'ಮದುಮಗಳ' ಗಳಿಕೆ ರು. 18 ಲಕ್ಷ!
ತುಮಕೂರು: ಖ್ಯಾತ ರಂಗನಿರ್ದೇಶಕ ಸಿ. ಬಸವಲಿಂಗಯ್ಯ ಅವರ ನಿರ್ದೇಶನದ, ಕುವೆಂಪು ಅವರ ಮಹಾನ್ ಕಾದಂಬರಿ 'ಮಲೆಗಳಲ್ಲಿ ಮದುಮಗಳು' ನಾಟಕ ರೂಪಾಂತರ ಭರ್ತಿ 18 ಲಕ್ಷ ವಹಿವಾಟು ನಡೆಸಿದೆ. ಈ ಮೂಲಕ ಭಾರತೀಯ ರಂಗಭೂಮಿ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಮೈಸೂರು, ಬೆಂಗಳೂರಿನಲ್ಲಿ ಪ್ರದರ್ಶನಗೊಂಡಿರುವ ಈ ನಾಟಕವನ್ನು ಈವರೆಗೆ 20 ಸಾವಿರ ಜನರು ವೀಕ್ಷಿಸಿದ್ದಾರೆ. ಸುಮಾರು 75 ಲಕ್ಷ ವೆಚ್ಚದ ಈ ರಂಗ ರೂಪಾಂತರ 18 ಲಕ್ಷ ದಾಖಲೆಯ ಗಳಿಕೆ ಮಾಡಿದೆ.
ಮೈಸೂರಿನಲ್ಲಿ 14 ಹಾಗೂ ಬೆಂಗಳೂರಿನಲ್ಲಿ 24 ಪ್ರದರ್ಶನವನ್ನು ಈ ನಾಟಕ ಕಂಡಿದೆ. ಬೆಂಗಳೂರಿನಲ್ಲಿ ಪ್ರತಿ ದಿನ ಕನಿಷ್ಠ ಸರಾಸರಿ 1200 ಜನರು ನಾಟಕ ನೋಡಿದ್ದಾರೆ. ಐಟಿ-ಬಿಟಿ ಹುಡುಗರು, ಕುವೆಂಪು ಅಭಿಮಾನಿಗಳು, ಹಿರಿಯ ನಾಗರಿಕರು, ಹೀಗೆ ಎಲ್ಲಾ ವಯೋವಾನದವರು ಕೂಡ ಈ ನಾಟಕವನ್ನು ನೋಡಿದ್ದಾರೆ.
ಪ್ರಯೋಗಾತ್ಮಕ ರಂಗ ಪ್ರದರ್ಶನವನ್ನು ಪೀಟರ್ ಬ್ರೂಕ್ರಂಥ ಪ್ರಸಿದ್ಧ ರಂಗಕರ್ಮಿಗಳು ಒಂದೇ ಕಡೆ ಕೇವಲ 5 ಪ್ರದರ್ಶನ ಮಾಡಿದ್ದಾರೆ. ಆದರೆ ಬಸವಲಿಂಗಯ್ಯ ನಿರ್ದೇಶನದ ಕುವೆಂಪು ಅವರ 'ಮಲೆಗಳಲ್ಲಿ ಮದುಮಗಳು' ಒಂದೇ ಕಡೆ 24 ಪ್ರದರ್ಶನ ಕಂಡಿರುವುದು ಕೂಡ ಹೆಗ್ಗಳಿಕೆಯೇ.
ಈಗಾಗಲೇ ಇದರ ಗಳಿಕೆ 20 ಲಕ್ಷ ದಾಟಬೇಕಾಗಿತ್ತು. ಆದರೆ ವಿದ್ಯಾರ್ಥಿಗಳು, ಗ್ರಾಮೀಣ ಭಾಗದವರಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಿದ್ದರಿಂದ ಅದರ ಗಳಿಕೆ 18 ಲಕ್ಷವಾಗಿದೆ. ಬೆಂಗಳೂರಿನಲ್ಲಿ 'ಮಲೆಗಳಲ್ಲಿ ಮದುಮಗಳು' ನಾಟಕ ನೋಡಲು ಹೆಚ್ಚು ಮಂದಿ ಉತ್ಸುಕರಾಗಿದ್ದು, ಮಳೆಗಾಲ ಆರಂಭವಾಗಿರುವುದರಿಂದ ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ಮಳೆಗಾಲದ ನಂತರ ಮತ್ತೆ ನಾಟಕ ಪ್ರದರ್ಶಿಸುವ ಇರಾದೆ ಇದೆ.
2 ಸಾವಿರ ಹಾಡಿನ ಸಿಡಿ ಮಾರಾಟ: ನಾಟಕವೊಂದರ ಸಿಡಿ ಕೂಡ ದಾಖಲೆ ಪ್ರಮಾಣದಲ್ಲಿ ಮಾರಾಟವಾದ ಹೆಗ್ಗಳಿಕೆ 'ಮಲೆಗಳಲ್ಲಿ ಮದುಮಗಳಿಗೆ' ಸೇರುತ್ತದೆ. ಈವರೆಗೆ ಸುಮಾರು 2 ಸಾವಿರ ಆಡಿಯೋ ಸಿಡಿಗಳು ಮಾರಾಟವಾಗಿದೆ. ಅತಿ ಶೀಘ್ರದಲ್ಲೇ ಈ ನಾಟಕದ ಡಿವಿಡಿಯನ್ನೂ ಮಾರುಕಟ್ಟೆಗೆ ಬಿಡುಗಡೆ ಮಾಡುವು ಇಂಗಿತವನ್ನು 'ಮದುಮಗಳು' ತಂಡ ಹೊಂದಿದೆ.
ಆನ್ಲೈನ್ನಲ್ಲಿ ಭರ್ಜರಿ ವಹಿವಾಟು: ಬೆಂಗಳೂರಿನಲ್ಲಿ ಪ್ರತಿ ದಿನ ಕನಿಷ್ಠ 200 ರಿಂದ 300 ಟಿಕೆಟ್ಗಳು ಆನ್ಲೈನ್ನಲ್ಲಿ ಮಾರಾಟವಾಗುತ್ತಿದ್ದವು. ಭಾರತೀಯ ರಂಗಭೂಮಿಯಲ್ಲಿ ಒಂದೇ ಕಡೆ ಇಷ್ಟು ದೊಡ್ಡ ಮಟ್ಟದ ವಹಿವಾಟು ನಡೆಸಿದ ಉದಾಹರಣೆ ಮತ್ತೊಂದಿಲ್ಲ. ಸುಮಾರು 70 ಕ್ಕೂ ಹೆಚ್ಚು ಕಲಾವಿದರು ಈ ನಾಟಕದಲ್ಲಿ ತೊಡಗಿಕೊಂಡಿದ್ದರು. ಮುಂದಿನ ದಿನಗಳಲ್ಲಿ ಸರ್ಕಾರ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೆರವು ನೀಡಿದರೆ ರಾಜ್ಯದ ಬೇರೆ ಬೇರೆ ಭಾಗದಲ್ಲೂ ಕೂಡ ಈ ರಂಗಪ್ರದರ್ಶನ ಮಾಡುವ ಇರಾದೆಯನ್ನು 'ಮದುಮಗಳು' ತಂಡ ಹೊಂದಿದೆ. ಸದ್ಯಕ್ಕೆ ನಾಟಕ ಪ್ರದರ್ಶನವನ್ನು ಮಳೆಗಾಲದ ಕಾರಣ ನಿಲ್ಲಿಸಲಾಗಿದೆ. ಆದರೆ, ಜನರಿಂದ ಬೇಡಿಕೆ ಮಾತ್ರ ಬರುತ್ತಲೇ ಇದೆ. ಜನರ ಬೇಡಿಕೆಗೆ ಅನುಗುಣವಾಗಿ ಮತ್ತೆ ಬೆಂಗಳೂರಿನಲ್ಲಿ ನಾಟಕ ಪ್ರದರ್ಶನ ಮಾಡುವ ಇರಾದೆ ಇದೆ ಎನ್ನುತ್ತಾರೆ ಸಿ. ಬಸವಲಿಂಗಯ್ಯ.
- ಉಗಮ ಶ್ರೀನಿವಾಸ್