ಕನ್ನಡಿಗರಿಗೆ ತಾಯಿ ಬಗ್ಗೆ ಪ್ರೀತಿ ಇರಲಿ: ಸಿಎಂ
ಕ.ಪ್ರ.ವಾರ್ತೆ ಬೆಂಗಳೂರು ಜೂ. 10
ಕನ್ನಡಿಗರಲ್ಲಿ ಅಭಿಮಾನಕ್ಕಿಂತ ದುರಭಿಮಾನ ಹೆಚ್ಚಾಗಿದೆ. ಕನಿಷ್ಠ ತಾಯಿ ಭಾಷೆ ಬಗೆಗೆ ಪ್ರೀತಿ- ಅಭಿಮಾನ ಇಟ್ಟುಕೊಳ್ಳಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರ ಖಾಸಗಿ ಹೊಟೇಲ್‌ನಲ್ಲಿ ಆಯೋಜಿಸಿದ್ದ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ 47ನೇ ಜನ್ಮದಿನ ಹಾಗೂ ಬೃಹತ್ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಸಿದ್ದರಾಮಯ್ಯ ಮಾತನಾಡಿದರು. ನಮ್ಮ ನಾಡಿನ 6 ಕೋಟಿ 11ಲಕ್ಷ ಜನರಲ್ಲಿ ಬಹುತೇಕರು ಕನ್ನಡದ ಬಗ್ಗೆ ಅಸಡ್ಡೆ ತೋರಿಸುತ್ತಿದ್ದಾರೆ. ಇದು ತಪ್ಪು. ಕನಿಷ್ಠ ತಾಯಿ ಭಾಷೆಯಾದ ಕನ್ನಡದ ಬಗ್ಗೆ ಅಭಿಮಾನ ಇಟ್ಟುಕೊಳ್ಳಬೇಕು ಎಂದರು. ಪ್ರತಿಯೊಬ್ಬರೂ ನೆಲ, ಜಲ, ಸಂಸ್ಕೃತಿ ಬಗ್ಗೆ ಅಭಿಮಾನ ಇಟ್ಟುಕೊಂಡರೇ ರಾಜ್ಯ ಅಭಿವೃದ್ಧಿ ಸಾಧ್ಯ. ಸರ್ಕಾರ ಇದಕ್ಕೆ ಬದ್ಧವಾಗಿದೆ. ಸರ್ಕಾರೇತರ ಸಂಸ್ಥೆಗಳು ಸಹ ಈ ವಿಚಾರದಲ್ಲಿ ಕೈ ಜೋಡಿಸಬೇಕು. ಗಡಿ ನಾಡಿನಲ್ಲಿ ಶಾಲೆ ಮತ್ತು ಮೂಲ ಸೌಕರ್ಯ ಕೊರತೆ ಇದೆ. ಅಲ್ಲಿನ ಸಮಸ್ಯೆಗಳಿಗೆ ಪರಿಹಾರ ನೀಡುವ ಬಗ್ಗೆ ಗಮನ ಹರಿಸುತ್ತೇವೆ ಎಂದರು. ಕನ್ನಡ ನಾಡು ನುಡಿಗಾಗಿ ನಾರಾಯಣಗೌಡ ಅವರು ನಡೆಸುತ್ತಿರುವ ಹೋರಾಟ ಮತ್ತಷ್ಟು ಬಲಿಷ್ಠಗೊಳ್ಳಲಿ ಎಂದು ಹಾರೈಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ಮಾತನಾಡಿ, ಕನ್ನಡ ನಾಡು ನುಡಿಗಾಗಿ ರಕ್ಷಣಾ ವೇದಿಕೆ ಕಾರ್ಯನಿರ್ವಹಿಸುತ್ತಿದೆ. ನಾವೆಲ್ಲರೂ ಕನ್ನಡ ಕಟ್ಟುವುದಕ್ಕಾಗಿ ಕೆಲಸ ಮಾಡಬೇಕು. ಇಂದು ನಾರಾಯಣಗೌಡರ ಹುಟ್ಟುಹಬ್ಬದ ಪ್ರಯುಕ್ತ ರಕ್ತದಾನ ಏರ್ಪಡಿಸಿರುವುದು ಉತ್ತಮವಾದ ಕೆಲಸ. ರಕ್ತ ಜೀವಾಮೃತ ಇದ್ದಂತೆ. ಇದರಿಂದ ಒಂದು ಪ್ರಾಣ ಉಳಿಸಬಹುದು. ಹೀಗಾಗಿ ಪ್ರತಿಯೊಬ್ಬರು ರಕ್ತದಾನ ಮಾಡಿ ಎಂದರು.
ಈ ಸಮಾರಂಭದಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕೃಷಿ ಸಚಿವ ಕೃಷ್ಣಭೈರೇಗೌಡ ಹಾಜರಿದ್ದರು.