ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಮಗ್ರ ಶಿಕ್ಷಣ ಮಾಹಿತಿಗೊಂದು 'ಕೊಯರ್'

ಶಿಕ್ಷಣಕ್ಕೆ ಸಂಬಂಧಿಸಿದ ತರಬೇತಿ, ಪಠ್ಯ, ಪಠ್ಯಕ್ರಮ ಹಾಗೂ ಪಠ್ಯಪೂರಕ ಎಲ್ಲ ವಿಚಾರಗಳು ಒಂದೇ ಕಡೆ ದೊರಕಿದರೆ ಅದಕ್ಕಾಗಿ ಎಲ್ಲೆಂದರಲ್ಲಿ ಜಾಲಾಡುವ ಪ್ರಮೇಯ ...

Rashmi Kasaragodu
Updated On : 10 Jun 2013, 1:54 am

ಮಂಗಳೂರು: ಶಿಕ್ಷಣಕ್ಕೆ ಸಂಬಂಧಿಸಿದ ತರಬೇತಿ, ಪಠ್ಯ, ಪಠ್ಯಕ್ರಮ ಹಾಗೂ ಪಠ್ಯಪೂರಕ ಎಲ್ಲ ವಿಚಾರಗಳು ಒಂದೇ ಕಡೆ ದೊರಕಿದರೆ ಅದಕ್ಕಾಗಿ ಎಲ್ಲೆಂದರಲ್ಲಿ ಜಾಲಾಡುವ ಪ್ರಮೇಯ ತಪ್ಪಿಸಬಹುದು. ವಿದ್ಯಾರ್ಥಿಗಳನ್ನು ರೂಪಿಸುವ ಭಾವಿ ಶಿಕ್ಷಕರಿಗೆ (ಬಿಎಡ್ ವಿದ್ಯಾರ್ಥಿಗಳಿಗೆ) ಉಪಯುಕ್ತವಾಗುವ ಸಲುವಾಗಿ ಬೆಂಗಳೂರಿನ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಂಸ್ಥೆ (ಡಿಎಸ್ಇಆರ್ಟಿ) ವಿಕಿಪೀಡಿಯಾ ಮಾದರಿಯಲ್ಲಿ 'ಕೊಯರ್'(karnataka open educational resources) ಹೆಸರಿನಲ್ಲಿ ಸಮಗ್ರ ಮಾಹಿತಿ ಕೋಶವನ್ನು ಸಿದ್ಧಪಡಿಸುತ್ತಿದೆ.
ಶಿಕ್ಷಣ ಇಲಾಖೆಯಲ್ಲಿ ಇದೇ ಮೊದಲ ಪ್ರಯೋಗವಾಗಿದ್ದು, ಕಳೆದ ವರ್ಷ ಈ ಬಗ್ಗೆ ರೂಪುರೇಷೆ ತಯಾರಿಸಲಾಗಿತ್ತು. ಶಿಕ್ಷಣದ ಉದ್ದೇಶಕ್ಕೆ ಬಳಕೆಯಾಗುವ ಈ ಮಾಹಿತಿ ಕೋಶ ಮುಕ್ತವಾಗಿರಲಿದ್ದು, ಶಿಕ್ಷಕರೇ ಮಾಹಿತಿಯನ್ನು ಅಪ್ಲೋಡ್ ಮಾಡುವುದು ಇದರ ವಿಶೇಷ. ಅಪ್ಲೋಡ್ ಮಾಡಿದ ಮಾಹಿತಿಯನ್ನು ಪರಸ್ಪರ ಹಂಚಿಕೊಳ್ಳುವುದು, ಸಂದೇಹಗಳಿದ್ದರೆ ಪರಿಹರಿಸುವುದು, ಶಿಕ್ಷಣಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಈ ಕೋಶದಲ್ಲಿ ನಮೂದಿಸಬಹುದು.

ಮುಕ್ತ ಮಾಹಿತಿ ಅವಕಾಶ: ವಿಜ್ಞಾನ, ಗಣಿತ, ಭಾಷಾ ಪಠ್ಯ ಬೋಧಿಸುವ ಶಿಕ್ಷಕರಿಗೆ ಕಂಪ್ಯೂಟರ್ ತರಬೇತಿ ನೀಡಲಾಗಿದ್ದು, ವಿಕಿಪೀಡಿಯಾ ಮಾದರಿಯಲ್ಲಿ ಕೊಯರ್ಗೆ ಹೇಗೆ ವಿಷಯಗಳನ್ನು ಅಪ್ಲೋಡ್ ಮಾಡಬೇಕು ಎಂಬುದನ್ನು ತಿಳಿಸಲಾಗಿದೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸುಮಾರು 15 ಸಾವಿರ ಇ-ಮೇಲ್ಗಳು ಬಂದಿದ್ದು, ಅಷ್ಟೇ ಮಂದಿ ಶಿಕ್ಷಣ ಮಾಹಿತಿಯನ್ನು ಶೇರ್ ಮಾಡಿದ್ದಾರೆ. ಇಂಟರ್ನೆಟ್ ಹೊಂದಿರುವ ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್, ಡೆಸ್ಕ್ಟಾಪ್ಗಳಲ್ಲಿ ಎಲ್ಲಿ ಬೇಕಾದರೂ ಶಿಕ್ಷಕರು ಮಾಹಿತಿ ವಿನಿಮಯ ಮಾಡಿಕೊಳ್ಳಬಹುದು.
ಲಿನೆಕ್ಸ್ ಮೂಲದ ಅಬುಂಟ್ ಸಾಫ್ಟ್ವೇರ್ ಅನ್ನು ಈ ಕೋಶ ತಯಾರಿಕೆಗೆ ಬಳಸಲಾಗಿದ್ದು, ಇದು ಉಚಿತ ಸಾಫ್ಟ್ವೇರ್. ಆದ್ದರಿಂದ 'ಕೊಯರ್' ಮಾಹಿತಿ ಕೋಶವೂ ಉಚಿತವಾಗಿಯೇ ಸಿಗಲಿದೆ. ಹಾಲಿ ಮತ್ತು ಭಾವೀ ಶಿಕ್ಷಕರಿಗೆ ಇದು ಉಪಯುಕ್ತವಾಗಿದೆ ಎನ್ನುತ್ತಾರೆ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಉಪನ್ಯಾಸಕ ಡಾ.ಕುಮಾರಸ್ವಾಮಿ.

ಪ್ರತ್ಯೇಕ ವೃತ್ತಿಪರ ವೃಂದ ರಚನೆ ಪ್ರಸ್ತಾವನೆ
ಜಿಲ್ಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು (ಡಿಡಿಪಿಐ) ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಸ್ಥಾನದಲ್ಲಿರುವವರು ಶಿಕ್ಷಕರಾಗಿರುವುದಿಲ್ಲ. ಶಿಕ್ಷಕರಾಗಿರುವವರಿಗೆ ಈ ಸ್ಥಾನ ಸಿಗುವ ಅವಕಾಶ ಕ್ಷೀಣ. ಈ ತಾರತಮ್ಯ ಹೋಗಲಾಡಿಸಲು ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ವೃತ್ತಿಪರ ವೃಂದ ಸೃಜಿಸುವಂತೆ ಸರ್ಕಾರಕ್ಕೆ ಡಿಎಸ್ಇಆರ್ಟಿ ಪ್ರಸ್ತಾವನೆ ಕಳುಹಿಸಿದೆ.  ಶಿಕ್ಷಕರಿಂದಲೇ ಜ್ಯೇಷ್ಠತೆ ಆಧಾರದಲ್ಲಿ ಡಿಡಿಪಿಐ ಮತ್ತು ಬಿಇಒ ಹುದ್ದೆಗೆ ನೇಮಕಾತಿ ಆಗಬೇಕು. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸುಧಾರಣೆಗೆ ಸಾಧ್ಯವಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ. ನ್ಯಾಷನಲ್ ಕೌನ್ಸಿಲ್ ಆಫ್ ಟೀಚರ್ಸ್ ಆ್ಯಕ್ಟ್(ಎನ್ಸಿಟಿಎ)ನಲ್ಲೂ ಇದೇ ವಿಚಾರವನ್ನು ಹೇಳಲಾಗಿದೆ. ಈ ರೀತಿಯ ನೇಮಕಾತಿ ಕೇರಳ, ತಮಿಳ್ನಾಡು, ಆಂಧ್ರಪ್ರದೇಶ ಮತ್ತಿತರ ರಾಜ್ಯಗಳಲ್ಲಿದೆ. ಕರ್ನಾಟಕದಲ್ಲೂ ಜಾರಿಗೆ ತರುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಡಿಎಸ್ಇಆರ್ಟಿ ನಿರ್ದೇಶಕ ರಾಮರಾವ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.

ಶಿಕ್ಷಕರಿಗೆ ಪ್ರಯೋಜನಕಾರಿಯಾದ ಈ ಮಾಹಿತಿ ಕೋಶವನ್ನು ಇನ್ನಷ್ಟು ಅಭಿವೃದ್ಧಿಪಡಿಸುವ ದಿಶೆಯಲ್ಲಿ ಯೂನಿಸೆಫ್ ಸಹಕಾರವನ್ನು ಯಾಚಿಸಲು ನಿರ್ಧರಿಸಲಾಗಿದೆ. ಈ ಮಾಹಿತಿ ಕೋಶ ರಚಿಸುವಲ್ಲಿ ಶಿಕ್ಷಕ ವೃಂದ ಉತ್ಸಾಹದಿಂದ ಕೈಜೋಡಿಸುತ್ತಿದೆ.
- ರಾಮರಾವ್, ಡಿಎಸ್ಇಆರ್ಟಿ ನಿರ್ದೇಶಕ

- ಆತ್ಮಭೂಷಣ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement