ಕ್ಯಾತೆಗೆ ಕ್ಯಾರೆ ಇಲ್ಲ
ತಮಗೆ ನೀರು ಬಿಡಲೇಬೇಕು ಎಂಬ ತಮಿಳುನಾಡು ಮನವಿಯನ್ನು ಕಾವೇರಿ ಮೇಲ್ವಿಚಾರಣೆ ಸಮಿತಿ ತಿರಸ್ಕರಿಸಿದೆ.
ನವದೆಹಲಿ: ಕಾವೇರಿ ನದಿಯಲ್ಲಿ ನೀರಿಲ್ಲದಿದ್ದರೂ ಪರವಾಗಿಲ್ಲ, ತಮಗೆ ನೀರು ಬಿಡಲೇಬೇಕು ಎಂಬ ತಮಿಳುನಾಡು ಮನವಿಯನ್ನು ಕಾವೇರಿ ಮೇಲ್ವಿಚಾರಣೆ ಸಮಿತಿ ತಿರಸ್ಕರಿಸಿದೆ.
ಕಾವೇರಿ ಕಣಿವೆಯ ಜಲಾಶಯಗಳಲ್ಲಿ ಈಗ ಉಳಿದರುವ ನೀರು 3.7 ಟಿಎಂಸಿ. ಹೀಗಾಗಿ ನೀರು ಬಿಡುವ ಯಾವ ಸಾಧ್ಯತೆಗಳೂ ಇಲ್ಲದ್ದರಿಂದಾಗಿ ಕಾವೇರಿ ಮೇಲ್ವಿಚಾರಣೆ ಸಮಿತಿ ತಮಿಳುನಾಡು ಬೇಡಿಕೆಯನ್ನು ಪರೋಕ್ಷವಾಗಿ ತಿರಸ್ಕರಿಸಿದೆ. ಕರ್ನಾಟಕ ಸಲ್ಲಿಸಿದ 74 ಪುಟಗಳ ಸ್ಪಷ್ಟನೆ ಮತ್ತು ಆಕ್ಷೇಪಗಳಿಗೆ ಪ್ರತಿ ಆಕ್ಷೇಪ ಸಲ್ಲಿಸಿರುವ ತಮಿಳುನಾಡು ಉದ್ದೇಶಪೂರ್ವಕವಾಗಿ ಕರ್ನಾಟಕ ನೀರು ಹರಿಸದೇ ಕಾನೂನು, ನಿಯಮಗಳನ್ನು ಮುಂದಿಡುತ್ತಿದೆ ಎಂದು ಆರೋಪಿಸಿತು. ಹೀಗಾಗಿ ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪು ಜಾರಿಗೊಳಿಸಲು ಸುಪ್ರೀಂ ಕೋರ್ಟ್ ಆದೇಶದಂತೆ ರೂಪುಗೊಂಡಿರುವ ಮೇಲ್ವಿಚಾರಣೆ ಸಮಿತಿಯ ಎರಡನೇ ಸಭೆ ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ.
ಹಿಂದಿನ ಸಭೆಯಲ್ಲಿ ನಡೆದ ಚರ್ಚೆಗಳು ಮತ್ತು ಚರ್ಚೆ ನಂತರ ಮೇಲ್ವಿಚಾರಣೆ ಸಮಿತಿ ಅಧ್ಯಕ್ಷರಾದ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಎಸ್.ಕೆ. ಸರ್ಕಾರ್ ಅವರು ಹೊರಡಿಸಿದ್ದ ನಡಾವಳಿಗಳಲ್ಲಿದ್ದ ಲೋಪಗಳ ಕುರಿತು ಕರ್ನಾಟಕ ಸುಮಾರು 74 ಪುಟಗಳ ಆಕ್ಷೇಪ ಮತ್ತು ಸ್ಪಷ್ಟನೆಗಳನ್ನು ಸಲ್ಲಿಸಿತ್ತು. ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಯಿತು. ಕೇಂದ್ರ ಜಲ ಆಯೋಗದ ಪ್ರತಿನಿಧಿಗಳು ಉಭಯ ರಾಜ್ಯಗಳಲ್ಲಿರುವ ನೀರಿನ ಪ್ರಮಾಣದ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಕರ್ನಾಟಕ 2012-13ನೇ ಸಾಲಿನಲ್ಲಿ ಹರಿಸಬೇಕಿದ್ದ 53 ಟಿಎಂಸಿ ಮತ್ತು ಪ್ರಸಕ್ತ ಜಲ ವರ್ಷದ ಜೂನ್ ತಿಂಗಳ ತನ್ನ ಪಾಲು 10 ಟಿಎಂಸಿ ನೀರು ಸೇರಿದಂತೆ ಒಟ್ಟು 63 ಟಿಎಂಸಿ ನೀರನ್ನು ತನಗೆ ಹರಿಸಬೇಕು ಎಂದು ತಮಿಳುನಾಡು ಒತ್ತಾಯಿಸಿತು.
ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪಿನ ಅನುಷ್ಠಾನದ ಹೊಣೆ ಮೇಲ್ವಿಚಾರಣೆ ಸಮಿತಿಯದ್ದು. ಆದ್ದರಿಂದ ತಕ್ಷಣವೇ ಕರ್ನಾಟಕ ತನಗೆ ನೀಡಬೇಕಿರುವ ನೀರನ್ನು ಕೊಡುವಂತೆ ಆದೇಶ ನೀಡಬೇಕು. ಕಾವೇರಿ ನ್ಯಾಯಾಧಿಕರಣದ ಅಂತಿಮ ಐತೀರ್ಪನ್ನು ಅನುಷ್ಠಾನಗೊಳಿಸುವುದನ್ನು ಬಿಟ್ಟು ಹೀಗೆ ಸುಮ್ಮನೆ ಸಭೆಗಳನ್ನು ಕರೆದು ಸಮಯ ವ್ಯರ್ಥಗೊಳಿಸುವುದು ಬೇಡ ಎಂದು ತಮಿಳುನಾಡು ಕಾರ್ಯದರ್ಶಿಗಳು ಹೇಳಿದರು.
ಕರ್ನಾಟಕದ ಆಕ್ಷೇಪ: ಮೆಟ್ಟೂರು ಜಲಾಶಯದಲ್ಲಿ 3.8 ಟಿಎಂಸಿ ನೀರಿದೆ. ಕುರುವೈ ಬೆಳೆಗೆ ನೀರಿನ ಅಗತ್ಯವಿದೆ ಎಂದು ತಮಿಳುನಾಡು ಬೇಡಿಕೆ ಇಟ್ಟಿತು. ಇದಕ್ಕೆ ಕರ್ನಾಟಕ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಪರಿಷ್ಕೃತ ನಡಾವಳಿ
ಕಾವೇರಿ ಮೇಲ್ವಿಚಾರಣೆ ಮೊದಲ ಸಭೆಯ ನಡಾವಳಿಗಳನ್ನು ಪರಿಷ್ಕರಿಸಲಾಗಿದೆ. ಕಾವೇರಿ ನಿರ್ವಹಣಾ ಮಂಡಳಿಗೆ ರೂಪಿಸಲಾಗಿರುವ ಮಾರ್ಗಸೂಚಿಗಳನ್ನು ಕಾವೇರಿ ಮೇಲ್ವಿಚಾರಣೆಗೆ ಅಳವಡಿಸಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಇದಕ್ಕೆ ಎಲ್ಲ ರಾಜ್ಯಗಳು ಒಪ್ಪಿದವು ಎಂದು ಮೊದಲ ಸಭೆಯ ನಡಾವಳಿಯಲ್ಲಿ ನಮೂದಿಸಲಾಗಿತ್ತು. ಮಾರ್ಗಸೂಚಿ ಅಳವಡಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಕರ್ನಾಟಕ ಈ ಬಗ್ಗೆ ಮೇಲ್ವಿಚಾರಣೆ ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದು ಪರಿಷ್ಕೃತ ನಡಾವಳಿ ಪ್ರಕಟಿಸಲು ಒತ್ತಾಯಿಸಿತ್ತು. ಕರ್ನಾಟಕ ಆಕ್ಷೇಪಿಸಿದ್ದ ಬಹುತೇಕ ವಿಷಯಗಳ ಕುರಿತು ಸಮಿತಿಯು ಪರಿಷ್ಕೃತ ನಡಾವಳಿಯನ್ನು ಪ್ರಕಟಿಸಿದೆ.
- ಕನ್ನಡಪ್ರಭ ಪ್ರತಿನಿಧಿಯಿಂದ