ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶೋಕಸಾಗರದ ಮಧ್ಯೆ ಸ್ವಾಮೀಜಿ ಅಂತ್ಯಕ್ರಿಯೆ

Mainashree
Updated On : 14 Jun 2013, 10:29 am

ಕ.ಪ್ರ. ವಾರ್ತೆ  ಹಾವೇರಿ  ಜೂ. 14
ವಿವಿಧ ಮಠಾಧೀಶರು ಹಾಗೂ ಸಹಸ್ರಾರು ಭಕ್ತರ ಶೋಕಸಾಗರದ ಮಧ್ಯೆ ಲಿಂಗೈಕ್ಯ ಚನ್ನಬಸವ ಸ್ವಾಮೀಜಿ ಅವರ ಅಂತ್ಯಕ್ರಿಯೆ ತಾಲೂಕಿನ ಅಗಡಿ ಗ್ರಾಮದ ಅಕ್ಕಿಮಠದ ಆವರಣದಲ್ಲಿ ಶುಕ್ರವಾರ ಮಧ್ಯಾಹ್ನ ವೀರಶೈವ ಸಂಪ್ರದಾಯದ ಧಾರ್ಮಿಕ ವಿಧಿ-ವಿಧಾನಗಳಂತೆ ನೆರವೇರಿತು.
ಅಥಣಿ ಗಚ್ಚಿನಮಠದ ನಿಕಟಪೂರ್ವ ಹಾಗೂ ಹಾವೇರಿ ಅಗಡಿ ಅಕ್ಕಿ ಮಠದ ಹಾಲಿ ಪೀಠಾಧಿಪತಿಯಾಗಿದ್ದ ಚನ್ನಬಸವ ಸ್ವಾಮೀಜಿ, ಗುರುವಾರ ತೀವ್ರ ಹೃದಯಾಘಾತಕ್ಕೊಳಗಾಗಿ ಇಹಲೋಕ ತ್ಯಜಿಸಿದ್ದರು.
ಶ್ರೀಮಠದ ಆವರಣದಲ್ಲಿರುವ ಮುಪ್ಪಯ್ಯ ಸ್ವಾಮೀಜಿ ಗುದ್ದುಗೆ ಪಕ್ಕದಲ್ಲೇ ಶಿಷ್ಯ ಚನ್ನಬಸವ ಸ್ವಾಮೀಜಿಗಳನ್ನು ಸಮಾಧಿ ಮಾಡಲಾಯಿತು.
ಶ್ರೀಮಠದ ಆವರಣದಲ್ಲಿ ಚನ್ನಬಸವ ಶ್ರೀಗಳ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕಾಗಿ ಇರಿಸಲಾಗಿತ್ತು. ಹಾವೇರಿ ಜಿಲ್ಲೆ ಮಾತ್ರವಲ್ಲದೆ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯಿಂದಲೂ ಆಗಮಿಸಿದ ಭಕ್ತರು ಶ್ರೀಗಳ ಅಂತಿಮ ದರ್ಶನ ಪಡೆದರು. ಅಂತಿಮ ದರ್ಶನದ ನಂತರ ಶ್ರೀಗಳ ಪಾರ್ಥಿವ ಶರೀರ ಶ್ರೀಮಠದ ಆವರಣಕ್ಕೆ ಬರುತ್ತಿದ್ದಂತೆಯೇ ಅಲ್ಲಿ ನೆರೆದಿದ್ದ ಭಕ್ತ ಸಮೂಹ ಜಯಘೋಷ ಕೂಗಿ ಭಕ್ತಿ ಪ್ರದರ್ಶಿಸಿದರು.
ಶ್ರೀಗಳ ಪಾರ್ಥಿವ ಶರೀರದ ಮೆರವಣಿಗೆ ಬೆಳಗ್ಗೆ ಅಕ್ಕಿಮಠದಿಂದ ಆರಂಭಗೊಂಡು ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಈ ಸಂದರ್ಭದಲ್ಲಿ ರಸ್ತೆ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತರು, ಶ್ರೀಗಳಿಗೆ ಅಂತಿಮ ನಮನ ಸಲ್ಲಿಸಿ ಭಾವಪರವಶರಾದರು. ಅಂತಿಮ ಯಾತ್ರೆಯುದ್ದಕ್ಕೂ ಮಳೆಯಾಗುತ್ತಲೇ ಇದ್ದರೂ ಯಾವುದಕ್ಕೂ ಜಗ್ಗದ ಭಕ್ತರು ಮೆರವಣಿಗೆಯುದ್ದಕ್ಕೂ ಹೆಜ್ಜೆ ಹಾಕಿದರು.
ಅಂತಿಮ ದರ್ಶನ ಪಡೆದ ಗಣ್ಯರು: ಚನ್ನಬಸವ ಶ್ರೀಗಳ ಅಂತ್ಯಕ್ರಿಯೆಯಲ್ಲಿ ಧಾರವಾಡ ಮುರುಘಾಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಅಥಣಿ ಮೋಟಗಿಮಠದ ಪ್ರಭು ಸ್ವಾಮೀಜಿ, ಲಿಂಗನಾಯಕನಹಳ್ಳಿಯ ಶ್ರೀ ಚನ್ನವೀರ ಸ್ವಾಮೀಜಿ, ಹಳ್ಯಾಳದ ಅಭಿನವ ಗುರುಸಿದ್ಧ ಸ್ವಾಮೀಜಿ, ಶೆಟ್ಟರ ಮಠದ ಬಸವಸಿದ್ಧಲಿಂಗ ದೇವರು, ಹೊಸರಿತ್ತಿ ಶ್ರೀಗಳು, ಗುದ್ಲೇಶ್ವರ ಮಠದ ಶ್ರೀಗಳು ಸೇರಿದಂತೆ ಮತ್ತಿತರ ಮಠಾಧೀಶರು, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣವರ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement