ನವದೆಹಲಿ: ಕವಲುದಾರಿಯಲ್ಲಿ ಹೆಜ್ಜೆ ಹಾಕಿರುವ 17 ವರ್ಷಗಳಷ್ಟು ಹಳೆಯ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯು ನಡುವಿನ ಮೈತ್ರಿ ಭವಿಷ್ಯ ಭಾನುವಾರ ನಿರ್ಧಾರವಾಗಲಿದೆ. ಪಟನಾದಲ್ಲಿ ನಡೆಯಲಿರುವ ಪಕ್ಷದ ಶಾಸಕರ ಹಾಗೂ ಮುಖಂಡರ ಸಭೆಯಲ್ಲಿ ಎನ್ಡಿಎ ಮೈತ್ರಿಕೂಟದಲ್ಲಿ ಮುಂದುವರಿಯಬೇಕೇ, ಬೇಡವೇ ಅನ್ನುವ ಕುರಿತು ಜೆಡಿಯು ಅಂತಿಮ ನಿರ್ಣಯ ತೆಗೆದುಕೊಳ್ಳಲಾಗುವುದು.
ಮೂಲಗಳ ಪ್ರಕಾರ, ಬಿಜೆಪಿ ಸಖ್ಯಕ್ಕೆ ಜೆಡಿಯು ಎಳ್ಳುನೀರು ಬಿಡುವುದು ಬಹುತೇಕ ಖಚಿತವಾಗಿದೆ. ಇದಕ್ಕೆ ಪೂರಕವಾಗಿ ನಿತೀಶ್ ಕುಮಾರ್ ಕೂಡ ಬಿಜೆಪಿ ಜತೆ ಮೈತ್ರಿ ಮುಂದುವರಿಸುವುದು ಕಷ್ಟಕರ ಎಂಬ ಹೇಳಿಕೆ ನೀಡಿದ್ದಾರೆ. ಈ ಮೂಲಕ ಎನ್ಡಿಎ ಮೈತ್ರಿಕೂಟದಿಂದ ಹೊರಬರುವ ಸ್ಪಷ್ಟ ಸೂಚನೆ ನೀಡಿದ್ದಾರೆ.
ಪಕ್ಷೇತರರಿಗೆ ಗಾಳ: ಈ ನಡುವೆ, ಬಿಜೆಪಿ ಸಖ್ಯ ತೊರೆದರೆ ಸಂಖ್ಯಾಬಲದ ಕೊರತೆ ಎದುರಿಸಲಿರುವ ಜೆಡಿಯು ಸರ್ಕಾರ ಇದಕ್ಕಾಗಿ ಪಕ್ಷೇತರ ಶಾಸಕರನ್ನು ತನ್ನತ್ತ ಸೆಳೆಯುವ ಪ್ರಯತ್ನಕ್ಕೂ ಕೈಹಾಕಿದೆ. ನಿತೀಶ್ ಸರ್ಕಾರವನ್ನು ಬೆಂಬಲಿಸಿದರೆ ಸಚಿವ ಸ್ಥಾನ ಹಾಗೂ ಮುಂಬರುವ ಲೋಕಸಭಾ ಚುನಾವಣೆ ಟಿಕೆಟ್ ನೀಡುವ ಆಮಿಷ ಒಡ್ಡಲಾಗಿದೆ ಎಂದು ಪಶ್ಚಿಮ ಚಂಪರಣ್ನ ಪಕ್ಷೇತರ ಶಾಸಕ ದಿಲೀಪ್ ವರ್ಮಾ ಆರೋಪಿಸಿದ್ದಾರೆ. ಆದರೆ, ಈ ಆಮಿಷವನ್ನು ತಿರಸ್ಕರಿಸಿದ್ದಾಗಿ ವರ್ಮಾ ತಿಳಿಸಿದ್ದಾರೆ.
ಬಿಹಾರದಲ್ಲಿ ಒಟ್ಟು ಆರು ಮಂದಿ ಪಕ್ಷೇತರ ಶಾಸಕರಿದ್ದು ಅವರಲ್ಲಿ ನಾಲ್ಕು ಮಂದಿ ಜೆಡಿಯು ಬೆಂಬಲಕ್ಕೆ ನಿಲ್ಲುವ ಸೂಚನೆ ಸಿಕ್ಕಿದೆ.
ಬಿಜೆಪಿ ಶಾಸಕರಿಗೂ...: ಏತನ್ಮಧ್ಯೆ, ಬಿಜೆಪಿಯ ಕೆಲ ಶಾಸಕರನ್ನು ಸೆಳೆಯುವ ಪ್ರಯತ್ನಕ್ಕೂ ಜೆಡಿಯು ಕೈ ಹಾಕಿದೆ ಎನ್ನಲಾಗಿದೆ. ಆದರೆ, ಇದನ್ನು ಜೆಡಿಯು ವಕ್ತಾರ ರಾಜೀವ್ ರಂಜನ್ ತಳ್ಳಿಹಾಕಿದ್ದಾರೆ. ಜೆಡಿಯುಗೆ ಕೇವಲ ನಾಲ್ಕು ಶಾಸಕರ ಕೊರತೆ ಇದೆ. ಇದಕ್ಕಾಗಿ ಬಿಜೆಪಿ ಶಾಸಕರನ್ನು ಸೆಳೆಯುವ ಪ್ರಯತ್ನಕ್ಕೆ ಪಕ್ಷ ಕೈಹಾಕದು ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಅವರದ್ದೇ ಬಯಕೆ: ಗುಜರಾತ್ ಸಿಎಂ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸುವ ಮೂಲಕ ಎನ್ಡಿಎ ಮೈತ್ರಿಕೂಟದಿಂದ ಜೆಡಿಯು ಹೊರಹೋಗಬೇಕೆಂದು ಬಿಜೆಪಿ ಒತ್ತಡ ಹಾಕುತ್ತಿದೆ ಪಕ್ಷದ ಪ್ರಧಾನ ಕಾರ್ಯದರ್ಶಿ ಶಿವಾನಂದ ತಿವಾರಿ ಆರೋಪಿದ್ದಾರೆ.
ಮೈತ್ರಿ ಮುರಿಯುವ ಆರೋಪವನ್ನು ಜೆಡಿಯು ಮೇಲೆ ಹೊರಿಸಲು ಬಿಜೆಪಿ ಹವಣಿಸುತ್ತಿದೆ. ಆದರೆ, ಸತ್ಯ ಬೇರೆಯೇ ಇದೆ. ಮೋದಿ ಬಗ್ಗೆ ನಮ್ಮ ಅಭಿಪ್ರಾಯ ಏನೆಂಬುದನ್ನು ನಾವು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವೆ. ಮೋದಿ ಕುರಿತ ನಮ್ಮ ಅಭಿಪ್ರಾಯ ಎಲ್ಲರಿಗೂ ಗೊತ್ತಿದೆ.
ಇಷ್ಟಾದರೂ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮೋದಿ ಅವರನ್ನು ನೇಮಿಸಿದ್ದಾರೆ. ಈ ಮೂಲಕ ಎನ್ಡಿಎಯಿಂದ ಹೊರಹೋಗಬೇಕೆಂದು ಅವರು ಒತ್ತಡ ಹೇರುತ್ತಿದ್ದಾರೆ ಎಂದು ತಿವಾರಿ ಹೇಳಿದ್ದಾರೆ.
ಮೂರು ಚುರುಕು
ಎನ್ಡಿಎ ಮೈತ್ರಿಕೂಟದಿಂದ ಜೆಡಿಯು ಹೊರ ಬರುವ ಸೂಚನೆ ನೀಡುತ್ತಿದ್ದಂತೆ ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರು ಶುಕ್ರವಾರ ಜೆಡಿಯು ಅಧ್ಯಕ್ಷ ಶರದ್ಯಾದವ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದರ ಬೆನ್ನಲ್ಲೇ ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಸಿಪಿಐ ಮುಖಂಡ ಎ.ಬಿ. ಬರ್ಧನ್ರನ್ನು ಭೇಟಿಯಾಗಿದ್ದಾರೆ.
ಸಮಸ್ಯೆಗಳಿವೆ
ಮೈತ್ರಿಕೂಟದಲ್ಲಿ ಮುಂದುವರಿಯಲು ಅಸಾಧ್ಯವಾದ ವಾತಾವರಣ ಇದೆ. ಈ ಕಷ್ಟದ ಪರಿಸ್ಥಿತಿಯಲ್ಲಿ ಏನು ಮಾಡಬೇಕು ಎನ್ನುವುದರ ಕುರಿತು ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ ಎಂದು ನಿತೀಶ್ ಹೇಳಿದ್ದಾರೆ.
ಗಡುವು ವಿಧಿಸಿಲ್ಲ
ಎನ್ಡಿಎ ಮೈತ್ರಿಕೂಟದಿಂದ ಹೊರಬರುವ ವಿಚಾರಕ್ಕೆ ಸಂಬಂಧಿಸಿ ನಾವು ಯಾವುದೇ ಗಡುವು ವಿಧಿಸಿಲ್ಲ. ಸದ್ಯ ಎನ್ಡಿಎ ಜತೆಗಿನ ಮೈತ್ರಿ ಅಸ್ತಿತ್ವದಲ್ಲಿದೆ. ಆದರೆ, ಇತ್ತೀಚೆಗೆ ನಡೆದ ಕೆಲವು ಘಟನೆಗಳು ಎನ್ಡಿಎಯ ರಾಷ್ಟ್ರೀಯ ಅಜೆಂಡಾಗೆ ವಿರುದ್ಧವಾಗಿದೆ ಎಂದು ಜೆಡಿಯು ಅಧ್ಯಕ್ಷ ಶರದ್ ಯಾದವ್ ಸ್ಪಷ್ಪಪಡಿಸಿದ್ದಾರೆ.