ಬಿಎಡ್ ಕಾಲೇಜುಗಳಿಗೆ ವೇತನಾನುದಾನ ಬಿಡುಗಡೆ
ಕ.ಪ್ರ.ವಾರ್ತೆ ಮೈಸೂರು ಜೂ. 12-
ರಾಜ್ಯದ 22 ಖಾಸಗಿ ಅನುದಾನಿತ ಬಿಎಡ್ ಕಾಲೇಜುಗಳ ಕಾರ್ಯ ನಿರ್ವಹಿಸುತ್ತಿರುವ 227 ಮಂದಿ ಬೋಧಕರು, ಬೋಧಕೇತರ ಸಿಬ್ಬಂದಿಗಾಗಿ ಕಾಲೇಜು ಶಿಕ್ಷಣ ಇಲಾಖೆಯು 3.24 ಕೋಟಿ ವೇತನಾನುದಾನ ಬಿಡುಗಡೆಗೊಳಿಸಿದೆ.
ಸರ್ಕಾರದ ಆದೇಶ (ಬಿಟಿ/19ಎಚ್ ಪಿಯು/2013) ಹಾಗೂ ಬಿಎಡ್ ಕಾಲೇಜು ಶಿಕ್ಷಣ ಅಧ್ಯಾಪಕರ ಸಂಘದವರು ಸಲ್ಲಿಸಿರುನ ಮನವಿ ಅನ್ವಯ ಇಲಾಖೆಯೂ ಏಪ್ರಿಲ್ ಮತ್ತು ಮೇ ತಿಂಗಳ ವೇತನಾನುದಾನ ನೀಡಿದೆ. ಈ ಕುರಿತು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯ (ಡಿಎಸ್ಇಆರ್ಟಿ) ನಿರ್ದೇಶಕರು 2013-14ನೇ ಸಾಲಿಗೆ 22 ಬಿಎಡ್ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ವೇತನಾನುದಾನಕ್ಕಾಗಿ ಸಿದ್ಧಪಡಿಸಿರುವ ವಿವರಣಾ ಪಟ್ಟಿಯನ್ನು ಆಧರಿಸಿ, ಕಾಲೇಜು ಶಿಕ್ಷಣ ಇಲಾಖೆಯೂ ತನ್ನ ವ್ಯಾಪ್ತಿಯ 6 ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ಅನುದಾನ ಬಿಡುಗಡೆಗೊಳಿಸಿದೆ. ಬೆಂಗಳೂರು ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ 1,33,65,800, ಮೈಸೂರು 72,92,400, ಮಂಗಳೂರು 19,13,800, ಧಾರವಾಡ 17,30,200, ಶಿವಮೊಗ್ಗ 56,23,200 ಹಾಗೂ ಗುಲ್ಬರ್ಗ 24,93,400 ಸೇರಿದಂತೆ ಒಟ್ಟು 3,24,18,800 ಅನುದಾನವನ್ನು ಪ್ರಾದೇಶಿಕ ಜಂಟಿ ನಿರ್ದೇಶಕರಿಗೆ ನೀಡಲಾಗಿದೆ.
ಯಾವ್ಯಾವ ಕಾಲೇಜು?: ಮೈಸೂರು ಪ್ರಾದೇಶಿಕ ಜಂಟಿ ನಿರ್ದೇಶಕರು ವ್ಯಾಪ್ತಿಯ ಇನ್ಸ್ಟಿಟ್ಯೂಟ್ ಆಫ್ ಎಜುಕೇಷನ್ ಬಿಎಡ್ ಕಾಲೇಜು, ಶಾರದಾ ವಿಲಾಸ ಶಿಕ್ಷಣ ಕಾಲೇಜು, ಸಂತ ಜೋಸೆಫ್ ಶಿಕ್ಷಣ ಕಾಲೇಜು, ಮಂಡ್ಯದ ಶಂಕರೇಗೌಡ ಶಿಕ್ಷಣ ಕಾಲೇಜು ಹಾಗೂ ಚನ್ನರಾಯಪಟ್ಟಣದ ಆದಿಚುಂಚನಗಿರಿ ಶಿಕ್ಷಣ ಕಾಲೇಜು. ಬೆಂಗಳೂರು ಪ್ರಾದೇಶಿಕ ಜಂಟಿ ನಿರ್ದೇಶಕರ ವ್ಯಾಪ್ತಿಯ ಎಂಇಎಸ್, ವಿಜಯ, ಬಿಇಎಸ್, ಆರ್ವಿ, ಅಂಬೇಡ್ಕರ್, ರಾಜಾಜಿನಗರ್ ಶಿಕ್ಷಣ ಕಾಲೇಜು, ತುಮಕೂರಿನ ಸಿದ್ಧಾರ್ಥ ಶಿಕ್ಷಣ ಕಾಲೇಜು, ಶಿವಮೊಗ್ಗದ ನ್ಯಾಷನಲ್ ಕಾಲೇಜ್ ಆಫ್ ಎಜುಕೇಷನ್, ದಾವಣಗೆರೆಯ ಎಂಎಂ ಶಿಕ್ಷಣ ಕಾಲೇಜು, ಚಿಕ್ಕಮಗಳೂರಿನ ಎಂಎಲ್ಎಂಎಲ್ ಕಾಲೇಜು, ಅರಸೀಕೆರೆಯ ವಿವೇಕಾನಂದ ಕಾಲೇಜು, ಹರಿಹರದ ಶ್ರೀಶೈಲ ಕಾಲೇಜು, ಧಾರವಾಡ ವ್ಯಾಪ್ತಿಯ ಕುಮಟಾದ ಕಮಲಾ ಬಳಿಗ ಕಾಲೇಜು, ಮಂಗಳೂರಿನ ಸಂತ ಆನ್ಸ್ ಕಾಲೇಜು, ಉಡುಪಿಯ ಡಾ.ಟಿಎಂಎ ಪೈ ಕಾಲೇಜು, ಗುಲ್ಬರ್ಗ ವ್ಯಾಪ್ತಿಯಲ್ಲಿರುವ ಬಳ್ಳಾರಿಯ ಕೊಟ್ಟೂರ್ಸ್ವಾಮಿ ಕಾಲೇಜು ಹಾಗೂ ಹರಪನಹಳ್ಳಿಯ ಟಿಎಂಎಇ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 227 ಬೋಧಕ, ಬೋಧಕೇತರ ಸಿಬ್ಬಂದಿ ವೇತನಕ್ಕಾಗಿ ಅನುದಾನ ಬಿಡುಗಡೆಯಾಗಿದೆ.
ಬಾಕಿ ಪಾವತಿಸುವ ಮುನ್ನ: ಪ್ರಾದೇಶಿಕ ಜಂಟಿ ನಿರ್ದೇಶಕರು ತಮ್ಮ ವ್ಯಾಪ್ತಿಯಲ್ಲಿರುವ ಯೋಜನೇತರ ಖಾಸಗಿ ಅನುದಾನಿತ ಬಿಎಡ್ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕ, ಬೋಧಕೇತರ ಸಿಬ್ಬಂದಿ ದಾಖಲಾತಿಗಳನ್ನು ಪರಿಶೀಲಿಸಿ, ಪ್ರತಿ ತಿಂಗಳ ವೇತನಾನುದಾನಕ್ಕಾಗಿ ಬೇಕಾಗುವ ಅನುದಾನದ ಕೋರಿಕೆ ಪ್ರಸ್ತಾವನೆಯನ್ನು ತಪ್ಪದೇ ಕೇಂದ್ರ ಕಚೇರಿಗೆ ಕಳುಹಿಸಬೇಕು.
ಖಾಸಗಿ ಅನುದಾನಿತ ಬಿಎಡ್ ಕಾಲೇಜುಗಳ ಸಿಬ್ಬಂದಿಯ ಬಾಕಿ ಇರುವ ವೇತನಾನುದಾನ ಹಾಗೂ ಇತರೆ ಬಾಕಿಗಳನ್ನು ಪಾವತಿಸಬೇಕಾಗಿದ್ದಲ್ಲಿ ಕೇಂದ್ರ ಕಚೇರಿಗೆ ಮಾಹಿತಿ ನೀಡಬೇಕು. ಅಲ್ಲದೆ, ಕೇಂದ್ರ ಕಚೇರಿಯಿಂದ ಅನುದಾನ ಪಡೆದ ನಂತರವೇ ಇತರೆ ಬಾಕಿಗಳನ್ನು ಪಾವತಿಸಬೇಕು ಎಂದು ಕಾಲೇಜು ಶಿಕ್ಷಣ ನಿರ್ದೇಶಕರು ಸೂಚಿಸಿದ್ದಾರೆ.
ಅನುದಾನಿತ ಹಾಗೂ ಅನುದಾನ ರಹಿತ ಬಿಎಡ್ ಕಾಲೇಜುಗಳ ವೇತನ ಪಾವತಿ, ಆಡಳಿತಾತ್ಮಕ ಮತ್ತು ಸೇವಾ ವಿಷಯಗಳನ್ನು ಕಾಲೇಜು ಶಿಕ್ಷಣ ಇಲಾಖೆಗೆ ವಹಿಸಲಾಗಿದ್ದು, ಶೈಕ್ಷಣಿಕ ಚಟುವಟಿಕೆಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು (ಡಿಎಸ್ಇಆರ್ಟಿ) ನೋಡಿಕೊಳ್ಳಲಿದೆ. ಹೀಗಾಗಿ ಕಾಲೇಜು ಶಿಕ್ಷಣ ಇಲಾಖೆಯು ಬಿಎಡ್ ಕಾಲೇಜು ಸಿಬ್ಬಂದಿಗೆ ವೇತನಾನುದಾನ ನೀಡಿದೆ.
- ಬಿ. ಶೇಖರ್ ಗೋಪಿನಾಥಂ