ಅಧಿಕಾರಿಯ ಕೈಕೆಳಗೆ ನೌಕರರಾಗಿರಲು ಮಠಾಧೀಶರು ಸಿದ್ಧರಿಲ್ಲ: ಪೇಜಾವರ ಶ್ರೀ
ಕ.ಪ್ರ.ವಾರ್ತೆ ಉಡುಪಿ ಜೂ.11
ರಾಜ್ಯ ಸರ್ಕಾರ ಉಡುಪಿ ಕೃಷ್ಣ ಮಠವನ್ನು ಮುಜರಾಯಿ ಇಲಾಖೆಗೆ ಸೇರಿಸಿ, ನೇಮಿಸುವ ಅಧಿಕಾರಿಯ ಕೈಕೆಳಗೆ ನೌಕರರಾಗಿರುವುದಕ್ಕೆ ಉಡುಪಿಯ ಅಷ್ಟ ಮಠಾಧೀಶರು ಸಿದ್ಧರಿಲ್ಲ. ಆದ್ದರಿಂದ ಕೃಷ್ಣ ಮಠವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಅವಕಾಶ ನೀಡುವುದಿಲ್ಲ ಎಂದು ಅಷ್ಟ ಮಠಾಧೀಶರಲ್ಲೊಬ್ಬರಾದ ಪೇಜಾವರ ಮಠದ ಶ್ರೀವಿಶ್ವೇಶ ತೀರ್ಥರು ಸ್ಪಷ್ಟಪಡಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಷ್ಟ ಮಠಾಧೀಶರು ಕೃಷ್ಣ ಮಠದ ಆಡಳಿತ ಮುಖ್ಯಸ್ಥರು ಮತ್ತು ಅರ್ಚಕರೂ ಆಗಿರುತ್ತಾರೆ. ಶೃಂಗೇರಿಯ ಶಾರದಾ ದೇವಸ್ಥಾನ, ಆದಿಚುಂಚನಗಿರಿ ದೇವಾಲಯ, ಧರ್ಮಸ್ಥಳದ ಮಂಜುನಾಥೇಶ್ವರ ಇತ್ಯಾದಿ ದೇವಾಲಯಗಳನ್ನು ಮುಜರಾಯಿ ಇಲಾಖೆ ಅಧೀನಕ್ಕೊಳಪಡಿಸಿಕೊಳ್ಳದೆ ಕೃಷ್ಣ ಮಠವನ್ನು ಮಾತ್ರ ಸ್ವಾಧೀಪಡಿಸಿಕೊಳ್ಳುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ ಎಂದು ಆರೋಪಿಸಿದರು.
ಆಡಳಿತಾಧಿಕಾರಿ ನೇಮಕವಾಗಿತ್ತು: 1951ರಲ್ಲಿ ಅಂದಿನ ಮದ್ರಾಸು ಸರ್ಕಾರ ಕೃಷ್ಣ ಮಠಕ್ಕೆ ಆಡಳಿತಾಧಿಕಾರಿಯೊಬ್ಬರನ್ನು ನೇಮಿಸಿದ್ದು ನಿಜ. ಆದರೆ ನಂತರ ಸುಪ್ರಿಂ ಕೋರ್ಟ್ ಅದನ್ನು ರದ್ದುಗೊಳಿಸಿದೆ. ಹರಿಜನ ಪ್ರವೇಶ ಕಾನೂನಿನಂತೆ ಕೃಷ್ಣಮಠವು ಸಾರ್ವಜನಿಕ ಪ್ರವೇಶಕ್ಕೆ ಅವಕಾಶವುಳ್ಳ ದೇವಸ್ಥಾನ ಮತ್ತು ಅದು ಅಷ್ಟ ಮಠಗಳ ಆಡಳಿತದಲ್ಲಿರುವ ದೇವಸ್ಥಾನ ಎಂದಿದೆ. ಮಠಗಳ ಅಧೀನದಲ್ಲಿರುವ ದೇವಾಲಯಗಳು ಮುಜರಾಯಿ ಇಲಾಖೆಗೆ ಸೇರುವುದಿಲ್ಲ ಎಂದರು.
'ಕೃಷ್ಣ ಮಠದಲ್ಲಿ ಸಂಗ್ರಹವಾಗುವ ಕೋಟ್ಯಂತರ ರುಪಾಯಿ ಹುಂಡಿ ಹಣದ ಕಾರಣಕ್ಕೆ ಅಷ್ಟ ಮಠಾಧೀಶರು ಕೃಷ್ಣಮಠದ ಸರ್ಕಾರೀಕರಣಕ್ಕೆ ವಿರೋಧಿಸುತ್ತಿದ್ದಾರೆ' ಎಂಬ ಆರೋಪದಲ್ಲಿ ಸತ್ಯಾಂಶ ಇಲ್ಲ. ಕೃಷ್ಣ ಮಠದ ಹುಂಡಿಯಲ್ಲಿ ಸಂಗ್ರಹವಾಗುವ ಹಣ ಕೃಷ್ಣಮಠದ, ಅಲ್ಲಿ ನಿತ್ಯ ನಡೆಯುತ್ತಿರುವ ಅನ್ನಸಂತರ್ಪಣೆ, ಸಾಮಾಜಿಕ ಕಾರ್ಯಗಳಿಗೇ ಸಾಕಾಗುವುದಿಲ್ಲ. ಅಲ್ಲಿನ ಮಠಾಧೀಶರು ಭಕ್ತರ ಸಹಾಯದಿಂದ ಈ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ. ಅನೇಕ ಬಾರಿ ಸಾಲ ಮಾಡಿದ ಉದಾಹರಣೆಗಳೂ ಇವೆ ಎಂದರು.
ಲಂಚ ಕೇಳಿದ ಅಧಿಕಾರಿಯ ಅವಾಂತರವೇ ಇದು?
ಕೃಷ್ಣ ಮಠವು ಮುಜರಾಯಿ ಇಲಾಖೆಗೆ ಸೇರಬೇಕು ಅಥವಾ ಸೇರಬಾರದು ಎಂಬ ವಿವಾದ ಹುಟ್ಟುವುದಕ್ಕೆ ಕೃಷ್ಣ ಮಠಾಧೀಶರೊಬ್ಬರಿಂದ 50 ಸಾವಿರ ಲಂಚ ಕೇಳಿದ ಜಿಲ್ಲೆಯ ಅಧಿಕಾರಿಯೊಬ್ಬರು ಕಾರಣರೇ? ಈ ಪ್ರಶ್ನೆಗೆ ಹೌದು ಎನ್ನುತ್ತಾರೆ ಪೇಜಾವರ ಶ್ರೀಗಳು. ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ (1999- 2004) ಉಡುಪಿ ಮುಜರಾಯಿ ಇಲಾಖೆಯ ಅಧಿಕಾರಿಯೊಬ್ಬರು ಯಾವುದೋ ಕಾರಣಕ್ಕಾಗಿ ಅಂದಿನ ಕೃಷ್ಣ ಮಠದ ಪರ್ಯಾಯ ಪೀಠಾಧೀಶರಲ್ಲಿ 50 ಸಾವಿರ ಲಂಚ ಕೇಳಿದರು. ಅದಕ್ಕೆ ಪರ್ಯಾಯ ಪೀಠಾಧೀಶರು ಒಪ್ಪಲಿಲ್ಲ. ಅದಕ್ಕಾಗಿ ಆ ಅಧಿಕಾರಿ ಸೇಡು ತೀರಿಸಿಕೊಳ್ಳಲು ಕೃಷ್ಣ ಮಠವನ್ನು ನೋಟಿಫೈ ಮಾಡಲು ಸಿದ್ಧಪಡಿಸಲಾಗಿದ್ದ ಇತರ 150 ದೇವಸ್ಥಾನಗಳ ಪಟ್ಟಿಗೆ ಸೇರಿಸಿಬಿಟ್ಟಿದ್ದಾರೆ. ಆದರೆ ಈ ವಿಷಯ ಸ್ವತಃ ಎಸ್.ಎಂ. ಕೃಷ್ಣ ಅವರಿಗಾಗಲಿ ಅಥವಾ ಅವರ ಸಚಿವ ಸಂಪುಟಕ್ಕಾಗಲಿ ಗೊತ್ತೇ ಇರಲಿಲ್ಲ. ಎಸ್.ಎಂ. ಕೃಷ್ಣ ಅವರಿಗೆ ಈ ವಿಷಯ ತಿಳಿದ ಮೇಲೆ ಡಿನೋಟಿಫೈ ಮಾಡುವುದಾಗಿ ಹೇಳಿದ್ದರು. ಅಷ್ಟರಲ್ಲಿ ಅವರ ಅಧಿಕಾರಾವಧಿಯೂ ಮುಗಿಯಿತು. ನಂತರ ಮುಖ್ಯಮಂತ್ರಿಯಾದ ಧರಂ ಸಿಂಗ್ ಕೆಲವು ಒತ್ತಡಕ್ಕೆ ಮಣಿದು ಡಿನೋಟಿಫೈ ಮಾಡಲಿಲ್ಲ. ಕೊನೆಗೆ ಯಡಿಯೂರಪ್ಪ ತಮ್ಮ ಅಧಿಕಾರವಾಧಿಯಲ್ಲಿ ಡಿನೋಟಿಫೈ ಮಾಡಿದರು ಎಂದು ಪೇಜಾವರ ಶ್ರೀಗಳು ಹೇಳಿದರು.
ಶೃಂಗೇರಿಯ ಶಾರದಾ ದೇವಸ್ಥಾನ, ಆದಿಚುಂಚನಗಿರಿ ದೇವಾಲಯ, ಧರ್ಮಸ್ಥಳದ ಮಂಜುನಾಥೇಶ್ವರ ಇತ್ಯಾದಿ ದೇವಾಲಯಗಳನ್ನು ಮುಜರಾಯಿ ಇಲಾಖೆ ಅಧೀನಕ್ಕೊಳಪಡಿಸಿಕೊಳ್ಳದೆ ಕೃಷ್ಣ ಮಠವನ್ನು ಮಾತ್ರ ಸ್ವಾಧೀಪಡಿಸಿಕೊಳ್ಳುವುದು ಸಾಮಾಜಿಕ ನ್ಯಾಯಕ್ಕೆ ವಿರುದ್ಧ...
- ವಿಶ್ವೇಶ ತೀರ್ಥ ಶ್ರೀಗಳು
ಪೇಜಾವರ ಮಠ