ಪ್ರಧಾನ ಸುದ್ದಿ

ಅಡ್‌ಜಸ್ಟ್‌ವಾಣಿ

'ಲೋಹ ಪುರುಷ' ಲಾಲಕೃಷ್ಣ ಆಡ್ವಾಣಿ ಅವರು ಪಕ್ಷದ ಪ್ರಮುಖ ಮೂರು ಹುದ್ದೆಗಳಿಗೆ ನೀಡಿದ್ದ ರಾಜಿನಾಮೆಯಿಂದಾಗಿ ಬಿಜೆಪಿಯಲ್ಲಿ ಉಂಟಾಗಿದ್ದ ಆಂತರಿಕ...

ರಾಜಿನಾಮೆ ಹಿಂಪಡೆಯಬೇಕು ಎಂಬ ನಾಯಕರ ಹಠಕ್ಕೆ ಆಡ್ವಾಣಿ ಮಣಿದಿದ್ದಾರೆ. ಬಿಜೆಪಿ ನಾಯಕರು ಮತ್ತು ಆರ್‌ಎಸ್‌ಎಸ್ ನಾಯಕರು ವರಿಷ್ಠ ನಾಯಕನ ಮನವೊಲಿಕೆ ಬಗ್ಗೆ ಇನ್ನಿಲ್ಲದ ಕಸರತ್ತು ನಡೆಸಿದ್ದರು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನಿರ್ಧಾರ ಬದಲಿಸುವಂತೆ ಆಡ್ವಾಣಿಗೆ ಮನವಿ ಮಾಡಿದರು. ಬಿಜೆಪಿಯಲ್ಲಿನ ಕಿರಿಯರ ಒತ್ತಡ ಪ್ರೀತಿ ಮತ್ತು ಮಾತೃ ಸಂಘಟನೆಯ ಆದೇಶ ಪ್ರಕಾರ ಆಡ್ವಾಣಿ ಕೊನೆಗೂ ಅಡ್ಜಸ್ಟ್ ಮಾಡಿಕೊಳ್ಳಲೇಬೇಕಾಯಿತು.

- ಕನ್ನಡಪ್ರಭ ಪ್ರತಿನಿಧಿಯಿಂದ
ನವದೆಹಲಿ:
'ಲೋಹ ಪುರುಷ' ಲಾಲಕೃಷ್ಣ ಆಡ್ವಾಣಿ ಅವರು ಪಕ್ಷದ ಪ್ರಮುಖ ಮೂರು ಹುದ್ದೆಗಳಿಗೆ ನೀಡಿದ್ದ ರಾಜಿನಾಮೆಯಿಂದಾಗಿ ಬಿಜೆಪಿಯಲ್ಲಿ ಉಂಟಾಗಿದ್ದ ಆಂತರಿಕ ಬಿಕ್ಕಟ್ಟು ಸಂಘ ಪರಿವಾರದ ಮಧ್ಯಸ್ಥಿಕೆಯಿಂದಾಗಿ ತಾತ್ಕಾಲಿಕವಾಗಿ ಶಮನಗೊಂಡಿದೆ. ಆದರೆ, ಪ್ರಧಾನಿ ಗಾದಿಗೇರುವ ಕನಸು ಕಾಣುತ್ತಿದ್ದ ಆಡ್ವಾಣಿ ಅವರ ಬೇಗುದಿಯಿನ್ನೂ ಶಮನವಾಗಿಲ್ಲ.
ಪಕ್ಷದ ಮರ್ಯಾದೆ ಕಾಪಾಡುವ ಮತ್ತು ಆ ಮೂಲಕ ಇದುವರೆಗೆ ತಾವು ದಕ್ಕಿಸಿಕೊಂಡು ಬಂದಿರುವ ಎತ್ತರದ ವ್ಯಕ್ತಿತ್ವವನ್ನು ಉಳಿಸಿಕೊಂಡು ಹೋಗಲಾದರೂ ಹಠ ಬಿಡಬೇಕೆಂಬ ಪಕ್ಷದ ಕಿರಿಯ ನಾಯಕರ ಮನವಿ ಹಾಗೂ ಸಂಘ ಪರಿವಾರದ ನಾಯಕರ ಅಣತಿಯಂತೆ ತಾವು ನೀಡಿದ್ದ ರಾಜಿನಾಮೆ ಸ್ವೀಕರಿಸುವಂತೆ ಒತ್ತಾಯಿಸದಿರಲು ಆಡ್ವಾಣಿ ನಿರ್ಧರಿಸಿದ್ದಾರೆ.
ಆಡ್ವಾಣಿ ಅವರ ಈ ನಿರ್ಧಾರ ಒಲ್ಲದ ಮನಸ್ಸಿನದ್ದು.
ಇಡೀ ದಿನ ನಡೆದ ಸಾಮೂಹಿಕ ಮತ್ತು ಸಂಘಟಿತ ಶಾಂತಿ ಸಂಧಾನ ಪ್ರಯತ್ನಗಳು ಸಂಜೆ ಹೊತ್ತಿಗೆ ಫಲ ನೀಡಿದವು. ಸಂಜೆ ಏಳರ ವೇಳೆಗೆ ಆಡ್ವಾಣಿ ಅವರ ನಿವಾಸದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಬಿಕ್ಕಟ್ಟು ಬಗೆಹರಿದಿರುವುದನ್ನು ಪ್ರಕಟಿಸಿದರು. ಆದರೆ, ಪತ್ರಕರ್ತರು ಎತ್ತಿದ ಹತ್ತಾರು ಪ್ರಶ್ನೆಗಳಿಗೆ ಅವರಲ್ಲಿ ಉತ್ತರ ಇರಲಿಲ್ಲ. ಆಡ್ವಾಣಿ ಅವರೇ ಸುದ್ದಿಗೋಷ್ಠಿಯಲ್ಲಿ ಹೇಳಿಕೆ ನೀಡುತ್ತಾರೆಂದು ತಿಳಿಸಲಾಗಿತ್ತು. ಆದರೆ, ಇನ್ನೂ ಕುದಿಮೌನ ಧರಿಸಿದ್ದ ಅಡ್ವಾಣಿ ಅವರನ್ನು ಹೊರಗಿಟ್ಟೇ ಬಿಜೆಪಿ ನಾಯಕರ ಸಮೂಹ ಸುದ್ದಿಗೋಷ್ಠಿ ನಡೆಸಿತು.
ಸುದ್ದಿಗೋಷ್ಠಿಯಲ್ಲಿ ರಾಜನಾಥ್ ಸಿಂಗ್ ಅವರು ಮೂರು ಪ್ಯಾರಾಗಳ ಹೇಳಿಕೆಯನ್ನು ಬಿಡುಗಡೆ ಮಾಡಿದರು. ಆ ಹೇಳಿಕೆಯಲ್ಲಿ ಕೂಡಾ ಆಡ್ವಾಣಿ ಅವರು ರಾಜಿನಾಮೆ ಹಿಂದಕ್ಕೆ ಪಡೆದಿದ್ದಾರೆಂದು ಸ್ಪಷ್ಟಪಡಿಸಿಲ್ಲ.
ರಾಜನಾಥ್ ಸಿಂಗ್ ಹೇಳಿದ್ದು: ಆಡ್ವಾಣಿ ಅವರು ಇದುವರೆಗೆ ನಮಗೆ ಮಾರ್ಗದರ್ಶನ ಮಾಡಿಕೊಂಡು ಬಂದಿದ್ದಾರೆ. ಮುಂದೆಯೂ ಅವರು ನಮಗೆ ಮಾರ್ಗದರ್ಶನ ಮಾಡಿಕೊಂಡು ಹೋಗಬೇಕು ಎಂದು ಮನವಿ ಮಾಡಿದ್ದೇವೆ. ಅದಕ್ಕೆ ಅವರು ಒಪ್ಪಿದ್ದಾರೆ.
ಈ ನಾಲ್ಕು ಸಾಲಿನ ಸುದ್ದಿಗೋಷ್ಠಿಯಲ್ಲಿ ಹಿರಿಯ ನಾಯಕರಾದ ನಿತಿನ್ ಗಡ್ಕರಿ,  ಸುಷ್ಮಾ ಸ್ವರಾಜ್, ಉಮಾ ಭಾರತಿ, ಬಲಬೀರ್ ಪುಂಜ್, ಅನಂತಕುಮಾರ್, ರವಿಶಂಕರ್ ಪ್ರಸಾದ್, ಅಹ್ಲುವಾಲಿಯಾ ಮತ್ತಿತರ ನಾಯಕರಿದ್ದರು. ಆದರೆ, ಆಡ್ವಾಣಿ ಅವರೆಲ್ಲೂ ಕಾಣಿಸಿಕೊಳ್ಳಲಿಲ್ಲ. ಸಾಮಾನ್ಯವಾಗಿ ಮನೆಗೆ ಬಂದವರನ್ನು ಪ್ರೀತಿಯಿಂದ ಬರ ಮಾಡಿಕೊಳ್ಳುವ ಆಡ್ವಾಣಿ ಅವರು ಕಳೆದ ಮೂವತ್ತು ಗಂಟೆಗಳ ಕಾಲ ಅವರ ನಿವಾಸದ ಹೊರಗೆ ಕಾದ ಪತ್ರಕರ್ತರಿಗೆ ದೂರದಲ್ಲಾದರೂ ಕಾಣಿಸಿಕೊಂಡು ಕೈ ಬೀಸಲಿಲ್ಲ.

ಹೇಳಿಕೆಯಲ್ಲಿದ್ದದ್ದು 3 ಅಂಶ!

ಲಾಲಕೃಷ್ಣ ಆಡ್ವಾಣಿ ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ, ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಗಳಿಗೆ ಸಲ್ಲಿಸಿರುವ ರಾಜಿನಾಮೆಯನ್ನು ಬಿಜೆಪಿ ಸಂಸದೀಯ ಮಂಡಳಿ ತಿರಸ್ಕರಿಸಿದೆ ಮತ್ತು ಈ ಮೂರು ಸಮಿತಿಗಳಲ್ಲಿ ಮುಂದುವರೆಯುವಂತೆ ಅಡ್ವಾಣಿ ಅವರಿಗೆ ಮನವಿ ಮಾಡಿದೆ.

ಎಲ್.ಕೆ.ಆಡ್ವಾಣಿ  ಎತ್ತಿರುವ ವಿಷಯ,  ಅಸಮಾಧಾನಗಳನ್ನು ನಿವಾರಿಸುವುದಾಗಿ ರಾಜನಾಥ್ ಸಿಂಗ್ ಆಡ್ವಾಣಿಗೆ ಭರವಸೆ ನೀಡಿದ್ದಾರೆ.  ಆಡ್ವಾಣಿ ಎತ್ತಿರುವ ಆಕ್ಷೇಪ ಅಸಮಾಧಾನಗಳನ್ನು ನಿವಾರಿಸಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಸ್ವತಃ ಆಡ್ವಾಣಿ ಅವರೊಂದಿಗೆ ಪಕ್ಷದ ಅಧ್ಯಕ್ಷರು ಚರ್ಚಿಸುವರು.

ಮಂಗಳವಾರ ಮಧ್ಯಾಹ್ನ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಆಡ್ವಾಣಿ ಅವರಿಗೆ ಕರೆ ಮಾಡಿ, ಬಿಜೆಪಿ ಸಂಸದೀಯ ಮಂಡಳಿ ನಿರ್ಧಾರವನ್ನು ಗೌರವಿಸುವಂತೆ ಸಲಹೆ ನೀಡಿದ್ದಾರೆ. ಮತ್ತು ಆಡ್ವಾಣಿ ಅವರು ಭಾಗವತ್ ಅವರ ಸಲಹೆಯನ್ನು ಒಪ್ಪಿಕೊಳ್ಳಲು ನಿರ್ಧರಿಸಿದ್ದಾರೆ.

ದಿನವಿಡೀ ತಂತ್ರಗಾರಿಕೆ     
ನರೇಂದ್ರ ಮೋದಿ ಅವರಿಗೆ ಒತ್ತಾಸೆಯಾಗಿ ನಿಂತ ಸಂಘ ಪರಿವಾರದ ನಾಯಕರೇ ಆಡ್ವಾಣಿ ಮುನಿಸು ತಣಿಸುವ ಕಾರ್ಯತಂತ್ರ ರೂಪಿಸಿದರು. ಅದಕ್ಕೆ ಮಧ್ಯಸ್ಥಿಕೆ ವಹಿಸಿದ್ದು ಎಸ್. ಗುರುಮೂರ್ತಿ. ಬೆಳಗ್ಗೆ 9ರ ಹೊತ್ತಿಗೆ ನಿತಿನ್ ಗಡ್ಕರಿ ದೆಹಲಿಗೆ ಆಗಮಿಸಿದರು. ಅಲ್ಲಿ ಗಡ್ಕರಿ ಅವರನ್ನು ಸೇರಿಕೊಂಡ ಬಲ್‌ಬೀರ್ ಪುಂಜ್ ಅವರು ಗೌಪ್ಯ ಸ್ಥಳದಲ್ಲಿ ಎಸ್. ಗುರುಮೂರ್ತಿ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ನಂತರ ಮೂವರು ಆಡ್ವಾಣಿ ಅವರ ನಿವಾಸಕ್ಕೆ ತೆರಳಿದರು. ಅವರನ್ನು ಸುಷ್ಮಾ ಸ್ವರಾಜ್, ಅನಂತಕುಮಾರ್ ಹಾಗೂ ಉಮಾ ಭಾರತಿ ಸೇರಿಕೊಂಡರು. ಈ ನಾಯಕರು ಆಡ್ವಾಣಿ ಅವರಿಗೆ ಅವರು ರಾಜಿನಾಮೆ ಸಲ್ಲಿಸಿರುವುದರಿಂದ ಪಕ್ಷಕ್ಕಾಗುತ್ತಿರುವ ಹಾನಿ ಮತ್ತು ಈ ಹಂತದಲ್ಲಿ ಮುನಿಸಿಕೊಂಡಿರುವುದರಿಂದ ವ್ಯಕ್ತಿತ್ವಕ್ಕಾಗುತ್ತಿರುವ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಈ ಹಂತದಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ದೂರವಾಣಿ ಕರೆ ಮಾಡಿ, ಸಮಾಲೋಚನೆಯಲ್ಲಿ ಪಾಲ್ಗೊಂಡರು. ರಾಜಸ್ಥಾನಕ್ಕೆ ತೆರಳಿದ್ದ ರಾಜನಾಥ್ ಸಿಂಗ್ ಸಹ ದೂರವಾಣಿ ಮೂಲಕವೇ ಸಮಾಲೋಚನೆಯಲ್ಲಿ ಪಾಲ್ಗೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಗಂಡನ ಕೊಂದು ನೀಲಿ ಡ್ರಮ್ ನಲ್ಲಿ ಮುಚ್ಚಿಟ್ಟ ಕೇಸ್: ಪತ್ನಿ ಮುಸ್ಕಾನ್, ಪ್ರಿಯಕರ ಸಾಹಿಲ್ ಗೆ ಮರಣದಂಡನೆ ಶಿಕ್ಷೆ!

'ಅಧರ್ಮ ಎಸಗಿದವರಿಗೆ ಶಿಕ್ಷೆ ನೀಡುವುದೂ ಧರ್ಮವೇ'; ಮೀರತ್ ಹತ್ಯೆ ಪ್ರಕರಣ ಶಿಕ್ಷೆ ಪ್ರಕಟ ವೇಳೆ ನ್ಯಾಯಾಧೀಶರಿಂದ ಭಗವದ್ಗೀತೆ ಉಲ್ಲೇಖ!

'ಥಳಿತದಿಂದ ವಿದ್ಯಾರ್ಥಿನಿಗೆ ಕಿವುಡು': ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯದ ಬಗ್ಗೆ ಕೇಂದ್ರ, ದೆಹಲಿ ಪೊಲೀಸ್ ವಿರುದ್ಧ ರಾಹುಲ್ ಗಾಂಧಿ ಆರೋಪ

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್