ಹಸು, ಎಮ್ಮೆಗೂ ಬಂತು ಆನ್ಲೈನ್ ಕಾಲ
ಮೊಬೈಲ್, ಮನೆ, ಟೀವಿಗಳಂತೆ ಈಗ ಎತ್ತು, ಎಮ್ಮೆಗಳ ಖರೀದಿ ಈಗ ಆನ್ಲೈನ್ನಲ್ಲಿ!
ನವದೆಹಲಿ: ಎತ್ತು, ಎಮ್ಮೆ, ದನಗಳನ್ನು ವರ್ಷಕ್ಕೊಮ್ಮೆ ನಡೆಯುವ ಜಾನುವಾರು ಜಾತ್ರೆಗಳಲ್ಲಿ ಮಾರುವ, ಕೊಳ್ಳುವ ಕಾಲ ಮುಗಿಯಿತು. ಮೊಬೈಲ್, ಮನೆ, ಟೀವಿ, ಕಂಪ್ಯೂಟರ್ಗಳಂತೆ ಈಗ ಎತ್ತು, ಎಮ್ಮೆಗಳನ್ನೂ ಆನ್ಲೈನ್ನಲ್ಲೇ ಖರೀದಿಸಬಹುದು!
ಹೌದು. ಹೇಳಿ ಕೇಳಿ ಇದು ಇಂಟರ್ನೆಟ್ ಯುಗ. ಮೆಟ್ರೋ ನಗರಗಳಲ್ಲಿ ಎಲೆಕ್ಟ್ರಾನಿಕ್ಸ್, ಎಲೆಕ್ಟ್ರಿಕಲ್, ರಿಯಲ್ ಎಸ್ಟೇಟ್ ಮಾರಾಟ, ಖರೀದಿ ಪ್ರಕ್ರಿಯೆ ಹೆಚ್ಚಾಗಿ ಆನ್ಲೈನ್ನಲ್ಲೇ ನಡೆಯುತ್ತಿದೆ. ಆನ್ಲೈನ್ ಕ್ಲಾಸಿಫೈಡ್ಸ್ ಸೈಟ್ಗಳ ಈ ಯಶಸ್ಸು ಈಗ ಗ್ರಾಮೀಣ ಪ್ರದೇಶಗಳಿಗೂ ತಲುಪಿದೆ. ಪಟ್ಟಣಗಳು ಮತ್ತು ಗ್ರಾಮೀಣ ಭಾಗದ ಜನ ತಮ್ಮ ಜಾನುವಾರು, ಸಾಕುಪ್ರಾಣಿಗಳನ್ನು ಮಾರಾಟ ಮಾಡಲು ಈ ರೀತಿಯ ಸೈಟ್ಗಳನ್ನು ಬಳಸಲು ಮುಂದಾಗುತ್ತಿದ್ದಾರೆ.
ನೀವೊಮ್ಮೆ ಜನಪ್ರಿಯ ಆನ್ಲೈನ್ ಕ್ಲಾಸಿಫೈಡ್ಸ್ ಸೈಟ್ಗಳಾದ ಒಎಲ್ಎಕ್ಸ್ ಮತ್ತು ಕ್ವಿಕರ್ಗಳನ್ನು ಜಾಲಾಡಿ ನೋಡಿ. 'ಮುರ್ರಾ' ಎಮ್ಮೆ 80 ಸಾವಿರಕ್ಕೆ, ಜೆರ್ಸಿ ದನ 6 ಲಕ್ಷಕ್ಕೆ... ಹೀಗೆ ಅನೇಕ ಜಾನುವಾರುಗಳು ಮಾರಾಟಕ್ಕಿರುವುದು ಕಣ್ಣಿಗೆ ಬೀಳುತ್ತದೆ. ಈ ಜಾಹೀರಾತುಗಳಿಗೆ ಉತ್ತಮ ಪ್ರತಿಕ್ರಿಯೆಯೂ ಸಿಗುತ್ತಿದೆ.
ಬದಲಾದ ಟ್ರೆಂಡ್: ಈ ಹಿಂದೆ ಆನ್ಲೈನ್ ಮಾರಾಟ ಸೈಟ್ಗಳು ಪ್ರಮುಖ ನಗರಗಳಿಗಷ್ಟೇ ಸೀಮಿತವಾಗಿದ್ದವು.
ಆದರೆ, ಇಂಟರ್ನೆಟ್ ಈಗ ಗ್ರಾಮೀಣ ಪ್ರದೇಶಗಳಿಗೂ ಕಾಲಿಟ್ಟಿದೆ. ಇದರಿಂದ ಕರ್ನಾಟಕ, ತಮಿಳುನಾಡು, ಪಶ್ಟಿಮ ಬಂಗಾಳ, ಮಹಾರಾಷ್ಟ್ರ, ಒಡಿಶಾ, ಅಸ್ಸಾಂ ಮತ್ತು ಉತ್ತರ ಪ್ರದೇಶದ ಗ್ರಾಮೀಣ ಮತ್ತು ಪಟ್ಟಣಗಳ ಜನರೂ ವಸ್ತುಗಳ ಮಾರಾಟ ಮತ್ತು ಖರೀದಿಗಾಗಿ ಆನ್ಲೈನ್ ಸೈಟ್ಗಳತ್ತ ಮುಖಮಾಡುತ್ತಿದ್ದಾರೆ. ಕ್ವಿಕರ್ಗೆ ದೇಶದ ಪ್ರಮುಖ ಮೆಟ್ರೋ ನಗರಗಳೇ ಜೀವಾಳ. ಆದರೆ, ಎರಡು ಮತ್ತು ಮೂರನೇ ಹಂತದ ನಗರಗಳಲ್ಲೂ ಇಂಟರ್ನೆಟ್ ಬಳಕೆ ಹೆಚ್ಚುತ್ತಿರುವುದು ಸೈಟ್ನ ಜನಪ್ರಿಯತೆ ಇನ್ನಷ್ಟು ವಿಸ್ತರಿಸಲು ನೆರವಾಗಿದೆ.
ಈಗೀಗ ಶೇ.50ರಷ್ಟು ವ್ಯವಹಾರ ಈ ನಗರಗಳಲ್ಲೇ ನಡೆಯುತ್ತಿದೆ ಎನ್ನುತ್ತಾರೆ ಕ್ವಿಕರ್ನ ಸಿಇಒ ಪ್ರಣಯ್ ಚುಲೆಟ್. ಇನ್ನೊಂದು ಜನಪ್ರಿಯ ಇಂಟರ್ನೆಟ್ ಕ್ಲಾಸಿಫೈಡ್ಸ್ ಸೈಟ್ ಆದ ಒಎಲ್ಎಕ್ಸ್ ಕಥೆ ಇದಕ್ಕಿಂತ ಭಿನ್ನವಾಗೇನೂ ಇಲ್ಲ. ಮೆಟ್ರೋದಲ್ಲಿ ಹೆಚ್ಚು ಜನಪ್ರಿಯವಾಗಿರುವ ಈ ಸೈಟ್ಗೆ ಈಗ ಗ್ರಾಮೀಣ ಪ್ರದೇಶದಲ್ಲೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಎರಡನೇ ಹಂತದ ನಗರಗಳಾದ ಜೈಪುರ, ಸೂರತ್, ಕೊಚ್ಚಿನ್ಗಳಲ್ಲಿ ಸೈಟ್ ಜನಪ್ರಿಯವಾಗುತ್ತಿದೆ. ಇದು ಸಂಸ್ಥೆಯ ಮಟ್ಟಿಗೆ ಧನಾತ್ಮಕ ಬದಲಾವಣೆ ಎಂದು ಹೇಳುತ್ತಾರೆ ಸಂಸ್ಥೆಯ ಸಿಇಒ ಅಮರ್ಜಿತ್ ಬತ್ರಾ.
ವಿದೇಶದಲ್ಲಿ ಹೊಸದೇನಲ್ಲ: ಆನ್ಲೈನ್ ಮೂಲಕ ಸಾಕುಪ್ರಾಣಿಗಳು, ಜಾನುವಾರುಗಳ ಮಾರಾಟ ಅಮೆರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ದೇಶಗಳ ಪಾಲಿಗೆ ಹೊಸ ವಿಷಯವೇನಲ್ಲ. ಆದರೆ, ಈ ಟ್ರೆಂಡ್ ಈಗ ಭಾರತದಲ್ಲೂ ಕಾಣಿಸಿಕೊಂಡಿರುವುದು ಅಚ್ಚರಿಯ ವಿಚಾರ. ಒಎಲ್ಎಕ್ಸ್ನಲ್ಲಿ ಪಟ್ಟಿ ಮಾಡಲಾಗಿರುವ ಸಾಕುಪ್ರಾಣಿಗಳ ಮಾರಾಟಕ್ಕೆ ಸಂಬಂಧಿಸಿದ ಜಾಹೀರಾತಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ ಎಂದಿದ್ದಾರೆ ಅಮರ್ಜಿತ್.