ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸ್ಥಳೀಯ ಸಂಸ್ಥೆಗಳ ದಾಖಲೆ ಮೂರು ತಿಂಗಳೊಳಗೆ ಗಣಕೀಕರಣಕ್ಕೆ 'ಹೈ' ಆದೇಶ

Mainashree
Updated On : 10 Jun 2013, 9:07 am

ಬೆಂಗಳೂರು:  ನಗರಾಭಿವೃದ್ಧಿ, ಕಂದಾಯ, ಅರಣ್ಯ ಇಲಾಖೆ ಹಾಗೂ ಬಿಬಿಎಂಪಿ ಸೇರಿದಂತೆ ಸ್ಥಳೀಯ ಸಂಸ್ಥೆಗಳ ದಾಖಲೆಗಳನ್ನು 3 ತಿಂಗಳೊಳಗೆ ಗಣಕೀಕರಣಗೊಳಿಸಬೇಕೆಂದು ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಭೂ ದಾಖಲೆಗಳ ಅಕ್ರಮ ವರ್ಗಾವಣೆ ನಿಯಂತ್ರಿಸಲು ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ಚನ್ನವೀರಗೌಡ ಎಂಬುವವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹುಲವಾಡಿ ಜಿ. ರಮೇಶ ಅವರ ಪೀಠ ಈ ಗಡುವು ನೀಡಿದೆ. ಅಲ್ಲದೇ ಇಲಾಖೆಗಳಲ್ಲಿ ನಾಪತ್ತೆಯಾದ ದಾಖಲೆಗಳ ಬಗ್ಗೆ ಗುಪ್ತ ತನಿಖೆ ನಡೆಸಿ ಪತ್ತೆ ಹಚ್ಚಬೇಕು. ಹಾಗೂ ಲಭ್ಯವಿಲ್ಲದ ದಾಖಲೆಗಳ ಬಗ್ಗೆ ಸಮೀಕ್ಷೆ ನಡೆಸಿ ಸಮಗ್ರವಾಗಿ ಸಿದ್ದಪಡಿಸಬೇಕು ಎಂದು ಪೀಠ ಸರ್ಕಾರಕ್ಕೆ ನಿರ್ದೇಶಿಸಿದೆ. ಸರ್ಕಾರಿ ಜಮೀನು ಕುರಿತು ಸಮಗ್ರ ದಾಖಲೆಗಳ ದತ್ತಾಂಶಗಳನ್ನು ಗಣಕೀಕೃತಗೊಳಿಸುವ 'ಭೂಮಿ ಯೋಜನೆ' ಪ್ರಗತಿಯಲ್ಲಿದೆ. ಎಲ್ಲಾ ಸ್ಥಳೀಯ ಸಂಸ್ಥೆಗಳ ದಾಖಲೆಗಳನ್ನು ಗಣಕೀಕರಣ ಮಾಡಲಾಗುತ್ತಿದ್ದು ಇದಕ್ಕೆ ಕಾಲಾವಕಾಶ ನೀಡಬೇಕು ಎಂದು ಸರ್ಕಾರಿ ವಕೀಲರು ಕೋರಿದರು. ರಾಜ್ಯದಲ್ಲಿ ಸರ್ಕಾರಿ ಜಮೀನು ಕುರಿತ ದಾಖಲೆಗಳ ಅಕ್ರಮ ವರ್ಗಾವಣೆ ನಡೆಸುತ್ತಿದೆ. ಅಲ್ಲದೇ, ಸರ್ಕಾರಿ ಜಮೀನು ಕಬಳಿಸಿ ಬಡಾವಣೆ ನಿರ್ಮಿಸಲಾಗುತ್ತಿದೆ. ಅಕ್ರಮ ತಡೆಗಟ್ಟಲು ಸರ್ಕಾರ ವಿಫಲವಾಗಿರುವ ಸರ್ಕಾರಿ ಜಮೀನು ರಕ್ಷಣೆಯನ್ನು ನಿರ್ಲಕ್ಷ್ಯಿಸಿದೆ. ಹೈಕೋರ್ಟ್ ಹಲವು ಬಾರಿ ನಿರ್ದೇಶನ ನೀಡಿದ್ದರೂ ಸರ್ಕಾರಿ ಜಮೀನುಗಳ ದಾಖಲೆ ಗಣಕೀಕರಣ ಪೂರ್ಣಗೊಳಿಸಿಲ್ಲ ಎಂದು ಅರ್ಜಿದಾರರ ಪರ ವಕೀಲರು ಪೀಠದ ಗಮನಕ್ಕೆ ತಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement