ರೈತರ ಅಭ್ಯುದಯಕ್ಕೆ ಸಮಗ್ರ ಕೃಷಿ ನೀತಿ ಅಗತ್ಯ: ಪುಟ್ಟಣ್ಣಯ್ಯ
ಹಾವೇರಿ: ರೈತರ ಅಭ್ಯುದಯಕ್ಕೆ ಸಮಗ್ರ ಕೃಷಿ ನೀತಿ ಜಾರಿಗೆ ತರುವುದು ಅತಿ ಅವಶ್ಯಕ ಎಂದು ರೈತ ಸಂಘದ ಮುಖಂಡ, ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅಭಿಪ್ರಾಯಪಟ್ಟರು. ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಸೋಮವಾರ ಇಲ್ಲಿನ ರೈತ ಹುತಾತ್ಮ ವೀರಗಲ್ಲಿಗೆ ಮಾಲಾರ್ಪಣೆ ಮಾಡಿದ ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿನ ಶೇ.70ರಷ್ಟು ಉದ್ಯಮಗಳು ರೈತರನ್ನು ಆಶ್ರಯಿಸಿವೆ. ಹೊಟೇಲ್, ಹತ್ತಿ ಗಿರಣಿಗಳು ಸೇರಿದಂತೆ ಮತ್ತಿತರ ಉದ್ಯಮಗಳಿಗೆ ಬೇಕಾಗುವ ಸಾಮಗ್ರಿಗಳನ್ನು ರೈತರೇ ಪೂರೈಸುತ್ತಾರೆ ಎಂದರು. ಸರ್ಕಾರ ರೈತರ ರಕ್ಷಣೆಗೆ ಸೂಕ್ತ ನಿಗಾ ವಹಿಸದಿದ್ದಲ್ಲಿ ದೇಶದಲ್ಲಿ ಆಹಾರ ಭದ್ರತೆ ಸಮಸ್ಯೆ ಎದುರಾಗಲಿದೆ ಎಂದು ಎಚ್ಚರಿಸಿದ ಪುಟ್ಟಣ್ಣಯ್ಯ, ಗೋಲಿಬಾರ್ನಂಥ ದೌರ್ಜನ್ಯಗಳು ರೈತರ ಮೇಲೆ ನಡೆಯದಂತೆ ತಡೆಯಬೇಕಿದೆ. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು ಮಾತ್ರವಲ್ಲದೇ ಸಮಾಜದಲ್ಲಿ ರೈತನೂ ಮುಖ್ಯ ವಾಹಿನಿಯಲ್ಲಿ ಗುರುತಿಸುವಂತಾಗಬೇಕೆಂದರು. ದೇಶಕ್ಕೆ ಅನ್ನ ನೀಡುವ ರೈತ ಆರ್ಥಿಕ ತೊಂದರೆಯಿಂದ ಇನ್ನೊಬ್ಬರ ಎದುರು ಕೈಚಾಚಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ರೈತ ಆರ್ಥಿಕ ಸಬಲತೆ ಸಾಧಿಸುವ ಮೂಲಕ ವೃತ್ತಿಪರತೆ ಹೆಚ್ಚಿಸಿಕೊಂಡು ಹೋಗಲು ಕೃಷಿ ನೀತಿ ಜಾರಿಗೆ ತರುವುದು ತೀರಾ ಅವಶ್ಯವೆಂದರು.
ಪರಿಹಾರಕ್ಕೆ ಒತ್ತಾಯ: ಹಾವೇರಿಯಲ್ಲಿ ರೈತರ ಮೇಲೆ ನಡೆದ ಗೋಲಿಬಾರ್ನಲ್ಲಿ ಗಾಯಗೊಂಡ ಗಾಯಾಳುಗಳನ್ನು ಸರ್ಕಾರ ತಲಾ 5 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ ಅವರು, ಬಿಜೆಪಿ ಸರ್ಕಾರದಲ್ಲಿ ಮಂಡಿಸಲಾಗಿರುವ ಗೋಲಿಬಾರ್ ವರದಿ ಬಹಿರಂಗಪಡಿಸುವ ಮೂಲಕ ರೈತರಿಗೆ ಎಲ್ಲ ನೆರವು ಕಲ್ಪಿಸಿಕೊಡಲು ವಿಧಾನಸೌಧದಲ್ಲಿ ಹೋರಾಡಲಾಗುವುದು ಎಂದರು.