ಡಿಕೆಶಿ ಶೀಘ್ರ ಪ್ರಮಾಣ: ಡಾ.ಪರಮೇಶ್ವರ
ಶಾಸಕ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲಿಯೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ...
ಕ.ಪ್ರ.ವಾರ್ತೆ ಬೆಂಗಳೂರು ಜೂ.10
ಶಾಸಕ ಡಿ.ಕೆ. ಶಿವಕುಮಾರ್ ಅವರು ಶೀಘ್ರದಲ್ಲಿಯೇ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಹೇಳಿದ್ದಾರೆ.
ಆರನೇ ಬಾರಿ ಶಾಸಕರಾಗಿರುವ ಶಿವಕುಮಾರ್ ಅವರನ್ನು ಸದಾಶಿವನಗರದ ನಿವಾಸದಲ್ಲಿ ಭೇಟಿ ಮಾಡಿದ ನಂತರ ಪರಮೇಶ್ವರ್ ಸುದ್ದಿಗಾರರಿಗೆ ಸೋಮವಾರ ಈ ವಿಷಯ ತಿಳಿಸಿದರು.
ಶಿವಕುಮಾರ್ ಅವರೊಂದಿಗಿನ ಭೇಟಿ ಸೌಜನ್ಯದ್ದಾಗಿದ್ದು, ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಚುನಾವಣೆ ನಂತರ ಭೇಟಿ ಮಾಡಿರಲಿಲ್ಲ. ಅವರು ನಿರಂತರ ಕಾರ್ಯಕ್ರಮಗಳಿಂದಾಗಿ ಪ್ರಮಾಣವಚನ ಸ್ವೀಕರಿಸಿರಲಿಲ್ಲ ಅಷ್ಟೇ. ಶೀಘ್ರವೇ ಪ್ರಮಾಣ ಸ್ವೀಕರಿಸಲಿದ್ದಾರೆ ಎಂದರು.
ಸಚಿವ ಸ್ಥಾನ ನೀಡಲಿಲ್ಲ, ಅದಕ್ಕೇ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದು ಶಿವಕುಮಾರ್ ಎಂದೂ, ಎಲ್ಲೂ ಹೇಳಿಲ್ಲ. ಶಾಸಕ, ಸಚಿವ ಹಾಗೂ ಪಕ್ಷದ ಕಾರ್ಯಾಧ್ಯಕ್ಷರಾಗಿ ಹಲವು ಜವಾಬ್ದಾರಿಯನ್ನು ಅವರು ನಿರ್ವಹಿಸಿದ್ದಾರೆ. ಪ್ರಮಾಣವಚನ ಸ್ವೀಕರಿಸದ್ದನ್ನೇ ಪ್ರತಿಪಕ್ಷಗಳು ಸುಮ್ಮನೆ ದೊಡ್ಡದು ಮಾಡುತ್ತಿವೆ ಎಂದು ಒಂದೂವರೆ ತಾಸಿನ ಮಾತುಕತೆ ನಂತರ ಹೇಳಿದರು.
ಡಿ.ಕೆ. ಶಿವಕುಮಾರ್ ಅವರು ಸಚಿವರಾಗಬೇಕು ಎಂಬುದು ಬಹಳಷ್ಟು ಜನರ ಆಶಯವಾಗಿದೆ. ಈ ವಿಚಾರ ಹೈಕಮಾಂಡ್ ಗಮನದಲ್ಲಿದೆ. ನಮ್ಮ ಬಲಿಷ್ಠ ಹೈಕಮಾಂಡ್ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವನ್ನೇ ತೆಗೆದುಕೊಳ್ಳಲಿದೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದರು.
ಸಚಿವ ಸ್ಥಾನ ಸಿಗದ್ದಕ್ಕೂ ಪ್ರಮಾಣವಚನ ಸ್ವೀಕರಿಸದ್ದಕ್ಕೂ ಯಾವುದೇ ಸಂಬಂಧ ಇಲ್ಲ. ಕನಕಪುರ ಕ್ಷೇತ್ರದ ಜನ ನನ್ನನ್ನು 31 ಸಾವಿರ ಮತಗಳ ಅಂತರದಿಂದ ಆಯ್ಕೆ ಮಾಡಿದ್ದಾರೆ. ನನ್ನ ಕ್ಷೇತ್ರದ ಮತದಾರರು ಹಲವು ಹರಕೆ ಹೊತ್ತಿದ್ದರು. ಆ ಪ್ರಕಾರ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿದ್ದೇನೆ ಎಂದು ಶಿವಕುಮಾರ್ ಹೇಳಿದರು. ಹೈಕಮಾಂಡ್ ಕೂಡ ನನಗೆ ದೇವಾಲಯ ಇದ್ದಂತೆ. ಅದಕ್ಕೇ ದೆಹಲಿಗೆ ಭೇಟಿ ಕೊಟ್ಟು ಎಲ್ಲ ನಾಯಕರನ್ನು ಭೇಟಿ ಮಾಡಿದ್ದೇನೆ. ಕಾಂಗ್ರೆಸ್ ನನ್ನನ್ನು ಬೆಳೆಸಿದೆ. ಜನರ ಪ್ರೀತಿ ಮತ್ತು ಹೈಕಮಾಂಡ್ ಹಾಗೂ ಸಿದ್ಧಾಂತಗಳಿಗೆ ನಾನು ಬದ್ಧನಾಗಿದ್ದು, ಜನರ ಆಶೋತ್ತರಗಳಿಗೆ ಸ್ಪಂದಿಸುತ್ತೇನೆ ಎಂದರು.
ನಾನು ಕುಂಬಾರ ಮಾಡಿದ ಮಡಿಕೆಯಲ್ಲ. ಕಂಚಿನ ಕೊಡ. ಉಪ್ಪುಹಾಕಿ ಉಜ್ಜಿದಷ್ಟೂ ಹೊಳಪಾಗುತ್ತೇನೆ. ಒಳ್ಳೆಯ ಸಮಯ ನೋಡಿ ಪ್ರಮಾಣವಚನ ಸ್ವೀಕರಿಸುತ್ತೇನೆ ಎಂದು ಶಿವಕುಮಾರ್ ಮಾರ್ಮಿಕವಾಗಿ ನುಡಿದರು.