ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಸಂಕಷ್ಟ ದೂರವಾಗಿ 'ಯಶಸ್ವಿ'ನಿಯಾದ ಯೋಜನೆ

Mainashree
Updated On : 12 Jun 2013, 12:59 pm

ಕನ್ನಡಪ್ರಭ ವಾರ್ತೆ  ಶಿವಮೊಗ್ಗ  ಜೂ.10-
ಕಳೆದ 10 ದಿನಗಳಿಂದ ರೈತರಿಗೆ ಎದುರಾಗಿದ್ದ ಯಶಸ್ವಿನಿ ಯೋಜನೆಯ ಸಂಕಷ್ಟಗಳು ಕೊನೆಗೂ ದೂರವಾಗಿವೆ. ರೈತರ ಆಶಾಕಿರಣವಾಗಿದ್ದ ಯಶಸ್ವಿನಿ ಯೋಜನೆ ಒಂದಷ್ಟು ಬದಲಾವಣೆಗಳೊಂದಿಗೆ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.
ಹಿಂದಿನ ವರ್ಷದ ಸದಸ್ಯತ್ವ ಮೇ 31ಕ್ಕೆ ಕೊನೆಯಾಗಿದ್ದು ಮರು ವರ್ಷ ನವೀಕರಿಸಿಕೊಳ್ಳಲು ಬಂದವರಿಗೆ ಸಹಕಾರ ಸಂಘಗಳು ಇನ್ನೂ ಸರ್ಕಾರದಿಂದ ಆದೇಶ ಬಂದಿಲ್ಲ ಎಂದು ವಾಪಸ್ ಕಳುಹಿಸುತ್ತಿದ್ದವು. ಇದರಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ತುರ್ತು ಅಗತ್ಯವಿದ್ದ ರೋಗಿಗಳ ಕುಟುಂಬದವರು ಆತಂಕಗೊಂಡಿದ್ದರು. ವಾಜಪೇಯಿ ಆರೋಗ್ಯಶ್ರೀ ಯೋಜನೆ ಹಾಗೂ ಯಶಸ್ವಿನಿ ಸೇರಿಸಿ ಒಂದೇ ಯೋಜನೆ ಮಾಡುವವರಂತೆ ಎಂಬ ಮಾತುಗಳೂ ಸಹ ಕೇಳಿಬಂದಿದ್ದವು. ಈಗ ಅದಕ್ಕೆಲ್ಲಾ ತೆರೆ ಬಿದ್ದಿದ್ದು, ಯಶಸ್ವಿಯಾಗಿ ಸತತ 10ನೇ ಸಾಲಿಗೆ ಮುಂದುವರಿದಿದೆ.
ಯಶಸ್ವಿನಿ ಯೋಜನೆಯ 2012-13ನೇ ಸಾಲಿನ ಅವಧಿ ಮೇ 31ಕ್ಕೆ ಮುಕ್ತಾಯವಾಗಿತ್ತು. ಯೋಜನೆ ಸದಸ್ಯತ್ವ ನವೀಕರಿಸಿಕೊಳ್ಳಲು ಹಳ್ಳಿಗಳಲ್ಲಿದ್ದ ಸಹಕಾರ ಸಂಘಗಳಿಗೆ ಹೋದ ರೈತರಿಗೆ ಶಾಕ್ ಕಾದಿತ್ತು. ಇನ್ನೂ ಸರ್ಕಾರದ ಆದೇಶ ಬಂದಿಲ್ಲ, ಹಾಗಾಗಿ ನವೀಕರಣ ಸಾಧ್ಯವಿಲ್ಲ ಎಂದು ವಾಪಸು ಕಳುಹಿಸುತ್ತಿದ್ದರು. ಜೂನ್ ತಿಂಗಳಲ್ಲಿಯೇ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಆಪರೇಷನ್ ಇತ್ಯಾದಿ ಚಿಕಿತ್ಸೆ ನಿಗದಿಯಾಗಿದ್ದ ರೈತರ ಕುಟುಂಬಗಳು ಕಂಗಾಲಾಗಿದ್ದವು. ಈ ಹಿನ್ನಲೆಯಲ್ಲಿ ಸರ್ಕಾರ ಮೇ 31ಕ್ಕೆ ಅಂತ್ಯವಾಗಿದ್ದ 2012-13ನೇ ಸಾಲಿನಲ್ಲಿ ಪಡೆದಿದ್ದ ಸದಸ್ಯತ್ವವನ್ನು ಜೂನ್ 1ರಿಂದ 30ರವರೆಗೆ ವಿಸ್ತರಿಸಿದೆ. ಹಿಂದಿನ ವರ್ಷದ ಯಶಸ್ವಿನಿ ಕಾರ್ಡ್ ತೋರಿಸಿ ಇವರು ಯಶಸ್ವಿನಿ ಟ್ರಸ್ಟ್ ಗುರುತಿಸಿದ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ನಗದುರಹಿತ ಶಸ್ತ್ರಚಿಕಿತ್ಸಾ ಸೌಲಭ್ಯ ಪಡೆಯಬಹುದಾಗಿದೆ.
ನೋಂದಣಿ ಆ.15ಕ್ಕೆ ಮುಕ್ತಾಯ: ಸದಸ್ಯತ್ವ ನವೀಕರಿಸಿಕೊಳ್ಳುವ ಪ್ರಕ್ರಿಯೆ ಜೂ.15ರಿಂದ ಆ.31ರವರೆಗೆ ನಡೆಯಲಿದೆ. ಹೊಸ ಸದಸ್ಯರನ್ನು ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ಆ.15ಕ್ಕೆ ಮುಕ್ತಾಯವಾಗುವುದು. ಈಗ ಯೋಜನೆ ಮುಂದುವರಿಸಿ ಸರ್ಕಾರ ಹೊರಡಿಸಿರುವ ಆದೇಶವು ಎಲ್ಲ ಜಿಲ್ಲಾ ಕೇಂದ್ರಗಳನ್ನು ತಲುಪಿದೆ. ಹಳ್ಳಿಗಳಲ್ಲಿರುವ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ರೈತರು 210 ಪಾವತಿಸಿ ನವೀಕರಿಸಿಕೊಳ್ಳಬಹುದು ಎಂದು ಸಹಕಾರ ಇಲಾಖೆಯ ಮೂಲಗಳು ತಿಳಿಸಿವೆ.
ಯಾರು ಅರ್ಹರು?
-     ಕೃಷಿ ಹಾಗೂ ಕೃಷಿಯೇತರ ಸಹಕಾರ ಸಂಘಗಳ ಸದಸ್ಯರು.
-     ಕೃಷಿ ಉತ್ಪನ್ನ ಸಹಕಾರ ಸಂಘಗಳ ಸದಸ್ಯರು.
-    ರಾಜ್ಯದ ಗ್ರಾಮೀಣ ಪ್ರದೇಶದ ಚಲನಚಿತ್ರ ಕಲಾವಿದರು, ರಂಗಭೂಮಿ ಕಲಾವಿದರು, ಜಾನಪದ ಕಲಾವಿದರು, ಸಾಂಸ್ಕೃತಿಕ ಅಭಿವೃದ್ಧಿ ಸಹಕಾರ ಸಂಘಗಳು.
-    ಗ್ರಾಮೀಣ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ಕಾಫಿ ಬೆಳೆಯುವ ಜಿಲ್ಲೆಗಳ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಪ್ಲಾಂಟೇಷನ್ ಕಾರ್ಮಿಕರು.
-    ಗ್ರಾಮೀಣ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ರಾಜ್ಯದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ಕೃಷಿ ಕ್ಷೇತ್ರದಿಂದ ಆಯ್ಕೆಯಾಗಿರುವ ರೈತ ಪ್ರತಿನಿಧಿಗಳು.
-   ಗ್ರಾಮೀಣ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಹೊಂದಿರುವ ಪತ್ರಕರ್ತರು (ಪಟ್ಟಣ ಪ್ರದೇಶದ ಪತ್ರಕರ್ತರನ್ನು ಹೊರತುಪಡಿಸಿ).
-   ರಾಜ್ಯದ ಗ್ರಾಮೀಣ ಪ್ರದೇಶದಲ್ಲಿರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ವಿವಿದೋದ್ದೇಶ ಸಹಕಾರ ಸಂಘಗಳ ಮತ್ತು ವಿವಿದೋದ್ದೇಶ ಸಹಕಾರ ಸಂಘಗಳ ಸದಸ್ಯರು.
-    ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಸಂಘಟಿಸಿರುವ ಎಲ್ಲ ಗ್ರಾಮೀಣ ಸ್ವಸಹಾಯ ಸಂಘಗಳ ಸದಸ್ಯತ್ವ ಹೊಂದಿರುವ ಲೈಂಗಿಕ ಅಲ್ಪಸಂಖ್ಯಾತರು, ಸಹಕಾರ ಬ್ಯಾಂಕ್ ಸಂಘಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಪ್ರದೇಶದಲ್ಲಿರುವ ಸ್ವಸಹಾಯ ಗುಂಪು, ಸ್ತ್ರೀಶಕ್ತಿ ಗುಂಪಿನ ಸದಸ್ಯರು ಹಾಗೂ ಅವರ ಕುಟುಂಬದ ಸದಸ್ಯರು.
-    ನಗರ, ಪಟ್ಟಣ ಜತೆಗೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಟ್ಟಿರುವ ಪ್ರದೇಶಗಳ ಕೃಷಿ ಪತ್ತಿನ ಸಹಕಾರ ಸಂಘಗಳು, ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ನಗರ-ಪಟ್ಟಣದಲ್ಲಿ ವಾಸಿಸುತ್ತಿದ್ದು, ಅವರು ಸದಸ್ಯತ್ವ ಹೊಂದಿರುವ ಸಹಕಾರ ಸಂಘಗಳ ವ್ಯಾಪ್ತಿಯಲ್ಲಿ ಕೃಷಿ ಜಮೀನು ಇದ್ದರೆ, ಈಗಾಗಲೇ ಕಳೆದ ಸಾಲಿನಲ್ಲಿ ಯೋಜನೆಯಡಿ ಸದಸ್ಯತ್ವ ನೋಂದಾವಣೆಯಾಗಿದ್ದರೆ ಪ್ರಸಕ್ತ ಸಾಲಿಗೂ ಸಹ ಅವರು ನವೀಕರಿಸಿಕೊಳ್ಳಲು, ನೋಂದಾಯಿಸಿಕೊಳ್ಳಬಹುದು.

- ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement