ಎ, ಬಿ ವರ್ಗದ ಗಣಿಗೂ ಬಿತ್ತು ಕುತ್ತು
ಬಳ್ಳಾರಿ: ಕೇಂದ್ರ ಉನ್ನತಾಧಿಕಾರ ಸಮಿತಿ (ಸಿಇಸಿ) ಶಿಫಾರಸಿನಂತೆ 'ಸಿ' ವರ್ಗದ ಗಣಿ ಗುತ್ತಿಗೆಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದೆ. ಇದನ್ನು ಹೊರತುಪಡಿಸಿ ಇತರೆ ವರ್ಗದಲ್ಲಿರುವ 14 ಗಣಿ ಕಂಪನಿಗಳು ಗಣಿ ಗುತ್ತಿಗೆಯ ನಿಯಮಾವಳಿ ರದ್ದುಪಡಿಸಿ, ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿವೆ. ಆದ್ದರಿಂದ ಇವುಗಳ ಗಣಿ ಗುತ್ತಿಗೆ ರದ್ದುಪಡಿಸಬೇಕೆಂಬ ಪ್ರಸ್ತಾವನೆ ಇದೀಗ ಬೆಂಗಳೂರಿನ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಿದೆ. ಈ ಪ್ರಸ್ತಾವನೆ ಗಣಿ ಮಾಲೀಕರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.
ಈಗಾಗಲೇ ಸುಪ್ರೀಂ ಕೋರ್ಟ್ ಸಿಇಸಿ ಶಿಫಾರಸಿನ ಮೇಲೆ ಸಿ ವರ್ಗೀಕರಣದಲ್ಲಿರುವ 51 ಗಣಿ ಕಂಪನಿಗಳನ್ನು ರದ್ದುಪಡಿಸಿ ಆದೇಶಿಸಿತ್ತು. ಇದೀಗ 'ಎ', 'ಎ1' ಮತ್ತು 'ಬಿ', 'ಬಿ1' ವರ್ಗೀಕರಣದಲ್ಲಿರುವ ಕೆಲವು ಗಣಿ ಕಂಪನಿಗಳೂ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದರಿಂದ ಇವುಗಳ ಗಣಿ ಗುತ್ತಿಗೆಯನ್ನು ರದ್ದುಪಡಿಸಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರ ಎಚ್.ಆರ್. ಶ್ರೀನಿವಾಸ್ ಅವರು ವಾಣಿಜ್ಯ ಮತ್ತು ಕೈಗಾರಿಕೆ (ಗಣಿ ಮತ್ತು ಜವಳಿ) ಇಲಾಖೆ ಕಾರ್ಯದರ್ಶಿಯ ಕೆ. ಅಮರನಾರಾಯಣ್ಗೆ ಜೂ.3ರಂದು ಪತ್ರ ಬರೆದಿದ್ದಾರೆ.
ಪತ್ರದಲ್ಲಿ ಏನಿದೆ?: 'ಕನ್ನಡಪ್ರಭ'ಕ್ಕೆ ಲಭ್ಯವಾದ ಪತ್ರದ ಸಾರಾಂಶ ಹೀಗಿದೆ: ಈಗಾಗಲೇ 2 ವರ್ಷಗಳ ಅವಧಿಯಲ್ಲಿ ಗಣಿ ಗುತ್ತಿಗೆ ಪರವಾನಗಿ ರದ್ದತಿಗೆ ಹಲವು ಶಿಫಾರಸುಗಳನ್ನು ಮಾಡಲಾಗಿದೆ. ತಾವು ಗಣಿ ಗುತ್ತಿಗೆ ರದ್ದತಿಗೆ ಕಳುಹಿಸುತ್ತಿರುವ ಶಿಫಾರಸಿನಲ್ಲಿ 'ಸಿ' ವರ್ಗದ ಗಣಿ ಕಂಪನಿಗಳಿವೆ ಎಂದು ಶಿಫಾರಸುಗಳನ್ನು ಹಿಂದಕ್ಕೆ ಕಳುಹಿಸಲಾಗಿದೆ. ಆದರೆ, 'ಸಿ' ವರ್ಗವಲ್ಲದೇ 'ಎ' ಮತ್ತು 'ಬಿ' ವರ್ಗಗಳ ಕೆಲವು ಕಂಪನಿಗಳೂ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿವೆ. ತಾವು ಶಿಫಾರಸು ಮಾಡಿರುವ 31ರಲ್ಲಿ 16 ಗಣಿ ಕಂಪನಿಗಳು 'ಸಿ' ವರ್ಗದಲ್ಲಿದ್ದು, 14 ಗಣಿ ಕಂಪನಿಗಳು 'ಎ', 'ಬಿ' ವರ್ಗಗಳಿವೆ. ಅವೂ ಅಕ್ರಮ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ. ಈ ಕಂಪನಿಗಳ ಅಕ್ರಮ ಚಟುವಟಿಕೆ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಶಿಫಾರಸಿನಲ್ಲಿರುವ ಎ, ಬಿ ವರ್ಗದ ಕಂಪನಿಗಳು: 'ಎ' ವರ್ಗದಲ್ಲಿ ಬರುವ ವರಲಕ್ಷ್ಮಿ ಮೈನಿಂಗ್ ಕಂಪನಿ, 'ಎ1' ವರ್ಗದಲ್ಲಿ ಬರುವ ಶ್ರೀಷಾ ಎಂಟರ್ ಪ್ರೈಸಸ್, 'ಬಿ' ವರ್ಗದ ಕೆ.ಆರ್. ಕವಿರಾಜ್, ಕೆ.ಎನ್. ಶ್ರೀನಿವಾಸ್, ಕೆ.ಎಂ. ಪಾರ್ವತಮ್ಮ, ಎನ್. ಶೇಕ್ಸಾಬ್, ಎಸ್.ಬಿ. ಮಿನರಲ್ಸ್, ರಾಘವೇಂದ್ರ ರಾವ್ (ಜಂತಕಲ್ ಎಂಟರ್ಪ್ರೈಸಸ್), ಕುಮಾರಸ್ವಾಮಿ ಮೈನಿಂಗ್ ಕಂಪನಿ, ನಾರಾಯಣ ಮೈನ್ಸ್ ಪ್ರೈವೇಟ್ ಲಿಮಿಟೆಡ್, 'ಬಿ1'ನಲ್ಲಿ ಬರುವ ಮೆಹಬೂಬ್ ಟ್ರಾನ್ಸ್ಪೋರ್ಟ್ ಕಂಪನಿ, ಹಿಂಡ್ ಟ್ರೇಡರ್ಸ್, ಎನ್. ರತ್ನಯ್ಯ, ಓಂಕಾರಮ್ಮ ಗಣಿ ಕಂಪನಿಗಳನ್ನು ಹೆಸರಿಸಲಾಗಿದೆ.
ಆತಂಕ ತಂದ ಶಿಫಾರಸು: ಒಂದು ಕಡೆ 'ಸಿ' ವರ್ಗದ ಗಣಿ ಮಾಲೀಕರು ಸುಪ್ರೀಂ ಕೋರ್ಟ್ನ ಆದೇಶದಿಂದ ಆತಂಕಕ್ಕೆ ಒಳಗಾಗಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದರೆ, ಇತ್ತ 'ಎ', 'ಬಿ' ವರ್ಗಗಳು ಕೆಲವು ಗಣಿ ಕಂಪನಿಗಳು, ಗುತ್ತಿಗೆ ಪರವಾನಗಿಯ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮ ಚಟುವಟಿಕೆಯಲ್ಲಿ ತೊಡಗಿವೆ ಎಂಬ ವಿಷಯ ಇದೀಗ ಚರ್ಚೆಗೆ ಗ್ರಾಸವಾಗಿದೆ. ಒಟ್ಟಾರೆಯಾಗಿ 31 ಗಣಿ ಕಂಪನಿಗಳ ರದ್ದತಿಗೆ ಪತ್ರ ಬರೆದಿದ್ದರು. ಅದರಲ್ಲಿ 14 ಗಣಿ ಕಂಪನಿಗಳು 'ಎ' ಮತ್ತು 'ಬಿ' ವರ್ಗದಲ್ಲಿದ್ದರೆ, ಉಳಿದವು 'ಸಿ' ವರ್ಗದಲ್ಲಿ ಬರುತ್ತವೆ.
ರಾಜ್ಯದಲ್ಲಿ ನಡೆದಿರುವ ಗಣಿಗಾರಿಕೆ ಕುರಿತು ಈಗಾಗಲೇ ಲೋಕಾಯುಕ್ತ ತನಿಖೆ ನಡೆದಿದೆ. ಸಿಬಿಐ, ಸಿಇಸಿಗಳೂ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದರೂ, ಇದೀಗ 'ಎ' ಮತ್ತು 'ಬಿ' ವರ್ಗದಲ್ಲಿರುವ ಕೆಲವು ಕಂಪನಿಗಳು ಅಕ್ರಮದಲ್ಲಿ ತೊಡಗಿವೆ ಎಂಬ ಅಧಿಕಾರಿಗಳ ಪತ್ರದಿಂದ ಗಣಿಗಾರಿಕೆ ಕುರಿತ ತನಿಖೆ ಮುಗಿಯುವಂತೆ ಕಾಣುತ್ತಿಲ್ಲ. ಇನ್ನು ತನಿಖೆ ನಡೆದಂತೆಲ್ಲ ಏನೆಲ್ಲ ಅಕ್ರಮಗಳು ಬಯಲಾಗುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.
- ಶಶಿಧರ ಮೇಟಿ