ಸಾರಾಯಿ, ಗುಟ್ಕಾವಿಲ್ಲದ ಯಂಕಂಚಿ
ರಾಜ್ಯ ಸರ್ಕಾರ ಸಾರಾಯಿ ನಿಷೇಧಿಸಿ, ಅದನ್ನು ಜಾರಿಗೊಳಿಸುವ ಹಾಗೂ ಸುಪ್ರೀಂ ಕೋರ್ಟ್ ಗುಟ್ಕಾ ನಿಷೇಧ ಹೇರಿ ಆದೇಶ...
ಕನ್ನಡಪ್ರಭ ವಾರ್ತೆ , ಬಾಗಲಕೋಟೆ , ಜೂ.8
ರಾಜ್ಯ ಸರ್ಕಾರ ಸಾರಾಯಿ ನಿಷೇಧಿಸಿ, ಅದನ್ನು ಜಾರಿಗೊಳಿಸುವ ಹಾಗೂ ಸುಪ್ರೀಂ ಕೋರ್ಟ್ ಗುಟ್ಕಾ ನಿಷೇಧ ಹೇರಿ ಆದೇಶ ಹೊರಡಿಸುವ ಮುನ್ನವೇ ಬಾಗಲಕೋಟೆ ತಾಲೂಕು ಯಂಕಂಚಿ ಗ್ರಾಮದ ಜನರು ಸಾರಾಯಿ, ಗುಟ್ಕಾಗಳಿಗೆ ಗುಡ್ಬೈ ಹೇಳಿದ್ದಾರೆ!
ಬರೋಬ್ಬರಿ 12 ವರ್ಷಗಳಿಂದ ಈ ಊರಲ್ಲಿ ಗುಟ್ಕಾ, ಸಾರಾಯಿ ಮಾರಾಟಕ್ಕೆ ನಿಷೇಧವಿದೆ. ಈ ನಿಷೇಧ ಉಲ್ಲಂಘಿಸಿ ಗುಟ್ಕಾ ಮತ್ತು ಸಾರಾಯಿ ಮಾರಾಟ ಮಾಡಿದರೆ 5 ಸಾವಿರ ದಂಡ ವಿಧಿಸಲಾಗುತ್ತದೆ. ಪಕ್ಕದ ನಗರದಿಂದ ಕುಡಿದು ಬಂದು ಊರಿನಲ್ಲಿ ಗಲಾಟೆ ಮಾಡುವವರಿಗೂ ಇಲ್ಲಿ ತಕ್ಕ ಶಿಕ್ಷೆ ಕಾದಿರುತ್ತದೆ. ಗ್ರಾಮದ ಯುವಕರೇ ಮುಂದಾಗಿ ಈ ನಿಷೇಧ ಹೇರುವ ಮೂಲಕ ಮಾದರಿಯಾಗಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಈ ಯುವಕರು ಹಾಳು ಹರಟೆಯ ತಾಣವಾಗಿರುವ ತಮ್ಮೂರಿನ ಚಹಾ ಅಂಗಡಿಯನ್ನೂ ಕಳೆದ ವರ್ಷ ಎತ್ತಂಗಡಿ ಮಾಡಿ ಆದರ್ಶ ಮೆರೆದಿದ್ದಾರೆ.
ಇದು ಆದರ್ಶ ಗ್ರಾಮ: ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನಲ್ಲಿ ಮುಳುಗಡೆಯಾದ ಬಳಿಕ 2000 ಇಸ್ವಿಯಲ್ಲಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರವಾಗಿದೆ. ಈ ಯಂಕಂಚಿ ಗ್ರಾಮ ಬಾಗಲಕೋಟೆ ನಗರದಿಂದ ಕೇವಲ 4 ಕಿಮೀ ಅಂತರದ ಘಟಪ್ರಭೆಯ ದಂಡೆ ಮೇಲಿದೆ. ಅಂದಾಜು ಒಂದು ಸಾವಿರ ಇಲ್ಲಿನ ಜನಸಂಖ್ಯೆ. ಶೇ.74ರಷ್ಟು ಸುಶಿಕ್ಷಿತರು. ಪಕ್ಕದ ಕದಾಂಪುರ ಗ್ರಾಪಂ ವ್ಯಾಪ್ತಿಗೆ ಸೇರಿದ್ದರಿಂದ ಇಲ್ಲಿ ಇಬ್ಬರು ಸದಸ್ಯರಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿವೆ. ಮೂರು ಪಾನ್ ಅಂಗಡಿ, ಒಂದು ಕಿರಾಣಿ ಅಂಗಡಿ ಇಲ್ಲಿದೆ.
ಆದರೆ, ಇಲ್ಲಿರುವ ಪಾನ್ ಅಂಗಡಿಗಳಲ್ಲಿ ಗುಟ್ಕಾ ಮಾರಾಟ ಮಾಡುವುದಿಲ್ಲ. ಮುಳುಗಡೆಗೆ ಪ್ರತಿಯಾಗಿ ಸರ್ಕಾರ ನೀಡಿದ ಪರಿಹಾರದ ಮೊತ್ತ ಬಹುತೇಕ ಕಡೆ ಬಾರ್ಗಳ ಪಾಲಾಗಿದ್ದೆ ಹೆಚ್ಚು. ಇಲ್ಲಿ ಮಾತ್ರ ಹೊಸ ಆಸ್ತಿ ಖರೀದಿಗೆ, ಮಕ್ಕಳ ಓದಿಗೆ, ವ್ಯಾಪಾರ- ವಹಿವಾಟಿಗೆ ವಿನಿಯೋಗವಾಗಿದೆ. ಹಾಗಾಗಿ ಈ ಯಂಕಂಚಿ ಪುನರ್ವಸತಿ ಕೇಂದ್ರದಿಂದ ಇಬ್ಬರು ಪ್ರಾಚಾರ್ಯರು, ಓರ್ವ ನ್ಯಾಯವಾದಿ, ಶಾಲಾ ಶಿಕ್ಷಕರು, ವಿವಿಧ ಇಲಾಖೆ ನೌಕರರು ಹೊರಹೊಮ್ಮಿದ್ದಾರೆ. ಕುಡಿಯುವ ನೀರು, ಬಸ್ ಸಾರಿಗೆ ಸರಿಯಾಗಿ ಇಲ್ಲದಿದ್ದರೂ ಇವರಲ್ಲಿನ ಆತ್ಮವಿಶ್ವಾಸಕ್ಕೆ ಕೊರತೆ ಇಲ್ಲ.
ಮಾದರಿಯಾದ ಯುವಕರು: ಅದೇ ತಾನೇ ಪುನರ್ವಸತಿ ಕೇಂದ್ರಕ್ಕೆ ಊರು ಸ್ಥಳಾಂತರವಾದಾಗ ಇಲ್ಲಿನ ಚಿಕ್ಕ ಮಕ್ಕಳೂ ಸಹ ಯುವಕರಂತೆ ಗುಟ್ಕಾ ತಿನ್ನಲು ಶುರು ಮಾಡಿದ್ದನ್ನು ಗಮನಿಸಿದ ಯುವಕರಾದ ಉಮೇಶ್ ಗೌಡರ್, ವೀರಣ್ಣ ಗೌಳಿ, ಮಲ್ಲಿಕಾರ್ಜುನ ತಳವಾರ, ಸಿದ್ದಪ್ಪ ಟಕ್ಕಳಕಿ, ಸುರೇಶ್ ಗೌಡರ್, ಮಲ್ಲಿಕಾರ್ಜುನ ಸಮನಾಳ, ರಂಗಪ್ಪ ಮಾದರ, ಮಲ್ಲಿಕಾರ್ಜುನ ತೋಳಮಟ್ಟಿ, ಕಣಕಪ್ಪ ಮಾದರ, ಗಿರೀಶ್ ಗೌಡರ, ಯಲಗುರದಪ್ಪ ಹಿಂಗೂಡಿ ಸೇರಿಕೊಂಡು ಶ್ರೀ ಮಾರುತೇಶ್ವರ ಯುವಕ ಸಂಘ ಕಟ್ಟಿಕೊಂಡು ಗುಟ್ಕಾ, ಸಾರಾಯಿ ವಿರುದ್ಧ ಸಮರ ಸಾರಿದರು. ಊರಿನ ಹಿರಿಯರಾದ ಹನುಮಂತಗೌಡ ಪಾಟೀಲ್, ತಿಪ್ಪಣ್ಣ ಗೌಡರ್, ರಂಗನಗೌಡ ಗೌಡರ್, ಶಿವಲಿಂಗಪ್ಪ ಗೌಡರ್, ಈಶ್ವರ ಹುಂಡೇಕಾರ, ಚಂದ್ರಶೇಖರ ಗೌಳಿ, ಪರಸಪ್ಪ ಸಮ್ಮನಾಳ, ಅರ್ಜುನ ಮೂಲಿಮನಿ, ಭೀಮಪ್ಪ ಮಾದರ, ಯಲ್ಲಪ್ಪ ಗೌಡರ್, ಹನುಮಂತ ಮಾದರ, ರಂಗಪ್ಪ ನಾಶಿ ಸೇರಿದಂತೆ ಊರಿನ ಹಿರಿಯರು ಈ ಯುವಕರಿಗೆ ಪ್ರೋತ್ಸಾಹ ನೀಡಿದರು. ಆಗ ಶುರುವಾಯಿತು ನೋಡಿ ಗುಟ್ಕಾ, ಸಾರಾಯಿ, ದೇವದಾಸಿ ಪದ್ಧತಿಗಳ ಮೇಲೆ ನಿಷೇಧ ಜಾರಿಯಾಯಿತು. ಅಂದರೆ 12 ವರ್ಷಗಳಿಂದ ಇಲ್ಲಿವರೆಗೂ ಈ ಊರಲ್ಲಿ ಈ ಸಾರಾಯಿ, ಗುಟ್ಕಾ ಹಾಗೂ ದೇವದಾಸಿ ಪದ್ಧತಿಗೆ ಆಸ್ಪದವಿಲ್ಲ.
ಯುವಕರು ಗುಟ್ಕಾ ತಿನ್ನುವುದನ್ನು ನೋಡಿ ಸಣ್ಣ ಮಕ್ಕಳೂ ತಿನ್ನಲು ಆರಂಭಿಸಿದ್ದರು. ಇದರ ಅಪಾಯ ಗಮನಿಸಿ ಹಿರಿಯರು ಆಗಾಗ ತಿಳಿವಳಿಕೆ ನೀಡುತ್ತಿದ್ದರು. ಒಂದು ದಿನ ನಾವೆಲ್ಲ ಸೇರಿ ಚರ್ಚಿಸಿ ಗುಟ್ಕಾ ಬಿಡುವ ಮತ್ತು ಗುಟ್ಕಾ, ಸಾರಾಯಿ ಮಾರಾಟ ನಿಷೇಧಿಸಲು ನಿರ್ಧರಿಸಿದೆವು. ನಮ್ಮ ನಿರ್ಧಾರಕ್ಕೆ ಹಿರಿಯರು ಬೆನ್ನು ತಟ್ಟಿದರು.
- ಉಮೇಶ ಗೌಡರ,
ಮಾರುತಿ ಯುವ ಸಂಘದ ಖಜಾಂಚಿ,
-ಮಲ್ಲಿಕಾರ್ಜುನ ಸಿದ್ದಣ್ಣವರ