ನಾನಿರುವಾಗಲೇ ಕಾಸರಗೋಡು ಕರ್ನಾಟಕ ಸೇರಲಿ
'ನಾನು ಬದುಕಿರುವವರೆಗೂ ಹೋರಾಟ ಮುಂದುವರಿಯುತ್ತದೆ. ನಾನು ಇರುವವರೆಗೆ ಏಕೀಕರಣಕ್ಕೆ ಹೋರಾಟ ಮಾಡುತ್ತೇನೆ.
ಕಾಸರಗೋಡು(ಕೇರಳ): 'ನಾನು ಬದುಕಿರುವವರೆಗೂ ಹೋರಾಟ ಮುಂದುವರಿಯುತ್ತದೆ. ನಾನು ಇರುವವರೆಗೆ ಏಕೀಕರಣಕ್ಕೆ ಹೋರಾಟ ಮಾಡುತ್ತೇನೆ. ನನ್ನ ಜೀವಿತ ಅವಧಿಯಲ್ಲಿಯೇ ಕಾಸರಗೋಡು ಕರ್ನಾಟಕದ ಭಾಗ ಆಗಬೇಕು...'
- ಇವು ನೂರರ ಹೊಸ್ತಿಲಲ್ಲಿರುವ ನಾಡೋಜ ಕಯ್ಯಾರ ಕಿಂಞಣ್ಣರೈ ಅವರ ಕೆಚ್ಚಿನ ಮಾತುಗಳು.
'ಮನೆಗೆ ಬೆಂಕಿ ಬಿದ್ದಿದೆ ಬನ್ನಿ' ಎಂದು ಕನ್ನಡ ಹೋರಾಟಕ್ಕೆ ಕನ್ನಡಿಗರ ನರನಾಡಿಯಲ್ಲಿ ಕಿಚ್ಚು ತುಂಬಿದ ಕಯ್ಯಾರರ ಮಾತು ಈಗ ತಡವರಿಸುತ್ತಿದೆ. 99ರ ಹರೆಯಕ್ಕೆ ಕಾಲಿಟ್ಟಿರುವ ಕಯ್ಯಾರರ ನೆನಪಿನ ಶಕ್ತಿ ಕ್ಷೀಣಿಸುತ್ತಿದೆ. ಮಾತನಾಡತೊಡಗಿದರೆ ಮರೆವು ಆಗಾಗ ಕಾಡುತ್ತದೆ. ಕಿವಿಗೂ ಶಬ್ದ ಗ್ರಹಿಸುವ ಶಕ್ತಿ ಕಡಿಮೆಯಾಗುತ್ತಿದೆ. ಆದರೂ ಅವರ ಮನಸ್ಸಿನಲ್ಲಿರುವ ಹೋರಾಟದ ಕಿಚ್ಚು, ಕನ್ನಡ ಪ್ರೇಮಕ್ಕೆ ಕಿಂಚಿತ್ತೂ ಧಕ್ಕೆಯಾಗಿಲ್ಲ.
ಸಂದರ್ಶನದಲ್ಲಿ ಅವರು ಹೇಳಿದ್ದಿಷ್ಟು: -ಕಾಸರಗೋಡು ಕರ್ನಾಟಕಕ್ಕೆ ಏಕೆ ಸೇರಬೇಕು ಎನ್ನುವುದನ್ನು ನಾನು ಹೇಳುವುದಕ್ಕಿಂತ ಇಲ್ಲಿನ ಕನ್ನಡಿಗರಿಗೇ ಚೆನ್ನಾಗಿ ಗೊತ್ತುಂಟು. ನಮ್ಮ ಹೋರಾಟ ಸರ್ಕಾರದ ಗಮನಕ್ಕೆ ಬಂದಿದೆ. ಭಗವಂತನ ಗಮನಕ್ಕೂ ಬಂದಿದೆ. ಕಾಸರಗೋಡನ್ನು ಮತ್ತೆ ಸೇರಿಸಿದರೆ ಅಂಥಾ ಯೋಗ್ಯತಾ ಮನುಷ್ಯ ನಾಡಿನ ಮನ್ನಣೆಗೆ ಪಾತ್ರರಾಗುತ್ತಾರೆ, ಮಹನೀಯರಾಗುತ್ತಾರೆ.
- ನನಗೆ ನೂರು ವರ್ಷ ವಯಸ್ಸಾಗಿರುವ ಬಗ್ಗೆ ನನ್ನನ್ನು ಕರೆದು ಸನ್ಮಾನಿಸಿ, ಸಭೆ, ಭಾಷಣ ಮಾಡಿಸಿದಿರಿ. ನನಗೆ ಭಾಷಣ, ಸನ್ಮಾನ ಹೊಸತಲ್ಲ. ನನಗೆ ಸನ್ಮಾನ ಮಾಡಿದ್ದಕ್ಕೆ ನಾನು ಕೃತಜ್ಞತೆ ಹೇಳಬೇಕು ಎನ್ನುವುದು ರೂಢಿ. ನಾನು ಮಾಡಿದ ಹೋರಾಟ, ಕೆಲಸಗಳಿಂದ ಲಾಭವಾಗಿದ್ದರೆ ಆ ಕಾರ್ಯಕ್ಕೆ ಗೌರವ ಸಲ್ಲುತ್ತದೆ. ಇತರ ಪ್ರಯತ್ನಗಳಿಗೂ ಗೌರವ ಸಲ್ಲಿಕೆಯಾಗುತ್ತದೆ.
-ಜಿತೇಂದ್ರ ಕುಂದೇಶ್ವರ