಕ್ಷಕರು ನೀರು-ಕೆಸರು ಹೊರಗೆ ಚೆಲ್ಲುವ, ತಗಡು ಹೊಂದಿಸುವ ಶ್ರಮದಾನ ಮಾಡುತ್ತಿದ್ದಾರೆ.
ಆಸರೆಗೆ ಒಪ್ಪದ ಗ್ರಾಮಸ್ಥರು: ಶಾಲೆಯ ಇಂದಿನ ದುಸ್ಥಿತಿಗೆ ಸರ್ಕಾರದಂತೆ ಗ್ರಾಮಸ್ಥರೂ ಅಷ್ಟೇ ಹೊಣೆಯಾಗಿದ್ದಾರೆ. ನೆರೆ ಸಂತ್ರಸ್ತರಿಗೆ ಪುನಾವಸತಿ ಕಲ್ಪಿಸಲು ಸರ್ಕಾರ ರೂಪಿಸಿದ ಆಸರೆ ಯೋಜನೆಗೆ ಈ ಗ್ರಾಮಸ್ಥರು ಒಪ್ಪಲಿಲ್ಲ. ಹಾಗಾಗಿ ಸರ್ಕಾರ ಪ್ರತ್ಯೇಕ ಪುನಾವಸತಿ ಮತ್ತು ಪುನರ್ ನಿರ್ಮಾಣಕ್ಕಾಗಿ ಪ್ರತ್ಯೇಕ ಯೋಜನೆ ರೂಪಿಸಿ ಮಂಜೂರಾತಿ ನೀಡಲು ಬರೋಬ್ಬರಿ ಮೂರು ವರ್ಷ ತೆಗೆದುಕೊಂಡಿತು. ಕಳೆದ ವರ್ಷ ಯೋಜನೆ ಮಂಜೂರಿಯಾಗಿ ಭೂಸ್ವಾಧೀನವೂ ಆರಂಭವಾಗಿದೆ. ಶಿಕ್ಷಣ ಇಲಾಖೆಯ ಬಳಿ ಸರ್ವಶಿಕ್ಷಾ ಅಭಿಯಾನ ಮತ್ತಿತರ ಯೋಜನೆಗಳು ಸಾಕಷ್ಟು ಇದ್ದಾಗ್ಯೂ ಈ ತಾಂತ್ರಿಕ ಕಾರಣದಿಂದ ಶಾಲೆಗೆ ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗಿದೆ.
ನೆರೆ ಸಂತ್ರಸ್ತರು ಆಸರೆ ಯೋಜನೆಗೆ ಒಪ್ಪದೇ ಇರುವುದರಿಂದ ಪ್ರತ್ಯೇಕ ಪ್ಯಾಕೇಜ್ ನೀಡಿ ಪುನಾವಸತಿ ಕಲ್ಪಿಸಲಾಗುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆ ಆರಂಭವಾಗಿದೆ. ಮುಂದಿನ ವರ್ಷದ ವೇಳೆಗೆ ಶಾಲೆಗೆ ಕಟ್ಟಡ ನೀಡುತ್ತೇವೆ.
- ಎ.ಎಂ. ಕುಂಜಪ್ಪ,
ಜಿಲ್ಲಾಧಿಕಾರಿ, ಬಾಗಲಕೋಟೆ
-ಮಲ್ಲಿಕಾರ್ಜುನ ಸಿದ್ದಣ್ಣವರ