ಖೊಟ್ಟಿ ದಾಖಲೆ ಸೃಷ್ಟಿಸಿ ಅದಿರು ಸಾಗಾಟ
ಕ.ಪ್ರ. ವಾರ್ತೆ ಬಳ್ಳಾರಿ ಜೂ.12-
ಆರೋಪಿಗಳು ಜೈಲು ಸೇರಿದರೂ ಗಣಿಗಾರಿಕೆಯ ಅಕ್ರಮ ಭೂತ ಅವರ ಬೆನ್ನು ಬಿಡುತ್ತಿಲ್ಲ. ರೆಡ್ಡಿ ಆಪ್ತರಾದ ಸ್ವಸ್ತಿಕ್ ನಾಗರಾಜ್ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಜೈಲು ಪಾಲಾದರೂ ಅವರ ಮೇಲಿನ ಆರೋಪಗಳ ಸಂಖ್ಯೆ ಏರುತ್ತಾ ಸಾಗಿವೆ.
2010ರಲ್ಲಿ ಅಕ್ರಮ ಸಾಗಾಣಿಕೆಗಾಗಿ ಆಂಧ್ರಪ್ರದೇಶವನ್ನು ಹಾದಿ ಮಾಡಿಕೊಂಡು, ಖೊಟ್ಟಿ ದಾಖಲೆ ಸೃಷ್ಟಿಸಿ ಅದಿರು ಅಕ್ರಮ ಸಾಗಾಣಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಸ್ತಿಕ್ ನಾಗರಾಜ್ ಸೇರಿದಂತೆ ಮೂವರ ಮೇಲೆ ಹೊಸಪೇಟೆ ನ್ಯಾಯಾಲಯದಲ್ಲಿ ಪೊಲೀಸರು ದೋಷಾರೋಪಣ ಪಟ್ಟಿಯನ್ನು ಮೇ ಅಂತ್ಯದಲ್ಲಿ ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಪಿ ಡಾ.ಚಂದ್ರಗುಪ್ತಾ ಅವರ ಮಾರ್ಗದರ್ಶನದಲ್ಲಿ ಹೊಸಪೇಟೆ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ತನಿಖೆ ನಡೆಸಿ ಜನಾರ್ದನ ರೆಡ್ಡಿ ಭಂಟ ಸ್ವಸ್ತಿಕ್ ನಾಗರಾಜ್, ನಾಗರಾಜ್ ಸಹಚರ ಅಂಜಿನಿ, ಸಾಫಿಯಾ ಮಿನರಲ್ಸ್ನ ಮಹಮ್ಮದ್ ಮುನ್ನೀರ್ ವಿರುದ್ಧ ಹೊಸಪೇಟೆ ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಆ ಮೂಲಕ ಸ್ವಸ್ತಿಕ್ ನಾಗರಾಜ್ಗೆ ಈ ಪ್ರಕರಣ ಕಂಟಕವಾಗಿ ಪರಿಣಮಿಸಿದೆ.
ಕೃಷ್ಣಾಪಟ್ನಂಗೆ ಅದಿರು ಸಾಗಾಟ: 2010ರಲ್ಲಿ ಗಣಿಗಾರಿಕೆ ಉತ್ತುಂಗದಲ್ಲಿದ್ದ ಕಾಲ. ಗಣಿಗಾರಿಕೆ ವಿಷಯವು ಪ್ರಶ್ನಾತೀತವಾಗಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಯಾವುದು ಅಕ್ರಮ, ಯಾವುದು ಸಕ್ರಮ ಎನ್ನದೇ ನಡೆಯುತ್ತಿತ್ತು. ಇದನ್ನೇ ಬಳಸಿಕೊಂಡ ಸ್ವಸ್ತಿಕ್ ನಾಗರಾಜ್, ತಮ್ಮ ಪ್ರಭಾವ ಬಳಸಿ ಹೊಸಪೇಟೆಯಿಂದ ಆಂಧ್ರಪ್ರದೇಶದ ಕೃಷ್ಣಾಪಟ್ನಂಗೆ 228 ಮೆಟ್ರಿಕ್ ಟನ್ ಅದಿರನ್ನು 22 ಲಾರಿಗಳಲ್ಲಿ ಸಾಗಾಟ ಮಾಡಿದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿ ಜನವರಿ 21, 2010ರಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಹಾಯಕ ನಿರ್ದೇಶಕರು ಗುಂತಕಲ್ ರಸ್ತೆಯ ಗಡೇಕಲ್ ಸಮೀಪದಲ್ಲಿ ಹಿಡಿದಾಗ, ಖೊಟ್ಟಿ ದಾಖಲೆಗಳ ಮೂಲಕ ಅದಿರು ಸಾಗಾಣಿಕೆ ಬಣ್ಣ ಬಯಲಾಗಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಖೊಟ್ಟಿ ಪರ್ಮಿಟ್, ಟ್ರಿಪ್ ಶೀಟ್, ಅರಣ್ಯ ಇಲಾಖೆ ಖೊಟ್ಟಿ ಪರ್ಮಿಟ್ ಬಳಕೆ ಮಾಡಿ ಸಾಗಾಟ ಮಾಡಿದ್ದಾರೆ ಎಂಬುದು ತನಿಖೆಯಿಂದ ಬಯಲಾಗಿದೆ.
ಖೊಟ್ಟಿ ದಾಖಲೆ ಸೃಷ್ಟಿ: ದಾಖಲೆಗಳ ಬಗ್ಗೆ ಅನುಮಾನ ಬಂದ ಆಂಧ್ರಪ್ರದೇಶದ ಅಧಿಕಾರಿಗಳು ಬಳ್ಳಾರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳನ್ನು ಕೇಳಲಾಗಿ ಇಲಾಖೆಯ ಪರ್ಮಿಟ್ ಹಾಗೂ ಟ್ರಿಪ್ ಶೀಟ್ ಖೊಟ್ಟಿ ಎಂದು ತಿಳಿದು ಬಂದಿದೆ. ಆದರೆ ಅಲ್ಲಿನ ಅಧಿಕಾರಿಗಳು ದಂಡ ಕಟ್ಟಿಸಿಕೊಂಡು ಬಿಟ್ಟಿದ್ದಾರೆ. ಖೊಟ್ಟಿ ದಾಖಲೆಗಳಿಗೆ ಸಂಬಂಧಿಸಿದ ವರದಿಯನ್ನು ಕರ್ನಾಟಕ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ಕಳುಹಿಸಿದಾಗ, ಅಧಿಕಾರಿಗಳು ವರದಿಯನ್ನು ಪರಿಶೀಲಿಸಿ, ಹೊಸಪೇಟೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಅಂದಿನ ಇಲಾಖೆ ಉಪನಿರ್ದೇಶಕ ಎಸ್.ಪಿ. ರಾಜು ಅವರು, ಹೊಸಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ರಿಸ್ಕ್ ಮೂಲಕ ಸಾಗಾಟಕ್ಕೆ ಒಪ್ಪಂದ: ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸಿದಾಗ ಹೊಸಪೇಟೆಯ ಸಾಫಿಯಾ ಮಿನರಲ್ಸ್ ಇನ್ವಾಯಿಸ್ ಎಂದು ನಮೂದಿಸಲಾಗಿತ್ತು. ಸ್ವಸ್ತಿಕ್ ನಾಗರಾಜ್ ಅವರು ಹಣದ ಆಸೆ ನೀಡಿದ್ದರಿಂದ ಸಾಫಿಯಾ ಮಿನರಲ್ಸ್ ಎನ್ನುವ ಹೆಸರಿನಲ್ಲಿ ಫರ್ಮ್ ನೋಂದಾಯಿಸುವುದಾಗಿ ಮಹಮ್ಮದ್ ಮುನೀರ್ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇನ್ನು ಲಾರಿಗಳ ಟ್ರಾನ್ಸ್ಪೋರ್ಟ್ ಗೂಡ್ಸ್ ಕಂಜೋನ್ಮೆಂಟ್ ನೋಟ್ಗಳ ಮೇಲೆ ಅರಿಹಂತ ಟೈಲ್ಸ್ ಮತ್ತು ಮಾರ್ಬಲ್ಸ್ ಪ್ರೈ.ಲಿ. ಕೃಷ್ಣಾಪಟ್ನಂ ಪೋರ್ಟ್ ಎಂದು ನಮೂದಿಸಿತ್ತು. ಅದನ್ನು ತನಿಖೆ ನಡೆಸಿದಾಗ ಅರಿಹಂತದ ಮ್ಯಾನೇಜರ್ ಪ್ರಹ್ಲಾದ್ರಾಯ್ ಆಗರ್ವಾಲ್ ಅವರು ಸ್ವಸ್ತಿಕ್ ನಾಗರಾಜ್ ಅವರಿಂದ ಅದಿರು ಖರೀದಿ ಮಾಡಿದ್ದು, ಕೃಷ್ಣಾಪಟ್ನಂಗೆ ಸಾಗಿಸುವ ರಿಸ್ಕನ್ನು ಅವರು ಪಡೆದಿದ್ದರು ಎಂದು ಹೇಳುವ ಮೂಲಕ ಅಕ್ರಮವನ್ನು ಬಯಲು ಮಾಡಿದ್ದಾರೆ. ಸ್ವಸ್ತಿಕ್ ನಾಗರಾಜ್ ತನ್ನ ಆಪ್ತ ಅಂಜಿನಿ ಮೂಲಕ ಸಾಯಿಗಣೇಶ್ ಮಿನರಲ್ಸ್ ಎಂದು ಫರ್ಮ್ ನೋಂದಾಯಿಸಿದ್ದಾರೆ. ಅಂಜಿನಿ ಅವರ ಹೊಸಪೇಟೆಯ ಆ್ಯಕ್ಸಿಸ್ ಬ್ಯಾಂಕಿನಲ್ಲಿರುವ ಖಾತೆಗೆ ಅರಿಹಂತದವರು ಹಣ ಜಮಾ ಮಾಡಿದ್ದಾರೆ ಎಂದು ಬ್ಯಾಂಕ್ ಅಧಿಕಾರಿಗಳ ಹೇಳಿಕೆಯಿಂದ ದೃಢಪಟ್ಟಿದೆ ಎಂದು ದೋಷಾರೋಪಣ ಪಟ್ಟಿಯಲ್ಲಿ ತಿಳಿಸಲಾಗಿದೆ.
ಸರ್ಕಾರಕ್ಕೆ ರು. 3.5 ಲಕ್ಷ ರಾಜಧನ ವಂಚನೆ
ಆರೋಪಿಗಳು ಕೋಟ್ಯಂತರ ರುಪಾಯಿಗಳ ಕಬ್ಬಿಣದ ಅದಿರನ್ನು ಅನಧಿಕೃತವಾಗಿ ಸಾಗಾಟ ಮಾಡಿದ್ದಾರೆ. 228 ಮೆಟ್ರಿಕ್ ಟನ್ ಅದಿರನ್ನು ಸಾಗಾಣಿಕೆ ಮಾಡಿ, ಸರ್ಕಾರಕ್ಕೆ ರು. 3,53,088 ರಾಜಧನ ಕಟ್ಟದೆ ಮೋಸ ಮಾಡಿದ್ದಾರೆ ಎಂಬುದು ತನಿಖೆಯಿಂದ ತಿಳಿದಿದೆ ಎಂದು ಚಾರ್ಜ್ಶೀಟ್ನಲ್ಲಿ ತಿಳಿಸಿದ್ದಾರೆ. ಇದು ಕಣ್ಣಿಗೆ ಕಂಡಿರುವ ಪ್ರಕರಣವಾದರೆ, ಇನ್ನು ಕಣ್ಣಿಗೆ ಕಾಣದಂತೆ ಅದೆಷ್ಟು ಅದಿರು ಅಕ್ರಮವಾಗಿ ಸಾಗಾಣಿಕೆಯಾಗಿದೆ ಎಂಬ ಅನುಮಾನವನ್ನು ಹುಟ್ಟುಹಾಕಿದೆ.
- ಶಶಿಧರ ಮೇಟಿ